ಮಾರ್ಚ್ ಮೊದಲ ವಾರದಲ್ಲೇ ರಾಜ್ಯ ಬಜೆಟ್, ಪೂರ್ವ ಸಿದ್ಧತೆಯಲ್ಲಿ ಸಿಎಂ ಬ್ಯುಸಿ

ಈ ಸುದ್ದಿಯನ್ನು ಶೇರ್ ಮಾಡಿ

ಬೆಂಗಳೂರು,ಡಿ.27- ಬಹು ನಿರೀಕ್ಷಿತ ಸಚಿವ ಸಂಪುಟ ವಿಸ್ತರಣೆ ಮುಂದಕ್ಕೆ ಹೋಗುವ ಸಾಧ್ಯತೆ ಹೆಚ್ಚಳವಾಗಿರುವುದರಿಂದ ಹಣಕಾಸು ಖಾತೆಯನ್ನು ಹೊಂದಿರುವ ಮುಖ್ಯಮಂತ್ರಿ ಯಡಿಯೂರಪ್ಪನವರು ಜ.1ರಿಂದ ಬಜೆಟ್ ಪೂರ್ವ ಸಿದ್ಧತೆಯಲ್ಲಿ ತೊಡಗಲಿದ್ದಾರೆ. ಈ ಬಾರಿ ಕೇಂದ್ರದಲ್ಲಿ ಫೆ.1ರಂದು ಬಜೆಟ್ ಮಂಡನೆಯಾಗಲಿದ್ದು , ಮಾರ್ಚ್ ತಿಂಗಳ ಮೊದಲ ವಾರದಲ್ಲೇ ರಾಜ್ಯದಲ್ಲಿ ಪ್ರಸಕ್ತ ಸಾಲಿನ ಆಯವ್ಯಯ ಮಂಡಿಸಲು ಸಿಎಂ ಮುಂದಾಗಿದ್ದಾರೆ.

ಹೀಗಾಗಿಯೆ ನೂತನ ವರ್ಷದ ಮೊದಲ ದಿನದಿಂದಲೇ ಬಜೆಟ್ ಪೂರ್ವ ಸಿದ್ದತಾ ಕಾರ್ಯಕ್ರಮಗಳನ್ನು ರೂಪಿಸಲು ಇಲಾಖಾವಾರು ಅಧಿಕಾರಿಗಳ ಸಭೆ ಕರೆದಿದ್ದಾರೆ.  ಜ.1ರಿಂದ ಪ್ರತಿದಿನ 2ರಿಂದ 3 ಇಲಾಖೆಯ ಸಚಿವರು, ಸಂಬಂಧಪಟ್ಟ ಇಲಾಖೆ ಅಧಿಕಾರಿಗಳು ಹಾಗೂ ಹಣಕಾಸು ಇಲಾಖೆ ಅಧಿಕಾರಿಗಳು ಕಡ್ಡಾಯವಾಗಿ ಪಾಲ್ಗೊಳ್ಳಬೇಕೆಂದು ಬಿಎಸ್‍ವೈ ಸೂಚನೆ ಕೊಟ್ಟಿದ್ದಾರೆ.

ಒಟ್ಟು 15 ದಿನಗಳ ಕಾಲ ನಿರಂತರವಾಗಿ ಸಭೆ ನಡೆಸಲಿರುವ ಅವರು ಪ್ರತಿಯೊಬ್ಬ ಸಚಿವರಿಂದಲೂ ಅವರ ಇಲಾಖೆಗಳಲ್ಲಿ ಆಗಿರುವ ಸಾಧನೆ, ಕಳೆದ ವರ್ಷ ಬಜೆಟ್‍ನಲ್ಲಿ ನಿಗದಿಪಡಿಸಿದ ಅನುದಾನ, ಖರ್ಚಾಗಿರುವ ಹಣ, ಯೋಜನೆಗಳ ಅನುಷ್ಠಾನ, ನೂತನ ಕಾರ್ಯಕ್ರಮಗಳ ಸೇರ್ಪಡೆ ಕುರಿತಂತೆ ಮಾಹಿತಿ ಪಡೆಯುವರು. ಸಮ್ಮಿಶ್ರ ಸರ್ಕಾರ ಅಸ್ಥಿರಗೊಂಡ ನಂತರ ಮೊದಲ ಬಾರಿಗೆ ಪೂರ್ಣ ಪ್ರಮಾಣದ ಬಜೆಟ್ ಮಂಡಿಸಲಿರುವ ಯಡಿಯೂರಪ್ಪನವರಿಗೆ ಸಂಪನ್ಮೂಲ ಕ್ರೋಢೀಕರಿಸುವುದೇ ದೊಡ್ಡ ಸವಾಲಾಗಿ ಪರಿಣಮಿಸಿದೆ.

