ರಾಜ್ಯದಲ್ಲಿ ಯಶಸ್ವಿಯಾಗಿ ನಡೆದ ಎಸ್‍ಎಸ್‍ಎಲ್‍ಸಿ ಪರೀಕ್ಷೆ

ಈ ಸುದ್ದಿಯನ್ನು ಶೇರ್ ಮಾಡಿ

ಬೆಂಗಳೂರು, ಜು.22- ಪ್ರಸಕ್ತ ಶೈಕ್ಷಣಿಕ ವರ್ಷದ ಎಸ್‍ಎಸ್‍ಎಲ್‍ಸಿ ಪರೀಕ್ಷೆಯ ಎರಡನೆ ದಿನವಾದ ಇಂದು ಯಾವುದೇ ಗೊಂದಲವಿಲ್ಲದೆ ಸುಗಮವಾಗಿ ನಡೆಯಿತು. ಹೊಸ ಸ್ವರೂಪದಲ್ಲಿ ನಡೆದ ಎಸ್‍ಎಸ್‍ಎಲ್‍ಸಿ ಪರೀಕ್ಷೆಯಲ್ಲಿ 4485 ಪರೀಕ್ಷಾ ಕೇಂದ್ರಗಳಲ್ಲಿ 8 ಲಕ್ಷಕ್ಕೂ ಹೆಚ್ಚು ವಿದ್ಯಾರ್ಥಿಗಳು ಪರೀಕ್ಷೆ ಬರೆದರು. ಜುಲೈ 19ರಂದು ಮೊದಲ ದಿನ ನಡೆದ ಗಣಿತ, ವಿಜ್ಞಾನ, ಸಮಾಜ ವಿಜ್ಞಾನ ವಿಷಯಗಳಿಗೆ ಪರೀಕ್ಷೆ ಬರೆದಿದ್ದ ವಿದ್ಯಾರ್ಥಿಗಳು ಇಂದು ಪ್ರಥಮ, ದ್ವಿತೀಯ ಮತ್ತು ತೃತೀಯ ಭಾಷೆಗಳ ಪರೀಕ್ಷೆ ಬರೆದರು.

ಬೆಳಗ್ಗೆ 10.30ಕ್ಕೆ ಹಾಜರಾದ ವಿದ್ಯಾರ್ಥಿಗಳು ಒಎಂಆರ್ ಉತ್ತರ ಪತ್ರಿಕೆಗಳಲ್ಲಿ ಪರೀಕ್ಷೆ ಬರೆದರು. ಕೋವಿಡ್ ಮಾರ್ಗಸೂಚಿಗಳನ್ನು ಕಡ್ಡಾಯವಾಗಿ ಪಾಲಿಸಿ ಪರೀಕ್ಷೆ ನಡೆಸಲಾಯಿತು. ಇಂದು ಕೂಡ ಶಿಕ್ಷಣ ಸಚಿವ ಸುರೇಶ್‍ಕುಮಾರ್ ಅವರು ಹಲವು ಪರೀಕ್ಷಾ ಕೇಂದ್ರಗಳಿಗೆ ಭೇಟಿ ನೀಡಿ ಪರಿಶೀಲನೆ ನಡೆಸಿದರು.

ಕೊರೊನಾ ಆತಂಕದ ಹಿನ್ನೆಲೆಯಲ್ಲಿ ಪರೀಕ್ಷೆ ಎದುರಿಸುತ್ತಿರುವುದರಿಂದ ಸಹಜವಾಗಿಯೇ ವಿದ್ಯಾರ್ಥಿಗಳು ಮತ್ತು ಪೋಷಕರಲ್ಲಿ ಕೊಂಚ ಆತಂಕವಿತ್ತು. ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ, ಶಿಕ್ಷಣ ಸಚಿವ ಸುರೇಶ್‍ಕುಮಾರ್ ಅವರು ಯಾವುದೇ ಆತಂಕಕ್ಕೊಳಗಾಗದೆ ಪರೀಕ್ಷೆ ಎದುರಿಸುವಂತೆ ವಿದ್ಯಾರ್ಥಿಗಳಿಗೆ ಈ ಮೊದಲೇ ಅಭಯ ನೀಡಿದ್ದರು.

