ಸಬ್ಸಿಡಿ ಹಣ ಬಾಕಿ ಉಳಿಸಿಕೊಂಡ ಸರ್ಕಾರ, ಆತಂಕದಲ್ಲಿ ಸಕ್ಕರೆ ಉದ್ದಿಮೆ

ಈ ಸುದ್ದಿಯನ್ನು ಶೇರ್ ಮಾಡಿ

ಬೆಂಗಳೂರು,ಸೆ.16- ಸಕ್ಕರೆ ಉದ್ದಿಮೆಗಳಿಗೆ ಕೇಂದ್ರ ಸರ್ಕಾರ ಕೊಡಬೇಕಾಗಿರುವ ಸಕ್ಕರೆ ರಫ್ತು ಸಬ್ಸಿಡಿ ಸಹಾಯ ಹಣ ಕಳೆದ 6 ತಿಂಗಳಿಂದ ಪಾವತಿಯಾಗಿಲ್ಲ. ದೇಶದ ಸಕ್ಕರೆ ಕಾರ್ಖಾನೆಗಳು ದೊಡ್ಡ ಪ್ರಮಾಣದಲ್ಲಿ ವಿದೇಶಕ್ಕೆ ರಫ್ತು ಮಾಡಿವೆ. ಈ ರಫ್ತು ಮಾಡಿದ್ದಕ್ಕೆ ಸರ್ಕಾರದಿಂದ ಸಕ್ಕರೆ ಕಾರ್ಖಾನೆಗಳಿಗೆ ಪಾವತಿ ಮಾಡಬೇಕಾಗಿದೆ.

ಸಕ್ಕರೆ ಕಾರ್ಖಾನೆಗಳು ಈ ಹಣ ಪಾವತಿಗೆ ಸತತ ಪ್ರಯತ್ನ ನಡೆಸಿದರೂ ಪ್ರಯೋಜನವಾಗಿಲ್ಲ. ಸಕ್ಕರೆ ಕಾರ್ಖಾನೆಗಳ ರಾಷ್ಟ್ರೀಯ ಮಹಾಮಂಡಳ ಕೇಂದ್ರ ಸರ್ಕಾರದ ಸಚಿವರನ್ನು ಭೇಟಿ ಮಾಡಿ ಸಬ್ಸಿಡಿ ಪಾವತಿಗೆ ಆಗ್ರಹ ಪಡಿಸಿದೆ. ಈ ಹಣ ಬಾರದಿದ್ದರಿಂದ ರೈತರಿಗೆ ಕಬ್ಬಿನ ಬಿಲ್ಲು ಪಾವತಿ ಮಾಡುವುದಕ್ಕೆ ಬಹಳ ತೊಂದರೆಯಾಗುತಿತಿದೆ.

ರೈತರು ತಾವು ಪೂರೈಸುವ ಕಬ್ಬಿಗೆ ಬೇಗನೆ ಹಣ ಪಾವತಿ ಮಾಡುವುದಕ್ಕೆ ಆಗ್ರಹ ಪಡಿಸುತಿತಿದ್ದಾರೆ. ಕಾರ್ಖಾನೆಗಳಿಗೆ ಕಬ್ಬು ಪೂರೈಸಿ, ಬಹಳ ದಿನಗಳು ಕಳೆದಿವೆ. ರೈತರು ಕಬ್ಬಿನ ಬಿಲ್ಲಿಗೆ ಆಗ್ರಹ ಪಡಿಸುವುದು ನ್ಯಾಯ ಸಮ್ಮತವಾಗಿದೆ. ಆದರೆ ಕಾರ್ಖಾನೆಗಳಿಗೆ ಸರ್ಕಾರದಿಂದ ಬರಬೇಕಾದ ನೂರಾರು ಕೋಟಿ ಹಣ ಬಾರದೆ ತೊಂದರೆಯಾಗಿದೆ.

ಕೇಂದ್ರ ಸರ್ಕಾರದ ಸಚಿವಾಲಯದ ಹಿರಿಯ ಅಧಿಕಾರಿ ರಿತುರಾಜ ತಿವಾರಿ ಸರ್ಕಾರ ಪಾವತಿ ಮಾಡಬೇಕಾದ ಹಣದ ವಿವರವನ್ನು ಸಚಿವ ಸಂಪುಟದ ಗಮನಕ್ಕೆ ತಂದಿರುವುದಾಗಿ ಸಂದರ್ಶನ ಒಂದರಲ್ಲಿ ತಿಳಿಸಿದ್ದಾರೆ. ಈ ಕಾರ್ಯ ತೀವ್ರವಾಗಿ ನೆರವೇರುವುದು ಅವಶ್ಯವಿದೆ.

