ಮದುವೆಗೆ ಒಪ್ಪದ ಮನೆಯವರು, ಆತ್ಮಹತ್ಯೆಗೆ ಶರಣಾದ ಪ್ರೇಮಿಗಳು..!

ಈ ಸುದ್ದಿಯನ್ನು ಶೇರ್ ಮಾಡಿ

ಚಿಕ್ಕಮಗಳೂರು, ಅ.3- ಮದುವೆಗೆ ಮನೆಯವರು ವಿರೋಧ ವ್ಯಕ್ತಪಡಿಸಿದ್ದರಿಂದ ನೊಂದ ಪ್ರೇಮಿಗಳು ವಿಷ ಸೇವಿಸಿ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಬಣಕಲ್ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ. ಮೂಡಿಗೆರೆ ತಾಲ್ಲೂಕು ಗೋಣಿ ಬೀಡು ಬಳಿಯ ಹೊಸಪುರ ನಿವಾಸಿ ನೂತನ್‍ಕುಮಾರ್ (25) ಮತ್ತು ಕೊಟ್ಟಿಗೆಹಾರ ಬಳಿಯ ರಾಮನಗರದ ನಿವಾಸಿ ಅಪೂರ್ವ (22) ಆತ್ಮಹತ್ಯೆಗೆ ಶರಣಾದ ಪ್ರೇಮಿಗಳು.

ಖಾಸಗಿ ಸಂಸ್ಥೆಯೊಂದರಲ್ಲಿ ಅಪೂರ್ವ ಉದ್ಯೋಗಿಯಾಗಿದ್ದರು. ಕಾನೂನು ಪದವಿ ಮುಗಿಸಿದ್ದ ನೂತನ್‍ಕುಮಾರ್ ವಕೀಲ ವೃತ್ತಿ ಅಭ್ಯಾಸ ಮಾಡುತ್ತಿದ್ದನು. ಇವರಿಬ್ಬರು ಕಳೆದ 5 ವರ್ಷಗಳಿಂದ ಪ್ರೀತಿಸುತ್ತಿದ್ದರು ಎನ್ನಲಾಗಿದೆ.ಆದರೆ ಇವರ ಪ್ರೀತಿಗೆ ಯುವಕನ ಕುಟುಂಬದವರು ಸಮ್ಮತಿ ನೀಡಿರಲಿಲ್ಲ.

ಈ ನಡುವೆ ಮನೆಯವರ ವಿರೋಧದ ನಡುವೆಯೂ ಸೆ.30ರಂದು ಚಿಕ್ಕಮಗಳೂರಿನಲ್ಲಿ ವಿವಾಹವಾಗಿದ್ದಾರೆ.ಈ ವಿಷಯವನ್ನು ನೂತನ್‍ಕುಮಾರ್ ಪೋನ್ ಮೂಲಕ ಮನೆಯವರಿಗೆ ವಿಷಯ ತಿಳಿಸಿದ್ದಾರೆ. ನೀನೇನಾದರೂ ಮದುವೆಯಾಗಿದ್ದರೆ ನಾವೆಲ್ಲರೂ ಆತ್ಮಹತ್ಯೆ ಮಾಡಿಕೊಳ್ಳುವುದಾಗಿ ಪೋಷಕರು ತಿಳಿಸಿದ್ದಾರೆ.

ಇದರಿಂದ ಮನ ನೊಂದ ಪ್ರೇಮಿಗಳು ಮದುವೆಯಾದ ದಿನವೇ ಮಧ್ಯಾಹ್ನ 3 ಗಂಟೆ ಸುಮಾರಿನಲ್ಲಿ ವಿಷ ಸೇವಿಸಿದ್ದಾರೆ. ನಂತರ ನೂತನ್‍ಕುಮಾರ್ ತನ್ನ ಕಾರಿನಲ್ಲೇ ಚಿಕ್ಕಮಗಳೂರಿನಿಂದ ಕೊಟ್ಟಿಗೆ ಹಾರಕ್ಕೆ ಬಂದು ಅಪೂರ್ವ ಅವರನ್ನು ಮನೆ ಬಳಿ ಬಿಟ್ಟು ನಂತರ ತನ್ನ ಮನೆಗೆ ಹೋಗಿದ್ದಾನೆ.  ಅಂದು ಸಂಜೆ ನೂತನ್‍ಕುಮಾರ್‍ಗೆ ತೀವ್ರತೆರನಾದ ಹೊಟ್ಟೆನೋವು ಕಾಣಿಸಿಕೊಂಡಿದೆ. ತಕ್ಷಣ ಮನೆಯವರು ಮೂಡಿಗೆರೆ ಸರ್ಕಾರಿ ಆಸ್ಪತ್ರೆಗೆ ದಾಖಲಿಸಿದ್ದಾರೆ.

ಅತ್ತ ಅಪೂರ್ವ ತೀವ್ರ ಅಸ್ವಸ್ಥಗೊಂಡು ಕುಸಿದು ಬಿದ್ದಿದ್ದು ಕುಟುಂಬದವರು ಈಕೆಯನ್ನು ಮೂಡಿಗೆರೆ ಸರ್ಕಾರಿ ಆಸ್ಪತ್ರೆಗೆ ದಾಖಲಿಸಿದ್ದಾರೆ.ಇವರಿಬ್ಬರಿಗೂ ಪ್ರಥಮ ಚಿಕಿತ್ಸೆ ನೀಡಿದ ವೈದ್ಯರು ಹೆಚ್ಚಿನ ಚಿಕಿತ್ಸೆಗಾಗಿ ಮಂಗಳೂರಿಗೆ ಕರೆದೊಯ್ಯಲು ತಿಳಿಸಿದ್ದಾರೆ.ಅದರಂತೆ ಅಪೂರ್ವ ಪೋಷಕರು ಈಕೆಯನ್ನು ಮಂಗಳೂರಿನ ಕೆಎಂಸಿ ಆಸ್ಪತ್ರೆಗೆ ದಾಖಲಿಸಿದ್ದರೆ ನೂತನ್‍ಕುಮಾರ್‍ನನ್ನು ಇಲ್ಲಿನ ಎಜಿ ಆಸ್ಪತ್ರೆಗೆ ದಾಖಲಿಸಲಾಗಿತ್ತು.

ಆದರೆ ಇವರಿಬ್ಬರೂ ಚಿಕಿತ್ಸೆಗೆ ಸ್ಪಂದಿಸದೆ ನಿನ್ನೆ ಮೃತಪಟ್ಟಿದ್ದಾರೆ. ಘಟನೆ ಸಂಬಂಧ ಬಣಕಲ್ ಠಾಣೆ ಪೊಲೀಸರು ಪ್ರಕರಣ ದಾಖಲಿಸಿಕೊಂಡು ಮುಂದಿನ ಕ್ರಮ ಕೈಗೊಂಡಿದ್ದಾರೆ.

Facebook Comments