ದೇಶದ ಸೂಕ್ಷ್ಮ ಪ್ರದೇಶಗಳಲ್ಲಿ ವಿದೇಶಿ ಕಂಪನಿಗಳಿಗೆ ಕಡಿವಾಣ ಹಾಕಲು ಸರ್ಕಾರ ಚಿಂತನೆ

ಈ ಸುದ್ದಿಯನ್ನು ಶೇರ್ ಮಾಡಿ

ನವದೆಹಲಿ, ಡಿ.2-ದೇಶದ ಸೂಕ್ಷ್ಮ ಪ್ರದೇಶಗಳಲ್ಲಿ ದೂರಸಂಪರ್ಕ, ಮೂಲಸೌಕರ್ಯಾಭಿವೃದ್ಧಿ ಮತ್ತು ನಿರ್ಮಾಣದಂಥ ಪ್ರಮುಖ ಕ್ಷೇತ್ರಗಳಲ್ಲಿ ವಿದೇಶಿ ಸಂಸ್ಥೆಗಳ ಪಾಲ್ಗೊಳ್ಳುವಿಕೆಗೆ ಕಡಿವಾಣ ಹಾಕಲು ಕೇಂದ್ರ ಸರ್ಕಾರ ಗಂಭೀರ ಚಿಂತನೆ ನಡೆಸುತ್ತಿದೆ. ಈ ನಿಟ್ಟಿನಲ್ಲಿ ಈಗಾಗಲೇ ಚರ್ಚೆ-ಸಮಾಲೋಚನೆಗಳು ನಡೆಯುತ್ತಿವೆ.

ರಾಷ್ಟ್ರದ ಹಿತಾಸಕ್ತಿ, ಭದ್ರತೆ ಮತ್ತು ದೇಶೀಯ ಸಂಸ್ಥೆಗಳಿಗೆ ಧಕ್ಕೆಯಾಗುವುದನ್ನು ತಪ್ಪಿಸುವ ನಿಟ್ಟಿನಲ್ಲಿ ಕೇಂದ್ರ ಸರ್ಕಾರ ಈ ಸಂಬಂಧ ಈಗಾಗಲೇ ಗಹನ ಚರ್ಚೆಯಲ್ಲಿ ತೊಡಗಿದೆ ಎಂದು ಉನ್ನತ ಮೂಲಗಳು ತಿಳಿಸಿವೆ. ಅಮೆರಿಕಾ ಮತ್ತು ಯುರೋಪ್‍ನ ಕೆಲವು ರಾಷ್ಟ್ರಗಳು ಸೇರಿದಂತೆ ಯಾವ ಯಾವ ದೇಶಗಳ, ಯಾವ ಸಂಸ್ಥೆಗಳಿಗೆ ಸೂಕ್ಷ್ಮ ಸ್ಥಳಗಳು ಮತ್ತು ಪ್ರಮುಖ ಕ್ಷೇತ್ರಗಳಲ್ಲಿ ಪಾಲ್ಗೊಳ್ಳುವುದನ್ನು ತಡೆಗಟ್ಟಬಹುದು ಎಂಬ ಬಗ್ಗೆ ವಿವಿಧ ಇಲಾಖೆಗಳೊಂದಿಗೆ ವಿದೇಶಾಂಗ ವ್ಯವಹಾರಗಳ ಸಚಿವಾಲಯ ಚರ್ಚಿಸುತ್ತಿದೆ.

ಸೂಕ್ಷ್ಮ ಪ್ರದೇಶಗಳಲ್ಲಿ ವಿದೇಶಿ ಕಂಪನಿಗಳು ಭಾರತದ ಸಂಸ್ಥೆಗಳ ಸಹಭಾಗಿತ್ವದೊಂದಿಗೆ ಕಾರ್ಯನಿರ್ವಹಿಸಲು ಮುಂದಾದರೆ ಇದರಿಂದ ಉದ್ಭವಿಸಬಹುದಾದ ಭವಿಷ್ಯದ ಸಮಸ್ಯೆಗಳು ದೇಶದ ಹಿತಾಸಕ್ತಿಯನ್ನು ಗಮನದಲ್ಲಿರಿಸಿಕೊಂಡು ಇವುಗಳಿಗೆ ಲಗಾಮು ಹಾಕಲು ಗಂಭೀರ ಚರ್ಚೆ ನಡೆದಿದೆ ಎಂದು ಉನ್ನತ ಮೂಲಗಳು ತಿಳಿಸಿವೆ.

ಈ ಸಂಬಂಧ ಕೆಲ ವಿದೇಶಿ ಸಂಸ್ಥೆಗಳ ಪಟ್ಟಿಗಳು ಸಹ ಸಿದ್ದವಾಗಿದೆಯಾದರೂ ಈ ಬಗ್ಗೆ ಕೂಲಂಕಷವಾಗಿ ಪರಾಮರ್ಶೆ ನಡೆಸಿದ ಬಳಿಕ ಸೂಕ್ಷ್ಮ ಸ್ಥಳಗಳು ಮತ್ತು ಮಹತ್ವದ ಕ್ಷೇತ್ರಗಳಿಂದ ಇವುಗಳನ್ನು ನಿರ್ಬಂಧಿಸಲು ಅಂತಿಮ ತೀರ್ಮಾನಕೈಗೊಳ್ಳಲಾಗುವುದು.  ದೂರಸಂಪರ್ಕ, ಮೂಲಸೌಕರ್ಯಾಭಿವೃದ್ಧಿ, ನಿರ್ಮಾಣ ಮೊದಲಾದ ಕ್ಷೇತ್ರಗಳಿಂದ ವಿದೇಶಿ ಕಂಪನಿಗಳನ್ನು ಸಾಧ್ಯವಾದಷ್ಟು ದೂರವಿಡಬೇಕೆಂಬ ಪ್ರಸ್ತಾಪಗಳು ಈಗಾಗಲೇ ಕೇಂದ್ರಕ್ಕೆ ಸಲ್ಲಿಕೆಯಾಗಿರುವ ಹಿನ್ನೆಲೆಯಲ್ಲಿ ಈ ವಿಷಯದ ಬಗ್ಗೆ ಗಂಭೀರ ಚರ್ಚೆಗಳು ನಡೆಯುತ್ತಿದೆ.

Facebook Comments