ಈ ಶಾಲೆಯಲ್ಲಿ ವಿದ್ಯಾರ್ಥಿಗಳೇ ಕೂಲಿ ಆಳುಗಳು..!

ಈ ಸುದ್ದಿಯನ್ನು ಶೇರ್ ಮಾಡಿ

ಹನೂರು, ನ.22- ಸರ್ಕಾರಿ ಶಾಲೆಗಳಿಗೆ ತಮ್ಮ ಮಕ್ಕಳನ್ನು ಸೇರಿಸಲು ಯಾರೂ ಮುಂದೆ ಬರುತ್ತಿಲ್ಲ. ಇಂತಹ ಸಂದರ್ಭದಲ್ಲಿ ಇರೋ ವಿದ್ಯಾರ್ಥಿಗಳಿಗೆ ಪಾಠ ಕಲಿಸುವ ಬದಲು ಮೈ ಮುರಿಯುವಂತೆ ಕೆಲಸ ಮಾಡಿಸಿದರೆ ಇನ್ನು ಹಾಜರಾತಿ ಎಲ್ಲಿಂದ ಬರುತ್ತೆ? ವಿದ್ಯೆ ಕಲಿಯಲು ಬರುವ ಮಕ್ಕಳ ಕೈಯಲ್ಲಿ ಕೂಲಿ ಕೆಲಸದ ಆಳುಗಳಂತೆ ಕೆಲಸ ಮಾಡಿಸುವ ಮೂಲಕ ಶಿಕ್ಷಕರು ವಿದ್ಯಾರ್ಥಿಗಳ ಭವಿಷ್ಯದ ಮೇಲೆ ಚೆಲ್ಲಾಟವಾಡುತ್ತಿದ್ದಾರೆ.

ಶಿಕ್ಷಕರನ್ನು ಗುರುದೇವೋ ಭವ ಎಂದು ಪ್ರಾರ್ಥಿಸಲಾಗುತ್ತದೆ. ಆದರೆ ಹನೂರು ತಾಲ್ಲೂಕಿನ ಎಲ್ಲೇಮಾಳ ಸರ್ಕಾರಿ ಪ್ರಾಥಮಿಕ ಶಾಲೆಯಲ್ಲಿ ಶಿಕ್ಷಕರು ವಿದ್ಯಾರ್ಥಿಳನ್ನು ಕೂಲಿ ಕೆಲಸದಾಳುಗಳಂತೆ ನಡೆಸಿಕೊಳ್ಳುತ್ತಿದ್ದಾರೆ. ಶಿಕ್ಷಣ ಸಚಿವ ಸುರೇಶ್‍ಕುಮಾರ್ ಅವರು ತಾಲ್ಲೂಕಿನ ಗೋಪಿನಾಥಂ ಗ್ರಾಮದ ಸರ್ಕಾರಿ ಶಾಲೆಯಲ್ಲಿ ವಾಸ್ತವ್ಯ ಹೂಡುವ ದಿನವೇ ಎಲ್ಲೇಮಾಳ ಸರ್ಕಾರಿ ಶಾಲೆಯ ಮಕ್ಕಳು ಗಾರೆ ಕೆಲಸದ ಆಳುಗಳಂತೆ ಮಣ್ಣು, ಜಲ್ಲಿಕಲ್ಲು ಸಾಗಿಸುತ್ತಿದ್ದರು ಎಂಬ ವಿಷಯ ತಡವಾಗಿ ಬೆಳಕಿಗೆ ಬಂದಿದೆ.

ಎಲ್ಲೇಮಾಳ ಶಾಲೆಯ ಮುಖ್ಯ ಶಿಕ್ಷಕಿ ಮಮತಾ ಅವರು ಮಕ್ಕಳ ಕೈಯಲ್ಲಿ ಕೂಲಿ ಆಳುಗಳಂತೆ ದುಡಿಸಿಕೊಂಡಿರುವುದು ಸಾರ್ವಜನಿಕರ ಆಕ್ರೋಶಕ್ಕೆ ಕಾರಣವಾಗಿದೆ. ಈ ಶಾಲೆಗೆ ಬರುವ ವಿದ್ಯಾರ್ಥಿಗಳು ಬಹುತೇಕ ಮಂದಿ ಕಡು ಬಡತನದಿಂದ ಬಂದಂತಹವರು. ತಾವು ಕೂಲಿ ನಾಲಿ ಮಾಡಿದರೂ ನಮ್ಮ ಮಕ್ಕಳು ವಿದ್ಯೆ ಕಲಿತು ಬುದ್ಧಿವಂತರಾಗಲಿ ಎಂದು ತಮ್ಮ ಮಕ್ಕಳನ್ನು ಶಾಲೆಗೆ ಕಳುಹಿಸುವ ದುರ್ದೈವಿ ಪೋಷಕರು ತಮ್ಮ ಮಕ್ಕಳು ಶಾಲೆಯಲ್ಲಿ ಕೂಲಿಗಳಂತೆ ದುಡಿಯುತ್ತಿರುವ ದೃಶ್ಯ ಕಂಡರೆ ಅವರ ಹೃದಯ ಒಡೆದು ಚೂರಾಗುವುದರಲ್ಲಿ ಯಾವುದೇ ಸಂಶಯವಿಲ್ಲ.

