ಅಪ್ರತಿಮ ದೇಶಪ್ರೇಮಿ ನೇತಾಜಿ ಸುಭಾಷ್ ಚಂದ್ರ ಬೋಸ್‍

ಈ ಸುದ್ದಿಯನ್ನು ಶೇರ್ ಮಾಡಿ

ಸಂಗಮೇಶ ಎನ್.ಜವಾದಿ
ನೇತಾಜಿ ಎಂದೇ ಪ್ರಸಿದ್ಧರಾದ ಭಾರತದ ಸ್ವಾತಂತ್ರ್ಯ ಸಂಗ್ರಾಮದ ಪ್ರಮುಖ ಜನನಾಯಕರಲ್ಲಿ ಅಗ್ರಗಣ್ಯ ಮಾಹಾನ್ ನಾಯಕ ಸುಭಾಷ್ ಚಂದ್ರಬೋಸ್ ಒಬ್ಬರು.  ಸ್ವಾಮಿ ವಿವೇಕಾನಂದರ ಆದರ್ಶ, ಜೀವನದ ವಿಚಾರಗಳಿಂದ ಪ್ರಭಾವಿತರಾದ ಇವರು ಭಾರತ ಸ್ವಾತಂತ್ರ್ಯ ಹೋರಾಟದಲ್ಲಿ ಪ್ರಾಣದ ಹಂಗು ತೊರೆದು ಹೋರಾಡಿದ ಸ್ವಾತಂತ್ರ್ಯ ಅಮರ ಪ್ರೇಮಿ ಹಾಗೂ ಭಾರತದ ಇತಿಹಾಸದ ಪುಟಗಳಲ್ಲಿ ಅಚ್ಚಳಿಯದೆ ಉಳಿದ ವೀರ ಮೇಧಾವಿ.

ನೀವು ನನಗೆ ರಕ್ತ ಕೊಡಿ ನಾನು ನಿಮಗೆ ಸ್ವಾತಂತ್ರ್ಯ ತಂದು ಕೊಡುತ್ತೇನೆ… ಸ್ವಾತಂತ್ರ್ಯ ಚಳವಳಿ ಸಂದರ್ಭದಲ್ಲಿ ಅದೆಷ್ಟೋ ಜನರಿಗೆ ಸ್ಫೂರ್ತಿ ತುಂಬಿದ ಮಾತಿದು. ಅಂದು ಸಿಡಿಲಬ್ಬರದ ಈ ಮಾತು ಕೇಳಿದ್ದ ಪ್ರತಿಯೊಬ್ಬರಲ್ಲೂ ದೇಶ ಪ್ರೇಮದ ಕಿಚ್ಚು ಜಾಗೃತವಾಗುತ್ತಿತ್ತು.

ಈ ಮಾತನ್ನಾಡಿದವರು ಕೆಚ್ಚೆದೆಯ ಸ್ವಾತಂತ್ರ್ಯ ಸೇನಾನಿ ನೇತಾಜಿ ಸುಭಾಷ್ ಚಂದ್ರ ಬೋಸ್ ಎಂಬುದನ್ನು ಇಂದಿನ ಜನತೆ ಎಂದೂ ಮರೆಯಬಾರದು. ಭಾರತವನ್ನು ಬ್ರಿಟೀಷರ ದಾಸ್ಯದ ಸಂಕೋಲೆಯಿಂದ ಬಿಡಿಸಲೇಬೇಕೆಂದು ಪಣ ತೊಟ್ಟಿದ್ದ ನೇತಾಜಿ ಅಂದಿನ ಬ್ರಿಟಿಷ್ ಸರ್ಕಾರಕ್ಕೆ ತನ್ನ ಪ್ರಖರ ನಿಲುವುಗಳಿಂದಲೇ ಬಿಸಿ ಮುಟ್ಟಿಸಿದ್ದರು ಎನ್ನುವುದನ್ನು ನಾವ್ಯಾರೂ ಮರೆಯುವಂತಿಲ್ಲ. ಇಂತಹ ಕಠಿಣ ನಿಲುವುಗಳಿಂದ ನೇತಾಜಿ ಭಾರತದ ಅಪ್ರತಿಮ ಸ್ವಾತಂತ್ರ್ಯ ಹೋರಾಟಗಾರರಾಗಿ ಹೊರಹೊಮ್ಮಿದ್ದರು.

