ರಾಜ್ಯ ಕಾಂಗ್ರೆಸ್ ಒಳಬೇಗುದಿ ನಿವಾರಣೆಗೆ ಹೈಕಮಾಂಡ್‍ನಿಂದ ಸರಣಿ ಸಭೆ ನಿರೀಕ್ಷೆ

ಈ ಸುದ್ದಿಯನ್ನು ಶೇರ್ ಮಾಡಿ

ಬೆಂಗಳೂರು, ಜು.17- ರಾಜ್ಯ ಕಾಂಗ್ರೆಸ್‍ನಲ್ಲಿ ಒಗ್ಗಟ್ಟು ಮೂಡಿಸಿ ಮುಂದಿನ ಚುನಾವಣೆಗೆ ಸಜ್ಜುಗೊಳಿಸುವ ನಿಟ್ಟಿನಲ್ಲಿ ಕಾಂಗ್ರೆಸ್ ಹೈಕಮಾಂಡ್ ಮುಂದಾಗಿದ್ದು, ಈ ವಾರ ಅಥವಾ ಮುಂದಿನ ವಾರ ಪ್ರಮುಖ ನಾಯಕರನ್ನು ದೆಹಲಿಗೆ ಕರೆಸಿ ಚರ್ಚೆ ನಡೆಸುವ ಸಾಧ್ಯತೆ ಇದೆ. ಮುಂದಿನ ಮುಖ್ಯಮಂತ್ರಿ ಚರ್ಚೆ ಹಾಗೂ ಕೆಜಿಹಳ್ಳಿ, ಡಿಜೆಹಳ್ಳಿ ಪ್ರಕರಣಕ್ಕೆ ಸಂಬಂಧಿಸಿದಂತೆ ರಾಜ್ಯ ನಾಯಕರ ನಡುವೆ ಭಿನ್ನಾಭಿಪ್ರಾಯಗಳು ತಲೆದೋರಿದ್ದು, ಒಳಗೊಳಗೆ ಅಸಮಾಧಾನ ಹೊಗೆಯಾಡುತ್ತಿದೆ.

ಇದನ್ನು ಥಣಿಸಲು ರಾಜ್ಯಮಟ್ಟದಲ್ಲಿ ಹಲವಾರು ಸುತ್ತಿನ ಚರ್ಚೆ, ಸಮಾಲೋಚನೆಗಳು ನಡೆದರೂ ಸಹ ಪ್ರಯೋಜನವಾಗಿಲ್ಲ. ನಿನ್ನೆ ರಾತ್ರಿ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಬೆಂಗಳೂರನ್ನು ಪ್ರಮುಖವಾಗಿಸಿಕೊಂಡು ಶಾಸಕರು, ಮಾಜಿ ಶಾಸಕರು, ಮಾಜಿ ಸಂಸದರು, ಮಾಜಿ ಮೇಯರ್‍ಗಳು, ವಿಧಾನಪರಿಷತ್ ಸದಸ್ಯರು, ಮಾಜಿ ಸದಸ್ಯರನ್ನು ಒಗ್ಗೂಡಿಸಿ ಔತಣ ಕೂಟ ನಡೆಸಿದರು. ಪ್ರತಿ ಪಕ್ಷದ ನಾಯಕ ಸಿದ್ದರಾಮಯ್ಯ ಕೂಡ ಅದರಲ್ಲಿ ಭಾಗವಹಿಸಿದ್ದರು.

ಆದರೆ, ಸಿದ್ದರಾಮಯ್ಯ ಅವರ ಪಕ್ಕಾ ಬೆಂಬಲಿಗರಾದ ಜಮೀರ್ ಅಹಮ್ಮದ್‍ಖಾನ್ ಹಾಗೂ ಕೆಲವರು ಸಭೆಯಿಂದ ಹೊರಗುಳಿದಿದ್ದರು. ಕೆಲ ವಿಷಯಗಳು ಕಾಂಗ್ರೆಸ್‍ನಲ್ಲಿ ದಿಢೀರ್ ಹೊತ್ತಿಕೊಳ್ಳುವ ಸ್ಫೋಟಕಗಳಂತೆ ಮಸುಕಾಗಿವೆ. ಅವುಗಳಿಗೆ ಸಣ್ಣ ಕಿಡಿ ತಗುಲಿದರೂ ದೊಡ್ಡ ರಾದ್ದಾಂತವೇ ಆಗುತ್ತದೆ. ಹಾಗಾಗಿ ಗೊಂದಲಕಾರಿ ವಿಷಯಗಳನ್ನು ಬಗೆಹರಿಸಲು ಹೈಕಮಾಂಡ್ ಮುಂದಾಗಿದೆ.

ಯುವ ಕಾಂಗ್ರೆಸ್ ನಾಯಕತ್ವ, ಮುಂದಿನ ಮುಖ್ಯಮಂತ್ರಿ ಹುದ್ದೆ, ಪದಾಧಿಕಾರಿಗಳ ನೇಮಕ ಸೇರಿದಂತೆ ಪ್ರಮುಖ ವಿಷಯಗಳನ್ನು ಹೈಕಮಾಂಡ್ ರಾಜ್ಯದ ನಾಯಕರ ಜತೆ ಪ್ರತ್ಯೇಕವಾಗಿ ಚರ್ಚಿಸಿ ಸ್ಪಷ್ಟ ಸೂಚನೆ ನೀಡುವ ನಿರೀಕ್ಷೆಗಳಿವೆ. ಹೀಗಾಗಿ ಈ ವಾರ ಅಥವಾ ಮುಂದಿನ ವಾರ ಪ್ರತಿಪಕ್ಷದ ನಾಯಕ ಸಿದ್ದರಾಮಯ್ಯ, ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಎಐಸಿಸಿ ಪ್ರಧಾನಕಾರ್ಯದರ್ಶಿಗಳಾದ ದಿನೇಶ್‍ಗುಂಡೂರಾವ್, ಎಚ್.ಕೆ.ಪಾಟೀಲ್ ಸೇರಿದಂತೆ ಅನೇಕ ನಾಯಕರುಗಳನ್ನು ಭೇಟಿ ಮಾಡಲು ಹೈಕಮಾಂಡ್ ಸಮಯ ನೀಡಲಿದೆ ಎನ್ನಲಾಗಿದೆ.

ಈಗಾಗಲೇ ಡಿ.ಕೆ.ಶಿವಕುಮಾರ್ ಅವರು ಒಮ್ಮೆ ರಾಹುಲ್‍ಗಾಂಧಿ ಅವರನ್ನು ಭೇಟಿ ಮಾಡಿ ಚರ್ಚೆ ನಡೆಸಿದ್ದಾರೆ. ಸರಣಿ ಸಭೆಗಳಲ್ಲಿ ಸೋನಿಯಗಾಂಧಿ ಅಥವಾ ರಾಹುಲ್‍ಗಾಂಧಿ ಅವರು ರಾಜ್ಯ ನಾಯಕರನ್ನು ಭೇಟಿ ಮಾಡುವ ನಿರೀಕ್ಷೆಗಳಿವೆ.

Facebook Comments