ಹುಬ್ಬಳ್ಳಿ ಕಿಮ್ಸ್ ನಲ್ಲಿ 15 ಕೊರೋನಾ ಸೋಂಕಿತರಿಗೆ ಪ್ಲಾಸ್ಮಾ ಥೆರಪಿ ಯಶಸ್ವಿ

ಈ ಸುದ್ದಿಯನ್ನು ಶೇರ್ ಮಾಡಿ

ಹುಬ್ಬಳ್ಳಿ,ಜು.28- ಇಲ್ಲಿನ ಕಿಮ್ಸ್ ಆಸ್ಪತ್ರೆಯಲ್ಲಿ ಈವರೆಗೆ 15 ಕೊರೊನಾ ಸೋಂಕಿತರಿಗೆ ಪ್ಲಾಸ್ಮಾ ಥೆರಪಿಯನ್ನು ಯಶಸ್ವಿಯಾಗಿ ನಿರ್ವಹಿಸಲಾಗಿದ್ದು, ಈಗಾಗಲೇ ಐವರು ಗುಣಮುಖ ಹೊಂದಿದ್ದಾರೆ.

ರಾಜ್ಯದಲ್ಲಿಮೊದಲ ಪ್ಲಾಸ್ಮಾ ಥೆರಪಿಯನ್ನು ಯಶಸ್ವಿಯಾಗಿ ನಿರ್ವಹಿಸಿ, ಮೈಲುಗಲ್ಲು ಸ್ಥಾಪಿಸಿದ ಕೀರ್ತಿ ಕಿಮ್ಸ್ ವೈದ್ಯರದ್ದು. ಗುಣಮುಖರಾದವರಿಗೆ ಪ್ಲಾಸ್ಮಾ ದಾನ ಮಾಡುವಂತೆ ಪ್ರೆರೇಪಿಸುವ ಸಲುವಾಗಿ ವಿಶೇಷ ತಂಡ ರಚಿಸಲಾಗಿದೆ.

ಹೀಗಾಗಿ ಇಲ್ಲಿ ಪ್ಲಾಸ್ಮಾ ಥೆರಪಿ ನಿರಂತರವಾಗಿ ನಡೆದಿದೆ.ಈಗಾಗಲೇ 15 ಸೋಂಕಿತರಿಗೆ ಪ್ಲಾಸ್ಮಾ ಥೆರಪಿ ನಡೆಸಲಾಗಿದೆ. ಇವರಲ್ಲಿ 80 ವರ್ಷದ ಒಬ್ಬ ವೃದ್ಧರೂ ಸೇರಿದ್ದಾರೆ. ಐವರು ಗುಣಮುಖರಾಗಿ, ಉಳಿದವರು ಚೇತರಿಸಿಕೊಳ್ಳುತ್ತಿದ್ದಾರೆ ಎಂದು ಕಿಮ್ಸ್ ನಿರ್ದೇಶಕ ಡಾ. ರಾಮಲಿಂಗಪ್ಪ ಅಂಟರತಾನಿ ಹೇಳಿದ್ದಾರೆ.

ಇದುವರೆಗೆ ಹುಬ್ಬಳ್ಳಿಯ ನವನಗರ ಕ್ಯಾನ್ಸರ್ ಆಸ್ಪತ್ರೆಯಲ್ಲಿ ನೀಡಲಾಗುತ್ತಿದ್ದ ಪ್ಲಾಸ್ಮಾ ಥೆರಪಿಯನ್ನು ಈಗ ಕಿಮ್ಸ್‍ನಲ್ಲಿ ಅಳವಡಿಸಿ ಯಂತ್ರೋಪಕರಣ ಮೂಲಕವೇ ನಡೆಸಲಾಗುತ್ತಿದೆ.

# ವಿಶೇಷ ತಂಡದ ಫಲ:
ಆರಂಭದಲ್ಲಿ ಪ್ಲಾಸ್ಮಾ ದಾನಕ್ಕೆ ಗುಣಮುಖರಾದವರು ಹಿಂದೇಟು ಹಾಕಿದ್ದರು. ಸ್ಮಶಾನ ಕಾಯುವ ವ್ಯಕ್ತಿ ಪ್ಲಾಸ್ಮಾ ದಾನ ಮಾಡಿದ ಬಳಿಕ ಪರಿಸ್ಥಿತಿ ಬದಲಾಗಿದ್ದು, ಇದೀಗ ಗುಣಮುಖರೂ ಮುಂದೆ ಬರುತ್ತಿದ್ದಾರೆ.

ಗುಣಮುಖರಾದವರನ್ನು ಮನವೊಲಿಸಲು ಮತ್ತು ಜಾಗೃತಿ ಮೂಡಿಸಲು ಕಿಮ್ಸ್‍ನಲ್ಲಿ ಪ್ರತ್ಯೆಕ ವೈದ್ಯರ ತಂಡವನ್ನೇ ರಚಿಸಲಾಗಿದೆ. ಇದರಿಂದ ಪ್ಲಾಸ್ಮಾ ದಾನಿಗಳ ಸಂಖ್ಯೆ ಹೆಚ್ಚುತ್ತಿದೆ ಎಂದು ಮಾಹಿತಿ ತಿಳಿಸಿದ್ದಾರೆ.

ಮನವಿ: ಯಶಸ್ಸಿನ ಹಿನ್ನೆಲೆ ಸೋಂಕಿತರು ಪ್ಲಾಸ್ಮಾ ಚಿಕಿತ್ಸೆ ನೀಡುವಂತೆ ದುಂಬಾಲು ಬೀಳುತ್ತಿದ್ದಾರೆ. ಆದರೆ, ದಾನಿಗಳ ಕೊರತೆಯಿಂದ ಕಷ್ಟವಾಗುತ್ತಿದೆ.

ಬೆಳಗಾವಿ, ಗದಗ, ಹಾವೇರಿ, ಬಾಗಲಕೋಟ ಜಿಲ್ಲೆಗಳಲ್ಲಿಗುಣಮುಖರಾದವರ ವಿವರ ನೀಡುವಂತೆ ಮನವಿ ಮಾಡಿದ್ದೇವೆ. ಕನಿಷ್ಠ ಪಕ್ಷ ಅವರ ಮೊಬೈಲ್ ನಂಬರ್ ಒದಗಿಸಿದರೂ ಅವರನ್ನು ನಮ್ಮ ತಂಡ ಸಂಪರ್ಕಿಸಿ ಮನವೊಲಿಸುವ ಪ್ರಯತ್ನ ಮಾಡುತ್ತದೆ.

Facebook Comments

Sri Raghav

Admin