ಮಹಾನ್ ನಾಯಕರ ಪ್ರತಿಮೆಗಳ ತೆರವಿಗೆ ಮುಂದಾದ ಬಿಬಿಎಂಪಿ..!

ಈ ಸುದ್ದಿಯನ್ನು ಶೇರ್ ಮಾಡಿ

ಬೆಂಗಳೂರು, ಸೆ.1- ನಗರದಲ್ಲಿ ಅನಧಿಕೃತವಾಗಿ ಪ್ರತಿಷ್ಠಾಪಿಸಲಾಗಿರುವ ಮಹಾನ್ ನಾಯಕರುಗಳ ಪ್ರತಿಮೆ ಮತ್ತು ಬಾವುಟ ಕಂಬಗಳಿಗೆ ಇನ್ನು ಉಳಿಗಾಲವಿಲ್ಲ. ಹೈಕೋರ್ಟ್ ಆದೇಶದಂತೆ ನಗರದ ವಿವಿಧೆಡೆ ಅನಧಿಕೃತವಾಗಿ ಪ್ರತಿಷ್ಠಾಪಿಸಲಾಗಿರುವ ವರನಟ ಡಾ.ರಾಜ್‍ಕುಮಾರ್, ವಿಷ್ಣುವರ್ಧನ್, ಶಂಕರ್‍ನಾಗ್ ಹಾಗೂ ಕೆಲವು ಮಹಾನ್ ನಾಯಕರುಗಳ ಪುತ್ಥಳಿ ಮತ್ತು ಬಾವುಟ ಕಂಬಗಳನ್ನು ತೆರವುಗೊಳಿಸಲು ಪೊಲೀಸರು ಮತ್ತು ಬಿಬಿಎಂಪಿ ಸಿಬ್ಬಂದಿ ಮುಂದಾಗಿದ್ದಾರೆ.

ಕಾವೇರಿ ನಗರ ಪಾರ್ಕ್, ಪಟ್ಟೆಗಾರಪಾಳ್ಯ, ಶಿವನಹಳ್ಳಿ ಮುಖ್ಯರಸ್ತೆ, ಚೋಳೂರುಪಾಳ್ಯ, ಬಳೆಪೇಟೆ, ಎಂಸಿ ಬಡಾವಣೆ, ವಿಜಯನಗರ, ದತ್ತಾತ್ರೇಯ ರಸ್ತೆ, ಕೆಂಪಾಪುರ ಅಗ್ರಹಾರ, ರಾಯನ್ ಸರ್ಕಲ್, ಟಿಆರ್ ಮಿಲ್, ಅಕ್ಕಿಪೇಟೆ, ಮಂಜುನಾಥನಗರ, ಭಾಷ್ಯಂ ಸರ್ಕಲ್, ಶಿವನಹಳ್ಳಿ ಮುಖ್ಯರಸ್ತೆ, ಮಂಜುನಾಥನಗರ ಮುಖ್ಯರಸ್ತೆ, ಗಾಂಧಿನಗರ ಪಾರ್ಕ್, ಮಾಗಡಿ ರಸ್ತೆ, ಶೇಷಾದ್ರಿಪುರಂ, ವಿಜಯನಗರ ಪೈಪ್‍ಲೈನ್, ಟೋಲ್‍ಗೇಟ್ ಸರ್ಕಲ್‍ಗಳಲ್ಲಿ ಅನಧಿಕೃತವಾಗಿ ಪ್ರತಿಷ್ಠಾಪಿಸಲಾಗಿರುವ ಪ್ರತಿಮೆಗಳ ಸರ್ವೆ ಕಾರ್ಯವನ್ನು ಬಿಬಿಎಂಪಿ ಈಗಾಗಲೇ ಕೈಗೆತ್ತಿಕೊಂಡಿದೆ.

ಸರ್ವೆ ಕಾರ್ಯ ಮುಗಿದ ಕೂಡಲೇ ಪೊಲೀಸರ ಸಹಕಾರದೊಂದಿಗೆ ಈ ಮೇಲಿನ ಎಲ್ಲ ಪುತ್ಥಳಿಗಳು ಹಾಗೂ ನಗರದ ಇನ್ನಿತರ ಪ್ರದೇಶಗಳಲ್ಲಿ ಪ್ರತಿಷ್ಠಾಪಿಸಲಾಗಿರುವ ಅನಧಿಕೃತ ಪ್ರತಿಮೆಗಳ ತೆರವು ಕಾರ್ಯಾಚರಣೆ ಆರಂಭವಾಗಲಿದೆ.

ಕಾರಣವೇನು? ಸುರೇಶ್ ಎಂಬುವವರು ಸಲ್ಲಿಸಿದ ಸಾರ್ವಜನಿಕ ಹಿತಾಸಕ್ತಿ ಅರ್ಜಿ ವಿಚಾರಣೆ ನಡೆಸಿದ ಹೈಕೋರ್ಟ್, ಕೆಲವು ಪ್ರದೇಶಗಳಲ್ಲಿ ಪ್ರತಿಷ್ಠಾಪಿಸಲಾಗಿರುವ ಪುತ್ಥಳಿ ಮತ್ತು ಬಾವುಟ ಕಂಬಗಳ ಸರ್ವೆ ಕಾರ್ಯ ನಡೆಸಿ ಅವುಗಳ ತೆರವು ಕಾರ್ಯಾಚರಣೆ ಕೈಗೊಂಡು ನ್ಯಾಯಾಲಯಕ್ಕೆ ವರದಿ ಸಲ್ಲಿಸುವಂತೆ ನಗರ ಪೊಲೀಸರಿಗೆ ಸೂಚನೆ ನೀಡಿತ್ತು.

ನ್ಯಾಯಾಲಯದ ಈ ಆದೇಶದ ಮೇರೆಗೆ ನಗರ ಪೊಲೀಸ್ ಆಯುಕ್ತ ಕಮಲ್‍ಪಂಥ್ ಅವರು ಬಿಬಿಎಂಪಿ ಅಧಿಕಾರಿಗಳು ಹಾಗೂ ಸಂಚಾರ ವಿಭಾಗದ ಪೊಲೀಸರು ಅನಧಿಕೃತವಾಗಿ ಅಳವಡಿಸಿರುವ ಪ್ರತಿಮೆ ಮತ್ತು ಬಾವುಟ ಕಂಬಗಳನ್ನು ತೆರವುಗೊಳಿಸಿ ವರದಿ ನೀಡುವಂತೆ ಸೂಚನೆ ನೀಡಿದ್ದರು.

Facebook Comments