ಮೂರು ಜೀವಗಳನ್ನು ಬಲಿ ಪಡೆದ ಒಂದು ಪ್ರೀತಿ..!

ಈ ಸುದ್ದಿಯನ್ನು ಶೇರ್ ಮಾಡಿ

ನಾಗಮಂಗಲ, ಅ.23- ಪ್ರೀತಿಗೆ ವಿರೋಧ ವ್ಯಕ್ತಪಡಿಸಿದ ಪೋಷಕರ ನಡೆಯಿಂದ ಮನನೊಂದ ಅಪ್ರಾಪ್ತ ಬಾಲಕಿಯೊಬ್ಬಳು ಆತ್ಮಹತ್ಯೆಗೆ ವಿಫಲಯತ್ನ ನಡೆಸಿ ಆಸ್ಪತ್ರೆಯಲ್ಲಿ ಕೊನೆಯುಸಿರೆಳೆದರೆ, ಇದೇ ಪ್ರಕರಣದಿಂದ ಬೇಸತ್ತು ಯುವಕ ಮತ್ತು ಬಾಲಕಿ ಮನೆಯ ಇಬ್ಬರು ಸದಸ್ಯರು ಸಾವನ್ನಪ್ಪಿರುವ ಘಟನೆ ತಾಲೂಕಿನ ಬೆಳ್ಳೂರು ಪೋಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ.

ತಾಲೂಕಿನ ಮಂಚೇನಹಳ್ಳಿ ಗ್ರಾಮದ ಕಾಂಚನ (17) ಹೊನ್ನೇನಹಳ್ಳಿ ಗ್ರಾಮದ ಸೋಮಶೇಖರ್ ಹಾಗೂ ತಮಿಳುನಾಡಿನ ಊಟಿಯಲ್ಲಿ ನಲೆಸಿದ್ದ ಬಾಲಕಿಯ ತಾತ ಚಂದ್ರಣ್ಣ (66) ಎಂಬುವರೇ ಅಪ್ರಾಪ್ತ ಬಾಲಕಿಯೊಬ್ಬಳ ಪ್ರೇಮ ಪ್ರಕರಣದಿಂದ ಪ್ರಾಣ ಕಳೆದುಕೊಂಡಿರುವ ದುರ್ದೈವಿಗಳು.

ತಾಲೂಕಿನ ಬೆಳ್ಳೂರು ಹೋಬಳಿಯ ಹೊನ್ನೇನಹಳ್ಳಿ ಗ್ರಾಮದ ಸೋಮಶೇಖರ್ ಎಂಬುವರ ಮಗ ಯಶವಂತ್ (22) ಹಾಗೂ ಮಂಚೇನಹಳ್ಳಿ ಗ್ರಾಮದ ಕೇಶವಮೂರ್ತಿ ಎಂಬುವರ ಮಗಳು ಕಾಂಚನ (17) ಕೆಲ ದಿನಗಳಿಂದ ಪ್ರೀತಿಸುತ್ತಿದ್ದು, ಇವರಿಬ್ಬರ ಪ್ರೀತಿ ಪ್ರೇಮಾಂಕುರದ ವಿಷಯ ಬಾಲಕಿಯ ಪೋಷಕರಿಗೆ ತಿಳಿದು ಪ್ರೀತಿಗೆ ವಿರೋಧ ವ್ಯಕ್ತಪಡಿಸಿದ್ದರು.

ಪೋಷಕರ ಬುದ್ದಿಮಾತು ಕೇಳದ ಅಪ್ರಾಪ್ತ ಬಾಲಕಿ ಕಾಂಚನ ಕಳೆದೊಂದು ವಾರದ ಹಿಂದೆ ಮನೆಯಲ್ಲಿ ನೇಣುಬಿಗಿದು ಆತ್ಮಹತ್ಯೆ ಮಾಡಿಕೊಳ್ಳಲು ಯತ್ನಿಸುತ್ತಿದ್ದ ವೇಳೆ ಕುತ್ತಿಗೆಗೆ ಬಿಗಿದುಕೊಂಡಿದ್ದ ಹಗ್ಗ ತುಂಡಾದ ಪರಿಣಾಮ ಬಾಲಕಿ ಕೆಳಗೆ ಬಿದ್ದು ಗಂಭೀರ ಸ್ಥಿತಿಯಲ್ಲಿ ಗಾಯಗೊಂಡಿದ್ದಳು.  ಹೆಚ್ಚಿನ ಚಿಕಿತ್ಸೆಗಾಗಿ ಬಾಲಕಿಯನ್ನು ಬೆಂಗಳೂರಿನ ಖಾಸಗಿ ಆಸ್ಪತ್ರೆಗೆ ರವಾನಿಸಲಾಗಿತ್ತಾದರೂ ಬದುಕುಳಿಯುವುದು ಕಷ್ಟ ಎಂದು ವೈದ್ಯರು ತಿಳಿಸಿದ ಮೇರೆಗೆ ತಾಲೂಕಿನ ಬಿ.ಜಿ.ನಗರದ ಆದಿಚುಂಚನಗಿರಿ ಆಸ್ಪತ್ರೆಗೆ ಬಾಲಕಿಯನ್ನು ತಂದು ದಾಖಲಿಸಲಾಗಿತ್ತು.

