ಆಟದ ವೇಳೆ ಜಗಳ: ಬಿಬಿಎ ವಿದ್ಯಾರ್ಥಿ ಕೊಲೆ

ಈ ಸುದ್ದಿಯನ್ನು ಶೇರ್ ಮಾಡಿ

ಬೆಂಗಳೂರು- ಆಟವಾಡುವ ವಿಚಾರವಾಗಿ ಸ್ನೇಹಿತನ ಜೊತೆ ಜಗಳವಾಡಿದ್ದ ಬಿಬಿಎ ವಿದ್ಯಾರ್ಥಿ ಮೇಲೆ ನಾಲ್ವರು ಹಲ್ಲೆ ನಡೆಸಿ ಚಾಕುವಿನಿಂದ ಚುಚ್ಚಿ ಕೊಲೆ ಮಾಡಿರುವ ಘಟನೆ ನಂದಿನಿ ಲೇಔಟ್ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ. ಗಣೇಶ ಬ್ಲಾಕ್ ನಿವಾಸಿ ಉಮಾ ಮಹೇಶ್ವರ(20) ಕೊಲೆಯಾದ ವಿದ್ಯಾರ್ಥಿ. ಎರಡನೆ ವರ್ಷದ ಬಿಬಿಎ ವ್ಯಾಸಂಗ ಮಾಡುತ್ತಿದ್ದ ಉಮಾ ಮಹೇಶ್ವರ ಎರಡು ದಿನದ ಹಿಂದೆ ಆಟವಾಡುವ ವಿಚಾರದಲ್ಲಿ ಸ್ನೇಹಿತನ ಜೊತೆ ಜಗಳವಾಡಿ ಹೊಡೆದಿದ್ದ.

ಇದೇ ಕೋಪಕ್ಕೆ ಈತನ ಸ್ನೇಹಿತ ತನ್ನ ಜೊತೆ ಮೂವರನ್ನು ಕರೆದುಕೊಂಡು ಎರಡು ಬೈಕ್‍ಗಳಲ್ಲಿ ನಿನ್ನೆ ಸಂಜೆ 7 ಗಂಟೆ ಸುಮಾರಿನಲ್ಲಿ ಉಮಾ ಮಹೇಶ್ವರನ ಮನೆಯ ಬಳಿ ಬಂದು ಜಗಳವಾಡಿ ಹಲ್ಲೆ ನಡೆಸಿ, ಚಾಕುವಿನಿಂದ ಕಿಬ್ಬೊಟ್ಟೆಗೆ ಇರಿದು ಪರಾರಿಯಾಗಿದ್ದಾರೆ. ಗಂಭೀರ ಗಾಯಗೊಂಡಿದ್ದ ಉಮಾ ಮಹೇಶ್ವರನನ್ನು ತಕ್ಷಣ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿತ್ತಾದರೂ ಚಿಕಿತ್ಸೆ ಫಲಿಸದೆ ಇಂದು ಬೆಳಗಿನ ಜಾವ 7 ಗಂಟೆಯಲ್ಲಿ ಮೃತಪಟ್ಟಿದ್ದಾನೆ.

ಘಟನೆ ಸಂಬಂಧ ನಂದಿನಿ ಲೇಔಟ್ ಠಾಣೆ ಪೊಲೀಸರು ಸ್ಥಳಕ್ಕೆ ತೆರಳಿ ಪರಿಶೀಲನೆ ನಡೆಸಿ ಪ್ರಕರಣ ದಾಖಲಿಸಿಕೊಂಡು ಪರಾರಿಯಾಗಿರುವ ಆರೋಪಿಗಳಿಗಾಗಿ ಶೋಧ ಕೈಗೊಂಡಿದ್ದಾರೆ.

Facebook Comments