ಬೀದಿನಾಯಿಗಳಿಂದ ತಪ್ಪಿಸಿಕೊಳ್ಳೋದು ಹೇಗೆ..? ಮಕ್ಕಳಿಗೆ ಬಿಬಿಎಂಪಿ ಪಾಠ

ಈ ಸುದ್ದಿಯನ್ನು ಶೇರ್ ಮಾಡಿ

Street-dogs

ಬೆಂಗಳೂರು, ಅ.10- ರಕ್ಕಸ ಬೀದಿನಾಯಿಗಳ ಉಪಟಳವನ್ನು ತಡೆಯಲು ವಿಫಲವಾಗಿರುವ ಬಿಬಿಎಂಪಿ, ಇದೀಗ ಇಂತಹ ನಾಯಿಗಳಿಂದ ಹೇಗೆ ತಪ್ಪಿಸಿಕೊಳ್ಳಬೇಕು ಎಂಬುದರ ಬಗ್ಗೆ ಮಕ್ಕಳಿಗೆ ಪಾಠ ಮಾಡಲು ಮುಂದಾಗಿದೆ. ವಿಶೇಷವೆಂದರೆ, ಬೀದಿ ನಾಯಿಗಳ ಪರವಾಗಿ ಧ್ವನಿ ಎತ್ತುವ ಪ್ರಾಣಿ ದಯಾ ಸಂಘದಿಂದಲೇ ಇಂತಹ ಪಾಠ ಮಾಡಿಸಲು ಪಾಲಿಕೆ ಮುಂದಾಗಿದೆ. ನೂತನ ಮೇಯರ್ ಗಂಗಾಂಬಿಕೆ ಅವರಿಗೆ ಹೊಳೆದ ಹೊಸ ಐಡಿಯಾ ಎಷ್ಟು ಪ್ರಸ್ತುತ ಎಂಬುದು ಸಾರ್ವಜನಿಕರ ಪ್ರಶ್ನೆ.

ನಗರದ ಹಲವು ಬೀದಿಗಳಲ್ಲಿ ಬೀದಿ ನಾಯಿಗಳ ಕಾಟ ಹೆಚ್ಚಾಗಿದೆ. ಅವುಗಳನ್ನು ತಡೆಗಟ್ಟಿ ಎಂದು ಸಾರ್ವಜನಿಕರು ಒತ್ತಾಯಿಸುತ್ತಲೇ ಬಂದಿದ್ದಾರೆ. ನೂತನ ಮೇಯರ್ ಆಯ್ಕೆಯಾದ ಬಳಿಕ ಈ ಒತ್ತಾಯ ಜೋರಾಗಿ ಕೇಳಿಬರುತ್ತಿದೆ. ಆದರೆ ಬೀದಿ ನಾಯಿಗಳನ್ನು ಮಟ್ಟಹಾಕಲು ಮುಂದಾದರೆ ಪ್ರಾಣಿ ದಯಾ ಸಂಘ ಅಪಸ್ವರವೆತ್ತಿ ಅದರ ವಿರುದ್ಧ ಕಾನೂನು ಹೋರಾಟಕ್ಕೆ ಮುಂದಾಗುತ್ತದೆ. ಇದರಿಂದ ನಗರದಲ್ಲಿ ನಾಯಿ ಕಾಟ ತಡೆಯಲು ಇದುವರೆಗೆ ಬಿಬಿಎಂಪಿಗೆ ಸಾಧ್ಯವಾಗಿಲ್ಲ.