ಪಂಚಾಯ್ತಿಯವರು ಹೊಸ ರಸ್ತೆ ನಿರ್ಮಿಸಲು ತೆರವುಗೊಳಿಸಿದ್ದ ಸುಮಾರು 2 ಟ್ರ್ಯಾಕ್ಟರ್‍ನಷ್ಟು ಜಲ್ಲಿ ಕಲ್ಲನ್ನು ಎಲ್ಲೇಮಾಳ ಶಾಲೆಯ ಶಿಕ್ಷಕರು ವಿದ್ಯಾರ್ಥಿಗಳಿಂದಲೇ ಅಷ್ಟು ಕಲ್ಲನ್ನು ಶಾಲೆಯೊಳಗೆ ತಂದು ಗುಡ್ಡೆ ಹಾಕಿಸಿಕೊಂಡಿದ್ದಾರೆ.

ಈ ಕುರಿತಂತೆ ಪ್ರಶ್ನಿಸಿದವರಿಗೆ ಶಾಲೆಯ ಅಭಿವೃದ್ಧಿಗಾಗಿ ಸಂಪನ್ಮೂಲ ಕ್ರೂಢೀಕರಿಸಲು ವಿದ್ಯಾರ್ಥಿಗಳನ್ನು ಬಳಸಿಕೊಳ್ಳಲಾಗುತ್ತಿದೆ ಎಂದು ಅಲ್ಲಿನ ಶಿಕ್ಷಕ ವರ್ಗ ಉಡಾಫೆ ಉತ್ತರ ನೀಡಿದೆ. ತಮಿಳುನಾಡು ಗಡಿ ಭಾಗದಲ್ಲಿರುವ ಹನೂರು ಸುತ್ತಮುತ್ತಲಿನ ಶಾಲೆಗಳ ಶೇ.90ರಷ್ಟು ಶಿಕ್ಷಕರು ಕಾಟಾಚಾರಕ್ಕೆ ಶಾಲೆಗಳಲ್ಲಿ ದುಡಿಯುತ್ತಿದ್ದು , ಇವರಿಗೆ ವಿದ್ಯಾ ದಾನಕ್ಕಿಂತ ರಾಜಕೀಯವೇ ಮುಖ್ಯವಾಗುತ್ತಿದೆ.

ಶಿಕ್ಷಣ ಕ್ಷೇತ್ರದಲ್ಲಿ ಕ್ರಾಂತಿ ಮಾಡಲು ಮುಂದಾಗಿರುವ ಶಿಕ್ಷಣ ಸಚಿವ ಸುರೇಶ್‍ಕುಮಾರ್ ಅವರು ಹನೂರು ಭಾಗದಲ್ಲಿ ವಿದ್ಯಾರ್ಥಿಗಳ ಮೇಲೆ ಶಿಕ್ಷಕ ವೃಂದ ನಡೆಸುತ್ತಿರುವ ಇಂತಹ ದಬ್ಬಾಳಿಕೆಯನ್ನು ಮಟ್ಟ ಹಾಕಿ ವಿದ್ಯಾರ್ಥಿಗಳ ಶೈಕ್ಷಣಿಕ ಅಭಿವೃದ್ಧಿಗೆ ಮುನ್ನುಡಿ ಬರೆಯಲಿ ಎಂಬುದೇ ಎಲ್ಲರ ಆಶಯವಾಗಿದೆ.
# ವರದಿ, ಆರ್.ಪುಟ್ಟಸ್ವಾಮಿ, ಹನೂರು

Facebook Comments