ರಾತ್ರಿ ಕಫ್ರ್ಯೂ ಆತುರದ ನಿರ್ಧಾರ ಅಗ್ಗಿರಲಿಲ್ಲ : ಸಚಿವ ಸುಧಾಕರ್ ಮತ್ತೊಮ್ಮೆ ಸ್ಪಷ್ಟನೆ

ಈ ಸುದ್ದಿಯನ್ನು ಶೇರ್ ಮಾಡಿ

ಬೆಂಗಳೂರು,ಡಿ.25- ಬ್ರಿಟನ್‍ನಲ್ಲಿ ಕಾಣಿಸಿಕೊಂಡಿರುವ ರೂಪಾಂತರ ಕೊರೊನಾ ರಾಜ್ಯಕ್ಕೆ ಪ್ರವೇಶ ಮಾಡಿದೆಯೇ ಎಂಬುದರ ಸ್ಪಷ್ಟ ಚಿತ್ರಣ ಎರಡು-ಮೂರು ದಿನಗಳಲ್ಲಿ ಸಿಗಲಿದೆ ಎಂದು ಆರೋಗ್ಯ ಸಚಿವ ಡಾ.ಕೆ. ಸುಧಾಕರ್ ಹೇಳಿದರು.  ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಬ್ರಿಟನ್‍ನಿಂದ ಬಂದಿರುವ 10 ಜನರಿಗೆ ಪಾಸಿಟಿವ್ ಬಂದಿದೆ. ಈ ಎಲ್ಲಾ ಹತ್ತು ಜನರ ಸ್ಯಾಂಪಲ್‍ಗಳನ್ನು ಪರೀಕ್ಷೆಗಾಗಿ ನಿಮ್ಹಾನ್ಸ್ ಕಳುಹಿಸಲಾಗಿದೆ.

ವರದಿ ಬರಲು ಎರಡಮೂರು ದಿನಗಳು ಬೇಕು. ನಂತರ ರೂಪಾಂತರ ವೈರಸ್ ಇದೆಯೇ ಎಂಬುದರ ಸ್ಪಷ್ಟ ಚಿತ್ರಣ ಗೊತ್ತಾಗುತ್ತದೆ ಎಂದು ಸ್ಪಷ್ಟಪಡಿಸಿದರು. ಬ್ರಿಟನ್‍ನಲ್ಲಿ ರೂಪಾಂತರಗೊಂಡ ಕೊರೊನಾ ಸೋಂಕು ಹಬ್ಬುವುದನ್ನು ತಡೆಗಟ್ಟಲು ರಾಜ್ಯದಲ್ಲಿ ಕಫ್ರ್ಯೂ ವಿಧಿಸುವ ಬಗ್ಗೆ ನಾವು ಸಾಕಷ್ಟು ಆಲೋಚಿಸಿಯೇ ತೀರ್ಮಾನ ಮಾಡಿದ್ದೆವು ಹೊರತು ಆತುರವಾಗಿ ತೆಗೆದುಕೊಂಡ ನಿರ್ಧಾರವಲ್ಲ ಎಂದು ಸಚಿವ ಡಾ.ಕೆ.ಸುಧಾಕರ್ ಮತ್ತೊಮ್ಮೆ ಪುನರುಚ್ಚರಿಸಿದ್ದಾರೆ.

ಕೋವಿಡ್ ತಾಂತ್ರಿಕ ಸಲಹಾ ಸಮಿತಿಯ ಶಿಫಾರಸ್ಸು ಹಾಗೂ ಮುಖ್ಯಮಂತ್ರಿ ಯಡಿಯೂರಪ್ಪ ಸೇರಿದಂತೆ ಹಿರಿಯ ಸಚಿವರೊಂದಿಗೆ ಚರ್ಚಿಸಿ ಜನರ ಆರೋಗ್ಯದ ಹಿತದೃಷ್ಟಿಯಿಂದ ಕಫ್ರ್ಯೂ ವಿಧಿಸಲು ತೀರ್ಮಾನಿಸಿದ್ದೆವು ಎಂದು ಹೇಳಿದರು.

ರಾತ್ರೋರಾತ್ರಿ ಇಲ್ಲವೇ ಏಕಾಏಕಿ ತೆಗೆದುಕೊಂಡ ತೀರ್ಮಾನ ಇದಲ್ಲ. ಕಫ್ರ್ಯೂ ವಿಧಿಸಿದ ನಂತರ ಬೇರೆ ಬೇರೆ ಕ್ಷೇತ್ರಗಳ ಮುಖ್ಯಸ್ಥರು, ವ್ಯಾಪಾರಸ್ಥರು ಮತ್ತಿತರರು ಸರ್ಕಾರದ ತೀರ್ಮಾನವನ್ನು ಮರುಪರಿಶೀಲಿಸಬೇಕೆಂದು ಮನವಿ ಮಾಡಿದ್ದರು. ಹಾಗಾಗಿ ವಿಧಿಯಿಲ್ಲದೆ ಕಫ್ರ್ಯೂ ತೀರ್ಮಾನವನ್ನು ಕೈಬಿಡಲಾಯಿತು ಎಂದು ಸಮರ್ಥಿಸಿಕೊಂಡರು.

