ನೆರೆ ರಾಜ್ಯ ಚುನಾವಣೆಗಳಲ್ಲಿ ಕರ್ನಾಟಕ ಬಿಜೆಪಿ ನಾಯಕರ ಹವಾ

ಈ ಸುದ್ದಿಯನ್ನು ಶೇರ್ ಮಾಡಿ

ಬೆಂಗಳೂರು,ಮಾ.22- ಸದ್ಯದಲ್ಲೇ ನಡೆಯಲಿರುವ ಎರಡು ರಾಜ್ಯಗಳು ಹಾಗೂ ಒಂದು ಕೇಂದ್ರಾಡಳಿತ ಪ್ರದೇಶದ ವಿಧಾನಸಭೆ ಚುನಾವಣೆಯಲ್ಲಿ ಕರ್ನಾಟಕದ ಬಿಜೆಪಿಯ ಹೆಚ್ಚಿನ ನಾಯಕರು ಪ್ರಮುಖ ಪಾತ್ರ ವಹಿಸುತ್ತಿರುವುದು ರಾಷ್ಟ್ರದ ಗಮನ ಸೆಳೆದಿದೆ.  ಮುಂದಿನ ತಿಂಗಳ 6 ರಂದು ತಮಿಳುನಾಡು, ಕೇರಳ ಮತ್ತು ಕೇಂದ್ರಾಡಳಿತ ಪ್ರದೇಶವಾದ ಪುದುಚೇರಿ ವಿಧಾನಸಭಾ ಚುನಾವಣೆಗೆ ನಡೆಯಲಿದೆ.

ಈ ಮೂರು ರಾಜ್ಯಗಳಲ್ಲಿ ರಾಷ್ಟ್ರೀಯ ನಾಯಕರು ವಿಧಾನಸಭಾ ಚುನಾವಣೆಗೆ ಮುನ್ನ ಕರ್ನಾಟಕದ ಬಿಜೆಪಿ ಮುಖಂಡರಿಗೆ ಪ್ರಮುಖ ಜವಾಬ್ದಾರಿ ನೀಡಿರುವುದು ವಿಶೇಷವಾಗಿದೆ. ಪಕ್ಷದ ಪ್ರಧಾನ ಕಾರ್ಯದರ್ಶಿ ಹಾಗೂ ಶಾಸಕ ಸಿ.ಟಿ.ರವಿ ಅವರಿಗೆ ತಮಿಳುನಾಡಿನ ಉಸ್ತುವಾರಿ ನೀಡಲಾಗಿದೆ. ಅಂತೆಯೇ, ಪುದುಚೇರಿಯ ಉಸ್ತುವಾರಿಯಾಗಿ ವಹಿಸಿರುವ ನಿರ್ಮಲ್ ಕುಮಾರ್ ಸುರಾನಾ ಅವರನ್ನು ನೇಮಕ ಮಾಡಲಾಗಿದೆ.

ಬಿಜೆಪಿ ರಾಜ್ಯಸಭಾ ಸದಸ್ಯ ರಾಜೀವ್ ಚಂದ್ರಶೇಖರ್ ಅವರನ್ನು ಪುದುಚೇರಿಯ ಸಹ-ಉಸ್ತುವಾರಿ ಆಗಿ ನೇಮಿಸಲಾಗಿದೆ. ಕೇರಳದ ಚುನಾವಣಾ ಉಸ್ತುವಾರಿಗಳಾಗಿ ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ ಮತ್ತು ಕರ್ನಾಟಕದ ಉಪಮುಖ್ಯಮಂತ್ರಿ ಅಶ್ವತ್ಥನಾರಾಯಣ್ ಹಾಗೂ ಶಾಸಕ ಸುನೀಲ್ ಕುಮಾರ್ ನೇಮಿಸಲಾಗಿದೆ.

ದಕ್ಷಿಣ ರಾಜ್ಯ ಮತ್ತು ಪುದುಚೇರಿಯ ವಿಧಾನಸಭಾ ಚುನಾವಣೆಯಲ್ಲಿ ಪಕ್ಷವನ್ನು ಮುನ್ನಡೆಸಲು ಈ ನಾಯಕರನ್ನು ಆಯ್ಕೆ ಮಾಡಿಕೊಂಡದ್ದು ಬಿಜೆಪಿ ಹೈಕಮಾಂಡ್. ಮುಂಬರುವ ದಕ್ಷಿಣ ಭಾರತದ ಯಾವುದೇ ಚುನಾವಣೆಗಳಲ್ಲಿ ಕರ್ನಾಟಕವನ್ನು ಹೆಬ್ಬಾಗಿಲು ಮಾಡಿಕೊಳ್ಳುವ ಲೆಕ್ಕಾಚಾರವಿದೆ ಎಂದು ಪಕ್ಷದ ಮೂಲಗಳು ತಿಳಿಸಿವೆ.  ಪುದುಚೇರಿಯ, ಪ್ರತಿ ಕ್ಷೇತ್ರದಲ್ಲಿ ಕೆಲಸ ಮಾಡಲು ಬಿಜೆಪಿ 30 ಬಿಬಿಎಂಪಿ ಕಾಪೆರ್ರೇಟರ್‍ಗಳನ್ನು ನಿಯೋಜಿಸಿದೆ.

