ಸಾವಿನ ಮನೆಯಲ್ಲೂ ರಾಜಕೀಯ ಮಾಡುವುದು ಸರಿಯಲ್ಲ : ಸುಧಾಕರ್

ಈ ಸುದ್ದಿಯನ್ನು ಶೇರ್ ಮಾಡಿ

ಬೆಂಗಳೂರು, ಫೆ.23- ನಿಯಮ ಬಾಹಿರವಾಗಿ ಜಿಲಿಟಿನ್ ಸಂಗ್ರಹಣೆ ಮಾಡುತ್ತಿದ್ದವರ ವಿರುದ್ದ ಅಧಿಕಾರಿಗಳು ರೈಡ್ ಮಾಡಿದ ಸಂದರ್ಭದಲ್ಲಿ ಅದನ್ನು ಬೇರೆಡೆ ಸಾಗಿಸುವಾಗ ಹಿರೇನಾಗವಲ್ಲಿ ಬಳಿ ದುರಂತ ಸಂಭವಿಸಿದೆ ಎಂದು ಆರೋಗ್ಯ ಮತ್ತು ವೈದ್ಯಕೀಯ ಶಿಕ್ಷಣ ಸಚಿವ ಡಾ.ಕೆ.ಸುಧಾಕರ್ ತಿಳಿಸಿದ್ದಾರೆ. ಸಾವಿನ ಮನೆಯಲ್ಲೂ ತಮ್ಮ ರಾಜಕೀಯ ಬೇಯಿಸಿಕೊಳ್ಳಲು ಮತ್ತು ಇನ್ನೊಬ್ಬರ ತೇಜೋವಧೆ ಮಾಡಲು ಯತ್ನಿಸುತ್ತಿರುವ ಕಾಂಗ್ರೆಸ್‍ನವರಿಗೆ ನಾಚಿಕೆಯಾಗಬೇಕು.

ಈ ಘಟನೆ ಹಿಂದೆ ಯಾರೇ ಇರಲಿ ಅವರ ವಿರುದ್ಧ ನಿಷ್ಪಕ್ಷಪಾತ ಕ್ರಮ ಕೈಗೊಳ್ಳುವುದು ನಿಶ್ಚಿತ ಎಂದಿದ್ದಾರೆ. ಈ ಸಂಬಂಧ ಟ್ವೀಟ್ ಮಾಡಿರುವ ಅವರು, ಜವಾಬ್ದಾರಿ ಯುತ ಸ್ಥಾನದಲ್ಲಿರುವ ನಾಯಕರು ವಾಸ್ತವಾಂಶ ಅರಿಯದೆ ಸಾವಿನ ಮನೆಯಲ್ಲೂ ರಾಜಕೀಯ ಮಾಡುವುದು ಶೋಭೆ ತರುವುದಿಲ್ಲ. ಅಕ್ರಮ ಗಣಿಗಾರಿಕೆ ಅಥವಾ ಇನ್ಯಾವುದೇ ರೀತಿಯ ಕಾನೂನು ಬಾಹಿರ ಚಟುವಟಿಕೆಗಳಿಗೆ ಎಂದಿಗೂ ಬೆಂಬಲ ನೀಡಿಲ್ಲ. ಮುಂದೆಯೂ ನೀಡುವುದಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ.

ಜಿಲ್ಲಾ ಉಸ್ತುವಾರಿ ಸಚಿವರಾಗಿ ಮೃತಪಟ್ಟ ಕುಟುಂಬಗಳಿಗೆ ಪರಿಹಾರ ದೊರಕಿಸುವುದು ತಮ್ಮ ಕರ್ತವ್ಯವಾಗಿದ್ದು, ಆದಷ್ಟು ಬೇಗ ಈ ಕೆಲಸ ಮಾಡುವುದಾಗಿ ಹೇಳಿದ್ದಾರೆ. ಹಿರೇನಾಗವಲ್ಲಿ ಗ್ರಾಮದ ಬಳಿ ಜಿಲಿಟಿನ್ ಸ್ಫೋಟ ಸಂಭವಿಸಿದ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿದ್ದು, ಇದು ಅತ್ಯಂತ ವಿಷಾದಕರ ಘಟನೆಯಾಗಿದೆ. ಕಾನೂನು ಉಲ್ಲಂಘಿಸಿ ಅಕ್ರಮ ಚಟುವಟಿಕೆಗಳಲ್ಲಿ ತೊಡಗಿರುವವರ ವಿರುದ್ಧ ತನಿಖೆ ನಡೆಸಿ ಕಠಿಣ ಕ್ರಮ ಕೈಗೊಳ್ಳಲು ಅಧಿಕಾರಿಗಳಿಗೆ ಸೂಚಿಸಲಾಗಿದೆ.

ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಮುಖ್ಯಮಂತ್ರಿ ಅವರೊಂದಿಗೂ ದೂರವಾಣಿ ಮೂಲಕ ಮಾತನಾಡಿದ್ದೇನೆ. ಘಟನೆ ಸಂಬಂಧ ಪೊಲೀಸ್ ಅಧಿಕಾರಿಗಳು ಇಬ್ಬರು ವ್ಯಕ್ತಿಗಳನ್ನು ಬಂಧಿಸಿದ್ದಾರೆ ಎಂದು ತಿಳಿಸಿದ್ದಾರೆ.

Facebook Comments