SSLC ಪರೀಕ್ಷೆ ಬಗ್ಗೆ ಸರ್ಕಾರದಲ್ಲಿ ಯಾವುದೇ ಗೊಂದಲ ಇಲ್ಲ : ಸಚಿವ ಸುಧಾಕರ್

ಈ ಸುದ್ದಿಯನ್ನು ಶೇರ್ ಮಾಡಿ

ಬೆಂಗಳೂರು, ಜೂ.28- ರಾಜ್ಯಕ್ಕೆ ಅಗತ್ಯವಿರುವಷ್ಟು ಲಸಿಕೆಗಳನ್ನು ಕಳುಹಿಸಿಕೊಡಲು ಕೇಂದ್ರ ಸರ್ಕಾರ ಸಮ್ಮತಿಸಿದ್ದು, ತಿಂಗಳಾಂತ್ಯಕ್ಕೆ ಹೆಚ್ಚಿನ ಲಸಿಕೆಗಳು ಲಭ್ಯವಾಗಲಿವೆ ಎಂದು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವ ಡಾ.ಕೆ.ಸುಧಾಕರ್ ಹೇಳಿದ್ದಾರೆ. ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ರಾಜ್ಯದಲ್ಲಿ ಲಸಿಕೆ ನೀಡಲು ಯಾವುದೇ ರೀತಿಯ ಸಮಸ್ಯೆ ಎದುರಾಗಿಲ್ಲ. ಸಾರ್ವಜನಿಕರಿಗೆ ಅಗತ್ಯವಿರುವಷ್ಟನ್ನು ಸಂಗ್ರಹಿಸಿಟ್ಟುಕೊಂಡಿದ್ದೇವೆ. ವದಂತಿಗಳಿಗೆ ಕಿವಿಗೊಡಬಾರದು ಎಂದು ಮನವಿ ಮಾಡಿದರು.

ತಿಂಗಳಾಂತ್ಯಕ್ಕೆ ಹೆಚ್ಚುವರಿಯಾಗಿ ಲಸಿಕೆಗಳು ರಾಜ್ಯಕ್ಕೆ ಬರಲಿವೆ. ಕೇಂದ್ರ ಸಚಿವರ ಜತೆ ನಾನು ಖುದ್ದು ಮಾತುಕತೆಯನ್ನೂ ನಡೆಸಿದ್ದೇನೆ. ರಾಜ್ಯಕ್ಕೆ ಕಳುಹಿಸಿಕೊಡಲು ಅವರು ಒಪ್ಪಿಗೆ ಕೊಟ್ಟಿದ್ದಾರೆ. ಜನರು ಮುಕ್ತ ಮನಸ್ಸಿನಿಂದ ಲಸಿಕೆ ಪಡೆಯಬೇಕು ಎಂದು ಸಲಹೆ ಮಾಡಿದರು. ಸದ್ಯದಲ್ಲೇ ದೆಹಲಿಗೂ ಕೂಡ ತೆರಳುತ್ತೇವೆ. ನಮ್ಮ ರಾಜ್ಯಕ್ಕೆ ಅಗತ್ಯವಿರುವಷ್ಟು ಲಸಿಕೆ ಕೊಡಬೇಕೆಂಬ ಬೇಡಿಕೆ ಇಡುತ್ತೇವೆ. ನಮಗೆ ಕೇಂದ್ರದಿಂದ ಸಂಪೂರ್ಣ ಸಹಕಾರ ಸಿಗುತ್ತಿದೆ ಎಂದು ಹೇಳಿದರು.