ಸುರೇಶ್‍ಕುಮಾರ್ ಅವರು ಸಾಮಾಜಿಕ ಜಾಲತಾಣ, ದೂರದರ್ಶನ, ಮೊಬೈಲ್ ಆ್ಯಪ್‍ಗಳ ಮೂಲಕ ವಿದ್ಯಾರ್ಥಿಗಳನ್ನು ಪರೀಕ್ಷೆಗೆ ಹುರಿದುಂಬಿಸಿದರು. ಹೀಗಾಗಿ ಜುಲೈ 19ರಂದು ನಡೆದ ಮೊದಲ ದಿನದ ಪರೀಕ್ಷೆ ಆತಂಕ ರಹಿತವಾಗಿ ನಡೆಯಿತು. ಅದೇ ರೀತಿ ಇಂದು ಕೂಡ ವಿದ್ಯಾರ್ಥಿಗಳು ನಿರ್ಭೀತಿಯಿಂದ ಪರೀಕ್ಷೆಯನ್ನು ಬರೆದರು.

ಪರೀಕ್ಷೆಗೆ ಹಾಜರಾದ ವಿದ್ಯಾರ್ಥಿಗಳನ್ನು ಎಂದಿನಂತೆ ಮೇಲ್ವಿಚಾರಕರು ವಿಶೇಷವಾಗಿ ಸ್ವಾಗತಿಸಿದರಲ್ಲದೆ ಸ್ಯಾನಿಟೈಜರ್, ಮಾಸ್ಕ್‍ಗಳನ್ನು ನೀಡಿದರು. ಕೋವಿಡ್ ಸೋಂಕಿತ ವಿದ್ಯಾರ್ಥಿಗಳಿಗೆ ಪ್ರತ್ಯೇಕವಾಗಿ ಪರೀಕ್ಷೆ ಬರೆಯಲು ವ್ಯವಸ್ಥೆ ಮಾಡಲಾಗಿತ್ತಾದರೂ ಅಂತಹ ಹೆಚ್ಚು ಪ್ರಕರಣಗಳು ಕಂಡುಬರಲಿಲ್ಲ. ಇಂದು ಪರೀಕ್ಷೆ ಮುಕ್ತಾಯವಾಗಿದ್ದು, ಒಎಂಆರ್ ಉತ್ತರ ಪತ್ರಿಕೆಗಳನ್ನು ಡಿಜಿಟಲ್ ಸ್ಕ್ಯಾನಿಂಗ್‍ಗೆ ಕಳುಹಿಸಿ ನಂತರ ಮೌಲ್ಯಮಾಪನ ಮಾಡಿ ಆಗಸ್ಟ್ 10ರೊಳಗೆ ಫಲಿತಾಂಶ ಪ್ರಕಟವಾಗಲಿದೆ.

ಯಾರನ್ನೂ ಅನುತ್ತೀರ್ಣ ಮಾಡುವುದಿಲ್ಲ ಎಂದು ಈಗಾಗಲೇ ಹೇಳಿರುವುದರಿಂದ ಈಗಾಗಲೇ ಪೋಷಕರು ಕಾಲೇಜುಗಳತ್ತ ಮುಖ ಮಾಡಿದ್ದಾರೆ. ತಮ್ಮ ಮಕ್ಕಳನ್ನು ವಿವಿಧ ಕಾಲೇಜುಗಳಿಗೆ ಸೇರಿಸಲು ಮುಂದಾಗಿದ್ದಾರೆ. ಪರೀಕ್ಷೆ ಫಲಿತಾಂಶ ನಿರೀಕ್ಷಣೆ ಜತೆಯಲ್ಲಿ ಕಾಲೇಜುಗಳನ್ನು ಆಯ್ಕೆ ಮಾಡಿಕೊಳ್ಳುವ ಸಿದ್ಧತೆಯಲ್ಲಿ ತೊಡಗಿದ್ದಾರೆ.

Facebook Comments