ಸರ್ಕಾರದ ಲಾಭದಾಸೆಗೆ ಇನ್ನೆಷ್ಟು ಬಡವರು ಬಲಿಯಾಗಬೇಕು..?

ಈ ಸುದ್ದಿಯನ್ನು ಶೇರ್ ಮಾಡಿ

ಬೆಂಗಳೂರು, ಜ.22- ಚಿಕ್ಕನಾಯಕನಹಳ್ಳಿ ತಾಲೂಕು ಅಂಕನಹಳ್ಳಿ ಪ್ರಕರಣದ ಬಳಿಕವೂ ರಾಜ್ಯ ಸರ್ಕಾರ ಬುದ್ದಿ ಕಲಿತಿಲ್ಲ. ದುರಾಸೆಗೆ ಬಿದ್ದವರ ಲಾಭದಾಸೆಗೆ ಬಡವರ ಜೀವಗಳು ಬೆಲೆ ಇಲ್ಲದೆ ಬಲಿಯಾಗುತ್ತಿವೆ. ಸುಮಾರು 20 ವರ್ಷಗಳ ಹಿಂದೆ ತುಮಕೂರು ಜಿಲ್ಲೆ ಚಿಕ್ಕನಾಯಕನಹಳ್ಳಿ ತಾಲ್ಲೂಕು ಅಂಕನಹಳ್ಳಿಯಲ್ಲಿ ಕಲ್ಲು ಕ್ವಾರಿಯಲ್ಲಿ ಅಕ್ರಮವಾಗಿ ಸಂಗ್ರಹಿಸಿಟ್ಟಿದ್ದ ಜಿಲೆಟಿನ್ ಕಡ್ಡಿಗಳು ಸ್ಫೋಟಗೊಂಡಿದ್ದವು. ಕೂಲಿಗಾಗಿ ಬಂದು ಅಲ್ಲೆ ಇದ್ದ ಸುಮಾರು 13 ಕಾರ್ಮಿಕರು ಛೀದ್ರವಾಗಿ ಸಾವನ್ನಪ್ಪಿದ್ದರು. ಹಾಡು ಹಗಲೇ ನಡೆದ ಸ್ಫೋಟದಲ್ಲಿ ಕ್ವಾರಿಯ ಮಾಲೀಕರ ಸಹೋದರ ಕೂಡ ಬಲಿಯಾಗಿದ್ದರು.

ಘಟನೆಯ ಬಗ್ಗೆ ಸಂತಾಪ, ಆಕ್ರೋಶಗಳು ವ್ಯಕ್ತವಾಗಿದ್ದವು. ಬಡವರ್ಗದವರ ಪರವಾಗಿರುವವರು ಆಕ್ರೋಶ ವ್ಯಕ್ತ ಪಡಿಸಿದ್ದರು, ರಾಜಕಾರಣಿಗಳು, ಶ್ರೀಮಂತರು, ಉದ್ಯಮಿಗಳು ಮೃತ ಪಟ್ಟವರಿಗೆ ಸಂತಾಪ ಸೂಚಿಸಿದ್ದರು. ಆಗಿನ ಸರ್ಕಾರ ಮೃತ ಪಟ್ಟವರ ಕುಟುಂಬಕ್ಕೆ ತಲಾ ಐದು ಲಕ್ಷ ರೂಪಾಯಿ ಪರಿಹಾರ ಘೋಷಿಸಿತ್ತು. ಆದರ ಬೆನ್ನ ಹಿಂದೆಯೇ ಕಲ್ಲು ಕ್ವಾರಿಯಲ್ಲಿ ಅಕ್ರಮವಾಗಿ ಸಂಗ್ರಹಿಸಿ ಡಲಾಗಿದ್ದ ಜಿಲೆಟಿನ್ ಸ್ಪೋಟಗೊಂಡಿರುವುದರಿಂದ ಅದೊಂದು ಕ್ರಿಮಿನಲ್ ಪ್ರಕರಣ.