ಏಕೆಂದರೆ ಈ ಬಾರಿ ರಾಜ್ಯದ 20ಕ್ಕೂ ಹೆಚ್ಚು ಜಿಲ್ಲೆಗಳಲ್ಲಿ ಹಿಂದೆಂದು ಕಾಣದಂತಹ ಪ್ರವಾಹ ಉಂಟಾಗಿ ನಿರೀಕ್ಷೆಗೂ ಮೀರಿದ ನಷ್ಟ ಸಂಭವಿಸಿದೆ. ಮನೆಮಠ, ಆಸ್ತಿಪಾಸ್ತಿ ಕಳೆದುಕೊಂಡು ನಿರ್ಗತಿಕರಾಗಿರುವ ನಾಡಿನ ಅನ್ನದಾತ ರೈತನಿಗೆ ಸೂರು ಒದಗಿಸಿ ಆತನ ಬದುಕನ್ನು ಹಸನಗೊಳಿಸುವುದು ಸರ್ಕಾರದ ಮುಂದಿರುವ ಸವಾಲು.  ಹಿಂದಿನ ಸಮ್ಮಿಶ್ರ ಸರ್ಕಾರದ ಅವಧಿಯಲ್ಲಿ ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿಯವರು ಸಹಕಾರಿ ಬ್ಯಾಂಕ್‍ಗಳಲ್ಲಿ ರೈತರು ಪಡೆದಿದ್ದ 45 ಸಾವಿರ ಕೋಟಿ ಸಾಲವನ್ನು ಮನ್ನಾ ಮಾಡಿರುವುದರಿಂದ ಬೊಕ್ಕಸಕ್ಕೆ ಹೆಚ್ಚಿನ ಹೊರೆ ಬಿದ್ದಿದೆ.

ನಮ್ಮ ಸರ್ಕಾರ ಅಧಿಕಾರಕ್ಕೆ ಬಂದರೆ ಸಹಕಾರಿ ಬ್ಯಾಂಕ್‍ಗಳ ಜೊತೆ ರಾಷ್ಟ್ರೀಕೃತ ಬ್ಯಾಂಕ್‍ಗಳ ಸಾಲವನ್ನು ಮನ್ನಾ ಮಾಡುವುದಾಗಿ ಬಿಎಸ್‍ವೈ ಘೋಷಣೆ ಮಾಡಿದ್ದರು. ಇದೀಗ ಕೇಂದ್ರ ಮತ್ತು ರಾಜ್ಯಗಳಲ್ಲಿ ಅವರದೇ ಸರ್ಕಾರ ಅಧಿಕಾರದಲ್ಲಿರುವುದರಿಂದ ಜನತೆಗೆ ಕೊಟ್ಟ ಮಾತನ್ನು ಉಳಿಸಿಕೊಳ್ಳುವ ಹೊಣೆಗಾರಿಕೆ ಅವರ ಮೇಲಿದೆ. ತಮ್ಮದು ರೈತ ಪರ ಸರ್ಕಾರ ಎಂಬುದನ್ನು ಬಿಂಬಿಸಿಕೊಳ್ಳಲು ಕಸರತ್ತು ನಡೆಸಿರುವ ಯಡಿಯೂರಪ್ಪ ಈಗಾಗಲೇ ನೇಕಾರರ 100 ಕೋಟಿ ಸಾಲವನ್ನು ಮನ್ನಾ ಮಾಡಿದ್ದಾರೆ.

ಜತೆಗೆ ಪ್ರಧಾನಮಂತ್ರಿ ಕಿಸಾನ್ ಯೋಜನೆಯಡಿ ಕೇಂದ್ರ ಸರ್ಕಾರ ನೀಡುವ 6ಸಾವಿರ ಮೊತ್ತದ ಜತೆಗೆ ರಾಜ್ಯ ಸರ್ಕಾರ ಎರಡು ಕಂತಿನಲ್ಲಿ 4 ಸಾವಿರ ಹಣ ನೀಡುವುದಾಗಿ ಘೋಷಣೆ ಮಾಡಲಾಗಿದೆ. ತಾವು ಮಂಡಿಸಿರುವ ಬಜೆಟ್‍ನಲ್ಲಿ ರೈತರಿಗಾಗಿ ವಿಶೇಷ ಯೋಜನೆಗಳನ್ನು ಪ್ರಕಟಿಸಲಿದ್ದಾರೆ. ಗ್ರಾಮೀಣ ಭಾಗಗಳಲ್ಲಿ ನಿರಂತರವಾಗಿ 6 ಗಂಟೆ ವಿದ್ಯುತ್ ಪೂರೈಕೆ ಮಾಡುವುದು, ವಿದ್ಯುತ್ ಸೋರಿಕೆ ತಡೆಗಟ್ಟಲು ಬಿಗಿಯಾದ ಕ್ರಮ, ರೈತರು ಬೆಳೆದ ಬೆಳೆಗಳಿಗೆ ವೈಜ್ಞಾನಿಕ ಬೆಲೆ, ಆಧುನಿಕ ಕೃಷಿ ಮಾರುಕಟ್ಟೆ ವ್ಯವಸ್ಥೆ, ಮಧ್ಯವರ್ತಿಗಳ ಹಾವಳಿ ತಪ್ಪಿಸಲು ರೈತರು ನೇರವಾಗಿ ಬೆಳೆಗಳನ್ನು ಮಾರಾಟ ಮಾಡುವ ವ್ಯವಸ್ಥೆ, ಎಪಿಎಂಸಿಗಳ ಸುಧಾರಣೆ ಸೇರಿದಂತೆ ಅನ್ನದಾತನ ಕಣ್ಣೊರೆಸಲು ಕೆಲವು ಕಾರ್ಯಕ್ರಮಗಳನ್ನು ಘೋಷಣೆ ಮಾಡಲಿದ್ದಾರೆ.