ಆಜಾದ್ ಹಿಂದ್ ಪೌಜ್ (ಇಂಡಿಯನ್ ನ್ಯಾಷನಲ್ ಆರ್ಮಿ- ಐಎನ್‍ಎ) ಎಂಬ ಸೇನೆಯನ್ನು ಕಟ್ಟಿದ ಸುಭಾಷ್ ಚಂದ್ರಬೋಸ್ ಕ್ರಾಂತಿಕಾರಿ ನಿಲುವಿನ ನಾಯಕರಾಗಿ ಸ್ವಾತಂತ್ರ್ಯ ಸಂಗ್ರಾಮಕ್ಕೆ ಕಹಳೆ ಊದಿದರು. ಹೀಗೆ ಅಪ್ರತಿಮ ದೇಶಭಕ್ತರಾಗಿದ್ದ ಬೋಸರು ವಿದೇಶದಲ್ಲೂ ಸ್ವಾತಂತ್ರ್ಯ ಹೋರಾಟವನ್ನು ಸಂಘಟಿಸಿದ್ದರು. ಕಾಲಿಗೆ ಚಕ್ರ ಕಟ್ಟಿಕೊಂಡವರಂತೆ ದೇಶ-ವಿದೇಶದಲ್ಲಿ ಸುತ್ತಾಡಿದ ಸುಭಾಷ್ ಚಂದ್ರ ಬೋಸ್ ಅವರು ಬ್ರಿಟಿಷರಿಗೇ ಸಿಂಹಸ್ವಪ್ನವಾಗಿ ಕಾಡಿದ್ದರು. ತಮ್ಮ ಪ್ರಖರ ಚಿಂತನೆ ಮೂಲಕವೇ ಎಲ್ಲರ ಮನಸ್ಸು ಗೆದ್ದಿದ್ದ ನೇತಾಜಿ, ತಮ್ಮ ದೇಶ ಪ್ರೇಮದ ಕಿಚ್ಚಿನಿಂದಲೇ ಆಗಸದೆತ್ತರಕ್ಕೆ ಬೆಳೆದಿದ್ದರು.

ಜತೆಗೆ ದೇಶ ಪ್ರೇಮದ ಬಗ್ಗೆ ಜನತೆಗೆ ಉತ್ತೇಜನೆ ನೀಡಿದರು. ಜಾಗೃತಿ ಮೂಡಿಸುವ ಮೂಲಕ ಅಚ್ಚುಕಟ್ಟಾಗಿ ಮಾಡಿ ಭಾರತ ಸ್ವಾತಂತ್ರ್ಯ ಪಡೆಯುವಲ್ಲಿ ತನ್ನದೇ ಆದ ಕೊಡುಗೆ ನೀಡಿದರು. 1897 ಜನವರಿ 23ರಂದು ಒಡಿಶಾದ ಕಟಕ್ ನಗರದಲ್ಲಿ ಜಾನಕಿನಾಥ್ ಬೋಸ್ ಮತ್ತು ಪ್ರಭಾವತಿದೇವಿ ದಂಪತಿಯ 9ನೆ ಮಗನಾಗಿ ಬೋಸ್ ಜನಿಸಿದ್ದರು. ಪ್ರಾಥಮಿಕ ಹಾಗೂ ಪ್ರೌಢ ಶಿಕ್ಷಣವು ಕಟಕ್ ನಗರದಲ್ಲಿ ವಿದ್ಯಾಭ್ಯಾಸ ಮಾಡಿದರು. 1919ರಲ್ಲಿ ತತ್ವಶಾಸ್ತ್ರ ವಿಭಾಗದಲ್ಲಿ ಬಿಎ ಪದವಿ ಪಡೆದರು.

