ಡಿಸೆಂಬರ್ ಅಂತ್ಯಕ್ಕೆ ಪ್ರತಿಯೊಬ್ಬರಿಗೂ ಲಸಿಕೆ ನೀಡುವ ಗುರಿ : ಸಚಿವ ಸುಧಾಕರ್

ಈ ಸುದ್ದಿಯನ್ನು ಶೇರ್ ಮಾಡಿ

ಬೆಂಗಳೂರು, ಜೂ.1 : ಡಿಸೆಂಬರ್ ಅಂತ್ಯದ ವೇಳೆಗೆ ರಾಜ್ಯದ ಪ್ರತಿಯೊಬ್ಬರಿಗೂ ಕೋವಿಡ್ ಲಸಿಕೆ ನೀಡಿ, ರಾಜ್ಯವನ್ನು ಕೊರೊನಾ ಮುಕ್ತಗೊಳಿಸುವ ಗುರಿ ಇದೆ ಎಂದು ಆರೋಗ್ಯ ಮತ್ತು ವೈದ್ಯಕೀಯ ಶಿಕ್ಷಣ ಸಚಿವ ಡಾ.ಕೆ.ಸುಧಾಕರ್ ತಿಳಿಸಿದರು. ಅಟಲ್ ಬಿಹಾರಿ ವಾಜಪೇಯಿ ಮೆಡಿಕಲ್ ಕಾಲೇಜಿನಲ್ಲಿ ಲಸಿಕಾ ಮಹಾ ಅಭಿಯಾನಕ್ಕೆ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಚಾಲನೆ ನೀಡಿದರು.

ನಂತರ ಮಾತನಾಡಿದ ಸಚಿವರು, ಅಂತಾರಾಷ್ಟ್ರೀಯ ಯೋಗ ದಿನದಂದೇ ಪ್ರಧಾನಿ ನರೇಂದ್ರ ಮೋದಿಯವರು ಕೋವಿಡ್ ಲಸಿಕೆ ಅಭಿಯಾನ ನಡೆಸಲು ಸೂಚನೆ ನೀಡಿದ್ದಾರೆ. ರಾಜ್ಯದಲ್ಲಿ ಒಂದೇ ದಿನ ಸುಮಾರು 7 ಲಕ್ಷ ಜನರಿಗೆ ಲಸಿಕೆ ನೀಡುವ ಗುರಿ ಇದೆ. 18-44 ವರ್ಷದವರಿಗೆ ಲಸಿಕೆ ಹಾಗೂ ಎರಡನೇ ಡೋಸ್ ಪಡೆಯುವವರಿಗೂ ಲಸಿಕೆ ನೀಡಲಾಗುತ್ತಿದೆ. ಡಿಸೆಂಬರ್ ಅಂತ್ಯದ ವೇಳೆಗೆ ರಾಜ್ಯದ ಪ್ರತಿಯೊಬ್ಬರಿಗೂ ಲಸಿಕೆ ನೀಡಿ, ರಾಜ್ಯವನ್ನು ಕೊರೊನಾ ಮುಕ್ತಗೊಳಿಸುವ ಉದ್ದೇಶ ಹೊಂದಲಾಗಿದೆ ಎಂದರು.

ಈ ವರ್ಷ ‘ಬಿ ವಿತ್ ಯೋಗ’, ‘ಯೋಗ ಫಾರ್ ವೆಲ್ ನೆಸ್’ ಎಂಬ ಘೋಷವಾಕ್ಯವಿದೆ. ದೊಡ್ಡ ಸಮಾರಂಭ ಇಟ್ಟುಕೊಳ್ಳದೆ ಕೋವಿಡ್ ಮಾರ್ಗಸೂಚಿ ಪಾಲಿಸಿ ಯೋಗ ದಿನ ಆಚರಿಸಲಾಗುತ್ತಿದೆ. ಯೋಗ ಕೇವಲ ದೈಹಿಕ ಮಾತ್ರವಲ್ಲದೆ, ಮಾನಸಿಕ, ಸಾಮಾಜಿಕ ಆರೋಗ್ಯಕ್ಕೆ ಅಗತ್ಯ. ಪ್ರಧಾನಿಗಳು ವಿಶ್ವಸಂಸ್ಥೆಯಲ್ಲಿ ಇದನ್ನು ಪ್ರಸ್ತಾಪ ಮಾಡಿದ್ದು, ನಂತರ ಇಡೀ ಜಗತ್ತು ಯೋಗ ದಿನ ಆಚರಿಸುತ್ತಿದೆ ಎಂದರು.

