ಕೇಂದ್ರ ಸರ್ಕಾರದ ವಿದ್ಯುತ್ ಕಾಯ್ದೆ ತಿದ್ದುಪಡಿ ವಿರೋಧಿಸಿ ಆ.10ರಂದು ರಾಜ್ಯಾದ್ಯಂತ ಪ್ರತಿಭಟನೆ

ಈ ಸುದ್ದಿಯನ್ನು ಶೇರ್ ಮಾಡಿ

ಬೆಂಗಳೂರು, ಆ.5- ಕೇಂದ್ರ ಸರ್ಕಾರದ ತಿದ್ದುಪಡಿ ಕಾಯ್ದೆ ವಿರೋಧಿಸಿ ಆಗಸ್ಟ್ 10ರಂದು ರಾಜ್ಯಾದ್ಯಂತ ಪ್ರತಿಭಟನೆ ಹಮ್ಮಿಕೊಳ್ಳಲಾಗಿದೆ ಎಂದು ಕಬ್ಬು ಬೆಳೆಗಾರರ ಸಂಘದ ಅಧ್ಯಕ್ಷ ಕುರುಬೂರು ಶಾಂತಕುಮಾರ್ ತಿಳಿಸಿದರು. ಕೃಷಿ ಪಂಪ್‍ಸೆಟ್‍ಗಳಿಗೆ ಮೀಟರ್ ಅಳವಡಿಸಿ ಉಚಿತ ವಿದ್ಯುತ್ ಕಡಿತ ಮಾಡುವ ಹುನ್ನಾರವನ್ನು ಸರ್ಕಾರ ಮಾಡುತ್ತಿದೆ. ವಿದ್ಯುತ್ ತಿದ್ದುಪಡಿ ಕಾಯ್ದೆ-2020ನ್ನು ಜಾರಿಗೆ ತರಲು ಮುಂದಾಗಿದೆ. ಇದನ್ನು ವಿರೋಧಿಸಿ ಆ.10ರಂದು ಜಿಲ್ಲಾಧಿಕಾರಿ ಮತ್ತು ತಾಲ್ಲೂಕು ಕಚೇರಿ ಮುಂದೆ ಧರಣಿ ಮಾಡಲಾಗುತ್ತದೆ ಎಂದು ಪತ್ರಿಕಾಗೋಷ್ಠಿಯಲ್ಲಿ ಅವರು ಹೇಳಿದರು.

ಆ.10ಕ್ಕೆ ಲೋಕಸಭೆಯಲ್ಲಿ ಮಂಡನೆ ಮಾಡಲು ಉದ್ದೇಶಿಸಿರುವ ಈ ಕಾಯ್ದೆಯನ್ನು ಕೂಡಲೇ ಕೈಬಿಡಬೇಕೆಂದು ಅವರು ಆಗ್ರಹಿಸಿದರು. ವಿದ್ಯುತ್ ಇಲಾಖೆ ನೌಕರರು ಆ.10ಕ್ಕೆ ಖಾಸಗೀಕರಣ ವಿರೋಧಿಸಿ ಚಳವಳಿ ಮಾಡುತ್ತಿದ್ದಾರೆ. ಸರ್ಕಾರ ರೈತರ ಬಗ್ಗೆ ಯಾವುದೇ ಕಾಳಜಿ ಇಲ್ಲದೆ ನಿರ್ಧಾರ ಕೈಗೊಳ್ಳುವುದನ್ನು ಬಿಡಬೇಕು ಎಂದು ಹೇಳಿದರು.

2018-19ರಲ್ಲಿ ಕಬ್ಬಿಗೆ 2850ರೂ. ನಿಗದಿ ಮಾಡಲಾಗಿತ್ತು. ರೈತರ ಉತ್ಪಾದನಾ ವೆಚ್ಚ 3500ರೂ. ಆಗುತ್ತಿದ್ದು, ಅದನ್ನು ಭರ್ತಿ ಮಾಡಬೇಕು. ಆದಾಯ ದ್ವಿಗುಣ ಮಾಡುವ ಭರವಸೆಯನ್ನು ಕೇಂದ್ರ ಸರ್ಕಾರ ನೀಡಿತ್ತು. ಭರವಸೆ ಈಡೇರಿಸಲು ಕೇವಲ ಮೂರು ತಿಂಗಳು ಬಾಕಿ ಇದೆ. ಕಬ್ಬು ಉತ್ಪಾದನೆಗೆ 3200ರೂ. ವೆಚ್ಚವಾಗುತ್ತಿದ್ದು, ಸರ್ಕಾರ ಇದರ ಮೇಲೆ ಲಾಭದ ದರ ನಿಗದಿ ಮಾಡಬೇಕು ಎಂದು ಒತ್ತಾಯಿಸಿದರು.