ಪ್ರತಿಬಾರಿಯೂ ನಾಯಿಗಳನ್ನು ಹಿಡಿದು ಬೇರೆಡೆಗೆ ಸಾಗಿಸುವ ಪ್ರಯತ್ನ ಮಾಡಿದಾಗ ಪ್ರಾಣಿ ದಯಾ ಸಂಘ ವಿರೋಧ ವ್ಯಕ್ತಪಡಿಸುತ್ತದೆ. ಇದರಿಂದ ರೋಸಿ ಹೋಗಿರುವ ಬಿಬಿಎಂಪಿ ಇದೀಗ ಅದೇ ಪ್ರಾಣಿ ದಯಾ ಸಂಘದವರಿಂದಲೆ ನಾಯಿಯಿಂದ ಹೇಗೆ ತಪ್ಪಿಸಿಕೊಳ್ಳುವುದು ಎಂಬುದರ ಬಗ್ಗೆ ಪಾಠ ಮಾಡಿಸಲು ಮುಂದಾಗಿದೆ. ಬೀದಿನಾಯಿಗಳಿಗೆ ಸಂತಾನಹರಣ ಮಾಡಿದರೂ ಅವುಗಳ ಕಾಟ ನಿಂತಿಲ್ಲ. ಮತ್ತೆ ಅವು ಜನರ ಮೇಲೆ ದಾಳಿ ಮಾಡಿದ ಉದಾಹರಣೆಗಳೂ ಇವೆ. ಆದ್ದರಿಂದ ಈ ವಿಧಾನ ಯಶಸ್ವಿಯಾಗಿಲ್ಲ ಎಂಬ ತೀರ್ಮಾನಕ್ಕೆ ಬಂದಿರುವ ಬಿಬಿಎಂಪಿ ಮೇಯರ್, ನಗರದ ಎಲ್ಲಾ ಶಾಲೆಗಳಲ್ಲಿ ಮಕ್ಕಳಿಗೆ ಪಾಠ ಮಾಡಿ, ನಾಯಿಯಿಂದ ಹೇಗೆ ತಪ್ಪಿಸಿಕೊಳ್ಳಬೇಕು, ನಾಯಿ ದಾಳಿ ಮಾಡಿದಾಗ ಏನು ಮಾಡಬೇಕು ಮುಂತಾದ ತಂತ್ರೋಪಾಯಗಳನ್ನು ಕಲಿಸಲು ಮುಂದಾಗಿದ್ದಾರೆ.

ನಾಯಿಗಳನ್ನು ದೂರುವ ಬದಲು ಜನರು ಜಾಗರೂಕರಾಗಿರಬೇಕು ಎಂದು ಹೇಳುವ ಮೂಲಕ ನಾಯಿ ಕಾಟ ತಪ್ಪಿಸಲು ನಮ್ಮಿಂದ ಸಾಧ್ಯವಿಲ್ಲ ಎಂಬ ಅಸಹಾಯಕತೆಯನ್ನು ಬಹಿರಂಗವಾಗಿಯೇ ಬಿಬಿಎಂಪಿ ಒಪ್ಪಿಕೊಂಡಿದೆ. ಬೀದಿ ನಾಯಿ ತಡೆಯಲು ವಿಫಲವಾದ ಬಿಬಿಎಂಪಿಯಿಂದ ನಗರದ ಅಭಿವೃದ್ಧಿಯನ್ನು ನಿರೀಕ್ಷಿಸಬಹುದೇ ಎಂಬ ಮಾತುಗಳು ಸಾರ್ವಜನಿಕ ವಲಯದಲ್ಲಿ ಕೇಳಿಬರುತ್ತಿವೆ. ನೂತನ ಮೇಯರ್ ಅವರ ನೂತನ ಐಡಿಯಾ ಎಷ್ಟು ಫಲಕಾರಿಯಾಗಬಹುದು ಎಂಬುದನ್ನು ಕಾದುನೋಡಬೇಕಿದೆ.

Facebook Comments

( ಎಚ್ಚರಿಕೆ..! : ಈ ಸಂಜೆ ಸುದ್ದಿಗಳನ್ನು ನಕಲು ಮಾಡುವವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಲಾಗುತ್ತಿದೆ ) > #ವಾಟ್ಸಾಪ್‌ನಲ್ಲಿ ಸುದ್ದಿಗಳನ್ನು ಪಡೆಯಲು 7795582478 ಸಂಖ್ಯೆಯನ್ನು ನಿಮ್ಮ ಮೊಬೈಲ್ ನಲ್ಲಿ SAVE ಮಾಡಿಕೊಂಡು HI EESANJE ಎಂದು ಸಂದೇಶ ಕಳಿಸಿ