ಕೊರೊನಾ ಹರಡುವುದನ್ನು ತಡೆಯಲು ಮತ್ತಷ್ಟು ಬಿಗಿ ಕ್ರಮ : ಸಚಿವ ಸುಧಾಕರ್

ಈ ಸುದ್ದಿಯನ್ನು ಶೇರ್ ಮಾಡಿ

ಬೆಂಗಳೂರು, ಏ.12- ಕೊರೊನಾ ನಿಯಂತ್ರಣಕ್ಕೆ ರಾಜ್ಯ ಸರ್ಕಾರ ನಿಗದಿಪಡಿಸಿ ರುವ ಕೋವಿಡ್ ಕಫ್ರ್ಯೂ ಸಮಯ ವನ್ನು ಈಗಿನ ಸಂದರ್ಭದಲ್ಲಿ ಬದಲಾವಣೆ ಮಾಡಲು ಸಾದ್ಯವೇ ಇಲ್ಲ ಎಂದು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವ ಕೆ.ಸುಧಾಕರ್ ಹೋಟೆಲ್ ಮಾಲೀಕರ ಹಾಗೂ ಉಪಹಾರ ಮಂದಿರ ಸಂಘಕ್ಕೆ ಸ್ಪಷ್ಟಪಡಿಸಿದ್ದಾರೆ. ತಮಿಳುನಾಡು ಮಾದರಿಯಲ್ಲಿ ಕೊರೊನಾ ಕಫ್ರ್ಯೂ ಸಮಯವನ್ನು ರಾತ್ರಿ 10ರ ಬದಲಿಗೆ 11 ಗಂಟೆಯಿಂದ ಮುಂಜಾನೆ 5ರವರೆಗೆ ವಿಧಿಸಬೇಕೆಂದು ಹೋಟೆಲ್ ಮಾಲೀಕರ ಸಂಘ ಸಚಿವರಲ್ಲಿ ಮನವಿ ಮಾಡಿತ್ತು.

ಆದರೆ ಇದನ್ನು ತಳ್ಳಿಹಾಕಿರುವ ಸುಧಾಕರ್, ಈಗಿನ ಪರಿಸ್ಥಿತಿಯಲ್ಲಿ ನಾವು ಕೊರೊನಾ ಕಫ್ರ್ಯೂ ಸಮಯವನ್ನು ಬದಲಾವಣೆ ಮಾಡಲು ಸಾಧ್ಯವೇ ಇಲ್ಲ. ರಾಜ್ಯದಲ್ಲಿ ಕೊರೊನಾ ಅಲೆ ಮಿತಿ ಮೀತಿ ಹೋಗುತ್ತಿದ್ದು, ಅಪಾಯದ ಮಟ್ಟಕ್ಕೆ ಬಂದಿದೆ ಎಂದು ಮನವಿ ಮಾಡಿದರು. ಸಾರ್ವಜನಿಕರ ಹಿತದೃಷ್ಟಿಯಿಂದ ನಾವು ಈ ತೀರ್ಮಾನವನ್ನು ತೆಗೆದುಕೊಂಡಿದ್ದೇವೆ. ದಯವಿಟ್ಟು ಹೋಟೆಲ್ ಮಾಲೀಕರು ಇದಕ್ಕೆ ಸಹಕಾರ ಕೊಡಬೇಕು. ನಾವೇನು ಲಾಕ್‍ಡೌನ್ ಮಾಡಿ ಎಂದು ಹೇಳಿಲ್ಲ. 10 ಗಂಟೆ ನಂತರ ಹೋಟೆಲ್‍ಗಳನ್ನು ಮುಚ್ಚಬೇಕೆಂದು ಸೂಚಿಸಲಾಗಿದೆ. ನೀವೆ ಸಹಕಾರ ಕೊಡದಿದ್ದರೆ ಹೇಗೆ ಎಂದು ಸುಧಾಕರ್ ಪ್ರಶ್ನಿಸಿದರು.

ರಾಜಧಾನಿ ಬೆಂಗಳೂರಿನಲ್ಲಿ ಕೋವಿಡ್ -19 ಸೋಂಕಿನ ಪ್ರಕರಣ ಏರುತ್ತಲೇ ಇದೆ. ಇದನ್ನು ನಿಯಂತ್ರಿಸಬೇಕಾದರೆ ಕೆಲವು ಬಿಗಿಯಾದ ಕ್ರಮಗಳನ್ನು ಕೈಗೊಳ್ಳುವುದು ಅನಿವಾರ್ಯವಾಗುತ್ತದೆ ಎಂದರು. ಬಳಿಕ ಮಾತನಾಡಿದ ರಾಜ್ಯ ಹೋಟೆಲ್ ಉಪಹಾರ ಮಾಲೀಕರ ಸಂಘದ ಅಧ್ಯಕ್ಷ ಚಂದ್ರಶೇಖರ್ ಹೆಬ್ಬಾರ್, ತಮಿಳುನಾಡು ಮಾದರಿಯನ್ನು ಅನುಸರಿಸಿ ಹೋಟೆಲ್ ಉದ್ಯಮವನ್ನು ರಕ್ಷಣೆ ಮಾಡಬೇಕೆಂದು ಸಚಿವರಿಗೆ ಮನವಿ ಮಾಡಿದೆವು.