ನಂತರ 1919ರ ಸೆಪ್ಟೆಂಬರ್ 15ರಂದು ಐಸಿಎಸ್ ಪರೀಕ್ಷೆಗಾಗಿ ಇಂಗ್ಲೆಂಡ್‍ಗೆ ಪಯಣ ಬೆಳೆಸಿದರು. 1920ರ ಸೆಪ್ಟೆಂಬರ್‍ನಲ್ಲಿ ನಾಲ್ಕನೆ ಸ್ಥಾನ ಪಡೆಯುವ ಮೂಲಕ ಐಸಿಎಸ್ ಪದವಿ ಪಡೆದರು. ಆದರೆ, ವಿದೇಶಿಗರ ಗುಲಾಮಗಿರಿ ಅಡಿಯಲ್ಲಿ ಕೆಲಸ ಮಾಡಲು ಬೋಸರ ಮನಸ್ಸು ಒಪ್ಪದೆ ಬಿಳಿಯರ ನೌಕರಿ ಒಲ್ಲೇ ಎಂದು ಗಳಿಸಿದ್ದ ಐಸಿಎಸ್ ಪದವಿಯನ್ನು ಧಿಕ್ಕರಿಸಿ 1921ರ ಏಪ್ರಿಲ್ 22ರಂದು ಹಿಂದಿರುಗಿಸಿ ಸ್ವದೇಶಕ್ಕೆ ಮರಳಿ, ಸ್ವಾತಂತ್ರ್ಯ ಹೋರಾಟದಲ್ಲಿ ತೊಡಗುವ ಮೂಲಕ ಇಡೀ ತಮ್ಮ ಜೀವನವನ್ನು ದೇಶ ಸ್ವಾತಂತ್ರ್ಯ ಪಡೆಯುವುದಕ್ಕಾಗಿ ಧಾರೆ ಎರೆದರು.

ಸ್ವಂತ ಪಕ್ಷ ಸ್ಥಾಪನೆ: ಕಾಂಗ್ರೆಸ್‍ನ ಡೋಲಾಯಮಾನ ನೀತಿಗಳಿಗೆ ತೀಲಾಂಜಲಿ ಹಾಡಿ ಸ್ವರಾಜ್ಯಪಕ್ಷ ಸ್ಥಾಪನೆ ಮಾಡುವ ಮೂಲಕ ಸ್ವಾತಂತ್ರ್ಯ ಸಂಗ್ರಾಮಕ್ಕೆ ಐತಿಹಾಸಿಕ ರಣಕಹಳೆ ಊದಿದರು. ಕ್ರಾಂತಿಕಾರಿ ಹೋರಾಟಗಳಿಂದ ಹಲವು ಬಾರಿ ಬೋಸ್‍ರ ಬಂಧನ, ಬಿಡುಗಡೆಯಾಯಿತು.

ಗಾಂಧಿ ಪ್ರಣೀತ ಮಂದ ಮಾರ್ಗಕ್ಕಿಂತ ಸುಭಾಷ್‍ರದ್ದು ತೀರಾ ಭಿನ್ನ ಎಂಬುದು ಕ್ರಮೇಣ ಜನರಿಗೆ ಗೊತ್ತಾಯಿತು. ಅಲ್ಲದೆ, ಬಲಿಷ್ಠಗೊಂಡ ಆಜಾದ್ ಹಿಂದ್ ಸೇನೆಗೆ ದೌಡಾಯಿಸುತ್ತಿದ್ದ ನಿವೃತ್ತಯುದ್ಧ ಕೈದಿಗಳು. ಕ್ರಮೇಣ ಸ್ವಾತಂತ್ರ್ಯ ಸಮಯದಲ್ಲಿ ಪಕ್ವ ಸೈನ್ಯವಾಗಿ ರೂಪುಗೊಂಡು ದೇಶ ಸೇವೆಗೆ ಮೀಸಲಾಗಿ ನಿಂತಿತ್ತು. ಹೀಗೆ ಭಾರತದ ಸ್ವಾತಂತ್ರ್ಯ ಹೋರಾಟಪರ ಅಭಿಯಾನ ಮಾಡುವ ಮೂಲಕ ದೇಶದ ಜನಸಾಮಾನ್ಯರ ಹೃದಯ ಮಂದಿರದಲ್ಲಿ ಅಚ್ಚಳಿಯದೆ ಉಳಿದ ಮಾಹಾನ್ ಕ್ರಾಂತಿ ಪುರುಷರಾಗಿದ್ದಾರೆ.