ಕ್ರಿಮಿನಲ್ ಪ್ರಕರಣದಲ್ಲಿ ಜೀವ ಕಳೆದುಕೊಂಡವರಿಗೆ ಸರ್ಕಾರದಿಂದ ಪರಿಹಾರ ಕೊಡುವುದು ನಿಯಮ ಬಾಹಿರ. ತನಿಖೆಗೂ ಅಡಚಣೆಯಾಗಲಿದೆ, ಮುಂದೆ ನ್ಯಾಯಾಲಯದ ವಿಚಾರಣೆ ವೇಳೆಯೂ ಮುಜುಗರವಾಗಲಿದೆ ಎಂಬ ನೆಪವನ್ನು ಅಧಿಕಾರಿಗಳು ಆಕ್ಷೇಪ ಎತ್ತಿದರು. ಆಗ ಹೊರ ಬಿದ್ದಿದ್ದ ಘೋಷಣೆಯನ್ನು ಸರ್ಕಾರ ಹಿಂಪಡೆದಿತ್ತು.

ಕ್ವಾರಿ ಮಾಲೀಕರು ನೀಡಿದ್ದ ಪುಡಿಗಾಸಷ್ಟೇ ಕುಟುಂಬಗಳಿಗೆ ದಕ್ಕಿದ್ದು. ಭರ ಪೂರ ಸಂತಾಪ ಹೊರತು ಪಡಿಸಿದರೆ ದುಡಿಯುವ ಕಾರ್ಮಿಕರನ್ನು ಕಳೆದುಕೊಂಡ ಕುಟುಂಬಗಳು ಅನಾಥವಾದವು. ಅದೇ ವರ್ಷ ಮಂಡ್ಯ ಹಾಗೂ ಬೆಂಗಳೂರು ಗ್ರಾಮಾಂತರ ಜಿಲ್ಲೆಗಳ ಕ್ವಾರಿಗಳಲ್ಲೂ ಜಿಲೆಟಿನ್ ಸ್ಪೋಟಗೊಂಡಿದ್ದವು. ಒಂದೆರಡು ಸಾವುಗಳು ಸಂಭವಿಸಿದ್ದವು. ಅಂಕನಹಳ್ಳಿ ಘಟನೆಯ ಬಳಿಕ ತೀವ್ರ ಮುಜುಗರ ಅನುಭವಿಸಿದ್ದ ಸರ್ಕಾರ ಉಳಿದ ಸ್ಫೋಟಗಳಲ್ಲಿ ಮೃತಪಟ್ಟವರ ವಿವರಗಳನ್ನು ಬಹಿರಂಗ ಪಡಿಸಲಿಲ್ಲ.

ಆ ವೇಳೆ ಕಲ್ಲು ಕ್ವಾರಿಗಳ ಸುರಕ್ಷತೆಯ ಬಗ್ಗೆ ವ್ಯಾಪಕ ಚರ್ಚೆಗಳು ನಡೆದವು. ಕ್ವಾರಿಗಳಲ್ಲಿ ಬಂಡೆಗಳನ್ನು ಮಾನವ ಶಕ್ತಿ ಬಳಸಿಯೇ ಸೀಳಬೇಕು ಮತ್ತು ಪುಡಿ ಮಾಡಬೇಕು ಎಂದು ಕಟ್ಟುನಿಟ್ಟಿನ ಷರತ್ತು ವಿಧಿಸಲಾಯಿತು. ಅನಿವಾರ್ಯವಿದ್ದರೆ ಅನುಮತಿ ಪಡೆದು ನಿರ್ಬಂಧಿತ ಸ್ಫೋಟ ಮಾಡಬಹುದು. ಆದರೆ ಅದಕ್ಕೆ ಅಗತ್ಯವಾದ ಸುರಕ್ಷಾ ಕ್ರಮಗಳನ್ನು ಅನುಸರಿಸಬೇಕು ಎಂಬ ಮಾರ್ಗಸೂಚಿಗಳನ್ನು ಹೊರಡಿಸಲಾಯಿತು. ಪ್ರಮುಖವಾಗಿ ಜಿಲೆಟಿನ್ ಹಾಗೂ ಇತರ ಸ್ಫೋಟಕಗಳನ್ನು ಸಂಗ್ರಹಿಸಿಡಬಾರದು, ಅನುಮತಿ ಪಡೆದು ನಡೆಸಲಾಗುವ ಸ್ಫೋಟಕ್ಕೆ ಬಳಸಲಾಗುವ ಸ್ಫೋಟಕಗಳನ್ನು ಆಗ್ಗಿಂದಾಗೆ ತರಬೇಕು ಎಂಬ ಷರತ್ತು ವಿಧಿಸಲಾಗಿತ್ತು.