ಪ್ರತಿ ಕಾಪೆರ್ರೇಟರ್ ಅಡಿಯಲ್ಲಿ 10-20 ಇತರ ನಾಯಕರು ಕಾರ್ಯನಿರ್ವಹಿಸುತ್ತಿದ್ದಾರೆ. ಬೆಂಗಳೂರಿನ, ಪ್ರತಿ ಬಿಬಿಎಂಪಿ ವಾರ್ಡ್‍ನಲ್ಲಿ ಸುಮಾರು 45,000 ಮತದಾರರಿದ್ದಾರೆ. ಅದೇ ಸಮಯದಲ್ಲಿ, ಪುದುಚೇರಿಯ ಪ್ರತಿ ವಿಧಾನಸಭಾ ಕ್ಷೇತ್ರದಲ್ಲಿ ಸರಾಸರಿ 30,000 ಮತದಾರರಿದ್ದಾರೆ. ಈ ಕಾರಣಕ್ಕಾಗಿಯೇ ಬಿಬಿಎಂಪಿ ಕಾಪೆರ್ರೇಟರ್‍ಗಳು ಮನೆಮನೆಗೆ ತೆರಳಿ ಮತದಾರರನ್ನು ಸೆಳೆಯಲು ರಣತಂತ್ರ ರೂಪಿಸಿದೆ.

ನಾವು ನಿರ್ವಹಿಸುತ್ತಿರುವ ಕ್ಷೇತ್ರ ಗೆಲ್ಲಬೇಕು: ಕೇಂದ್ರದಲ್ಲಿರುವ ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಸರಕಾರದ ಸಾಧನೆಗಳ ಮೇಲೆ ಮನೆಮನೆಗೆ ತೆರಳಿ ಪ್ರಚಾರ ಮಾಡುತ್ತಿದ್ದೇವೆ.ಕಳೆದ ಚುನಾವಣೆಗೆ ಹೋಲಿಸಿದರೆ,ನಮ್ಮ ನಿರೀಕ್ಷೆಗೂ ಮೀರಿದ ಬೆಂಬಲ ವ್ಯಕ್ತವಾಗಿದೆ ಎಂದು ಪ್ರಮುಖ ಉಸ್ತುವಾರಿಯೊಬ್ಬರು ಹೇಳಿದ್ದಾರೆ.

ಎದುರಾಳಿಗಳು ಎಷ್ಟೇ ಅಪಪ್ರಚಾರ ನಡೆಸಿದರೂ ನಾವು ಉತ್ತಮ ಆಲೋಚನೆಗಳೊಂದಿಗೆ ಪ್ರಚಾರ ನಡೆಸುವಂತೆ ಪಕ್ಷವು ನಮಗೆ ಸ್ಪಷ್ಟ ಸೂಚನೆಗಳನ್ನು ನೀಡಿದೆ. ಮನೆ ಮನೆಗೆ ತೆರಳಿ ಅಭಿಯಾನವನ್ನು ನಡೆಸುವ ಕಾರ್ಯ ಮಾಡಲಾಗಿದೆ. ನಮ್ಮ ಕಾರ್ಯತಂತ್ರ ಫಲ ಕೊಡಲಿದೆ ಎಂಬ ವಿಶ್ವಾಸ ವ್ಯಕ್ತಪಡಿಸಿದ್ದಾರೆ. ಬಿಜೆಪಿ ಕೇರಳ ರಾಜ್ಯದಲ್ಲಿ ನಿರ್ದಿಷ್ಟ ಸಂಖ್ಯೆಯ ಸ್ಥಾನಗಳತ್ತ ಗಮನ ಹರಿಸಿದೆ.ಇದರಲ್ಲಿ ಪ್ರಮುಖವಾಗಿ ಮಂಗಳೂರು ನಗರದಿಂದ ಕೆಲವು ಕಿಲೋ ಮೀಟರ್ ದೂರದಲ್ಲಿರುವ ಮಂಜೇಶ್ವರ ಕೂಡ ಇದೆ. ಮಂಜೇಶ್ವರದಲ್ಲಿ ಕನಿಷ್ಠ 60-75 ರಷ್ಟು ಜನಸಂಖ್ಯೆಯು ತುಳು ಮತ್ತು ಕನ್ನಡ ಭಾಷಿಕರನ್ನು ಒಳಗೊಂಡಿದೆ.

