ಯಾವುದೇ ಕ್ಷಣದಲ್ಲಿ ಲಸಿಕೆ ಘೋಷಣೆ ಸಾಧ್ಯತೆ, ಸಚಿವ ಸುಧಾಕರ್ ಸುಳಿವು

ಈ ಸುದ್ದಿಯನ್ನು ಶೇರ್ ಮಾಡಿ

ಬೆಂಗಳೂರು,ಡಿ.28- ವಿಶ್ವವನ್ನೇ ತಲ್ಲಣಗೊಳಿಸಿರುವ ಕೊರೊನಾ ಸೋಂಕಿನ ಮಹಾಮಾರಿಗೆ ಹೊಸ ವರ್ಷಾಚರಣೆ ಸಂದರ್ಭದಲ್ಲಿ ದೇಶದಲ್ಲಿ ಲಸಿಕೆಯನ್ನು ಪ್ರಧಾನಿಯವರು ಘೋಷಣೆ ಮಾಡುವ ಸಾಧ್ಯತೆ ಇದೆ ಎಂದು ಸಚಿವ ಸುಧಾಕರ್ ಸುಳಿವು ನೀಡಿದ್ದಾರೆ.  2020ರ ಕತ್ತಲೆ ಕಳೆದು 2021ರ ವೇಳೆಗೆ ದೇಶದ ಜನತೆಯಲ್ಲಿ ಹೊಸ ಬೆಳಕು ಮೂಡಲಿದೆ. ಪ್ರಧಾನಿ ನರೇಂದ್ರ ಮೋದಿ ಅವರು ಕೋವಿಡ್ ಸೋಂಕಿಗೆ ಲಭ್ಯವಾಗಲಿರುವ ಲಸಿಕೆಯನ್ನು ಘೋಷಣೆ ಮಾಡುವ ನಿರೀಕ್ಷೆಯಿದೆ ಎಂದು ಹೇಳಿದರು.

ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಈ ವರ್ಷ ಕೋವಿಡ್-19ನಿಂದ ದೇಶದ ಜನತೆಯು ಅನೇಕ ಸಂಕಷ್ಟಗಳನ್ನು ಎದುರಿಸುವಂತಾಯಿತು. ಹೊಸ ವರ್ಷ ಎಲ್ಲರಿಗೂ ಹೊಸ ಬೆಳಕನ್ನು ನೀಡಲಿದೆ. ಮೋದಿ ಅವರಂತಹ ದಿಟ್ಟ ನಾಯಕತ್ವದಲ್ಲಿ ದೇಶವು ಎಲ್ಲ ಕ್ಷೇತ್ರಗಳಲ್ಲಿ ಮುನ್ನುಗ್ಗಲಿದೆ. ಕೋವಿಡ್-19ಗೆ ಲಸಿಕೆ ಸಿಗುವ ಸಂಭವವಿದೆ ಎಂದರು.

ಇಂದಿನಿಂದ ದೇಶದ ನಾಲ್ಕು ರಾಜ್ಯಗಳಲ್ಲಿ ಕೋವಿಡ್ ಡ್ರೈರನ್ ನಡೆಸಲಾಗುತ್ತದೆ. ಈಗಾಗಲೇ 3ನೇ ಹಂತದ ಪರೀಕ್ಷಾ ಪ್ರಯೋಗವು ಆರಂಭವಾಗಿದೆ. ನಮಗೆ ಇದರಿಂದ ಉತ್ತಮವಾದ ಫಲಿತಾಂಶ ಸಿಕ್ಕಿದೆ. ಶೇ.95ರಿಂದ 96ರಷ್ಟು ಫಲಿತಾಂಶ ಬಂದಿದೆ ಎಂದು ಹೇಳಿದರು.

