ಸಂಡೆ ಲಾಕ್‍ಡೌನ್‍ನಿಂದ ಕಂಪ್ಲೀಟ್ ಕರ್ನಾಟಕ ಸ್ತಬ್ದ..!

ಈ ಸುದ್ದಿಯನ್ನು ಶೇರ್ ಮಾಡಿ

ಬೆಂಗಳೂರು, ಮೇ 24- ಕೊರೊನಾ ಹಿನ್ನೆಲೆ ರಾಜಧಾನಿ ಬೆಂಗಳೂರು ಸೇರಿದಂತೆ ಇಡೀ ರಾಜ್ಯವೇ ಸಂಡೆ ಲಾಕ್‍ಡೌನ್‍ನಿಂದ ಸ್ತಬ್ಧವಾಗಿದೆ. ಸದಾ ವಾಹನಗಳಿಂದ ಗಿಜಿಗುಡುತ್ತಿದ್ದ ತುಮಕೂರು ರಸ್ತೆ, ಹೊಸೂರು ರಸ್ತೆ, ಮೈಸೂರು ರಸ್ತೆ, ಬಳ್ಳಾರಿ ರಸ್ತೆ ಸೇರಿದಂತೆ ನಗರದ ಬಹುತೇಕ ರಸ್ತೆಗಳು ಜನಸಂಚಾರವಿಲ್ಲದೆ ಬಿಕೋ ಎನ್ನುತ್ತಿದ್ದವು. ಮಾಂಸದ ಅಂಗಡಿಗಳು, ದಿನಸಿ ಅಂಗಡಿಗಳು ಸೇರಿದಂತೆ ಅಗತ್ಯ ವಸ್ತುಗಳ ಅಂಗಡಿಗಳು ಮಾತ್ರ ತೆರೆದಿದ್ದರೂ ಗ್ರಾಹಕರ ಕೊರತೆ ಎದುರಿಸುವಂತಾಗಿತ್ತು.

ಕಾರ್ಪೊರೇಷನ್ ಸರ್ಕಲ್, ಕೆಆರ್ ಸರ್ಕಲ್, ಆನಂದರಾವ್ ಸರ್ಕಲ್ ಸೇರಿದಂತೆ ನಗರದ ಬಹುತೇಕ ಕಡೆಗಳಲ್ಲಿ ಜನಸಂಚಾರವಿಲ್ಲದೆ ನೀರವ ಮೌನ ಆವರಿಸಿತ್ತು. ಅಲ್ಲೊಂದು ಇಲ್ಲೊಂದು ವಾಹನಗಳು ಸಂಚರಿಸುತ್ತಿದ್ದವು. ನಗರದಾದ್ಯಂತ ಎಲ್ಲ ವಿಭಾಗಗಳ ಡಿಸಿಪಿಗಳು ಗಸ್ತು ತಿರುಗುತ್ತಿದ್ದು, ಲಾಕ್‍ಡೌನ್ ಉಲ್ಲಂಘನೆ ಮಾಡುವವರ ಮೇಲೆ ತೀವ್ರ ನಿಗಾ ವಹಿಸಿದ್ದರು.

ಬೆಂಗಳೂರು, ಬೆಂಗಳೂರು ಗ್ರಾಮಾಂತರ, ತುಮಕೂರು, ಕೋಲಾರ, ಮೈಸೂರು, ಹುಬ್ಬಳ್ಳಿ, ಬೆಳಗಾವಿ, ಧಾರವಾಡ ಸೇರಿದಂತೆ ಹಲವೆಡೆ ಲಾಕ್‍ಡೌನ್ ಸಂಪೂರ್ಣ ಯಶಸ್ವಿಯಾಗಿದ್ದು, ಹಿಂದಿನ ಲಾಕ್‍ಡೌನ್ ದಿನಗಳನ್ನು ನೆನಪಿಸುವಂತಿದ್ದವು.