ಸಕ್ಕರೆ ಕಾರ್ಖಾನೆಗಳು ಸಹ ವಿದ್ಯುತ್ ಉತ್ಪಾದನಾ ಘಟಕಗಳು ಉತ್ಪಾದಿಸುವ ವಿದ್ಯುತ್‍ನ್ನು ರಾಜ್ಯ ವಿದ್ಯುತ್ ಮಂಡಳಿ ಖರೀದಿಸಲು ವಿಳಂಬ ಧೋರಣೆ ಅನುಸರಿಸುತ್ತಿದ್ದಾರೆ ಎಂದು ಕಾರ್ಖಾನೆಗಳ ಮೂಲಗಳು ಆತಂಕ ವ್ಯಕ್ತಪಡಿಸಿವೆ. ವಿದ್ಯುತ್ ಖರೀದಿ ದರವನ್ನು ಕೂಡ ತೀವ್ರವಾಗಿ ಇಳಿಸಲಾಗಿದೆ.

ವಿದ್ಯುತ್ ಘಟಕ ಸ್ಥಾಪಿಸಲು ರಾಜ್ಯ ಸರ್ಕಾರ ಮೊದಲು ಸಬ್ಸಿಡಿ ನೀಡಿ ಪ್ರೋತ್ಸಾಹ ನೀಡುತ್ತಿತ್ತು. ಈಗ ವಿದ್ಯುತ್ ಉತ್ಪಾದನೆ ರಾಜ್ಯದಲ್ಲಿ ಹೆಚ್ಚಾಗಿರುವುದರಿಂದ ವಿದ್ಯುತ್ ಖರೀದಿಗೆ ಹಿಂದೇಟು ಹಾಕುತ್ತಿರುವ ಸನ್ನಿವೇಶ ಉಂಟಾಗಿದೆ. ಬಯೋಮಾಸ್ ಮತ್ತು ಪವನ ವಿದ್ಯುತ್ ಖರೀದಿಗೆ ಹೆಚ್ಚು ಬೆಲೆ ನೀಡುತ್ತಿದ್ದು. ಸಕ್ಕರೆ ಕಾರ್ಖಾನೆಗಳು ಉತ್ಪಾದಿಸುವ ವಿದ್ಯುತ್ತಿಗೆ ಹೆಚ್ಚು ಬೆಲೆ ಯಾಕೆ ಕೊಡುತ್ತಿಲ್ಲ ಎಂಬುದು ಚರ್ಚಿಸಬೇಕಾದ ಸಂಗತಿಯಾಗಿದೆ.

ಇದರಿಂದಾಗಿ ಕಾರ್ಖಾನೆಗಳಿಗೆ ಆರ್ಥಿಕ ಹಾನಿ ಉಂಟಾಗುತ್ತಿದೆ ಎಂದು ಮಾಹಿತಿ ಲಭ್ಯವಾಗಿದೆ. ಸಕ್ಕರೆ ಕಾರ್ಖಾನೆಗಳು ಉತ್ಪಾದಿಸುವ ವಿದ್ಯುತ್ತಿನ 2008-2013 ರ ಅವಧಿಯಲ್ಲಿ ಪ್ರತಿ ಯುನಿಟ್‍ಗೆ 5 ರೂ, 40 ಪೈಸೆ ಸರ್ಕಾರ ಬೆಲೆ ಪಾವತಿ ಮಾಡುತ್ತಿತ್ತು. ಈಗ ಬೆಲೆಯನ್ನು 2.59 ಪೈಸೆ ಇಳಿಸಲಾಗಿದೆ. ವಿದ್ಯುತ್ ನಿಗಮ ಖರೀದಿಸಿದ ವಿದ್ಯುತ್ ಹಣ ಪಾವತಿ ಮಾಡುವುದಕ್ಕೆ ಬಹಳ ವಿಳಂಬ ಮಾಡುತ್ತಿವೆ ಎಂದು ಕೆಲವು ಕಾರ್ಖಾನೆಗಳು ಅಭಿಪ್ರಾಯ ವ್ಯಕ್ತಪಡಿಸಿದೆ.

