ಉಚಿತ ಬಸ್ ಪಾಸ್‍ಗಾಗಿ ರಾಜ್ಯಾದ್ಯಂತ ವಿದ್ಯಾರ್ಥಿ ಸಂಘಟನೆಗಳ ಪ್ರತಿಭಟನೆ

ಈ ಸುದ್ದಿಯನ್ನು ಶೇರ್ ಮಾಡಿ

students-protests
ಬೆಂಗಳೂರು, ಜು.21- ಉಚಿತ ಬಸ್ ಪಾಸ್‍ಗಾಗಿ ಆಗ್ರಹಿಸಿ ಶಾಲಾ-ಕಾಲೇಜು ವಿದ್ಯಾರ್ಥಿಗಳು ಇಂದು ರಾಜ್ಯದ ವಿವಿಧೆಡೆ ಪ್ರತಿಭಟನೆ ನಡೆಸಿದರು. ಎಬಿವಿಪಿ, ಎಸ್‍ಎಫ್‍ಐ ಸೇರಿದಂತೆ ಹಲವು ವಿದ್ಯಾರ್ಥಿ ಸಂಘಟನೆಗಳ ನೇತೃತ್ವದಲ್ಲಿ ನಡೆದ ಪ್ರತಿಭಟನೆಯಲ್ಲಿ ಸಾವಿರಾರು ವಿದ್ಯಾರ್ಥಿಗಳು ಪಾಲ್ಗೊಂಡು, ಉಚಿತ ಬಸ್ ಪಾಸ್ ನೀಡುವಂತೆ ಆಗ್ರಹಿಸಿದರು. ಶಾಲಾ-ಕಾಲೇಜು ವಿದ್ಯಾರ್ಥಿಗಳಿಗೆ ಹಿಂದಿನ ಸರ್ಕಾರ ಘೋಷಿಸಿದ್ದಂತೆ ಉಚಿತ ಬಸ್ ಪಾಸ್ ನೀಡಬೇಕು. ಬಸ್ ಪಾಸ್ ಇಲ್ಲದೆ ವಿದ್ಯಾರ್ಥಿಗಳಿಗೆ ತೀವ್ರ ತೊಂದರೆಯಾಗುತ್ತಿದೆ. ವಿದ್ಯಾರ್ಥಿಗಳ ಶೈಕ್ಷಣಿಕ ಹಿತದೃಷ್ಟಿಯಿಂದ ಬಸ್ ಪಾಸ್ ನೀಡುವುದು ಸರ್ಕಾರದ ಜವಾಬ್ದಾರಿಯಾಗಿದೆ. ಆದರೆ ಸರ್ಕಾರ ಆರ್ಥಿಕ ನಷ್ಟದ ನೆಪ ಮುಂದಿಟ್ಟುಕೊಂಡು ವಿದ್ಯಾರ್ಥಿಗಳಿಗೆ ಅನ್ಯಾಯಮಾಡುತ್ತಿದೆ ಎಂದು ಪ್ರತಿಭಟನಕಾರರು ಆರೋಪಿಸಿದರು.

ಈಗಾಗಲೇ ಶಾಲಾ ಕಾಲೇಜುಗಳು ಆರಂಭವಾಗಿವೆ. ವಿದ್ಯಾರ್ಥಿಗಳು ಪ್ರತಿದಿನ ಬಸ್ ಟಿಕೆಟ್‍ಗೆ ನೂರಾರು ರೂಪಾಯಿಗಳನ್ನು ವ್ಯಯಿಸಬೇಕಾಗಿದೆ. ಗ್ರಾಮೀಣ ಭಾಗದ ವಿದ್ಯಾರ್ಥಿಗಳಿಗೆ ಇದರಿಂದ ತೀವ್ರ ತೊಂದರೆಯಾಗಿದೆ. ನಗರ ಪ್ರದೇಶದಲ್ಲೂ ಕೂಡ ವಿದ್ಯಾರ್ಥಿಗಳು ಬಸ್ ಪಾಸ್ ಇಲ್ಲದೆ ಪರದಾಡುತ್ತಿದ್ದಾರೆ. ಆದ್ದರಿಂದ ಕೂಡಲೆ ವಿದ್ಯಾರ್ಥಿಗಳಿಗೆ ಬಸ್ ಪಾಸ್ ನೀಡಬೇಕು, ಇಲ್ಲದಿದ್ದರೆ ರಾಜ್ಯಾದ್ಯಂತ ಹೋರಾಟ ತೀವ್ರಗೊಳಿಸಲಾಗುವುದು ಎಂದು ಮುಖಂಡರು ಎಚ್ಚರಿಕೆ ನೀಡಿದ್ದಾರೆ. ತುಮಕೂರು, ಮೈಸೂರು, ಮಂಡ್ಯ, ಹುಬ್ಬಳ್ಳಿ, ಧಾರವಾಡ, ಬೆಳಗಾವಿ, ಶಿವಮೊಗ್ಗ ಮುಂತಾದೆಡೆ ವಿದ್ಯಾರ್ಥಿಗಳ ಸಂಘಟನೆಗಳು ನಗರದ ಕೇಂದ್ರ ಸ್ಥಳದಲ್ಲಿ ಪ್ರತಿಭಟನೆ ನಡೆಸಿ ಬಸ್ ಪಾಸ್‍ಗಾಗಿ ಆಗ್ರಹಿಸಿ, ಸರ್ಕಾರದ ವಿರುದ್ಧ ಘೋಷಣೆ ಕೂಗಿದರು. ವಿದ್ಯಾರ್ಥಿಗಳ ಈ ಪ್ರತಿಭಟನೆಗೆ ವಿವಿಧ ಸಂಘ ಸಂಸ್ಥೆಗಳು ಕೂಡ ಬೆಂಬಲ ನೀಡಿದ್ದವು. ಬೆಂಗಳೂರು ನಗರದ ಪುರಭವನದ ಮುಂದೆ ವಿವಿಧ ಸಂಘಟನೆಗಳು ಪ್ರತಿಭಟನೆ ನಡೆಸಿ, ಬಸ್ ಪಾಸ್‍ಗೆ ಆಗ್ರಹಿಸಿದವು. ನಗರದಲ್ಲಿ ಎಂದಿನಂತೆ ಶಾಲಾ ಕಾಲೇಜುಗಳು ಕಾರ್ಯನಿರ್ವಹಿಸಿದವು.

Facebook Comments

Sri Raghav

Admin