ತಮಿಳುನಾಡಿನಲ್ಲಿ ಕೊರೊನಾ ಕಫ್ರ್ಯೂ ಜಾರಿ ಇದ್ದರೂ ಬೆಳಗಿನ ಜಾವ 5 ಗಂಟೆವರೆಗೂ ಊಟ, ತಿಂಡಿ ಪಾರ್ಸೆಲ್‍ಗೆ ಅಲ್ಲಿನ ಸರ್ಕಾರ ಅವಕಾಶ ಕೊಟ್ಟಿದೆ. ಇದೇ ಮಾದರಿಯನ್ನು ನಮ್ಮಲ್ಲೂ ಅನುಸರಿಸಬೇಕೆಂದು ಒತ್ತಾಯಿಸಿದ್ದೇವೆ ಎಂದು ಹೇಳಿದರು. ನಮ್ಮಲ್ಲಿ ರಾತ್ರಿ 10 ಗಂಟೆಗೆ ಹೋಟೆಲ್‍ಗಳನ್ನು ಬಂದ್ ಮಾಡುವುದರಿಂದ ನಮಗೆ ವ್ಯಾಪಾರ, ವಹಿವಾಟು ನಡೆಸಲು ನಮಗೆ ಅನಾನುಕೂಲವಾಗಿದೆ. ನಾವು ಕೇಳಿರುವುದು 1 ಗಂಟೆ ಹೆಚ್ಚಿಗೆ ಅವಕಾಶ ಮಾಡಿಕೊಡಿ ಎಂದು. ನಗರದ ಒಳಗಡೆ ಕೆಲವರು ತಡವಾಗಿ ಬರುತ್ತಾರೆ. ಅವರು ಪಾರ್ಸೆಲ್ ಕೇಳುವುದೇ ರಾತ್ರಿ 11ರ ನಂತರ. ನಮ್ಮ ಉದ್ಯಮಕ್ಕೂ ಕೂಡ ಹೊರೆಯಾಗದಂತೆ ಸರ್ಕಾರ ನಿರ್ಧಾರ ಕೈಗೊಳ್ಳಬೇಕೆಂದು ಮನವಿ ಮಾಡಿದರು.

ಹೋಟೆಲ್ ಉದ್ಯಮಕ್ಕೆ ಅನುಕೂಲಕರ ವಾದ ನಿಯಮವನ್ನು ಜಾರಿ ಮಾಡಿ ಎಂದು ಮನವಿ ಮಾಡಿದ್ದೆವು. ಈಗಿನ ಮಾರ್ಗ ಸೂಚಿಯಲ್ಲಿ ಯಾವುದೇ ಬದಲಾವಣೆ ಇಲ್ಲ ಎಂದು ಸಚಿವರು ಹೇಳಿದ್ದಾರೆಂದು ಬೇಸರ ವ್ಯಕ್ತಪಡಿಸಿದರು. ಕಳೆದ ವರ್ಷವೇ ಲಾಕ್‍ಡೌನ್ ಮಾಡಿದ್ದ ರಿಂದ ಉದ್ಯಮ ಚೇತರಿಸಿಕೊಳ್ಳಲಾಗದಂತಹ ದುಸ್ಥಿತಿಯಲ್ಲಿದೆ. ಹೋಟೆಲ್‍ಗೆ ಗ್ರಾಹಕರೇ ಸರಿಯಾಗಿ ಬರುತ್ತಿಲ್ಲ. ಮತ್ತೆ ಲಾಕ್‍ಡೌನ್ ಮಾಡಿದರೆ ನಾವು ಶಾಶ್ವತವಾಗಿ ಬೀಗ ಹಾಕಬೇಕಾಗುತ್ತದೆ. ಈ ಎಲ್ಲ ಸಮಸ್ಯೆಗಳನ್ನು ಸಚಿವರಿಗೆ ಮನವರಿಕೆ ಮಾಡಿದ್ದೇವೆ. ಸರ್ಕಾರದ ಮುಂದೆ ಲಾಕ್‍ಡೌನ್ ಜಾರಿ ಮಾಡುವ ಪ್ರಸ್ತಾವನೆ ಇಲ್ಲ ಎಂದು ಸಚಿವರು ಹೇಳಿರುವುದು ತುಸು ನೆಮ್ಮದಿ ತಂದಿದೆ ಎಂದು ಹೆಬ್ಬಾರ್ ತಿಳಿಸಿದರು.

Facebook Comments