“ವೈದ್ಯಕೀಯ ಶಿಕ್ಷಣ ಮತ್ತು ಆರೋಗ್ಯ ಖಾತೆಗಳು ಒಬ್ಬರ ಬಳಿಯೇ ಇರಬೇಕು”

ಈ ಸುದ್ದಿಯನ್ನು ಶೇರ್ ಮಾಡಿ

ಬೆಂಗಳೂರು,ಜ.25- ಇಲಾಖೆಯ ಹಿತದೃಷ್ಟಿ ಮತ್ತು ಉತ್ತಮವಾಗಿ ಕೆಲಸ ಮಾಡುವ ಸದುದ್ದೇಶದಿಂದ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಹಾಗೂ ವೈದ್ಯಕೀಯ ಶಿಕ್ಷಣ ಖಾತೆಗಳು ಒಬ್ಬ ಸಚಿವನ ಬಳಿಯೇ ಇರಬೇಕೆಂದು ಸಚಿವ ಡಾ.ಕೆ.ಸುಧಾಕರ್ ಹೇಳಿದರು.  ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಎರಡು ಖಾತೆ ಒಬ್ಬರ ಬಳಿಯೇ ಇರಬೇಕು.ಯಾರ ಬಳಿಯಲ್ಲಿ ಇದ್ದರೂ, ಎರಡು ಖಾತೆ ಜೊತೆಗೆ ಇರಬೇಕು. ಒಂದು ವೇಳೆ ನನಗೆ ಪುನಃ ವೈದ್ಯಕೀಯ ಶಿಕ್ಷಣ ಖಾತೆ ಕೊಟ್ಟಿದ್ದರೆ ಸಿಎಂಗೆ ಅಭಿನಂದನೆ ಸಲ್ಲಿಸುತ್ತೇನೆ ಎಂದರು.

ಜಿಲ್ಲಾ ಮಟ್ಟದಲ್ಲಿ ಎರಡು ಇಲಾಖೆ ಅಧಿಕಾರ ಹಂಚಿಕೆಯಾದರೆ ಕಷ್ಟ. ಯಾರ ಹತ್ತಿರವಾದರೂ ಆರೋಗ್ಯ ಮತ್ತು ವೈದ್ಯಕೀಯ ಶಿಕ್ಷಣ ಜೊತೆಗೆ ಇದ್ದರೆ ನಿರ್ವಹಣೆ ಸುಲಭ ಆಗಲಿದೆ ಎಂದು ಹೇಳಿದರು.  ನಮ್ಮ ಮುಂದಿರುವ ಸವಾಲು ಲಸಿಕೆ ಕೊಡುವುದಾಗಿದೆ. ಸಿಎಂ ಮಾರ್ಗಸೂಚಿಯಂತೆ ಸಲಹೆಯ ಪ್ರಕಾರ ಕೆಲಸ ಮಾಡುತ್ತೇನೆ. ಎರಡು ಇಲಾಖೆಯು ಶಾಶ್ವತವಾಗಿ ಇರಬೇಕೆಂದು ಅವರಲ್ಲಿ ಕೋರುವುದಾಗಿ ತಿಳಿಸಿದರು.

ಯಾವ ಸರ್ಕಾರ ಇದ್ದರೂ ಆರೋಗ್ಯ ಮತ್ತು ವೈದ್ಯಕೀಯ ಶಿಕ್ಷಣ ಜೊತೆಗೆ ಇರಬೇಕು. ಖಾತೆ ತೆಗೆದುಕೊಳ್ಳುವುದು ಮುಖ್ಯ ಅಲ್ಲ. ಕೋವಿಡ್ ಲಸಿಕೆ ನೀಡುತ್ತಿರುವ ಹಿನ್ನೆಲೆಯಲ್ಲಿ ಇದು ಅನಿವಾರ್ಯ ಎಂದು ಅಭಿಪ್ರಾಯಪಟ್ಟರು.

ನನಗೆ ಮುಖ್ಯಮಂತ್ರಿಗಳ ಕಚೇರಿಯಿಂದ ಮಾಹಿತಿ ಬಂದಿದೆ. ಪುನಃ ವೈದ್ಯಕೀಯ ಶಿಕ್ಷಣ ಖಾತೆಯನ್ನು ನೀಡಲಾಗುತ್ತದೆ ಎಂದು ಹೇಳಿದ್ದಾರೆ. ಇದರಿಂದ ನನಗೆ ಖುಷಿಯಾಗಿದೆ ಹಾಗೂ ಇನ್ನಷ್ಟು ಕೆಲಸ ಮಾಡುವ ಹುಮ್ಮಸ್ಸು ಬಂದಿದೆ ಎಂದರು.

ಸಂಪುಟಕ್ಕೆ ಹೊಸದಾಗಿ 7 ಮಂದಿ ಸಚಿವರು ಸೇರ್ಪಡೆಯಾಗಿದ್ದಾರೆ. ಹೀಗಾಗಿ ಸಿಎಂ ಮೇಲೆ ಬಹಳ ಒತ್ತಡ ಇರುತ್ತದೆ. ಅದರಲ್ಲೂ ಖಾತೆ ಹಂಚಿಕೆ ವಿಚಾರದಲ್ಲಿ ಒತ್ತಡ ಸಹಜವಾಗಿ ಇದ್ದೇ ಇರುತ್ತದೆ ಎಂದು ಹೇಳಿದರು.

Facebook Comments