ಆದರೆ ರಾಜ್ಯದ ಉದ್ದಗಲಕ್ಕೂ ನಡೆಯುತ್ತಿರುವ ಯಾವ ಕ್ವಾರಿಗಳಲ್ಲೂ ಬಂಡೆ ಪುಡಿ ಮಾಡಲು ಮಾನವ ಶಕ್ತಿ ಬಳಸುತ್ತಿಲ್ಲ. ಬದಲಿಗೆ ಬಂಡೆ ಸ್ಫೋಟದ ವೇಳೆ ಅಪಾಯಕಾರಿ ಸ್ಫೋಟಕಗಳನ್ನು ಬಳಸಲಾಗುತ್ತಿದೆ. ಸುತ್ತ ಮುತ್ತಲ ಹಳ್ಳಿಗಳು ಕ್ವಾರಿಗಳ ಸ್ಫೋಟಗಳಿಂದ ನಲುಗಿ ಹೋಗಿವೆ. ಎಷ್ಟು ದೂರಿದರೂ ಪ್ರಯೋಜನವಾಗಿಲ್ಲ. ಅಧಿಕಾರಿಗಳು ಉದ್ಯಮ, ಉದ್ಯೋಗದ ನೆಪ ಹೇಳಿ ನಿಯಮ ಬಾಹಿರವಾಗಿ ಕ್ವಾರಿಗಳಿಗೆ ಅವಕಾಶ ನೀಡಿರುತ್ತಾರೆ.

ಕೃತಕ ಮರಳು ಬಳಕೆಗೆ ಬಂದ ಮೇಲಂತೂ ಕಲ್ಲುಪುಡಿ ಮಾಡುವ ಕ್ವಾರಿಗಳು ಚಿನ್ನದ ಮೊಟ್ಟೆ ಇಡುವ ಕೋಳಿಗಳಾಗಿವೆ. ಕಡಿಮೆ ಬಂಡವಾಳದಲ್ಲಿ ಹೆಚ್ಚು ಲಾಭ ಮಾಡುವ ಈ ಉದ್ಯಮ ಸಕ್ರಮಕ್ಕಿಂತಲೂ ಅಕ್ರಮವಾಗಿ ನಡೆಯುತ್ತಿರುವುದೇ ಹೆಚ್ಚಾಗಿದೆ. ಅಧಿಕೃತವಾಗಿ ಸರ್ಕಾರಕ್ಕೆ ಕಂದಾಯ, ತೆರಿಗೆ ಕಟ್ಟುವ ಖರ್ಚಿಗಿಂತ ಅಧಿಕಾರಿಗಳಿಗೆ ನೀಡಬೇಕಾದ ಲಂಚವೇ ಕೋಟಿಗಳ ಲೆಕ್ಕದಲ್ಲಿದೆ.