ಕಾಂಗ್ರೆಸ್ ಸರ್ಕಾರದ ಅವಧಿಯಲ್ಲಿ ಜಾರಿಗೆ ತಂದಿರುವ ಅನ್ನಭಾಗ್ಯಯೋಜನೆಯಡಿ ಪ್ರತಿ ಕುಟುಂಬದ ಫಲಾನುಭವಿಗೆ ನೀಡಲಾಗುತ್ತಿರುವ 5 ಕೆಜಿ ಅಕ್ಕಿಯನ್ನು 7 ಕೆಜಿಗೆ ಹೆಚ್ಚಳ ಮಾಡುವ ನಿರೀಕ್ಷೆಯಿದೆ.  ಯಡಿಯೂರಪ್ಪನವರ ಜನಪ್ರಿಯ ಘೋಷಣೆಗಳಲ್ಲೊಂದಾದ ಬಡತನ ರೇಖೆಗಿಂತ ಕೆಳಗಿರುವ ಕುಟುಂಬದಲ್ಲಿ ಜನಿಸುವ ಹೆಣ್ಣು ಮಕ್ಕಳಿಗೆ ನೀಡಲಾಗುತ್ತಿರುವ ಭಾಗ್ಯಲಕ್ಷ್ಮಿ ಬಾಂಡ್ ಮೊತ್ತವನ್ನು ಹೆಚ್ಚಳ ಮಾಡುವುದು, ಪ್ರೌಢಶಾಲಾ ಮಕ್ಕಳಿಗೆ ನೀಡಲಾಗುತ್ತಿದ್ದ ಉಚಿತ ಸೈಕಲ್ ಯೋಜನೆಯನ್ನು 6ನೇ ತರಗತಿವರೆಗೂ ವಿಸ್ತರಣೆ ಮಾಡಲು ತೀರ್ಮಾನಿಸಿದ್ದಾರೆ ಎಂದು ತಿಳಿದುಬಂದಿದೆ.

ಮಹಾನಗರ ಪಾಲಿಕೆಗಳ ಸುಧಾರಣೆಗೆ ವಿಶೇಷ ಒತ್ತು ನೀಡಲಿದ್ದು, ಕೆಲವು ಮಹಾನಗರ ಪಾಲಿಕೆ, ನಗರ ಪಾಲಿಕೆ, ಜಿಪಂ, ತಾಪಂ ಹಾಗೂ ಗ್ರಾಪಂಗಳ ಸುಧಾರಣೆಗೆ ವಿಶೇಷ ಪ್ಯಾಕೇಜ್ ಘೋಷಣೆಯಾಗಲಿದೆ. ಪ್ರತಿಯೊಂದು ಹಳ್ಳಿಯಲ್ಲೂ ಎಲ್ಲಾ ನಾಗರಿಕರಿಗೆ ಸಮರ್ಪಕವಾಗಿ ಶುದ್ಧ ಕುಡಿಯುವ ನೀರು ಪೂರೈಕೆ ಮಾಡುವ ಉದ್ದೇಶದಿಂದ ಘಟಕಗಳನ್ನು ಗಣನೀಯ ಪ್ರಮಾಣದಲ್ಲಿ ಏರಿಕೆ ಮಾಡಲಿದ್ದಾರೆ. ಅಲ್ಲದೆ ಇವುಗಳ ನಿರ್ವಹಣೆಗೆ ಆರ್ಥಿಕ ನೆರವು ಘೋಷಣೆಯಾಗಲಿದೆ ಎಂದು ಮೂಲಗಳು ತಿಳಿಸಿವೆ.

ಹೀಗೆ ತಮ್ಮ ಸರ್ಕಾರ ಜನಪರವಾಗಿದೆ ಎಂಬುದನ್ನು ಬಿಂಬಿಸಲು ಮುಂದಾಗಿರುವ ಯಡಿಯೂರಪ್ಪ ಬಜೆಟ್‍ನಲ್ಲಿ ಬರಪೂರ ಕೊಡುಗೆಗಳನ್ನು ನೀಡುವ ಸಾಧ್ಯತೆ ಇದೆ.

Facebook Comments