ರಾಜ್ಯದೆಲ್ಲೆಡೆ ಸುಬ್ರಹ್ಮಣ್ಯ ಷಷ್ಠಿ ಸಂಭ್ರಮ

ಈ ಸುದ್ದಿಯನ್ನು ಶೇರ್ ಮಾಡಿ

ಬೆಂಗಳೂರು, ಡಿ.2- ಜಿಟಿ ಜಿಟಿ ಮಳೆಯಲ್ಲೂ ರಾಜ್ಯದೆಲ್ಲೆಡೆ ನಾಗರ ಕಲ್ಲು ಹಾಗೂ ಹುತ್ತಕ್ಕೆ ಭಕ್ತರು ಹಾಲು ಎರೆಯುವ ಮೂಲಕ ಸುಬ್ರಮಣ್ಯ ಷಷ್ಠಿ ಹಬ್ಬ ಆಚರಿಸಿದರು. ಹುತ್ತಕ್ಕೆ ಹಾಲಿನ ಅಭಿಷೇಕ ಮತ್ತು ಹಾಲಿನ ಮಿಶ್ರಣದೊಂದಿಗೆ ಬಾಳೆ ಹಣ್ಣಿನ ನೈವೇದ್ಯ ಇಟ್ಟು ಸುಬ್ರಹ್ಮಣ್ಯ ಷಷ್ಠಿ ಹಬ್ಬವನ್ನು ಶ್ರದ್ಧಾ ಭಕ್ತಿಯಿಂದ ಆಚರಿಸಲಾಯಿತು.

ಹಬ್ಬದ ಪ್ರಯುಕ್ತ ಜನರು ಮುಂಜನೆಯಿಂದಲೆ ಮನೆ ಸ್ವಚ್ಚಗೊಳಿಸಿ ಕೊಂಡು ಮಡಿಯುಟ್ಟು ಒಪ್ಪುತ್ತಿನ ಉಪವಾಸ ಇದ್ದವರು ಸಂಸಾರದೊಡನೆ ಆಗಮಿಸಿ ಹುತ್ತ ಹಾಗೂ ನಾಗರ ಕಲ್ಲಿನ ಮೂರ್ತಿಗೆ ಪೂಜೆ ಸಲ್ಲಿಸಿದರು. ಬಳಿಕ ಅಲ್ಲಿಯೇ ಬಾಳೆಹಣ್ಣಿನಲ್ಲಿ ಒಪ್ಪುತ್ತಿನ ಉಪವಾಸ ಬಿಡುತ್ತಾರೆ. ಆದರೆ ಮಧ್ಯಾಹ್ನ ಅಥವಾ ಸಂಜೆ ತನಕ ಊಟ ಮಾಡದೆ ಮನೆಯಲ್ಲಿ ಅಡುಗೆ ಮಾಡಿ ಎಡೆ ರೂಪದಲ್ಲಿ ಸುಬ್ರಹ್ಮಣ್ಯಸ್ವಾಮಿಗೆ ನೈವೇದ್ಯ ಇಟ್ಟು ಪೂಜೆ ಸಲ್ಲಿಸಿ ಆರಾಧಿಸಿದ ಬಳಿಕ ಊಟ ಇನ್ನಿತರ ಆಹಾರ ಸೇವಿಸಿ ಭಕ್ತಿಯ ಪರಾಕಾಷ್ಟತೆ ಮೆರೆಯುತ್ತಾರೆ.

ಹೊಲ ಗದ್ದೆಗಳಲ್ಲಿ ಜನರು ಕೆಲಸ ಮಾಡುವಾಗ ಮತ್ತು ರಾಗಿ ಇನ್ನಿತರ ಪಧಾರ್ಥಗಳ ಒಕ್ಕಣೆ ಕಾಲದಲ್ಲಿ ಕಣ್ಣಿಗೆ ಹಾವಿನ ದರ್ಶನವಾಗದಿರಲಿ ಮತ್ತು ನಮ್ಮ ಕುಟುಂಬಕ್ಕೆ ಒಳ್ಳೆಯದಾಗಲಿ ಎಂಬುದು ಭಕ್ತರ ನಂಬಿಕೆಯಾಗಿದೆ. ಗ್ರಾಮೀಣ ಭಾಗದ ರೈತಾಪಿ ವರ್ಗ ಹಾಗೂ ಸಾರ್ವಜನಿಕರು ಷಷ್ಠಿ ಹಬ್ಬವನ್ನು ಭಕ್ತಿ ಭಾವದಿಂದ ಆಚರಿಸುತ್ತಾರೆ. ಇನ್ನೂ ಕೆಲವರು ಹುತ್ತಕ್ಕೆ ಮೊಟ್ಟೆ ಇಟ್ಟು ಪೂಜಿಸುವ ಮೂಲಕ ಷಷ್ಠಿ ಆಚರಿಸುವರು.

