ಸರ್ಕಾರ ಈಗಾಗಲೇ 8 ಬೇಡಿಕೆ ಈಡೇರಿಸಿದೆ, ಮುಷ್ಕರ ಕೈ ಬಿಡಿ : ಸುಧಾಕರ್

ಈ ಸುದ್ದಿಯನ್ನು ಶೇರ್ ಮಾಡಿ

ಬೆಂಗಳೂರು,ಏ.9- ಸಾರಿಗೆ ನೌಕರರ 9 ಬೇಡಿಕೆಗಳ ಪೈಕಿ 8 ಬೇಡಿಕೆಗಳನ್ನು ಸರ್ಕಾರ ಈಗಾಗಲೇ ಈಡೇರಿಸಿದ್ದು, 6ನೇ ವೇತನ ಆಯೋಗದ ಶಿಫಾರಸ್ಸು ಜಾರಿ ಮಾಡಬೇಕೆಂಬ ಬೇಡಿಕೆಯನ್ನು ಇನ್ನೂ ಪರಿಶೀಲಿಸಲಾಗುತ್ತಿದೆ ಎಂದು ಆರೋಗ್ಯ ಮತ್ತು ವೈದ್ಯಕೀಯ ಶಿಕ್ಷಣ ಸಚಿವ ಡಾ.ಕೆ.ಸುಧಾಕರ್ ಹೇಳಿದ್ದಾರೆ. ಸುದ್ದಿಗಾರರ ಜೊತೆ ಮಾತನಾಡಿದ ಅವರು, ರಾಜ್ಯ ಸರ್ಕಾರ ಈಗಾಗಲೇ 8 ಬೇಡಿಕೆ ಈಡೇರಿಸಿದೆ. ಮುಷ್ಕರ ಕೈ ಬಿಡಿ. ರಾಜ್ಯ ಸರ್ಕಾರ ಈಗಾಗಲೇ ನೌಕರರ ಬೇಡಿಕೆಗಳಿಗೆ ಬಹಳಷ್ಟು ಸ್ಪಂದಿಸಿದೆ ಎಂದರು.

ಕಾಲಕಾಲಕ್ಕೆ ಮುಖ್ಯಮಂತ್ರಿ ಯಡಿಯೂರಪ್ಪನವರು ನೌಕರರ ಬೇಡಿಕೆಗಳಿಗೆ ಸ್ಪಂದಿಸಿದ್ದಾರೆ. ಕೋವಿಡ್‍ನಿಂದಾಗಿ ಆರ್ಥಿಕ ಸಂಕಷ್ಟವಿದ್ದಾಗಲೂ ನೌಕರರ ಬದುಕು, ಅವರ ಕುಟುಂಬದ ಹಿತಕ್ಕಾಗಿ 1,953.45 ಕೋಟಿ ರೂ.ನಷ್ಟು ವೇತನ ಪಾವತಿಸಲಾಗಿದೆ ಎಂದರು. ವೇತನ ಬಾಕಿ ಇಟ್ಟುಕೊಂಡು ನೌಕರರು ಸಂಕಷ್ಟಕ್ಕೆ ಸಿಲುಕಿಸುವಂತಹ ಯಾವುದೇ ಕೆಲಸವನ್ನು ಸರ್ಕಾರ ಮಾಡಿಲ್ಲ. ಸರ್ಕಾರದ ಈ ಕ್ರಮವನ್ನು ಪರಿಗಣಿಸಿ ನೌಕರರು ಮುಷ್ಕರ ಬಿಟ್ಟು ನಾಗರಿಕ ಸ್ನೇಹಿ ಆಡಳಿತಕ್ಕೆ ಸಹಕರಿಸಬೇಕು ಎಂದು ಮನವಿ ಮಾಡಿದರು.

2020 ರ ಡಿಸೆಂಬರ್ ನಲ್ಲಿ ನೌಕರರು 4 ದಿನಗಳ ಕಾಲ ಮುಷ್ಕರ ಮಾಡಿದ್ದರು. ಆ ಸಮಯದಲ್ಲಿ 10 ಬೇಡಿಕೆಗಳಲ್ಲಿ, 9 ಬೇಡಿಕೆ ಈಡೇರಿಸುವುದಾಗಿ ಸರ್ಕಾರವು ಸಾರಿಗೆ ನೌಕರರಿಗೆ ಭರವಸೆ ನೀಡಿತ್ತು. ನಂತರ ಕೊಟ್ಟ ಮಾತಿನಂತೆಯೇ ನಡೆದುಕೊಂಡು ನಮ್ಮ ಸರ್ಕಾರ, 9 ಬೇಡಿಕೆಗಳಲ್ಲಿ 8 ಬೇಡಿಕೆಗಳನ್ನು ಈಡೇರಿಸಿದೆ. ಇದನ್ನು ಅರ್ಥಮಾಡಿಕೊಂಡು ಮುಷ್ಕರ ಬಿಟ್ಟು ಕರ್ತವ್ಯಕ್ಕೆ ಹಾಜರಾಗಬೇಕು ಎಂದು ಹೇಳಿದರು.

6 ನೇ ವೇತನ ಆಯೋಗದ ಶಿಫಾರಸುಗಳನ್ನು ಪರಿಗಣಿಸುವಂತೆ ನೌಕರರು ಕೋರಿರುವ ಬೇಡಿಕೆಯನ್ನು ಇನ್ನೂ ಪರಿಶೀಲಿಸಲಾಗುತ್ತಿದೆ. ಈ ಬಗ್ಗೆ ಸರ್ಕಾರವು ಆರ್ಥಿಕ ಅಂಶಗಳನ್ನು ಪರಿಗಣಿಸಿ ತೀರ್ಮಾನಿಸಬೇಕಿದೆ. ಇದಕ್ಕಾಗಿ ಸಮಿತಿ ಕೂಡ ರಚನೆ ಮಾಡಿದ್ದು, ಈ ಸಮಿತಿಯು 6 ಸಭೆಗಳನ್ನು ನಡೆಸಿ ಚರ್ಚೆ ಮಾಡಿದೆ. ಇಷ್ಟೆಲ್ಲ ಕ್ರಮ ವಹಿಸಿದ ಬಳಿಕವೂ ನೌಕರರು ಮುಷ್ಕರ ನಡೆಸುವುದು ಸರಿಯಲ್ಲ ಎಂದರು.

ಸಾರಿಗೆ ನೌಕರರು ಯಾರದ್ದೇ ಮಾತಿಗೆ ಕಿವಿಗೊಡದೆ ಸರ್ಕಾರವು ಕೈಗೊಂಡಿರುವ ಕ್ರಮಗಳನ್ನು ಗಮನಿಸಬೇಕು. ಸರ್ಕಾರವು ನೌಕರರಿಗಾಗಿ ಕೈಗೊಂಡಿರುವ ಕ್ರಮಗಳನ್ನು ಸಾರ್ವಜನಿಕರು ಕೂಡ ಗಮನಿಸಬೇಕು ಎಂದು ಸುಧಾಕರ್ ಹೇಳಿದರು.

Facebook Comments