ಮತ್ತೆ ಲಾಕ್‍ಡೌನ್-ಸೀಲ್‍ಡೌನ್ ಮಾಡುವ ಪ್ರಶ್ನೆಯೇ ಇಲ್ಲ : ಸಚಿವ ಸುಧಾಕರ್

ಈ ಸುದ್ದಿಯನ್ನು ಶೇರ್ ಮಾಡಿ

ಬೆಂಗಳೂರು,ಡಿ.29- ಬ್ರಿಟನ್‍ನ ರೂಪಾಂತರಗೊಂಡ ಸೋಂಕು ರಾಜ್ಯದಲ್ಲಿ ಕಾಣಿಸಿಕೊಂಡಿದ್ದರೂ ಮತ್ತೆ ಲಾಕ್‍ಡೌನ್ ಅಥವಾ ಸೀಲ್‍ಡೌನ್ ಮಾಡುವ ಪ್ರಶ್ನೆಯೇ ಉದ್ಭವಿಸುವುದಿಲ್ಲ ಎಂದು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವ ಡಾ.ಕೆ.ಸುಧಾಕರ್ ಸ್ಪಷ್ಟಪಡಿಸಿದ್ದಾರೆ.  ಜನವರಿ ತಿಂಗಳಿಗೆ ಕೋವಿಡ್-19ಕ್ಕೆ ಲಸಿಕೆ ಲಭ್ಯವಾಗುವುದರಿಂದ ಜನರು ಆತಂಕಪಡುವ ಅಗತ್ಯವಿಲ್ಲ. ಇದು 2ನೇ ರೂಪಾಂತರಗೊಂಡ ಸೋಂಕು ಆಗಿರುವುದರಿಂದ ಅಷ್ಟೊಂದು ಪರಿಣಾಮ ಬೀರುವುದಿಲ್ಲ. ಹೀಗಾಗಿ ರಾಜ್ಯದಲ್ಲಿ ಪುನಃ ಲಾಕ್‍ಡೌನ್ ಅಥವಾ ಸೀಲ್‍ಡೌನ್ ಮಾಡುವುದಿಲ್ಲ ಎಂದು ಹೇಳಿದರು.

ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಈಗಾಗಲೇ ನಾವು ಸೋಂಕು ಒಬ್ಬರಿಂದ ಒಬ್ಬರಿಗೆ ಹರಡುವುದನ್ನು ತಡೆಗಟ್ಟಲು ಎಲ್ಲಾ ರೀತಿಯ ಮುಂಜಾಗ್ರತಾ ಕ್ರಮಗಳನ್ನು ಕೈಗೊಂಡಿದ್ದೇವೆ. ಸಾರ್ವಜನಿಕರು ಅನಗತ್ಯವಾಗಿ ವದಂತಿಗಳಿಗೆ ಕಿವಿಗೊಡಬಾರದು. ಸರ್ಕಾರದ ಮಾರ್ಗಸೂಚಿಗಳನ್ನು ಕಟ್ಟುನಿಟ್ಟಾಗಿ ಪಾಲನೆ ಮಾಡಬೇಕೆಂದು ಮನವಿ ಮಾಡಿದರು.

ಈಗಾಗಲೇ ನಿಗದಿಯಾಗಿರುವಂತೆ ಜ.1ರಿಂದ 10ನೇ ಮತ್ತು ದ್ವಿತೀಯ ಪಿಯುಸಿ ತರಗತಿಗಳು ಆರಂಭವಾಗಲಿವೆ. 6 ಮತ್ತು 9ನೇ ತರಗತಿಗೆ ವಿದ್ಯಾಗಮ ತರಗತಿಗಳು ಕೂಡ ಪ್ರಾರಂಭವಾಗಲಿವೆ. ಇದರಲ್ಲಿ ಯಾವುದೇ ಬದಲಾವಣೆ ಇಲ್ಲ ಎಂದು ಸ್ಪಷ್ಟಪಡಿಸಿದರು.

