ಅಮೆರಿಕದಲ್ಲಿ ಟ್ರಂಪ್ ಹೊಸ ಶಿಕ್ಷಣ ನೀತಿಗೆ ಭಾರೀ ವಿರೋಧ

ಈ ಸುದ್ದಿಯನ್ನು ಶೇರ್ ಮಾಡಿ

ವಾಷಿಂಗ್ಟನ್, ಜು.8- ಭಾರತೀಯರು ಸೇರಿದಂತೆ ವಿದೇಶಿ ವಿದ್ಯಾರ್ಥಿಗಳಿಗೆ ಮಾರಕವಾಗುವಂತಹ ಹೊಸ ಶಿಕ್ಷಣ ನೀತಿ ಜಾರಿಗೆ ತರಲು ಮುಂದಾಗಿರುವ ಟ್ರಂಪ್ ಆಡಳಿತಕ್ಕೆ ಅಮೆರಿಕದಲ್ಲಿ ಭಾರೀ ವಿರೋಧ ವ್ಯಕ್ತವಾಗಿದೆ. ಅಮೆರಿಕದ ಪ್ರತಿಷ್ಠಿತ ಶಿಕ್ಷಣ ಸಂಸ್ಥೆಗಳು ಹಾಗೂ ಹಲವಾರು ಕಾಂಗ್ರೆಸಿಗರು ಟ್ರಂಪ್ ಆಡಳಿತದ ಈ ಧೋರಣೆಯನ್ನು ಖಂಡಿಸಿದ್ದಾರೆ.

ಟ್ರಂಪ್ ಅವರು ಜಾರಿಗೆ ತರಲು ಹೊರಟಿರುವ ಹೊಸ ಶಿಕ್ಷಣ ಮಾರ್ಗಸೂಚಿಯಿಂದ ದೇಶದ ಆರ್ಥಿಕತೆಗೆ ಪೆಟ್ಟು ಬೀಳಲಿದೆಯೇ ಹೊರತು ಅಮೆರಿಕದ ಭದ್ರತೆಗೆ ಯಾವುದೇ ಉಪಯೋಗವಾಗುವುದಿಲ್ಲ ಎಂದು ಕಾಂಗ್ರೆಸ್ ಮುಖಂಡರಾದ ಬೆನ್ನಿ ಥಾಂಪ್ಸನ್, ಕೆತ್ಲಿನ್ ರೈಸ್ ಮತ್ತಿತರರು ಕಿಡಿಕಾರಿದ್ದಾರೆ.

ಅಮೆರಿಕದ ಆರ್ಥಿಕ ಸುಭದ್ರತೆಗೆ ವಿದೇಶಿ ವಿದ್ಯಾರ್ಥಿಗಳ ಕೊಡುಗೆ ಅಪಾರವಿದೆ. ಇಂತಹ ಸಂದರ್ಭದಲ್ಲಿ ದೇಶದಲ್ಲಿ ನೆಲೆಸಿರುವ ಭಾರತೀಯ ವಿದ್ಯಾರ್ಥಿಗಳು ಸೇರಿದಂತೆ ಅಂತಾರಾಷ್ಟ್ರೀಯ ವಿದ್ಯಾರ್ಥಿಗಳಿಗೆ ಮಾರಕವಾಗುವಂತಹ ಯಾವುದೇ ನೀತಿ ಜಾರಿಗೆ ತರಲು ನಾವು ಅವಕಾಶ ನೀಡುವುದಿಲ್ಲ ಎಂದು ಅವರು ಘೋಷಿಸಿದ್ದಾರೆ.

ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರು ವಲಸೆ ನೀತಿಯನ್ನು ಪರಿಷ್ಕರಿಸಿದ್ದು, ಶಿಕ್ಷಣ ಸಂಸ್ಥೆಗಳು ಕೋವಿಡ್-19 ಸಂದರ್ಭದಲ್ಲಿ ಆನ್‍ಲೈನ್ ವ್ಯವಸ್ಥೆ ಅಳವಡಿಸಿಕೊಂಡರೆ ಅಂತಹ ಸಂಸ್ಥೆಗಳ ವಿದೇಶಿ ವಿದ್ಯಾರ್ಥಿಗಳು ದೇಶ ಬಿಟ್ಟು ಹೋಗುವಂತೆ ಹೊಸ ಆದೇಶ ಹೊರಡಿಸಿದ್ದರು.

ಆನ್‍ಲೈನ್ ಶಿಕ್ಷಣ ಸಂಸ್ಥೆಗಳನ್ನು ತೊರೆಯುವ ವಿದೇಶಿ ವಿದ್ಯಾರ್ಥಿಗಳು ಆಫ್‍ಲೈನ್ ಶಿಕ್ಷಣ ನೀಡುವ ಬೇರೊಂದು ಸಂಸ್ಥೆಯಲ್ಲಿ ಪ್ರವೇಶ ಪಡೆದುಕೊಳ್ಳಬೇಕು ಎಂದು ಟ್ರಂಪ್ ಆಡಳಿತ ಆದೇಶಿಸಿತ್ತು.

ಅಮೆರಿಕದ ಈ ಹೊಸ ಆದೇಶದಿಂದ ಅಲ್ಲಿ ನೆಲೆಸಿರುವ ಸಾವಿರಾರು ಭಾರತೀಯ ಮತ್ತು ಚೀನಾ ವಿದ್ಯಾರ್ಥಿಗಳು ಆತಂಕಕ್ಕೆ ಒಳಗಾಗಿದ್ದರು.  ಇದೀಗ ಅಂತಾರಾಷ್ಟ್ರೀಯ ವಿದ್ಯಾರ್ಥಿಗಳ ಹಿತ ಕಾಯಲು ಕೆಲ ಕಾಂಗ್ರೆಸ್ ನಾಯಕರು ಮುಂದೆ ಬಂದಿರುವುದು ಭಾರತೀಯ ವಿದ್ಯಾರ್ಥಿಗಳ ಮೊಗದಲ್ಲಿ ಮಂದಹಾಸ ಮೂಡಿಸಿದೆ.

Facebook Comments