ನೀವು ನಿಮ್ಮ ರಕ್ತ ನನಗೆ ಕೊಡಿ, ನಾನು ನಿಮಗೆ ಸ್ವಾತಂತ್ರ್ಯ ತಂದು ಕೊಡುತ್ತೇನೆ. ಸ್ವಾತಂತ್ರ್ಯವೆಂಬುದು ಯಾರೂ ಕೊಡುವಂಥ ಸರಕಲ್ಲ, ಅದು ನಾವು ಪಡೆದುಕೊಳ್ಳಬೇಕಾಗಿರುತ್ತದೆ ಎಂದು ಘಂಟಾಘೋಷವಾಗಿ ಬೋಸ್ ಹೇಳುತ್ತಿದ್ದರು. ಆದ್ದರಿಂದ ಬಂಧುಗಳೆ ಇವರ ತ್ಯಾಗ ಬಲಿದಾನವನ್ನು ಯಾರು-ಯಾವತ್ತೂ ಮರೆಯಬಾರದು. ಕೇವಲ ಒಂದು ದಿನ ಮಾತ್ರ ಇವರನ್ನು ನೆನಪು ಮಾಡಿಕೊಂಡು ಮರೆಯುವುದು ಶೋಭೆಯಲ್ಲ, ಇವರ ಆದರ್ಶ ನೀತಿಗಳನ್ನು ನಮ್ಮ ಜೀವನದಲ್ಲಿ ಅಳವಡಿಸಿಕೊಂಡು ಇತರರಿಗೆ ಮಾದರಿಯಾಗಿ ಬಾಳಿದರೆ ಮಾತ್ರ ನಮ್ಮ ಬದುಕು ಸಾರ್ಥಕತೆ ಕಾಣಲಿದೆ ಜತೆಗೆ ಬೋಸರಿಗೂ ಗೌರವ ಸಲ್ಲಿಸಿದಂತಾಗುತ್ತದೆ.

ಒಬ್ಬ ವ್ಯಕ್ತಿ ತನ್ನ ಸಿದ್ಧಾಂತಕ್ಕಾಗಿ ಸಾವನ್ನಪ್ಪಬಹುದು. ಆದರೆ, ಆತನ ಮರಣಾನಂತರವೂ ಉಳಿಯುವ ಆ ಸಿದ್ಧಾಂತ ಸಾವಿರ ಜನರಲ್ಲಿ ಅವತರಿಸುತ್ತದೆ. ನಮ್ಮ ದೇಶ ಎದುರಿಸುತ್ತಿರುವ ಸಮಸ್ಯೆಗಳಿಗೆ ಸ್ವಾತಂತ್ರ್ಯವೊಂದೇ ಪರಿಹಾರ. ಗುಲಾಮಿತನದ ಸಂಕೋಲೆಯನ್ನು ಕಿತ್ತೆಸೆಯಲು ಒಂದೇ ಹೃದಯ, ಒಂದು ಪ್ರಾಣವಾಗಿ ಎಲ್ಲರೂ ಕಟಿಬದ್ಧರಾಗಬೇಕಾಗಿದೆ.

ಭಾರತದ ಮೇಲೆ ಇಟ್ಟಿರುವ ನಂಬಿಕೆಯನ್ನು ಯಾವತ್ತೂ ಕಳೆದುಕೊಳ್ಳಬೇಡಿ. ಭಾರತವನ್ನು ಬಂಧನದಲ್ಲಿಡುವ ಯಾವ ಶಕ್ತಿಯೂ ಭೂಮಿಯಲ್ಲಿಲ್ಲ. ಶೀಘ್ರದಲ್ಲೇ ಭಾರತ ಸ್ವತಂತ್ರವಾಗಲಿದೆ. ಅನ್ಯಾಯ ಸಹಿಸಿಕೊಳ್ಳುವುದು ಮತ್ತು ತಪ್ಪಿನೊಂದಿಗೆ ರಾಜಿ ಮಾಡಿಕೊಳ್ಳುವುದು ಬಹುದೊಡ್ಡ ಅಪರಾಧ ಎಂದು ಸುಭಾಷ್ ಚಂದ್ರ ಬೋಸ್ ಹೇಳುತ್ತಿದ್ದರು ಎನ್ನುವುದು ದೇಶವಾಸಿಗಳು ಇಂದಿನ ದಿನಗಳಲ್ಲಿ ನೆನಪಿಡುವುದು ಅವಶ್ಯಕತೆ ಇದೆ ಮತ್ತು ಇದನ್ನು ನಾವೆಲ್ಲರೂ ಮನಗಂಡು ಅವರು ಹಾಕಿ ಕೊಟ್ಟ ಮಾರ್ಗದಲ್ಲಿ ಸಾಗುವ ಕೆಲಸ ಮಾಡೋಣ.