ಆದರೆ ಕೆಲವೆಡೆ ಜನರು ಲಾಕ್‍ಡೌನ್ ಉಲ್ಲಂಘಿಸಿ ಓಡಾಡುತ್ತಿದ್ದುದು ಕಂಡು ಬಂದರೆ, ಬೆಂಗಳೂರಿನ ಮಟನ್ ಸ್ಟಾಲ್‍ವೊಂದು ಜನರಿಂದ ತುಂಬಿ ತುಳುಕಿತ್ತು. ಮೆಜೆಸ್ಟಿಕ್, ಸ್ಯಾಟಲೈಟ್ ಬಸ್ ನಿಲ್ದಾಣ, ಶಾಂತಿನಗರ ಬಸ್ ನಿಲ್ದಾಣ, ಕೆ.ಆರ್.ಮಾರುಕಟ್ಟೆ ಸೇರಿದಂತೆ ಸದಾ ಜನ ಜಂಗುಳಿಯಿಂದ ಗಿಜಿಗುಡುತ್ತಿದ್ದ ಸ್ಥಳಗಳು ಜನರಿಲ್ಲದೇ ಬಣಗುಟ್ಟುತ್ತಿತ್ತು.

ಬೆಂಗಳೂರು ಗ್ರಾಮಾಂತರದ ನೆಲಮಂಗಲದಲ್ಲಿ ಜನರು ಲಾಕ್‍ಡೌನ್ ನಿಯಮ ಉಲ್ಲಂಘಿಸಿ ಸಹಜ ಸ್ಥಿತಿಯಂತೆ ಓಡಾಡಿಕೊಂಡಿದ್ದರು. ಪೊಲೀಸರು ಈ ಸಂದರ್ಭದಲ್ಲಿ ಪರಿಸ್ಥಿತಿ ನಿಯಂತ್ರಿಸಿ ಜನರನ್ನು ಚದುರಿಸುವಲ್ಲಿ ಯಶಸ್ವಿಯಾದರು.

ಸಂಪೂರ್ಣ ಲಾಕ್‍ಡೌನ್ ಘೋಷಿಸಿರುವ ಹಿನ್ನೆಲೆಯಲ್ಲಿ ಹುಬ್ಬಳ್ಳಿ, ಬೆಳಗಾವಿ, ಧಾರವಾಡ, ಕಲಬುರಗಿ ಸೇರಿದಂತೆ ಉತ್ತರ ಕರ್ನಾಟಕದ ಬಹುತೇಕ ಜಿಲ್ಲೆಗಳು ಸ್ತಬ್ಧವಾಗಿದೆ.

ಅವಶ್ಯ ಸೇವೆಗಳು ಹೊರತುಪಡಿಸಿದರೆ ಇತರರ ಸಂಚಾರಕ್ಕೆ ಅವಕಾಶ ನೀಡಲಾಗಿಲ್ಲ. ಸಾರಿಗೆ ಬಸ್, ಆಟೊ ರಿಕ್ಷಾಗಳು ರಸ್ತೆಗಿಳಿದಿಲ್ಲ. ರಾಂತ್ಯದಲ್ಲಿ ಗಿಜಿಗುಡುತ್ತಿದ್ದ ಮಾರುಕಟ್ಟೆ ಪ್ರದೇಶ ಸ್ತಬ್ಧವಾಗಿದೆ. ನಗರದ ಬಹುತೇಕ ರಸ್ತೆಗಳು ಬಿಕೋ ಎನ್ನುತ್ತಿವೆ. ಮದ್ಯದ ಅಂಗಡಿಗಳನ್ನು ಬಂದ್ ಮಾಡಿಸಲಾಗಿದೆ. ಪ್ರಮುಖ ರಸ್ತೆ, ವೃತ್ತಗಳಲ್ಲಿ ಪೊಲೀಸರನ್ನು ನಿಯೋಜಿಸಲಾಗಿದೆ.

ಇನ್ನು ರಾಯಚೂರಿನಲ್ಲಿ ಲಾಕ್‍ಡೌನ್ ನಿಯಮ ಉಲ್ಲಂಘಿಸಿ ಅನಗತ್ಯವಾಗಿ ವಾಹನಗಳು ರಸ್ತೆಗಿಳಿದಿರುವುದನ್ನು ಗಮನಿಸಿದ ಪೊಲೀಸರು ಅನಿವಾರ್ಯವಾಗಿ ಲಾಠಿಚಾರ್ಜ್ ನಡೆಸಬೇಕಾಗಿ ಬಂದಿತು. ಕೆಲವು ಕಡೆಗಳಲ್ಲಿ ಸಣ್ಣಪುಟ್ಟ ಘಟನೆಗಳನ್ನು ಹೊರತುಪಡಿಸಿ ರಾಜ್ಯದಲ್ಲಿ ಲಾಕ್‍ಡೌನ್ ಬಹುತೇಕ ಯಶಸ್ವಿಯಾಗಿತ್ತು.

Facebook Comments

Sri Raghav

Admin