ಬಿಜೆಪಿ ಶಾಸಕ ಸುನೀಲ್ ಕುಮಾರ್ ಅವರಿಗೆ ಮಂಜೇಶ್ವರದಲ್ಲಿ ಪಕ್ಷದ ಗೆಲುವು ಖಾತರಿಪಡಿಸುವ ಜವಾಬ್ದಾರಿ ನೀಡಲಾಗಿದೆ.ಅವರು ಮಂಜೇಶ್ವರದಲ್ಲಿ ಶಿಬಿರ ಸ್ಥಾಪಿಸಿದ್ದು, ಪ್ರತಿ ದಿನವೂ ಬೂತ್ ಮಟ್ಟದ ಸಭೆಗಳನ್ನು ಮೇಲ್ವಿಚಾರಣೆ ನಡೆಸುತ್ತಾರೆ. ಇಲ್ಲಿಯ ವಿಧಾನಸಭಾ ಕ್ಷೇತ್ರದಲ್ಲಿ ಬಿಜೆಪಿಯಿಂದ ಕರ್ನಾಟಕದ 150 ಕ್ಕೂ ಹೆಚ್ಚು ಪಕ್ಷದ ಕಾರ್ಯಕರ್ತರನ್ನು ನಿಯೋಜಿಸಲಾಗಿದೆ.

ವಾಸ್ತವವಾಗಿ ಬಿಜೆಪಿ ತನ್ನ ರಾಜ್ಯಅಧ್ಯಕ್ಷ ಕೆ ಸುರೇಂದ್ರನ್ ಅವರನ್ನು ಮಂಜೇಶ್ವರ ಮತ್ತು ಕೊನ್ನಿಯಿಂದ ಕಣಕ್ಕಿಳಿಸಿದೆ. ಅವರ ಪ್ರಚಾರ ಘೋಷಣೆ ದೆಹಲಿಯಲ್ಲಿ ನರೇಂದ್ರ, ಮಂಜೇಶ್ವರದಲ್ಲಿ ಸುರೇಂದ್ರ ಎಂದು ಘೋಷಣೆ ಮಾಡಲಾಗುತ್ತಿದೆ. ಕೆ.ಸುರೇಂದ್ರನ್ ಹಿಂದಿನ ವಿಧಾನಸಭಾ ಚುನಾವಣೆಯಲ್ಲಿ ಮಂಜೇಶ್ವರವನ್ನು 89 ಮತಗಳ ಅಂತರದಲ್ಲಿ ಪರಾಭವಗೊಂಡಿದ್ದರು. ಈ ಬಾರಿ ಶತಯ ಗತಾಯ ಗೆಲ್ಲಲೇ ಬೇಕೆಂದು ಪಣ ತೊಟ್ಟು ಎಲ್ಲಾ ಶಕ್ತಿಯನ್ನು ಧಾರೆ ಎರೆಯುತ್ತಿದ್ದಾರೆ.

ಬಿಜೆಪಿ ಮುಖಂಡ ಸಿ.ಟಿ.ರವಿ ಅವರು ಅಭ್ಯರ್ಥಿಗಳ ಪರವಾಗಿ ಪಕ್ಷದ ಪ್ರಚಾರವನ್ನು ನಿರ್ವಹಿಸಲು ಕರ್ನಾಟಕದಿಂದ ಕನಿಷ್ಠ 20 ಶಾಸಕರು ಮತ್ತು 150 ಪಕ್ಷದ ಕಾರ್ಯಕರ್ತರಿಗೆ ಸೂಚನೆ ನೀಡಿದ್ದಾರೆ. ರಾಜರಾಜೇಶ್ವರಿ ನಗರ ಶಾಸಕ ಮುನಿರತ್ನ ಅವರಿಗೆ ಅರಾವಕುರಿಚಿಯ ಉಸ್ತುವಾರಿ ನೀಡಲಾಗಿದೆ.

ಈ ವಿಧಾನಸಭಾ ಕ್ಷೇತ್ರದಿಂದ ಮಾಜಿ ಐಪಿಎಸ್ ಅಣ್ಣಾಮಲೈ ಅವರನ್ನು ಬಿಜೆಪಿ ಕಣಕ್ಕಿಳಿಸಿದೆ. ಮುನಿರತ್ನ ಒಂದು ವಾರದಿಂದ ಅರಾವಕುರಿಚಿಯಲ್ಲಿ ಪ್ರಚಾರ ನಡೆಸುತ್ತಿದ್ದು, ಏಪ್ರಿಲ್ 4 ರವರೆಗೆ ಇಲ್ಲಿಯೇ ವಾಸ್ತವ್ಯ ಹೂಡಲಿದ್ದಾರೆ. ಪಕ್ಷದ ಕರ್ನಾಟಕ ಘಟಕದಿಂದ ವಿವಿಧ ಮೋರ್ಚಾಗಳ ಬಿಜೆಪಿ ನಾಯಕರು ಸಾಮಾಜಿಕ ಮಾಧ್ಯಮ ತಂಡಗಳು ಸೇರಿದಂತೆ ತಮಿಳುನಾಡಿಗೆ ಸ್ಥಳಾಂತರಿಸಲಾಗಿದೆ.

Facebook Comments