ಶಿಕ್ಷಣ ಸಚಿವ ಸುರೇಶ್‍ಕುಮಾರ್ ಅವರು ಪೂರ್ವಭಾವಿಯಾಗಿ ನಮ್ಮೊಂದಿಗೆ ಚರ್ಚಿಸಿ ಎಸ್‍ಎಸ್‍ಎಲ್‍ಸಿ ಪರೀಕ್ಷೆ ನಿಗದಿಪಡಿಸಿದ್ದಾರೆ. ಈ ಬಗ್ಗೆ ಸರ್ಕಾರದಲ್ಲಿ ಯಾವುದೇ ರೀತಿಯ ಗೊಂದಲ ಇಲ್ಲ ಎಂದು ಸುಧಾಕರ್ ಸ್ಪಷ್ಟಪಡಿಸಿದರು. ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಹಾಗೂ ನಮ್ಮ ಬಳಿ ಸಮಗ್ರವಾಗಿ ಚರ್ಚಿಸಿದ ನಂತರ ವಿದ್ಯಾರ್ಥಿಗಳ ಹಿತದೃಷ್ಟಿಯಿಂದ ತೀರ್ಮಾನ ಕೈಗೊಂಡಿದ್ದಾರೆ.

ಇದು ಏಕಪಕ್ಷೀಯ ತೀರ್ಮಾನವಲ್ಲ. ನಿನ್ನೆ ನಾನು ಬೇರೆ ಸಭೆಯಲ್ಲಿದ್ದ ಕಾರಣ ಮಾಹಿತಿ ಇರಲಿಲ್ಲ. ತಾಂತ್ರಿಕ ಸಲಹಾ ಸಮಿತಿ ಜತೆ ಚರ್ಚಿಸಿ ತೀರ್ಮಾನಕ್ಕೆ ಬಂದಿರಬಹುದು. ಈ ಬಗ್ಗೆ ಗೊಂದಲ ಸೃಷ್ಟಿಸುವುದು ಬೇಡ ಎಂದು ಹೇಳಿದರು. ಇಂದು ಮೈಸೂರು, ಕೊಡಗು ಹಾಗೂ ದಕ್ಷಿಣ ಕನ್ನಡ ಜಿಲ್ಲೆಗಳಿಗೆ ಭೇಟಿ ನೀಡಲಿದ್ದೇನೆ. ಈ ಮೂರೂ ಜಿಲ್ಲೆಗಳಲ್ಲಿ ಪಾಸಿಟಿವಿಟಿ ದರ ಹೆಚ್ಚಾಗಿದ್ದು, ನಿಯಂತ್ರಿಸಲು ಅಧಿಕಾರಿಗಳ ಜತೆ ಚರ್ಚೆ ಮಾಡುವುದಾಗಿ ತಿಳಿಸಿದರು.

ಕಾಂಗ್ರೆಸ್‍ನಲ್ಲಿ ಮುಖ್ಯಮಂತ್ರಿ ಹುದ್ದೆ ಕುರಿತಂತೆ ಉಂಟಾಗಿರುವ ವಿವಾದಕ್ಕೆ ಪ್ರತಿಕ್ರಿಯಿಸಿದ ಸುಧಾಕರ್, ಇದು ಆ ಪಕ್ಷದ ಆಂತರಿಕ ವಿಚಾರ. ನಾವು ಇನ್ನೊಂದು ಪಕ್ಷದ ಬಗ್ಗೆ ಮಾತನಾಡುವುದು ಸರಿಯಲ್ಲ. ಸಾಮಾನ್ಯವಾಗಿ ಕಾಂಗ್ರೆಸ್‍ನಲ್ಲಿ ಕೆಪಿಸಿಸಿ ಅಧ್ಯಕ್ಷರು ಹಾಗೂ ಪ್ರತಿಪಕ್ಷದ ನಾಯಕರು ಮುಖ್ಯಮಂತ್ರಿಯಾಗುವ ಸಂಪ್ರದಾಯ ಉಂಟು. ಅದನ್ನು ಬಿಟ್ಟು ಈವರೆಗೂ ಬೇರೆ ಯಾರೂ ಆಗಿಲ್ಲ. ಆದರೂ ಬೇರೆ ಪಕ್ಷದ ಬಗ್ಗೆ ನಾನು ಮಾತನಾಡುವುದಿಲ್ಲ ಎಂದು ಹೇಳಿದರು.

Facebook Comments