ಕಬಿನಿ, ಕಾವೇರಿ ನೀರು 100 ಟಿಎಂಸಿಗಿಂತ ಹೆಚ್ಚು ಬಳಕೆಯಾಗದೆ ಸಮುದ್ರ ಸೇರುತ್ತಿದೆ. 189 ಟಿಎಂಸಿಗಿಂತ ಹೆಚ್ಚಿನ ನೀರನ್ನು ತಮಿಳುನಾಡಿಗೆ ಬಿಡಲಾಗುತ್ತಿದೆ. ಯಾವುದೇ ಅನುಮತಿ ಪಡೆಯದೆ ಸರ್ಕಾರ ಮೇಕೆದಾಟು ಜಲಾಶಯ ನಿರ್ಮಾಣ ಮಾಡಬೇಕು. ಈ ಹಿಂದೆ ಕಬಿನಿ ಜಲಾಶಯವನ್ನು ಕೇಂದ್ರದ ನೆರವು ಪಡೆಯದೆ ಕಟ್ಟಿದಂತೆ ಈ ಬಾರಿಯೂ ಮೇಕೆದಾಟು ಯೋಜನೆಯನ್ನು ಕೈಗೆತ್ತಿಕೊಳ್ಳಬೇಕೆಂದು ತಿಳಿಸಿದರು.

ರಾಜ್ಯದಲ್ಲಿ ಸುಮಾರು 39ಕ್ಕೂ ಅಧಿಕ ತಳಿಯ ಬಾಳೆ ಬೆಳೆಯಲಾಗುತ್ತಿದ್ದು, ಸೂಕ್ತ ದರ ಸಿಗುತ್ತಿಲ್ಲ. ದೆಹಲಿಯಲ್ಲಿ ಬಾಳೆ ಬಳಕೆ ಬಗ್ಗೆ ಸರ್ಕಾರ ಜಾಗೃತಿ ಮೂಡಿಸುತ್ತದೆ. ಅದೇ ಮಾದರಿಯಲ್ಲಿ ಕರ್ನಾಟಕದಲ್ಲಿ ಕ್ರಮ ಕೈಗೊಳ್ಳಬೇಕು ಎಂದು ಹೇಳಿದರು. ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ನೀರಾವರಿ ತಜ್ಞರಾಗಿದ್ದು, ದೆಹಲಿ ಮತ್ತು ಕೇಂದ್ರ ನಾಯಕರ ಮಾತು ಕೇಳಿ ರಾಜ್ಯಕ್ಕೆ ಅನ್ಯಾಯ ಮಾಡಬಾರದು. ಮಂತ್ರಿಗಳು ರಾಜ್ಯದ ಜನರ ಅಭಿವೃದ್ಧಿಗೆ ಪೂರಕವಾಗಿ ಕೆಲಸ ಮಾಡಬೇಕು ಎಂದರು.

ಗ್ರಾಮೀಣ ರೈತರ ಮಕ್ಕಳ ಶಿಕ್ಷಣಕ್ಕೆ ಒಂದು ಕೋಟಿ ರೂ. ಮೀಸಲಿಟ್ಟಿರುವ ಮುಖ್ಯಮಂತ್ರಿಗಳ ಕ್ರಮ ಶ್ಲಾಘನೀಯವಾಗಿದೆ ಎಂದು ಹೇಳಿದರು. ಕೃಷಿ ಕಾಯ್ದೆ ವಿರೋಧಿಸಿ ಕಳೆದ ಎಂಟು ತಿಂಗಳಿನಿಂದ ಚಳವಳಿ ನಡೆಯುತ್ತಿದೆ. ರೈತರು ಸ್ವಯಂಪ್ರೇರಿತರಾಗಿ ಚಳವಳಿ ಮಾಡುತ್ತಿದ್ದಾರೆ. ಕಾಯ್ದೆ ಹಿಂತೆಗೆದುಕೊಳ್ಳುವವರೆಗೆ ಚಳವಳಿ ಮುಂದುವರಿಯಲಿದೆ ಎಂದು ಹೇಳಿದರು.

ಫಸಲ್ ಭಿಮಾ ಯೋಜನೆಯಡಿ ರೈತರು ಮಾಡಿದ ವಿಮೆ ಗದಗ ಮತ್ತು ಕೊಪ್ಪಳ ಜಿಲ್ಲೆಗಳಲ್ಲಿ 580 ಕೋಟಿ ರೂ. ಹಣ ಪಾವತಿಸಿದ್ದರೂ ಸಂಸ್ಥೆಗಳು 80 ಕೋಟಿ ರೂ. ಹಣ ನೀಡುತ್ತಿಲ್ಲ ಎಂದು ಆರೋಪಿಸಿದರು. ಪತ್ರಿಕಾಗೋಷ್ಠಿಯಲ್ಲಿ ರಾಜ್ಯ ರೈತ ಸಂಘದ ರಾಜ್ಯಾಧ್ಯಕ್ಷ ನಾರಾಯಣರೆಡ್ಡಿ, ದೇವುಕುಮಾರ್, ಕಬ್ಬು ಬೆಳೆಗಾರರ ಸಂಘದ ಕಾರ್ಯದರ್ಶಿ ವೀರನಗೌಡ ಪಾಟೀಲ್ ಮುಂತಾದವರು ಇದ್ದರು.

Facebook Comments