ಬೆಂಗಳೂರಲ್ಲಿ ದಂಪತಿ ಆತ್ಮಹತ್ಯೆ
ಬೆಂಗಳೂರು,ಮಾ.20- ಬೇಕರಿ ಉದ್ಯಮ ನಡೆಸುತ್ತಿದ್ದ ದಂಪತಿ ಮನೆಯಲ್ಲಿ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ವಿಜಯನಗರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ರಾತ್ರಿ ನಡೆದಿದೆ. ಹೊಸಹಳ್ಳಿ ನಿವಾಸಿಗಳಾದ ಧರ್ಮರಾಜ್(55) ಮತ್ತು ಭಾಗ್ಯ(50) ಆತ್ಮಹತ್ಯೆ ಮಾಡಿಕೊಂಡಿರುವ ದಂಪತಿ. ಸಾಲದ ಹಿನ್ನೆಲೆಯಲ್ಲಿ ದಂಪತಿ ಆತ್ಮಹತ್ಯೆ ಮಾಡಿಕೊಂಡಿರಬಹುದೆಂಬ ಶಂಕೆ ವ್ಯಕ್ತವಾಗಿದೆ.
ಧರ್ಮರಾಜ್ ಅವರು ಕಾಟನ್ಪೇಟೆ, ಚಾಮರಾಜಪೇಟೆ ಸೇರಿದಂತೆ ಮೂರು ಕಡೆ ಬೇಕರಿಗಳನ್ನು ನಡೆಸುತ್ತಿದ್ದರು. ರಾತ್ರಿ ಎಂದಿನಂತೆ ಬೇಕರಿಯಿಂದ ಮನೆಗೆ ಬಂದ ಧರ್ಮರಾಜ್ ಪತ್ನಿ ಜೊತೆ ಊಟ ಮಾಡಿದ್ದಾರೆ. ತದನಂತರ ದಂಪತಿ ತಮ್ಮ ಮನೆಯ 3ನೇ ಪ್ಲೊರ್ನಲ್ಲಿರುವ ಗೆಸ್ಟ್ ರೂಮ್ಗೆ ತೆರಳಿ ಶೀಟಿನ ಕಬ್ಬಿಣದ ರಾಡ್ಗೆ ನೇಣು ಬಿಗಿದುಕೊಂಡು ಆತ್ಮಹತ್ಯೆಗೆ ಶರಣಾಗಿದ್ದಾರೆ. ಆತ್ಮಹತ್ಯೆಗೂ ಮುನ್ನ ಡೆತ್ನೋಟ್ ಬರೆದಿಟ್ಟಿದ್ದಾರೆ.
ತಡರಾತ್ರಿ ಬೇಕರಿಯಿಂದ ಮಗ ಮನೆಗೆ ಬಂದಾಗ ಅಪ್ಪ-ಅಮ್ಮ ಕಾಣಿಸದಿದ್ದಾಗ ಮನೆಯೆಲ್ಲ ಹುಡುಕಿದ್ದಾನೆ. ನಂತರ ಗೆಸ್ಟ್ರೂಮ್ಗೆ ಹೋಗಿ ನೋಡಿದಾಗ ಇಬ್ಬರೂ ಆತ್ಮಹತ್ಯೆ ಮಾಡಿಕೊಂಡಿರುವುದು ಕಂಡು ಆಘಾತಕ್ಕೊಳಗಾಗಿದ್ದಾರೆ. ಸುದ್ದಿ ತಿಳಿದ ವಿಜಯನಗರ ಠಾಣೆ ಪೊಲೀಸರು ಸ್ಥಳಕ್ಕೆ ತೆರಳಿ ಪರಿಶೀಲನೆ ನಡೆಸಿದ್ದು, ಸ್ಥಳದಲ್ಲಿ ದೊರೆತ ಡೆತ್ನೋಟ್ನ್ನು ವಶಕ್ಕೆ ಪಡೆದುಪ್ರಕರಣ ದಾಖಲಿಸಿಕೊಂಡು ಮುಂದಿನ ಕ್ರಮ ಕೈಗೊಂಡಿದ್ದಾರೆ. ಆತ್ಮಹತ್ಯೆಗೆ ಸಾಲ ಇರಬಹುದೆಂಬ ಶಂಕೆ ಮೇಲ್ನೋಟಕ್ಕೆ ವ್ಯಕ್ತವಾಗಿದ್ದು, ಈ ನಿಟ್ಟಿನಲ್ಲಿ ಪೊಲೀಸರು ತನಿಖೆ ಮುಂದುವರೆಸಿದ್ದಾರೆ.