ಮಗಳ ಈ ಸ್ಥಿತಿಗೆ ಪಕ್ಕದ ಹೊನ್ನೇನಹಳ್ಳಿ ಗ್ರಾಮದ ಸೋಮಶೇಖರ್ ಮಗ ಯಶವಂತ್ ಕಾರಣ ಎಂದು ಬಾಲಕಿಯ ಪೋಷಕರು ನೀಡಿದ್ದ ದೂರಿನ ಮೇರೆಗೆ, ಪ್ರಕರಣ ದಾಖಲಿಸಿಕೊಂಡಿದ್ದ ಬೆಳ್ಳೂರು ಪೋಲೀಸರು ಯಶವಂತ್‍ನನ್ನು ವಶಕ್ಕೆ ಪಡೆದು ಜೈಲಿಗಟ್ಟಿದ್ದರು.

ಮಗ ಜೈಲು ಪಾಲಾದ ವಿಷಯ ತಿಳಿಯುತ್ತಿದ್ದಂತೆ ಮಂಗಳೂರಿನಲ್ಲಿ ಡ್ರೈವರ್ ಆಗಿ ಕೆಲಸ ಮಾಡುತ್ತಿದ್ದ ಯಶವಂತ್‍ನ ತಂದೆ ಸೋಮಶೇಖರ್ ತಾನು ವಾಸವಿದ್ದ ಬಾಡಿಗೆ ಮನೆಯೊಂದರಲ್ಲಿಯೇ ನೇಣಿಗೆ ಕೊರಳೊಡ್ಡಿ ಆತ್ಮಹತ್ಯೆ ಮಾಡಿಕೊಂಡಿದ್ದರು. ತಂದೆಯ ಅಂತ್ಯ ಸಂಸ್ಕಾರ ಹಾಗೂ ಉತ್ತರಕ್ರಿಯಾದಿ ಕಾರ್ಯಗಳು ಮುಗಿಯುವವರೆಗೂ ಯಶವಂತ್‍ನನ್ನು ಜಾಮೀನಿನ ಮೇಲೆ ಬಿಡುಗಡೆ ಮಾಡಿಸಿಕೊಂಡು ಬರಲಾಗಿತ್ತು.

ಈ ಮಧ್ಯೆ ಬಿ.ಜಿ.ನಗರದ ಆಸ್ಪತ್ರೆಯಲ್ಲಿ ಪ್ರಜ್ಞಾಹೀನ ಸ್ಥಿತಿಯಲ್ಲಿ ಸಾವು ಬದುಕಿನ ನಡುವೆ ಹೋರಾಟ ನಡೆಸುತ್ತಿದ್ದ ಬಾಲಕಿ ಕಾಂಚನಳನ್ನು ನೋಡುವ ಸಲುವಾಗಿ ಊಟಿಯಲ್ಲಿ ನೆಲೆಸಿದ್ದ ಬಾಲಕಿಯ ತಾತ ಚಂದ್ರಣ್ಣ(66) ಆಸ್ಪತ್ರೆಗೆ ಭೇಟಿ ಕೊಟ್ಟು, ಮೊಮ್ಮಗಳ ಸ್ಥಿತಿಯನ್ನು ಕಂಡು ತೀವ್ರ ಆತಂಕಕ್ಕೊಳಗಾಗಿದ್ದರು. ಮೊಮ್ಮಗಳ ಕೊರಗಿನಲ್ಲಿಯೇ ಮನೆಗೆ ತೆರಳಿದ ಚಂದ್ರಣ್ಣ ಹೃದಯಾಘಾತದಿಂದ ಸಾವನ್ನಪ್ಪಿದ್ದಾರೆ.

ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಕಾಂಚನ ಚಿಕಿತ್ಸೆ ಫಲಕಾರಿಯಾಗದೆ ಭಾನುವಾರ ಕೊನೆಯುಸಿರೆಳೆದಿದ್ದಾಳೆ. ಇದೇ ದಿನ ಹೊನ್ನೇನಹಳ್ಳಿ ಯಶವಂತ್‍ನ ತಂದೆಯ ತಿಥಿ ಕಾರ್ಯವೂ ಸಹ ಜರುಗಿತ್ತು. ಒಂದು ಪ್ರೇಮ ಪ್ರಕರಣದಿಂದಾಗಿ ಎರಡು ಕುಟುಂಬ ಮೂವರು ಒಂದೇ ವಾರದಲ್ಲಿ ಸಾವನ್ನಪ್ಪಿರುವ ಘಟನೆಯಿಂದಾಗಿ ಮಂಚೇನಹಳ್ಳಿ ಮತ್ತು ಹೊನ್ನೇನಹಳ್ಳಿ ಗ್ರಾಮಗಳಲ್ಲಿ ಸೂತಕದ ಛಾಯೆ ಆವರಿಸಿದ್ದು, ಜಾಮೀನಿನ ಮೇಲೆ ಬಿಡುಗಡೆಗೊಂಡಿದ್ದ ಯಶವಂತ್‍ನನ್ನು ಮಂಗಳವಾರ ಪುನಃ ನ್ಯಾಯಂಗ ಬಂಧನಕ್ಕೆ ಒಪ್ಪಿಸಲಾಗಿದೆ.

Facebook Comments