ಈ ಮೂಲಕ ಅವರ ದೇಶ ಪ್ರೇಮದ ಪ್ರಜ್ವಲ ಜ್ಯೋತಿ ಸರ್ವರಲ್ಲಿಯೂ ಬೆಳಗಿಸೋಣ ಹಾಗೂ ಜಾಗೃತಿ ಗೊಳಿಸೋಣ. ರಾಷ್ಟ್ರಕ್ಕೆ ನೇತಾಜಿಯವರು ನೀಡಿರುವ ಅದಮ್ಯ ಮನೋಭಾವ ಮತ್ತು ನಿಸ್ವಾರ್ಥ ಸೇವೆಯನ್ನು ಗೌರವಿಸುವ ಪ್ರತಿಯೊಬ್ಬ ದೇಶಾಭಿಮಾನಿಗಳು ರಾಷ್ಟ್ರಕ್ಕೆ ಸಂಕಷ್ಟ ಎದುರಾದಾಗ ಒಗ್ಗಟ್ಟಾಗಿ ವಿರೋಧಿಗಳ ವಿರುದ್ಧ ಹೋರಾಡಲು ಮುಂದಾಗೋಣ.

 

ನೇತಾಜಿ ರಾಜಕೀಯ ಚಿಂತನೆಯ ವೈಶಾಲ್ಯತೆ
ಸ್ವಾತಂತ್ರ್ಯ ಸಂಗ್ರಾಮಕ್ಕೆ ಧುಮುಕಿದ ಮೇಧಾವಿ ಬೋಸ್ ಅವರಿಗಿದ್ದ ರಾಜಕೀಯ ಚಿಂತನೆಯ ವೈಶಾಲ್ಯತೆ ಆ ಕಾಲಮಾನದ ಯಾವೊಬ್ಬ ಪ್ರಮುಖ ನಾಯಕರಲ್ಲೂ ಇರಲಿಲ್ಲ ಎನ್ನುವುದು ಸುಳ್ಳಲ್ಲ. ಆಸ್ಟ್ರಿಯಾ, ಇಂಗ್ಲೆಂಡ್, ಜರ್ಮನಿ, ಜಪಾನ್ ಸೇರಿದಂತೆ ಹತ್ತಾರು ರಾಷ್ಟ್ರಗಳಲ್ಲಿ ಮಿಂಚಿನ ಓಡಾಟ ನಡೆಸಿ ಭಾರತೀಯ ಸ್ವರಾಜ್ಯ ಹೋರಾಟದ ದನಿಗೆ ತೀವ್ರತೆ ತಂದಿದ್ದ ಬೋಸರು, ತಾನು ನಂಬಿದ್ದ ಕ್ರಾಂತಿಪಥದಲ್ಲಿ ಎಂದೂ ರಾಜಿ ಮಾಡಿಕೊಂಡವರಲ್ಲ.

ರಾಷ್ಟ್ರ ನಿರ್ಮಾಣದ ಜವಾಬ್ದಾರಿಯುತ ಸ್ಥಾನದಲ್ಲಿದ್ದು, ರಾಷ್ಟ್ರಹಿತಕ್ಕೆ ಧಕ್ಕೆಯಾಗುವ ಯಾವುದೇ ವಿಷಯಗಳಲ್ಲಿ ಎಂದೂ ಒಳ ಒಪ್ಪಂದ ಮಾಡಿಕೊಂಡವರಲ್ಲ.  ಬಲಹೀನ ನಾಯಕತ್ವ, ದುರ್ಬಲ ಒಪ್ಪಂದಗಳು, ಸ್ವಾಭಿಮಾನ ಶೂನ್ಯ ವರ್ತನೆಗೆ ಪ್ರತಿಯಾಗಿ ಆತ್ಮಾಭಿಮಾನದ ಸ್ವರಾಜ್ಯ ಹೋರಾಟಕ್ಕೆ ಬಲತುಂಬಿದವರು ಸುಭಾಷರು.