ನಮ್ಮ ದೇಹ ರಥದಂತೆ ಎಂದು ಭಗವದ್ಗೀತೆಯಲ್ಲಿ ಹೇಳಲಾಗಿದೆ. ರಥದ ಕುದುರೆ ಇಂದ್ರಿಯ, ಸಾರಥಿ ಮನಸ್ಸು ಎನ್ನಲಾಗಿದೆ. ಮನಸ್ಸು ಸರಿ ಇದ್ದರೆ ಕುದುರೆಗಳು ಸರಿಯಾಗಿ ಓಡುತ್ತವೆ. ಇದೆಲ್ಲ ಸಾಧ್ಯವಾಗಲು ಯೋಗ ಮಾಡಬೇಕು. ಶ್ವಾಸಕೋಶಕ್ಕೆ ಉತ್ತಮ ವ್ಯಾಯಾಮವಾದ ಪ್ರಾಣಾಯಾಮ, ಧ್ಯಾನ ಮಾಡಬೇಕು. ಇದು ಕೇವಲ ಚಿಕಿತ್ಸೆ ಅಲ್ಲದೆ, ರೋಗ ನಿರೋಧಕ ಶಕ್ತಿ ಹೆಚ್ಚಿಸುವ ವಿಧಾನವಾಗಿದೆ ಎಂದರು.

# 1.86 ಕೋಟಿ ಲಸಿಕೆ : 
15 ಲಕ್ಷಕ್ಕೂ ಅಧಿಕ ಕೋವಿಶೀಲ್ಡ್ ಹಾಗೂ 6-7 ಲಕ್ಷ ಕೋವ್ಯಾಕ್ಸಿನ್ ಲಸಿಕೆ ರಾಜ್ಯದಲ್ಲಿ ಸಂಗ್ರಹವಿದೆ. 1.86 ಕೋಟಿ ಜನರಿಗೆ ಈಗಾಗಲೇ ಲಸಿಕೆ ನೀಡಲಾಗಿದೆ. ರಾಜ್ಯದಲ್ಲಿ 13 ಸಾವಿರ ಲಸಿಕಾ ಕೇಂದ್ರಗಳಿವೆ. ಒಂದು ಕೇಂದ್ರದಲ್ಲಿ 70-80 ಜನರಿಗೆ ಲಸಿಕೆ ನೀಡಿದರೂ ನಾವು ಗುರಿ ಮುಟ್ಟಲು ಸಾಧ್ಯವಿದೆ. ಇದಕ್ಕೆ ಜನರ ಸಂಪೂರ್ಣ ಸಹಕಾರ ಬೇಕಿದೆ. ಸ್ಪುಟ್ನಿಕ್ ಲಸಿಕೆ ನೀಡಲು ಅನುಮತಿ ಇದ್ದು, ಈ ಲಸಿಕೆಯ ಲಭ್ಯತೆ ಬಗ್ಗೆ ನೋಡಬೇಕಿದೆ ಎಂದರು.

ಕೋವಿಡ್ ಲಸಿಕೆ ಬಗ್ಗೆ ರಾಜ್ಯದ ಜನರಿಗೆ ಹೆಚ್ಚು ಜಾಗೃತಿ ಇದೆ. ಆರಂಭಿಕ ಹಂತದಲ್ಲಿ ಕೆಲ ಪಕ್ಷಗಳು ಲಸಿಕೆ ಬಗ್ಗೆ ಜನರ ಮನಸ್ಸಿನಲ್ಲಿ ಅಂಜಿಕೆ ಉಂಟುಮಾಡಿದ್ದವು. ಆದರೆ ಕ್ರಮೇಣ ಜನರಿಗೆ ನಂಬಿಕೆ ಬಂದಿದೆ. ಲಸಿಕೆಯೊಂದೇ ಕೊರೊನಾ ನಿವಾರಣೆಗೆ ಸೂಕ್ತ ಪರಿಹಾರ ಎಂಬುದು ಅರಿವಾಗಿದೆ ಎಂದರು.

ಕೋವಿಡ್ ಸಂಬಂಧಿ ಅಂಕಿ ಅಂಶ ನೀಡುವಲ್ಲಿ ರಾಜ್ಯ ಮಾದರಿಯಾಗಿದೆ ಎಂದು ಕೇಂದ್ರ ಸರ್ಕಾರವೇ ಶ್ಲಾಘಿಸಿದೆ. ನಮ್ಮ ಸರ್ಕಾರ ಯಾವುದೇ ಮಾಹಿತಿ ಮುಚ್ಚಿಡುತ್ತಿಲ್ಲ. ಕಪ್ಪು ಶಿಲೀಂಧ್ರಕ್ಕೆ ಚಿಕಿತ್ಸೆ ನೀಡಲಾಗುತ್ತಿದೆ. ಕೋವಿಡ್ ಬಿಡುಗಡೆಗೆ ಹೊಸ ಮಾರ್ಗಸೂಚಿಯನ್ನೂ ತರಲಾಗಿದೆ ಎಂದರು.

Facebook Comments

Sri Raghav

Admin