ಪವನ ವಿದ್ಯುತ್ ಲಾಭ ನೇರವಾಗಿ ಏಕವ್ಯಕ್ತಿಗೆ ತಲುಪುತ್ತಿದೆ. ಸಕ್ಕರೆ ಕಾರ್ಖಾನೆಗಳಿಗೆ ಕೊಡುವ ಹಣ ಇಡೀ ರೈತ ಸಮುದಾಯಕ್ಕೆ ಸಂದಾಯವಾಗುತ್ತದೆ. ಈ ಸರಳ ಸತ್ಯವನ್ನು ಅರಿತು ಕೊಳ್ಳುವುದು ಅವಶ್ಯವಿದೆ.

# ಇಥೆನಾಲ್‍ಗೂ ನ್ಯಾಯ ಸಮ್ಮತ ಬೆಲೆ ಇಲ್ಲ:
ಡಿಸ್ಟಿಲರಿ ಘಟಕ ಹೊಂದಿರುವ ಸಕ್ಕರೆ ಕಾರ್ಖಾನೆಗಳು ಎಥನಾಲ್ ಉತ್ಪಾದಿಸುತ್ತಿವೆ. ಇಥೆನಾಲ್ ಪೆಟ್ರೋಲ್‍ನೊಂದಿಗೆ ವಾಹನಗಳಿಗೆ ಬಳಸುವ ಇಂಧನವಾಗಿದೆ. ಇಥೆನಾಲ್ನ್ನು ಹೆಲಿಕಾಪ್ಟರ್ ಮತ್ತು ವಿಮಾನಗಳು ಬಳಸ ಬಹುದಾಗಿದೆ. ಇಥೆನಾಲ್ ಬೆಲೆಯನ್ನು ಸ್ವಲ್ಪಮಟ್ಟಿಗೆ ಸರ್ಕಾರ ಹೆಚ್ಚಿಸಿದರೂ ಇದು ನ್ಯಾಯ ಸಮ್ಮತ ಬೆಲೆ ಅಲ್ಲ ಎಂಬುದು ಕಾರ್ಖಾನೆಗಳ ಆಡಳಿತ ಮಂಡಳಿಗಳ ಅಭಿಪ್ರಾಯವಾಗಿದೆ.

ಸರ್ಕಾರ ಆಸಕ್ತಿ ವಹಿಸಿ ಇಥೆನಾಲ್ ಉತ್ಪಾದಿಸುವುದಕ್ಕೆ ಪ್ರೋತ್ಸಾಹ ನೀಡಿದರೆ ವಿದೇಶದಿಂದ ಇಂಧನ ಆಮದು ಮಾಡಿಕೊಳ್ಳುವ ಪ್ರಮಾಣ್ನ ತಗ್ಗಿಸಬಹುದು. ಇದರಿಂದ ಸಾಕಷ್ಟು ಆಮದು ಶುಲ್ಕವನ್ನೂ ಉಳಿಸಬಹುದು. ಸರ್ಕಾರ ಈ ನಿಟ್ಟಿನಲ್ಲಿ ದಿಟ್ಟ ಹೆಜ್ಜೆ ಇಡುವುದು ಅವಶ್ಯವಿದೆ.

ಸಕ್ಕರೆ ಕೈಗಾರಿಕೆ, ಕೃಷಿ ಆಧಾರಿತ ಗ್ರಾಮೀಣ ಭಾಗದ ಉದ್ದಿಮೆಯಾಗಿದೆ. ದೇಶದಲ್ಲಿ 12 ಕೋಟಿ ಕಬ್ಬು ಬೆಳೆಗಾರರ ಕುಟುಂಬಗಳಿವೆ, ಕರ್ನಾಟಕದಲ್ಲಿ 1 ಕೋಟಿಗಿಂತ ಹೆಚ್ಚು ರೈತರು ಕಬ್ಬು ಬೆಳೆಯುತ್ತಾರೆ. ಸಕ್ಕರೆ ಉದ್ದಿಮೆಗೆ ಸರ್ಕಾರ ಮಾಡಿದ ಎಲ್ಲಾ ಸಹಾಯ ಪರೋಕ್ಷವಾಗಿ ರೈತ ಸಮುದಾಯಕ್ಕೆ ತಲುಪುತ್ತಿದೆ.

Facebook Comments