BIG NEWS : ಸುಧಾಕರ್ ಒತ್ತಡಕ್ಕೆ ಮಣಿದ ಸಿಎಂ, ಒಂದೇ ವಾರದಲ್ಲಿ 3 ಬಾರಿ ಖಾತೆ ಬದಲು..!

ಈ ಸುದ್ದಿಯನ್ನು ಶೇರ್ ಮಾಡಿ

ಬೆಂಗಳೂರು,ಜ.25-ಕೊನೆಗೂ ಮುನಿಸಿಕೊಂಡಿದ್ದ ಕೆಲವು ಸಚಿವರ ಅಸಮಾಧಾನವನ್ನು ಹೋಗಲಾಡಿಸುವ ನಿಟ್ಟಿನಲ್ಲಿ ಮತ್ತೆ ಖಾತೆಗಳನ್ನು ಬದಲಾವಣೆ ಮಾಡಲಾಗಿದೆ. ಸಚಿವ ಡಾ.ಕೆ.ಸುಧಾಕರ್ ಒತ್ತಡಕ್ಕೆ ಮಣಿದು ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಖಾತೆಗೆ ಜೊತೆಗೆ ವೈದ್ಯಕೀಯ ಖಾತೆಯನ್ನು ಮತ್ತೆ ಅವರಿಗೇ ನೀಡಿದ್ದಾರೆ.

ಜೊತೆಗೆ ವೈದ್ಯಕೀಯ ಶಿಕ್ಷಣ ಸಚಿವರಾಗಿದ್ದ ಜೆ.ಸಿ.ಮಾಧುಸ್ವಾಮಿಗೆ ಈಗ ಪ್ರವಾಸೋದ್ಯಮ ಖಾತೆಯನ್ನು ನೀಡಲಾಗಿದೆ.  ಕಳೆದ ವಾರ ನೂತನ ಸಚಿವರನ್ನು ಖಾತೆ ಹಂಚಿಕೆ ಮಾಡುವ ವೇಳೆ ವೈಜ್ಞಾನಿಕ ಶಿಕ್ಷಣ ಖಾತೆಯನ್ನು ಡಾ.ಕೆ.ಸುಧಾಕರ್ ಅವರಿಂದ ಹಿಂಪಡೆದು ಜೆ.ಸಿ.ಮಾಧುಸ್ವಾಮಿ ಅವರಿಗೆ ನೀಡಲಾಗಿತ್ತು. ಈ ಬೆಳವಣಿಗೆಯಿಂದ ಸುಧಾಕರ್ ಮುನಿಸಿಕೊಂಡು ಸಚಿವ ಸಂಪುಟಕ್ಕೆ ಗೈರು ಹಾಜರಾಗಿದ್ದಲ್ಲದೆ ಕೆಲವು ಸಚಿವರ ಜೊತೆ ಪ್ರತ್ಯೇಕವಾಗಿ ಸಭೆ ನಡೆಸಿದ್ದರು.

ಪ್ರಸ್ತುತ ರಾಜ್ಯದಲ್ಲಿ ಕೊರೊನಾ ನಿರ್ವಹಣೆ ಮಾಡಬೇಕಾದ ಅಗತ್ಯವಿರುವುದರಿಂದ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಹಾಗೂ ವೈದ್ಯಕೀಯ ಶಿಕ್ಷಣ ಖಾತೆಯನ್ನು ಒಬ್ಬರಿಗೇ ನೀಡಬೇಕೆಂದು ಮನವಿ ಮಾಡಿದ್ದರು.  ಇದಕ್ಕೆ ಬಿಜೆಪಿಯಲ್ಲಿ ಅಪಸ್ವರ ಕೇಳಿಬಂದ ಹಿನ್ನೆಲೆಯಲ್ಲಿ ಸಿಎಂ ಯಡಿಯೂರಪ್ಪನವರು ವೈದ್ಯಕೀಯ ಖಾತೆಯನ್ನು ಹಿಂಪಡೆದು ಒಂದೇ ಖಾತೆಗೆ ಸೀಮಿತಗೊಳಿಸಿದ್ದರು. ಇದು ಅಸಮಾಧಾನಕ್ಕೆ ಕಾರಣವಾಗಿತ್ತು.

ಈ ವೇಳೆ ಸಣ್ಣ ನೀರಾವರಿ ಖಾತೆಯನ್ನು ಹಿಂಪಡೆದು ವೈದ್ಯಕೀಯ ಖಾತೆ ನೀಡಿದ್ದಕ್ಕೆ ಮಾಧುಸ್ವಾಮಿ ಕೂಡ ಕೋಪಗೊಂಡಿದ್ದರು.  ಇದೀಗ ಅವರಿಗೆ ಆನಂದ್ ಸಿಂಗ್ ಬಳಿ ಇದ್ದ ಪ್ರವಾಸೋದ್ಯಮ ಖಾತೆಯನ್ನು ನೀಡಲಾಗಿದ್ದು, ವೈದ್ಯಕೀಯ ಖಾತೆಯನ್ನು ಸುಧಾಕರ್‍ಗೆ ನೀಡಲಾಗಿದೆ. ಆನಂದ್ ಸಿಂಗ್ ಅವರ ಬಳಿ ಇದ್ದ ಪ್ರವಾಸೋದ್ಯಮವನ್ನು ಹಿಂಪಡೆಯಲಾಗಿದ್ದು, ಅವರಿಗೆ ಸದ್ಯ ಪರಿಸರ ಖಾತೆಗೆ ಸೀಮಿತಗೊಳಿಸಲಾಗಿದೆ. ಸಚಿವರಿಗೆ ನೀಡಲಾಗಿದ್ದ ಖಾತೆಗಳನ್ನು ಒಂದೇ ವಾರದಲ್ಲೆ ಮೂರು ಬಾರಿ ಬದಲಾಯಿಸಿರುವುದು ಇದೇ ಮೊದಲು.

Facebook Comments