7 ತಿಂಗಳ ಬಳಿಕ ವಿಶ್ವದ ಅತ್ಯಂತ ಎತ್ತರದ ಏಕತಾ ಪ್ರತಿಮೆ ಪ್ರವಾಸಿಗರಿಗೆ ಮುಕ್ತ

ಈ ಸುದ್ದಿಯನ್ನು ಶೇರ್ ಮಾಡಿ

ನರ್ಮದಾ,ಅ.17- ಕೊರೊನಾ ವೈರಸ್ ಪಿಡುಗಿನಿಂದಾಗಿ 7 ತಿಂಗಳ ಕಾಲ ಬಂದ್ ಆಗಿದ್ದ ಗುಜರಾತ್‍ನ ನರ್ಮದಾ ನದಿತಟದಲ್ಲಿರುವ ವಿಶ್ವದ ಅತ್ಯಂತ ಎತ್ತರದ ಏಕತಾ ಪ್ರತಿಮೆ ಇಂದಿನಿಂದ ಕಟ್ಟುನಿಟ್ಟಿನ ಕೋವಿಡ್-19 ಮಾರ್ಗ ಸೂಚಿಗಳಿಗೆ ಒಳಪಟ್ಟು ಪ್ರವಾಸಿಗರಿಗೆ ಮುಕ್ತವಾಗಿದೆ.

ಸ್ವಾತಂತ್ರ್ಯ ಹೋರಾಟಗಾರ ಉಕ್ಕಿನ ಮನುಷ್ಯ ಸರ್ದಾರ್ ವಲ್ಲಭಾಯ್ ಪಟೇಲ್ ಅವರ 182 ಮೀಟರ್‍ಗಳಷ್ಟು ಎತ್ತರವಾದ ಭವ್ಯ ಪುತ್ಥಳಿ ವೀಕ್ಷಣೆಗೆ ಪ್ರತಿದಿನ 2500 ಮಂದಿಗೆ ಮಾತ್ರ ಅವಕಾಶ ನೀಡಲಾಗಿದೆ.  ಪುತ್ಥಳಿಗೆ ಒಳಭಾಗದಲ್ಲಿರುವ ವಿಹಂಗಮ ನೋಟದ ಗ್ಯಾಲರಿಗೆ ಕೇವಲ 500 ಪ್ರವಾಸಿಗರಿಗಷ್ಟೇ ಅವಕಾಶ ಕಲ್ಪಿಸಲಾಗಿದೆ.

ಆನ್‍ಲೈನ್ ಮೂಲಕ ಮಾತ್ರ ಟಿಕೆಟ್ ಬುಕಿಂಗ್ ಲಭ್ಯ. ಸ್ಯಾನಿಟೈಸರ್, ಮಾಸ್ಕ್ ಬಳಕೆ ಮತ್ತು ಸಾಮಾಜಿಕ ಅಂತರವನ್ನು ಕಡ್ಡಾಯವಾಗಿ ಪಾಲಿಸುವ ನಿಯಮ ವಿಧಿಸಲಾಗಿದೆ. ಗುಜರಾತ್‍ನ ನರ್ಮದಾ ಜಿಲ್ಲೆಯ ಕೆವಾಡಿಯ ಎಂಬಲ್ಲಿ ನರ್ಮದಾ ನದಿ ದಂಡೆ ಮೇಲೆ ನಿರ್ಮಿಸಲಾದ ವಿಶ್ವದ ಅತ್ಯಂತ ಎತ್ತರದ ಈ ಪ್ರತಿಮೆಯನ್ನು 2018ರ ಅಕ್ಟೋಬರ್ 31ರಂದು ಪ್ರಧಾನಿ ಲೋಕಾರ್ಪಣೆ ಮಾಡಿದ್ದರು.

Facebook Comments