ಹೆಚ್ಚಿನ ಬಡ್ಡಿ ಆಸೆ ತೋರಿಸಿ ವಂಚಿಸುವ ಸಂಸ್ಥೆಗಳಿಗೆ ಕಡಿವಾಣ

ಈ ಸುದ್ದಿಯನ್ನು ಶೇರ್ ಮಾಡಿ

ಬೆಂಗಳೂರು :  ಹೆಚ್ಚಿನ ಬಡ್ಡಿ ಹಾಗೂ ಲಾಭ ನೀಡುವ ಆಸೆ ತೋರಿಸಿ ಸಾರ್ವಜನಿಕರಿಂದ ಠೇವಣಿ ಸಂಗ್ರಹಿಸಿ ವಂಚಿಸುವ ಕಂಪನಿ ಅಥವಾ ಸಂಸ್ಥೆಗಳಿಗೆ ಕಡಿವಾಣ ಹಾಕಲು ರಾಜ್ಯ ಸರ್ಕಾರ ಹೊಸ ಕಾಯ್ದೆ ಜಾರಿಗೆ ತರಲು ಮುಂದಾಗಿದೆ. ಸಾರ್ವಜನಿಕರಿಂದ ಠೇವಣಿ ಸಂಗ್ರಹಿಸುವ ಯೋಜನೆಯನ್ನು ನಿಷೇಧಿಸಿ ಹೊಸ ನಿಯಮಗಳನ್ನು ರೂಪಿಸುವ ಉದ್ದೇಶದ ಕರ್ನಾಟಕ ಅನಿಯಂತ್ರಿತ ಠೇವಣಿ ಯೋಜನೆಗಳ ನಿಷೇಧ ನಿಯಮಗಳು 2020ಕ್ಕೆ ಇಂದು ನಡೆದ ಸಚಿವ ಸಂಪುಟ ಒಪ್ಪಿಗೆ ನೀಡಿದೆ ಎಂದು ಉನ್ನತ ಮೂಲಗಳು ತಿಳಿಸಿವೆ.

ಮುಖ್ಯಮಂತ್ರಿ ಯಡಿಯೂರಪ್ಪ ನೇತೃತ್ವದಲ್ಲಿ ನಡೆದ ರಾಜ್ಯ ಸಚಿವ ಸಂಪುಟ ಸಭೆಯಲ್ಲಿ ಖಾಸಗಿ ಸಂಸ್ಥೆಗಳು ಠೇವಣಿ ಸಂಗ್ರಹಿಸಿ ಸಾರ್ವಜನಿಕರನ್ನು ವಂಚಿಸುವುದನ್ನು ತಡೆಗಟ್ಟುವ ಬಗ್ಗೆ ಗಂಭೀರ ಚರ್ಚೆ ನಡೆಸಲಾಗಿದೆ.  ಇತ್ತೀಚೆಗೆ ಐಎಂಎ ಸಾರ್ವಜನಿಕರಿಂದ ಠೇವಣಿ ಸಂಗ್ರಹಿಸಿ ಬಹುಕೋಟಿ ರೂ. ವಂಚನೆ ಮಾಡಿದ ಆರೋಪ ಬೆಳಕಿಗೆ ಬಂದಿತ್ತು. ಇದರಿಂದ ಸಾವಿರಾರು ಕುಟುಂಬಗಳು ವಂಚನೆಗೆ ಒಳಗಾಗಿದ್ದವು.

ಇದೇ ರೀತಿ ಹಲವು ಕಂಪನಿಗಳು ಹೆಚ್ಚಿನ ಬಡ್ಡಿ ನೀಡುವ ಆಸೆ ತೋರಿಸಿ ಸಾರ್ವಜನಿಕರನ್ನು ವಂಚಿಸಿದ್ದ ಆರೋಪಗಳು ಕೇಳಿಬಂದಿದ್ದವು. ಈ ಹಿನ್ನೆಲೆಯಲ್ಲಿ ಹೊಸ ಕಾಯ್ದೆಯನ್ನು ತರಲು ಸಂಪುಟ ಒಪ್ಪಿಗೆ ನೀಡಿದೆ ಎಂದು ಉನ್ನತ ಮೂಲಗಳು ತಿಳಿಸಿವೆ. ಮುಂಬರುವ ಅಧಿವೇಶನದಲ್ಲಿ ಈ ಸಂಬಂಧ ವಿಧೇಯಕವನ್ನು ಮಂಡಿಸಲು ಉದ್ದೇಶಿಸಲಾಗಿದೆ. ಅಲ್ಲದೆ ಭಾಗ್ಯಲಕ್ಷ್ಮಿ ಯೋಜನೆಯನ್ನು ಭಾರತೀಯ ಜೀವವಿಮಾ ನಿಗಮದ ಬದಲು ಅಂಚೆ ಇಲಾಖೆ ಮೂಲಕ ಸುಕನ್ಯ ಸಮೃದ್ಧಿ ಯೋಜನೆಯಂತೆ ಮರು ವಿನ್ಯಾಸಗೊಳಿಸಿ ಪ್ರಸಕ್ತ ಸಾಲಿನಿಂದ ಮುಂದುವರೆಸಲು ಆಡಳಿತಾತ್ಮಕ ಮಂಜೂರಾತಿಯನ್ನು ಸಂಪುಟ ನೀಡಿದೆ.

ರೈತರಿಂದ ಹಾಗೂ ಪ್ರತಿಪಕ್ಷಗಳಿಂದ ತೀವ್ರ ವಿರೋಧಕ್ಕೆ ಒಳಗಾಗಿದ್ದ 2020ರ ಕರ್ನಾಟಕ ಭೂ ಸುಧಾರಣೆಗಳ ತಿದ್ದುಪಡಿ ವಿಧೇಯಕಕ್ಕೂ ಸಂಪುಟ ಸಭೆ ಅನುಮೋದನೆ ನೀಡಿದೆ ಎಂದು ತಿಳಿದುಬಂದಿದೆ. ಭೂ ಸುಧಾರಣೆಗಳ ತಿದ್ದುಪಡಿ ವಿಧೇಯಕವನ್ನು ಪ್ರತಿಪಕ್ಷಗಳು ವಿಧಾನಮಂಡಲದ ಅಧಿವೇಶನದಲ್ಲಿ ತೀವ್ರವಾಗಿ ವಿರೋಧಿಸಿದ್ದವು. ಮತ್ತೊಮ್ಮೆ ಈ ಕಾಯ್ದೆಗೆ ರಾಜ್ಯ ಸರ್ಕಾರ ಸುಗ್ರೀವಾಜ್ಞೆ ತರಲು ಉದ್ದೇಶಿಲಾಗಿದೆ ಎಂದು ಹೇಳಲಾಗಿದೆ.

ಇನ್ನು ಹಲವು ಮಹತ್ವದ ವಿಷಯಗಳ ಬಗ್ಗೆ ಸಂಪುಟ ಸಭೆ ಚರ್ಚಿಸಿ ಅನುಮೋದನೆ ನೀಡಿರುವ ಸಾದ್ಯತೆಗಳಿವೆ ಎನ್ನಲಾಗಿದೆ.

Facebook Comments