ಲಸಿಕೆ ತೆಗೆದುಕೊಂಡವರಿಗೆ ಯಾವುದೇ ರೀತಿಯ ಅಡ್ಡ ಪರಿಣಾಮ ಬೀರಿಲ್ಲ. ಹಂತ ಹಂತವಾಗಿ ಪ್ರಯೋಗ ನಡೆಯುತ್ತಿರುವುದರಿಂದ ಆತುರವಾಗಿ ಘೋಷಣೆ ಮಾಡಲು ಸಾಧ್ಯವಿಲ್ಲ. ಕೇಂದ್ರ ಸರ್ಕಾರವೇ ಯಾವಾಗ ಘೋಷಣೆ ಮಾಡಬೇಕೆಂಬುದನ್ನು ತೀರ್ಮಾನಿಸುತ್ತದೆ ಎಂದು ತಿಳಿಸಿದರು.

# ಸಹಕಾರ ನೀಡಿ:
ಬ್ರಿಟನ್ ಸೇರಿದಂತೆ ವಿದೇಶದಿಂದ ಕರ್ನಾಟಕಕ್ಕೆ ಆಗಮಿಸಿರುವವರು ದಯವಿಟ್ಟು ಚಿಕಿತ್ಸೆಗೆ ಸಹಕಾರ ನೀಡಬೇಕು. ಒಬ್ಬರಿಂದ ಮತ್ತೊಬ್ಬರಿಗೆ ಸೋಂಕು ಹರಡುವುದನ್ನು ತಡೆಗಟ್ಟಲು ನಿಮ್ಮ ಸಹಕಾರ ಅಗತ್ಯ ಎಂದು ಮನವಿ ಮಾಡಿದರು.  ಬ್ರಿಟನ್‍ನಿಂದ ಈವರೆಗೆ ಕರ್ನಾಟಕಕ್ಕೆ 1614 ಮಂದಿ ಆಗಮಿಸಿದ್ದಾರೆ. ಇದರಲ್ಲಿ 26 ಮಂದಿಗೆ ಪಾಸಿಟಿವ್ ಬಂದಿದೆ. ಇವರನ್ನು ಸದ್ಯ ಆಸ್ಪತ್ರೆಗೆ ದಾಖಲಿಸಲಾಗಿದೆ. ಎಲ್ಲರೂ ಆರೋಗ್ಯದಿಂದಿದ್ದಾರೆ ಎಂದು ಸ್ಪಷ್ಟಪಡಿಸಿದರು.

ವಿದೇಶದಿಂದ ಬಂದ ಕೆಲವರು ಈವರೆಗೂ ಎಲ್ಲಿದ್ದಾರೆ ಎಂಬುದು ಪತ್ತೆಯಾಗಿಲ್ಲ. ಇವರೆಲ್ಲರೂ ವಿದ್ಯಾವಂತರಾಗಿದ್ದಾರೆ. ಆದರೆ ಮೊಬೈಲ್‍ಗಳನ್ನು ಸ್ವಿಚ್ ಆಫ್ ಮಾಡಿಕೊಂಡು ತಲೆಮರೆಸಿಕೊಂಡಿದ್ದಾರೆ. ಈ ರೀತಿ ಮಾಡುವುದು ಕೋವಿಡ್ ನಿಯಮಾವಳಿ ಪ್ರಕಾರ ಅಪರಾಧವಾಗುತ್ತದೆ. ದಯವಿಟ್ಟು ಪರೀಕ್ಷೆಗೆ ಒಳಗಾಗಬೇಕೆಂದು ಸುಧಾಕರ್ ಮನವಿ ಮಾಡಿದರು.
ಈಗಾಗಲೇ ಸಾಮಾಜಿಕ ಜಾಲತಾಣ, ಮಾಧ್ಯಮಗಳು ಸೇರಿದಂತೆ ಮತ್ತಿತರ ಕಡೆಗಳಿಂದಲೂ ನಾವು ತಲೆಮರೆಸಿಕೊಂಡಿರುವವರ ಪತ್ತೆಗೆ ಶೋಧ ಕಾರ್ಯ ಆರಂಭಿಸಿದ್ದೇವೆ.