ಸರ್ಕಾರಕ್ಕೆ ಬುದ್ದಿ ಇರುವುದರಿಂದಲೇ ಆಲೋಚಿಸಿ ತೀರ್ಮಾನ ತೆಗೆದುಕೊಂಡಿದೆ. ಬ್ರಿಟನ್ ಮತ್ತು ಜರ್ಮನಿಯಲ್ಲಿ ಈಗಲೂ ಲಾಕ್‍ಡೌನ್ ಇದೆ. ಹಾಗಾದರೆ ಅಲ್ಲಿನ ಸರ್ಕಾರಕ್ಕೆ ಬುದ್ದಿ ಇಲ್ಲದೆ ಲಾಕ್‍ಡೌನ್ ಜಾರಿ ಮಾಡಿದ್ದಾರಾ ಎಂದು ಪ್ರಶ್ನಿಸಿದರು.  ದಸಾರ, ದೀಪಾವಳಿ ಸೇರಿದಂತೆ ಧಾರ್ಮಿಕ ಹಬ್ಬಗಳನ್ನು ಸರಳವಾಗಿ ಆಚರಣೆ ಮಾಡಿದ್ದೇವೆ. ಸೋಂಕು ಒಬ್ಬರಿಂದ ಒಬ್ಬರಿಗೆ ಹರಡದಂತೆ ಕೆಲವು ಮುಂಜಾಗ್ರತಾ ಕ್ರಮಗಳನ್ನು ತೆಗೆದುಕೊಳ್ಳುವುದು ಅನಿವಾರ್ಯವಾಗುತ್ತದೆ ಎಂದು ಹೇಳಿದರು.

ನಾನು ವೃತ್ತಿಯಲ್ಲಿ ವೈದ್ಯನಾಗಿರುವುದರಿಂದ ಅದರ ಬಗ್ಗೆ ಅಧ್ಯಯನ ಮಾಡುವಷ್ಟು ವ್ಯವಧಾನವಿದೆ. ಜೊತೆಗೆ ತಜ್ಞರು ಕಾಲಕಾಲಕ್ಕೆ ನೀಡುವ ವರದಿಗಳನ್ನು ಪರಿಶೀಲನೆ ಮಾಡುತ್ತೇವೆ. ನಂತರ ಮುಖ್ಯಮಂತ್ರಿ ಹಾಗೂ ಸಂಬಂಧಪಟ್ಟವರೊಂದಿಗೆ ಚರ್ಚಿಸಿ ಯಾವ ತೀರ್ಮಾನವನ್ನು ತೆಗೆದುಕೊಳ್ಳಬೇಕೋ ಅದನ್ನು ತೆಗೆದುಕೊಳ್ಳುತ್ತೇವೆ ಎಂದರು.

ಕೋವಿಡ್ ನಿಯಂತ್ರಣ ಮಾಡುವುದಕ್ಕೆ ಪ್ರತಿಪಕ್ಷಗಳು ಯಾವುದೇ ರೀತಿಯ ಸಹಕಾರವನ್ನು ಕೊಡಲಿಲ್ಲ. ಪ್ರತಿಯೊಂದರಲ್ಲೂ ಕೊಂಕು ನುಡಿಯುವುದು, ತಪ್ಪು ಹುಡುಕುವುದೇ ಅವರ ಕೆಲಸವಾಗಿದೆ ಎಂದು ವಾಗ್ದಾಳಿ ನಡೆಸಿದರು.

ವಾಗ್ದಾಳಿ: ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಹಾಗೂ ಸಂಸದ ಡಿ.ಕೆ.ಸುರೇಶ್ ವಿರುದ್ದವೂ ವಾಗ್ದಾಳಿ ನಡೆಸಿದ ಸುಧಾಕರ್, ನನಗೆ ಇಂಥವರಿಂದ ಪ್ರಮಾಣ ಪತ್ರ ಬೇಕಿಲ್ಲ ಎಂದು ತಿರುಗೇಟು ನೀಡಿದರು. ಡಿ.ಕೆ.ಶಿವಕುಮಾರ್ ಹಾಗೂ ಸಂಸದ ಡಿ.ಕೆ.ಸುರೇಶ್ ಅವರ ರಾಜಕೀಯ ಹಿನ್ನೆಲೆ ಏನೆಂಬುದು ಎಲ್ಲರಿಗೂ ಗೊತ್ತಿದೆ. ಇಂತಹವರಿಂದ ನಾನು ನನ್ನ ಇಲಾಖೆಯ ಬಗ್ಗೆ ಪಾಠ ಹೇಳಿಸಿಕೊಳ್ಳಬೇಕಾದ ಅಗತ್ಯವಿಲ್ಲ ಎಂದು ವಾಗ್ದಾಳಿ ನಡೆಸಿದರು.

ಯಾರೂ ಜೈಲಿಗೆ ಹೋಗಿ ಬೇಲ್ ಮೇಲೆ ಬಂದಿದ್ದಾರೋ ಅಂಥವರು ಇಂದು ನನ್ನ ಬಗ್ಗೆ ಮಾತನಾಡಿದ್ದಾರೆ. ಜೈಲಿಗೆ ಹೋಗಿ ಬೇಲ್ ಮೇಲೆ ಬಂದವರು ಮೊದಲು ತಮ್ಮ ಹಿನ್ನೆಲೆ ಏನೆಂಬುದನ್ನು ಅರಿತು ಮಾತನಾಡಲಿ. ಇವರ ಹಿನ್ನೆಲೆ ಏನೆಂಬುದು ಇಡೀ ದೇಶ ಮತ್ತು ರಾಜ್ಯಕ್ಕೆ ಗೊತ್ತಿದೆ ಎಂದು ಟೀಕಾ ಪ್ರಹಾರ ನಡೆಸಿದರು.

Facebook Comments