123 ವರ್ಷಗಳ ಸುದೀರ್ಘ ಪಯಣ ಮುಗಿಸಿದ ಸುಧಾಕರ್ ಚತುರ್ವೇದಿ..!

ಈ ಸುದ್ದಿಯನ್ನು ಶೇರ್ ಮಾಡಿ

ಬೆಂಗಳೂರು, ಫೆ.27- ಜಲಿಯನ್ ವಾಲಾಬಾಗ್ ಹತ್ಯಾಕಾಂಡದ ಪ್ರತ್ಯಕ್ಷ ಸಾಕ್ಷಿಯಾಗಿದ್ದ ಹಿರಿಯ ಸ್ವಾತಂತ್ರ್ಯ ಹೋರಾಟಗಾರ ಸುಧಾಕರ್ ಚತುರ್ವೇದಿ(123) ಅವರು ನಿಧನರಾಗಿದ್ದಾರೆ. ಮಧ್ಯ ರಾತ್ರಿ 2 ಗಂಟೆ ಸುಮಾರಿಗೆ ಜಯನಗರದ 5ನೇ ಬ್ಲಾಕ್‍ನಲ್ಲಿರುವ ಮನೆಯಲ್ಲಿ ಸುಧಾಕರ್ ಚತುರ್ವೇದಿ ಮೃತಪಟ್ಟಿದ್ದಾರೆ. ಸಾವಿರಾರು ಜನತೆ ಹತ್ಯೆಯಾದ 1919ರ ಜಲಿಯನ್ ವಾಲಾಬಾಗ್‍ನ ಹತ್ಯಾಕಾಂಡವನ್ನು ಕಣ್ಣಾರೆ ಕಂಡಿದ್ದ ಸುಧಾಕರ್ ಅವರು ದೇಶದಲ್ಲಿ ಈವರೆಗೂ ಉಳಿದಿದ್ದ ಏಕೈಕ ಸಾಕ್ಷಿ.

ಹತ್ಯಾಕಾಂಡದಲ್ಲಿ ಸಾವಿರಾರು ಜನರು ಮೃತಪಟ್ಟಿದ್ದರು. ಆದರೆ, ಆಗಿನ ಬ್ರಿಟಿಷ್ ಸರ್ಕಾರ 670 ಮಂದಿ ಮೃತಪಟ್ಟಿದ್ದಾರೆ ಎಂದು ಲೆಕ್ಕ ನೀಡಿತ್ತು. ಮಂತ್ರ, ವೇದ ಘೋಷಗಳು ಗೊತ್ತಿದ್ದರಿಂದ ಮೃತಪಟ್ಟ ಅಷ್ಟೂ ಮಂದಿಗೆ ನದಿ ದಡದಲ್ಲಿ ಅಂತ್ಯ ಸಂಸ್ಕಾರ ಮಾಡಲು ಗಾಂಧೀಜಿ ಯವರು ಸುಧಾಕರ್ ಚತುರ್ವೇದಿ ಅವರಿಗೆ ಸೂಚನೆ ನೀಡಿದ್ದರು. ಅದರಂತೆ ಸಾಮೂಹಿಕ ಅಂತ್ಯ ಸಂಸ್ಕಾರ ಕೂಡ ನಡೆದಿತ್ತು.

ಮಹಾತ್ಮಗಾಂಧೀಜಿಯವರಿಗೆ ಸ್ಟೆನೋಗ್ರಾಫರ್ ಆಗಿಯೂ ಕೆಲಸ ಮಾಡಿದ್ದರು. 1897ರ ರಾಮನವಮಿಯಂದು ಬೆಂಗಳೂರಿನ ಬಳೆಪೇಟೆಯಲ್ಲಿ ಜನಿಸಿದ್ದ ಸುಧಾಕರ್ ಚತುರ್ವೇದಿ ಅವರು 11ನೇ ವಯಸ್ಸಿಗೆ ಉತ್ತರ ಭಾರತದ ಪ್ರಸಿದ್ಧ ಕಾಂಗಡಿ ಗುರುಕುಲಕ್ಕೆ ಸೇರಿ ನಾಲ್ಕು ವೇದಗಳನ್ನು ಅಧ್ಯಯನ ಮಾಡಿದ್ದರು. ಮೂಲತಃ ಇವರು ಚತುರ್ವೇದಿ ಕುಟುಂಬಕ್ಕೆ ಸೇರದೆ ಇದ್ದರೂ, ಸತತವಾಗಿ 25 ವರ್ಷಗಳ ವೇದಾಭ್ಯಾಸ ಮಾಡಿದ್ದರಿಂದಾಗಿ ಸಾರ್ವದೇಶಿಕಾ ಆರ್ಯಾ ಪ್ರತಿನಿಧಿ ಸಭೆ ಚತುರ್ವೇದಿ ಎಂಬ ಉಪನಾಮವನ್ನು ಸುಧಾಕರ್ ಅವರಿಗೆ ಸೇರ್ಪಡೆ ಮಾಡಿತ್ತು.

ಕನ್ನಡ, ಸಂಸ್ಕøತ, ಇಂಗ್ಲೀಷ್, ಹಿಂದಿ ನಾಲ್ಕೂ ಭಾಷೆಗಳಲ್ಲಿ ಪುಸ್ತಕಗಳನ್ನು ಬರೆದಿದ್ದಾರೆ. ಮೂಲತಃ ಪತ್ರಕರ್ತರೂ ಆಗಿದ್ದ ಸುಧಾಕರ್ ಚತುರ್ವೇದಿ ಅವರು ಅತಿ ಹೆಚ್ಚು ವರ್ಷ ಬದುಕಿದ್ದ ಹಿರಿಯರ ದಾಖಲೆಯ ಸಾಲಿಗೂ ಸೇರ್ಪಡೆಯಾಗಿದ್ದಾರೆ. ದೇಶದ ಸ್ವಾತಂತ್ರ್ಯ ಹೋರಾಟಕ್ಕೆ ತಮ್ಮನ್ನು ತಾವು ಅರ್ಪಿಸಿಕೊಂಡು 13 ವರ್ಷಗಳ ಕಾಲ ಸೆರೆ ವಾಸ ಅನುಭವಿಸಿದ್ದರು. ಬ್ರಹ್ಮಚಾರಿಯಾಗಿದ್ದ ಇವರು, ಒಬ್ಬ ಮಗನನ್ನು ದತ್ತು ಪಡೆದಿದ್ದರು.

ಸುಧಾಕರ್ ಚತುರ್ವೇದಿ ಯವರು ನಿನ್ನೆ ರಾತ್ರಿ ನಿಧನರಾಗಿದ್ದು, ಇಂದು ಚಾಮರಾಜಪೇಟೆಯ ರುದ್ರಭೂಮಿಯಲ್ಲಿ ಅಂತ್ಯಸಂಸ್ಕಾರ ನಡೆಯಲಿದೆ ಎಂದು ಬೆಂಗಳೂರಿನ ಆರ್ಯಸಮಾಜ ತಿಳಿಸಿದೆ.

Facebook Comments