ಪೊಲೀಸರು, ಬಿಬಿಎಂಪಿ, ಕೋವಿಡ್ ವಾರಿಯರ್ಸ್ ಮೂಲಕವೂ ಕಾರ್ಯಚರಣೆ ನಡೆಯುತ್ತಿದೆ. ತಕ್ಷಣವೇ ಎಲ್ಲೆ ಇದ್ದರೂ ಪರೀಕ್ಷೆಗೊಳಪಡಬೇಕು. ತಲೆಮರೆಸಿಕೊಂಡಿರುವವರನ್ನು ಯಾವ ರೀತಿ ಪತ್ತೆಹಚ್ಚಬೇಕು ಎಂಬುದರ ಕುರಿತಂತೆ ಗೃಹ ಸಚಿವರ ಜೊತೆ ಚರ್ಚೆ ಮಾಡಲಾಗುವುದು ಎಂದರು.

26 ಮಂದಿಯಲ್ಲಿ ಪಾಸಿಟಿವ್ ಬಂದಿರುವುದನ್ನು ನಾವು ನಿಮ್ಹಾನ್ಸ್‍ನಿಂದ ಐಸಿಎಂಆರ್‍ಗೆ ಕಳುಹಿಸಿಕೊಟ್ಟಿದ್ದೇವೆ. ಇದು ದೃಢವಾಗಲು 48 ಗಂಟೆ ಬೇಕಾಗುತ್ತದೆ. ಬ್ರಿಟನ್‍ನಿಂದ ಬಂದವರಲ್ಲಿ ಪಾಸಿಟಿವ್ ಕಂಡುಬಂದಿದ್ದರೆ ಅದನ್ನು ಕೇಂದ್ರ ಸರ್ಕಾರವೇ ಘೋಷಣೆ ಮಾಡಲಿದೆ. ಯಾವುದೇ ರಾಜ್ಯಗಳು ಘೋಷಣೆ ಮಾಡಬಾರದೆಂಬ ಸೂಚನೆ ಕೊಟ್ಟಿದೆ ಎಂದು ತಿಳಿಸಿದರು.

ಶಾಲಾಕಾಲೇಜುಗಳನ್ನು ತೆರೆಯುವ ಬಗ್ಗೆ ಮತ್ತೊಮ್ಮೆ ನಾವು, ಸಚಿವ ಸುರೇಶ್‍ಕುಮಾರ್ ಅವರೊಂದಿಗೆ ಚರ್ಚೆ ನಡೆಸಲಿದ್ದೇವೆ. ರಾಜ್ಯ ಸುರಕ್ಷತಾ ವಲಯದಲ್ಲಿದೆ. ಸದ್ಯ ಇಲ್ಲಿ ಆತಂಕಪಡುವ ಯಾವುದೇ ಬೆಳವಣಿಗೆಗಳು ಇಲ್ಲ ಎಂದು ಸ್ಪಷ್ಟಪಡಿಸಿದರು.

ಈ ಹಿಂದೆ ತೆಗೆದುಕೊಂಡ ನಿರ್ಧಾರದಲ್ಲಿ ಹೆಚ್ಚಿನ ಬದಲಾವಣೆಯಾಗುವ ಸಾಧ್ಯತೆಗಳಿಲ್ಲ. ನಮ್ಮಲ್ಲಿ ದಿನದಿಂದ ದಿನಕ್ಕೆ ಕೊರೊನಾ ಪಾಸಿಟಿವ್ ಪ್ರಕರಣಗಳು ಹಾಗೂ ಸಾವಿನ ಸಂಖ್ಯೆ ಇಳಿಕೆಯಾಗುತ್ತಿದೆ. ಮತ್ತೊಂದು ಸಭೆ ನಡೆಸಿ ಸೂಕ್ತ ನಿರ್ಧಾರ ಪ್ರಕಟಿಸಲಿದ್ದೇವೆ ಎಂದು ಹೇಳಿದರು. ಹೊಸ ವರ್ಷಾಚರಣೆಯನ್ನು ನಿರ್ಬಂಧಿಸುವ ಕುರಿತಂತೆ ಗೃಹ ಸಚಿವರ ಜೊತೆ ಚರ್ಚೆ ಮಾಡಿ ಇಂದು ಹೊಸ ಮಾರ್ಗಸೂಚಿಯನ್ನು ಬಿಡುಗಡೆ ಮಾಡುವುದಾಗಿ ಸುಧಾಕರ್ ತಿಳಿಸಿದರು.

 

Facebook Comments