# ಕಠಿಣ ಕ್ರಮದ ಎಚ್ಚರಿಕೆ:

ಬ್ರಿಟನ್‍ನಿಂದ ಕರ್ನಾಟಕಕ್ಕೆ ಆಗಮಿಸಿ ಕೋವಿಡ್ ಟೆಸ್ಟ್‍ಗೆ ಒಳಗಾಗದೆ ತಲೆಮರೆಸಿಕೊಂಡಿರುವವರು ಎಲ್ಲೆ ಇದ್ದರೂ ತಕ್ಷಣವೇ ಚಿಕಿತ್ಸೆಗೆ ಒಳಪಡಬೇಕು. ನೀವು ಈ ರೀತಿಯಾಗಿ ಮೊಬೈಲ್‍ಗಳನ್ನು ಸ್ವಿಚ್ ಆಫ್ ಮಾಡಿಕೊಂಡು ಕಣ್ಮರೆಯಾದರೆ ಒಬ್ಬರಿಂದ ಒಬ್ಬರಿಗೆ ಸೋಂಕು ಹರಡಬಹುದು. ತಕ್ಷಣವೇ ಪರೀಕ್ಷೆಗೊಳಪಡಿ ಎಂದು ಮನವಿ ಮಾಡಿದರು. ಈಗಾಗಲೇ ಗೃಹ ಇಲಾಖೆ ಅಧಿಕಾರಿಗಳ ಜೊತೆ ನಾನು ಮಾತುಕತೆ ನಡೆಸಿದ್ದೇನೆ. 48 ಗಂಟೆಗಳ ಒಳಗೆ ಪತ್ತೆ ಮಾಡುವುದಾಗಿ ಹೇಳಿದ್ದಾರೆ.

ನಿಮಗೆ ಎಲ್ಲಿ ಬೇಕೊ ಅಲ್ಲಿ ಚಿಕಿತ್ಸೆ ಕೊಡಿಸುತ್ತೇವೆ. ಒಂದು ವೇಳೆ ಯಥಾಸ್ಥಿತಿ ಮುಂದುವರಿಸಿದರೆ ಕಾನೂನು ಕ್ರಮ ಕೈಗೊಳ್ಳುವುದು ಅನಿವಾರ್ಯ ಎಂದು ಸ್ಪಷ್ಟಪಡಿಸಿದರು.ಬ್ರಿಟನ್‍ನಿಂದ ಬಂದ 1614 ಮಂದಿಗೂ ಕೋವಿಡ್ ಟೆಸ್ಟ್‍ಗೊಳಪಡಿಸಲಾಗಿತ್ತು. ಇವರಲ್ಲಿ 26 ಜನರಿಗೆ ಪಾಸಿಟಿವ್ ಕಾಣಿಸಿಕೊಂಡಿದೆ. ಕೇಂದ್ರ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಇಂದು ಬಿಡುಗಡೆ ಮಾಡಿರುವ ವರದಿಯಲ್ಲಿ ಬ್ರಿಟನ್ ಮಾದರಿಯ ಸೋಂಕು ರಾಜ್ಯದ ಮೂವರಿಗೆ ಕಾಣಿಸಿಕೊಂಡಿದೆ ಎಂದು ಮಾಹಿತಿ ನೀಡಿದರು.

26 ಮಂದಿಯನ್ನು ಈಗಾಗಲೇ ಐಸೋಲೇಟ್ ಮಾಡಲಾಗಿದ್ದು, ಅವರಿಗೆ ಚಿಕಿತ್ಸೆ ಮುಂದುವರೆದಿದೆ.ವಿಮಾನದಲ್ಲಿ ಬಂದಿರುವ ಸಹ ಪ್ರಯಾಣಿಕರಾಗಿ ಪ್ರಾಥಮಿಕ ಮತ್ತು ದ್ವಿತೀಯ ಸಂಪರ್ಕದಲ್ಲಿರುವವರನ್ನು ಸಹ ಪತ್ತೆಹಚ್ಚಬೇಕಾಗುತ್ತದೆ. ಪ್ರಯಾಣಿಕರ ವಿವರಗಳನ್ನು ನೀಡಬೇಕೆಂದು ನಾಗರಿಕ ವಿಮಾನಯಾನ ಇಲಾಖೆಗೂ ಮನವಿ ಮಾಡಿದ್ದೇವೆ.

ಸದ್ಯಕ್ಕೆ ಯಾರೊಬ್ಬರೂ ಆತಂಕಪಡುವ ಅಗತ್ಯವಿಲ್ಲ. ಎಲ್ಲವೂ ನಿಯಂತ್ರಣದಲ್ಲಿದ್ದು, ಸೋಂಕು ಹರಡದಂತೆ ಏನು ಕ್ರಮ ಕೈಗೊಳ್ಳಬೇಕೋ ಎಲ್ಲವನ್ನೂ ತೆಗೆದುಕೊಂಡಿದ್ದೇವೆ. ಇಂದು ಅಧಿಕಾರಿಗಳು, ತಜ್ಞರು ಮತ್ತು ಕೋವಿಡ್ ಸಲಹಾ ಸಮಿತಿ ಜತೆ ಮತ್ತೊಮ್ಮೆ ಸಭೆ ನಡೆಸಲಿದ್ದೇವೆ ಎಂದು ಹೇಳಿದರು.

Facebook Comments