ದಾವಣಗೆರೆಯಲ್ಲಿ ರಾಜ್ಯ ಬಿಜೆಪಿ ಕಾರ್ಯಕಾರಿಣಿ ಸಭೆಗೆ ಸಕಲ ಸಿದ್ಧತೆ

ಈ ಸುದ್ದಿಯನ್ನು ಶೇರ್ ಮಾಡಿ

ಬೆಂಗಳೂರು,ಸೆ.15- ಇದೇ 18-19 ರಂದು ರಾಜ್ಯ ಬಿಜೆಪಿ ಕಾರ್ಯಕಾರಿಣಿ ಸಭೆ ನಡೆಯುವ ಹಿನ್ನೆಲೆಯಲ್ಲಿ ಬೆಣ್ಣೆನಗರಿ ದಾವಣಗೆರೆಯಲ್ಲಿ ಸಕಲ ಸಿದ್ಧತೆ ಮಾಡಲಾಗುತ್ತಿದೆ. ಕೊರೊನಾ ಸೋಂಕು ಹಿನ್ನೆಲೆಯಲ್ಲಿ ಕಾರ್ಯಕಾರಿಣಿ ಸಭೆ ಸಂಪೂರ್ಣವಾಗಿ ಮಾಡಲು ಸಾಧ್ಯವಾಗಿರಲಿಲ್ಲ. ಶಿವಮೊಗ್ಗ, ಮಂಗಳೂರಿನಲ್ಲಿ ನಡೆದಿದ್ದರೂ ಪೂರ್ಣ ಪ್ರಮಾಣದಲ್ಲಿ ನಡೆದಿರಲಿಲ್ಲ. ಹಲವು ವರ್ಷಗಳ ಬಳಿಕ ದಾವಣಗೆರೆಯಲ್ಲಿ ಕಾರ್ಯಕಾರಣಿ ಸಭೆ ನಡೆಯುತ್ತಿದ್ದು, ಅದಕ್ಕಾಗಿ ಪೂರ್ವಸಿದ್ಧತೆ ಮಾಡಿಕೊಳ್ಳಲಾಗುತ್ತಿದೆ.

ಮಧ್ಯ ಕರ್ನಾಟಕದ ಹೆಬ್ಬಾಗಿಲು ದಾವಣಗೆರೆಯಲ್ಲಿ ನಡೆಯುತ್ತಿರುವ ಈ ರಾಜ್ಯ ಬಿಜೆಪಿ ಕಾರ್ಯಕಾರಿಣಿ ಸಭೆ ಸಾಕಷ್ಟು ಕುತೂಹಲ ಕೆರಳಿಸಿದೆ. ಯಡಿಯೂರಪ್ಪ ಸಿಎಂ ಸ್ಥಾನದಿಂದ ಕೆಳಗಿಳಿದ ಬಳಿಕ ದೊಡ್ಡ ಮಟ್ಟದ ಪದಾಧಿಕಾರಿಗಳ ಸಭೆ, ಕೋರ್ ಕಮಿಟಿ ಮೀಟಿಂಗ್, ಕಾರ್ಯಕಾರಿಣಿ ಸಭೆ ಇಷ್ಟೊಂದು ದೊಡ್ಡ ಪ್ರಮಾಣದಲ್ಲಿ ನಡೆಯುತ್ತಿದೆ.

ಮುಖ್ಯಮಂತ್ರಿಯಾದ ಬಳಿಕ ಬಸವರಾಜ ಬೊಮ್ಮಾಯಿ ಅವರಿಗೂ ಇದೇ ಮೊದಲನೆ ಸಭೆಯಾಗಿದೆ. ಹಾಗಾಗಿ ಯಾವೆಲ್ಲ ತಂತ್ರಗಾರಿಕೆ ರೂಪಿಸಲು ಚರ್ಚೆ ನಡೆಸಲಾಗುವುದು ಎಂಬ ಬಗ್ಗೆ ಎಲ್ಲರಲ್ಲೂ ಕುತೂಹಲ ಹುಟ್ಟಿಸಿದೆ. ಸೆ.18ರಂದು ಸಂಜೆ ದಾವಣಗೆರೆಯ ಅಪೂರ್ವ ರೆಸಾರ್ಟ್‍ನಲ್ಲಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹಾಗೂ ರಾಜ್ಯ ಬಿಜೆಪಿ ಅಧ್ಯಕ್ಷ ನಳೀನ್ ಕುಮಾರ್ ಕಟೀಲ್ ಉಪಸ್ಥಿತಿಯಲ್ಲಿ ಈ ಸಭೆ ನಡೆಯಲಿದೆ.

ಇದಕ್ಕೂ ಮುನ್ನ ಅಂದು ಬೆಳಿಗ್ಗೆ ರಾಜ್ಯ ಬಿಜೆಪಿ ಪದಾಧಿಕಾರಿಗಳ ಸಭೆ ನಡೆಯಲಿದೆ. ರಾಜ್ಯಾಧ್ಯಕ್ಷ ನಳೀನ್ ಕುಮಾರ್ ಕಟೀಲ್ ಪದಾಧಿಕಾರಿಗಳಿಗೆ ಪಕ್ಷ ಸಂಘಟನೆ ಹಾಗೂ ಪಕ್ಷವನ್ನು ಬಲಪಡಿಸುವ ಕುರಿತಂತೆ ಸಲಹೆ ನೀಡಲಿದ್ದಾರೆ. ಸೆ.19ರಂದು ತ್ರಿಶೂಲ್ ಕಲಾಭವನದಲ್ಲಿ ಸಭೆ ನಡೆಯಲಿದ್ದು, ಸಭೆಯಲ್ಲಿ ಹಲವು ಮಹತ್ವದ ವಿಚಾರಗಳ ಬಗ್ಗೆ ರಾಜ್ಯ ಬಿಜೆಪಿ ವರಿಷ್ಠರು ಚರ್ಚೆ ನಡೆಸಲಿದ್ದಾರೆ.

ರಾಜ್ಯ ಬಿಜೆಪಿ ಉಸ್ತುವಾರಿ ಅರುಣ್ ಸಿಂಗ್, ರಾಷ್ಟ್ರೀಯ ಸಂಘಟನಾ ಕಾರ್ಯದರ್ಶಿ ಬಿ. ಎಲ್. ಸಂತೋಷ್, ಮಾಜಿ ಸಿಎಂ ಯಡಿಯೂರಪ್ಪ, ಸಚಿವರು, ಶಾಸಕರು, ಎಂಎಲ್‍ಸಿಗಳು, ಸಂಸದರು, ಕೇಂದ್ರ ಸಚಿವರಾದ ಶೋಭಾ ಕರಂದ್ಲಾಜೆ, ಎನ್.ನಾರಾಯಣ ಸ್ವಾಮಿ, ರಾಜೀವ್ ಚಂದ್ರಶೇಖರ್, ಪ್ರಹ್ಲಾದ್ ಜೋಷಿ ಪಾಲ್ಗೊಳ್ಳಲಿದ್ದಾರೆ ಎಂದು ತಿಳಿದುಬಂದಿದೆ.

Facebook Comments