ಗೌಡರ ಒತ್ತಾಯಕ್ಕೆ ಮಣಿದ ಸಿಎಂ ಸಬ್‌ಇನ್‌ಸ್ಪೆಕ್ಟರ್ ಎತ್ತಂಗಡಿ..!

ಈ ಸುದ್ದಿಯನ್ನು ಶೇರ್ ಮಾಡಿ

ಬೆಂಗಳೂರು,ನ.6-ಯಾದಗಿರಿ ಜಿಲ್ಲೆಯಲ್ಲಿ ಜೆಡಿಎಸ್ ಕಾರ್ಯಕರ್ತರ ಮೇಲೆ ಹಲ್ಲೆ ನಡೆಸಿದ ಆರೋಪದ ಹಿನ್ನೆಲೆಯಲ್ಲಿ ಇಲ್ಲಿನ ಸಬ್‌ಇನ್‌ಸ್ಪೆಕ್ಟರ್ ಬಾಪುಗೌಡ ಪಾಟೀಲ್ ಅವರನ್ನು ರಾಜ್ಯ ಸರ್ಕಾರ ವರ್ಗಾವಣೆಗೊಳಿಸಿ ಕಡ್ಡಾಯ ರಜೆ ತೆಗೆದುಕೊಳ್ಳುವಂತೆ ಸೂಚಿಸಿದೆ.  ವಿಶೇಷವೆಂದರೆ ನಿನ್ನೆಯಷ್ಟೇ ಜೆಡಿಎಸ್ ವರಿಷ್ಠ ಎಚ್.ಡಿ.ದೇವೇಗೌಡ ಅವರು ಸಬ್‌ಇನ್‌ಸ್ಪೆಕ್ಟರ್ ಬಾಪುಗೌಡ ಪಾಟೀಲ್ ಮೇಲೆ ಕ್ರಮ ಕೈಗೊಳ್ಳದಿದ್ದರೆ ನಾಳೆಯಿಂದ ಮುಖ್ಯಮಂತ್ರಿ ಯಡಿಯೂರಪ್ಪನವರ ಮನೆ ಮುಂದೆ ಧರಣಿ ಮಾಡುವುದಾಗಿ ಗುಡುಗಿದ್ದರು.

ಇದರ ಬೆನ್ನಲ್ಲೇ ರಾಜ್ಯ ಸರ್ಕಾರ ಇಂದು ಬೆಳಗ್ಗೆ ಯಾದಗಿರಿ ಸಬ್‌ಇನ್‌ಸ್ಪೆಕ್ಟರ್ ಬಾಪು ಗೌಡ ಪಾಟೀಲ್ ಅವರನ್ನು ದಿಢೀರನೆ ಎತ್ತಂಗಡಿ ಮಾಡಿರುವುದರ ಜೊತೆಗೆ ಕಡ್ಡಾಯವಾಗಿ ರಜೆ ತೆಗೆದುಕೊಳ್ಳಬೇಕೆಂದು ಸೂಚಿಸಿದೆ. ಬೆಂಗಳೂರಿನಲ್ಲಿ ಇದನ್ನು ಖಚಿತಪಡಿಸಿದ ಯಡಿಯೂರಪ್ಪ, ದೇವೇಗೌಡರ ಸೂಚನೆಯಂತೆ ನಾನು ಸಬ್‌ಇನ್‌ಸ್ಪೆಕ್ಟರ್ ವಿರುದ್ದ ಕ್ರಮ ಕೈಗೊಂಡಿದ್ದೇನೆ. ಇದಕ್ಕೆ ಅವರು ಒಪ್ಪಿಕೊಳ್ಳುವ ವಿಶ್ವಾಸವಿದೆ ಎಂದು ಹೇಳಿದರು.

ಕೆಲ ದಿನಗಳ ಹಿಂದೆ ಮುಖ್ಯಮಂತ್ರಿ ಯಡಿಯೂರಪ್ಪ ಯಾದಗಿರಿಗೆ ಭೇಟಿ ಕೊಟ್ಟ ಸಂದರ್ಭದಲ್ಲಿ ಜೆಡಿಎಸ್ ಕಾರ್ಯಕರ್ತರು ಸಿಎಂ ಅವರ ಕಾರನ್ನು ತಡೆದು ಮುತ್ತಿಗೆ ಹಾಕಲು ಪ್ರಯತ್ನಿಸಿದ್ದರು. ಇದು ಬಿಎಸ್‌ವೈ ಅವರ ಕೆಂಗೆಣ್ಣಿಗೆ ಗುರಿಯಾಗಿತ್ತು. ಪ್ರತಿಭಟನೆ ನಡೆಸಲು ಮುಂದಾಗಿದ್ದ ಜೆಡಿಎಸ್ ಕಾರ್ಯಕರ್ತರ ವಿರುದ್ಧ ದೂರು ದಾಖಲಾಗಿತ್ತಲ್ಲದೆ ಕೆಲವರ ಮೇಲೆ ಸಬ್‌ಇನ್‌ಸ್ಪೆಕ್ಟರ್ ಹಲ್ಲೆ ನಡೆಸಿದ್ದರು ಎನ್ನಲಾಗಿದೆ.

ಈ ಹಿನ್ನೆಲೆಯಲ್ಲಿ ಯಾದಗಿರಿ ಶಾಸಕ ನಾಗನಗೌಡ ಕಂದಕೂರ ಅವರ ಪುತ್ರ ಶರಣಗೌಡ ಪಾಟೀಲ್ ಕಂದಕೂರ ಹಾಗೂ ಅವರ ಬೆಂಬಲಿಗರು ಪೊಲೀಸ್ ಠಾಣೆ ಮುಂದೆ ಅಹೋರಾತ್ರಿ ಧರಣಿ ನಡೆಸಿ ಎಸ್‌ಐ ವಿರುದ್ಧ ಕ್ರಮ ಕೈಗೊಳ್ಳಬೇಕೆಂದು ಒತ್ತಾಯಿಸಿದ್ದರು. ಪ್ರತಿಭಟನೆಯಲ್ಲಿ ದೇವೇಗೌಡರು ಕೂಡ ಪಾಲ್ಗೊಂಡು ಬೆಂಬಲ ಸೂಚಿಸಿದ್ದರು. ವಿವಾದ ಇನ್ನಷ್ಟು ತಾರಕಕ್ಕೇರಬಹುದೆಂಬ ಹಿನ್ನೆಲೆಯಲ್ಲಿ ಸರ್ಕಾರ ಬಾಪುಗೌಡ ಪಾಟೀಲ್ ಅವರನ್ನು ಎತ್ತಂಗಡಿ ಮಾಡುವ ಮೂಲಕ ಪ್ರಕರಣಕ್ಕೆ ಸುಖಾಂತ್ಯ ನೀಡುವ ಮುನ್ಸೂಚನೆ ನೀಡಿದೆ.

Facebook Comments