ಹಾಗಾಗಿ 1938ರಲ್ಲಿ ಭಾರತ ವಿಭಜನೆಯ ಮುಸ್ಲಿಂಲೀಗ್-ಬ್ರಿಟಿಷರ ತಂತ್ರಗಾರಿಕೆ ಕುರಿತು ಮೊದಲ ಬಾರಿಗೆ ಬಹಿರಂಗವಾಗಿ ಎಚ್ಚರಿಸಿದರೂ ಮಂದಗಾಮಿಗಳಿಗೆ ಇವರ ಮಾತು ಕೇಳಿಸಲಿಲ್ಲ. ಇನ್ನು ವಿದೇಶಿ ನೆಲಗಳ ಓಡಾಟದಿಂದ ಪಡೆದ ರಾಜಕೀಯ ಅನುಭವದ-ಒಳನೋಟಗಳು ಹಾಗೂ ಬ್ರಿಟಿಷರ ಒಡೆದು ಆಳುವ ನೀತಿಗಳು ಸೇರಿದಂತೆ ದೇಶ ವಿಭಜನೆಯ ಬ್ರಿಟಿಷರ ಕುತಂತ್ರ ವಿಷಬೀಜದ ಸುಳಿವನ್ನು ಮೊದಲೇ ಅರಿತು ಅಂದಿನ ಅಂದರೆ ಸ್ವಾತಂತ್ರ್ಯ ಸಂಗ್ರಾಮದಲ್ಲಿ ಮುಂಚೂಣಿಯಲ್ಲಿದ್ದ ಪ್ರಮುಖ ನಾಯಕರ ಗಮನಕ್ಕೆ ತಂದರೂ ಯಾವುದೇ ಪ್ರಯೋಜನವಾಗಲಿಲ್ಲ. ಹಾಗೇ ಅವರ (ಮಂದಗಾಮಿಗಳ) ಅಸಹಕಾರ ಧೋರಣೆಯಿಂದ ದೇಶ ವಿಭಜನೆಯಾಯಿತು ಎನ್ನುವುದು ಸುಳ್ಳಲ್ಲ.

ಪರಿಣಾಮವಾಗಿ (ಬೋಸರು ಎಚ್ಚರಿಕೆ ನೀಡಿದ ವರ್ಷ 1938) 9 ವರ್ಷದಲ್ಲೇ ದೇಶ ಹೋಳಾಯಿತು. ಈ ನೋವು ಬೋಸರಿಗೆ ಅತಿಯಾಗಿ ಕಾಡಿತ್ತು. ಸುಭಾಷ್ ವಿರುದ್ಧ ಹಲವಾರು ಟೀಕೆಗಳು, ಅನಗತ್ಯ ಋಣಾತ್ಮಕ ಮಾತುಗಳು ಮಂದಗಾಮಿಗಳ ಕಡೆಯಿಂದ ಬಂದವು.

ಸ್ವಾತಂತ್ರ್ಯದ ಮೋಡಗಳು ಸಮೀಪ ಇರುವಂತೆಯೇ ಬ್ರಿಟಿಷ್ ಸರ್ಕಾರದ ಜತೆ ದುರ್ಬಲ ನೀತಿಗಳು ಕೆಲ ಮಂದಗಾಮಿಗಳ ನಾಯಕರ ಕಡೆಯಿಂದ ಜರುಗುವ ಲಕ್ಷಣಗಳನ್ನು ಕಂಡರೂ ಈ ಎಲ್ಲ ತಾರ್ಕಿಕ ನಡೆಗಳಿಂದ ಬೇಸತ್ತು ಕಾಂಗ್ರೆಸ್‍ಗೆ ರಾಜೀನಾಮೆ ನೀಡಿ ಹೊರ ಬಂದರು ಸುಭಾಷ್‍ಜಿ.

Facebook Comments