ಕ್ವಾರಿಗಳ ದುಡಿಮೆಯ ರುಚಿ ನೋಡಿದ ಬಹುತೇಕ ಶಾಸಕರು, ಸ್ಥಳೀಯ ಜನ ಪ್ರತಿನಿಧಿಗಳು, ಪ್ರಭಾವಿಗಳು ನೇರವಾಗಿ ಅಥವಾ ಬೇನಾಮಿ ಹೆಸರಿನಲ್ಲಿ ಕ್ವಾರಿ ಉದ್ಯಮಕ್ಕೆ ಕೈಹಾಕಿದ್ದಾರೆ. ಅಪ್ಪಿತಪ್ಪಿ ಪ್ರಾಮಾಣಿಕ ಅಧಿಕಾರಿಗಳು ಬಂದು ಕ್ವಾರಿಗಳಲ್ಲಿ ನಿಯಮ ಪಾಲನೆಯಾಗಬೇಕು ಎಂದು ಒತ್ತಡ ಹೇರಿದರೆ ಸಾಕು. ಅಧಿಕಾರಿಗಳು ಮಿತಿ ಮೀರಿ ವರ್ತಿಸುತ್ತಿದ್ದಾರೆ. ಸರ್ಕಾರಿ ಕಾಮಗಾರಿಗಳಿಗೆ ಜಲ್ಲಿ ಹಾಗೂ ಮರಳಿನ ಕೊರತೆ ಆಗುತ್ತಿದೆ.

ದುವರ್ತನೆ ತೋರಿಸುವ ಅಧಿಕಾರಿಗಳನ್ನು ಅಮಾನತು ಮಾಡಿ ಎಂದು ವಿಧಾನಸಭೆಯಲ್ಲಿ ಶಾಸಕರು ಬೊಬ್ಬೆ ಹಾಕುತ್ತಾರೆ. ಅಲ್ಲಿಗೆ ಒಂದು ಹೆಜ್ಜೆ ಮುಂದೆ ಹೋಗಿದ್ದ ಅಧಿಕಾರಿಗಳು ಹಿಂದೆ ಸರಿಯುತ್ತಾರೆ. ಪ್ರತಿ ತಿಂಗಳು ಬರುವ ಮಾಮೂಲಿ ಎಣಿಸಿಕೊಂಡು ತಮ್ಮ ಪಾಡಿಗೆ ತಾವಿದ್ದು ಬಿಡುತ್ತಾರೆ.  ದುಡ್ಡಿನ ದುರಾಸೆಗೆ ಬಿದ್ದವರ ಕೃತ್ಯಗಳಿಗೆ ಅಮಾಯಕ ಕೂಲಿ ಕಾರ್ಮಿಕರು ಪ್ರಾಣ ಕಳೆದುಕೊಳ್ಳುವುದು. ಘಟನೆ ನಡೆದಾಗ ಒಂದಷ್ಟು ದಿನ ಸಂಘಟನೆಗಳು ಅರಚಾಡುವುದು. ಮತ್ತೆ ಎಲ್ಲ ಮರೆತು ಹೋಗುವುದು ಸಾಮಾನ್ಯವಾಗಿದೆ.

ಈಗ ಮುಖ್ಯಮಂತ್ರಿ ಯಡಿಯೂರಪ್ಪ ಅವರ ತವರು ಜಿಲ್ಲೆ ಶಿವಮೊಗ್ಗದ ಹುಣಸೋಡು ಗ್ರಾಮದ ಸ್ಫೋಟದಲ್ಲಿ 13 ಮಂದಿ ಬಿಹಾರದ ಕಾರ್ಮಿಕರು ಪ್ರಾಣ ಕಳೆದುಕೊಂಡಿದ್ದಾರೆ. ಅವರ ಗುರುತು ಹಿಡಿಯಲು ಸಾಧ್ಯವಾಗದಷ್ಟು ದೇಹಗಳು ಛೀದ್ರವಾಗಿವೆ. ಮತ್ತೆ ಅದೇ ಸಂತಾಪಗಳು ಢಾಳವಾಗಿ ಕಂಡು ಬರುತ್ತಿವೆ. ಮತ್ತೆ ಅಂಕನಹಳ್ಳಿ ಸ್ಫೋಟದ ವೇಳೆಯ ಘಟನಾವಳಿಗಳೇ ಮರುಕಳಿಸುತ್ತಿವೆ.

Facebook Comments