ಸಿದ್ದಲಿಂಗಪುರದಲ್ಲಿ ಜಾತ್ರೆ:ಸುಬ್ರಹ್ಮಣ್ಯೇಶ್ವರ ಷಷ್ಠಿ ಪ್ರಯುಕ್ತ ಮೈಸೂರಿನ ಸಮೀಪವಿರುವ ಸಿದ್ದಲಿಂಗಪುರದಲ್ಲಿ ಷಷ್ಠಿ ಜಾತ್ರಾ ಮಹೋತ್ಸವ ವಿಜೃಂಭಣೆಯಿಂದ ನಡೆಯಿತು.
ಸಿದ್ದಲಿಂಗಪುರದಲ್ಲಿರುವ ಸುಬ್ರಹ್ಮಣ್ಯೇಶ್ವರ ದೇವಾಲಯದಲ್ಲಿ ತಡರಾತ್ರಿಯಿಂದಲೇ ದೇವರಿಗೆ ವಿಶೇಷ ಪೂಜೆ ಕೈಂಕರ್ಯಗಳು ಜರುಗಿದವು.

ದೇವರಿಗೆ ವಿವಿಧ ರೀತಿ ಹೂವುಗಳಿಂದ ಅಲಂಕಾರ ನಡೆಸಲಾಯಿತು. ಬೆಳಗಿನ ಜಾವ 4 ರಿಂದ ಬಂದ ಭಕ್ತಾದಿಗಳಿಗೆ ದೇವರ ದರ್ಶನಕ್ಕೆ ಅವಕಾಶ ಕಲ್ಪಿಸಲಾಯಿತು.ಷಷ್ಠಿ ಜಾತ್ರಾ ಮಹೋತ್ಸವದ ಪ್ರಯುಕ್ತ ಸ್ವಾಮಿಯ ರಥೋತ್ಸವವನ್ನು ಎಳೆಯಲಾ ಯಿತು. ದೇವಾಲಯದ ಬಳಿಯಿರುವ ಹುತ್ತಕ್ಕೆ ಸಾವಿರಾರು ಭಕ್ತರು ಹಾಲೆರೆದು ವಿಶೇಷ ಪೂಜೆ ನಡೆಸಿ ತಮ್ಮ ಇಷ್ಟಾರ್ಥವನ್ನುಸಿದ್ದಿಸುವಂತೆ ಕೇಳಿಕೊಂಡರು.

ಜಿಲ್ಲೆಯ ವಿವಿಧ ಗ್ರಾಮಗಳಿಂದ ಸಾವಿರಾರು ಮಂದಿ ದೇವಾಲಯಕ್ಕೆ ಆಗಮಿಸಿ ವಿಶೇಷ ಪೂಜೆ ಸಲ್ಲಿಸಿ ತಮ್ಮ ವಾಹನಗಳಿಗೆ ಕಬ್ಬಿನ ಜಲ್ಲೆಗಳನ್ನು ಕಟ್ಟಿ ಕೊಂಡು ಹೋಗುತ್ತಿರುವುದು ವಿಶೇಷವಾಗಿತ್ತು. ಜಾತ್ರೆ ಹಿನ್ನೆಲೆಯಲ್ಲಿ ದೇವಾಲಯದ ಸುತ್ತಮುತ್ತ ಕಡಲೆಪುರಿ ಹಾಗೂ ಇನ್ನಿತರೆ ಮಳಿಗೆಗಳನ್ನು ತೆರೆಯಲಾಗಿತ್ತು. ಮೈಸೂರು-ಬೆಂಗಳೂರು ನಡುವಿನ ರಸ್ತೆ ಸಂಚಾರವನ್ನು ಬದಲಾಯಿಸಲಾಯಿತು. ಬಿಗಿ ಪೊಲೀಸ್ ಬಂದೋಬಸ್ತ್ ವ್ಯವಸ್ಥೆ ಮಾಡಲಾಗಿತ್ತು.

Facebook Comments