ಹೈವೋಲ್ಟೇಜ್ ಕ್ಷೇತ್ರ ಮಂಡ್ಯದಲ್ಲಿ ಮತಎಣಿಕೆಗೆ ಸಿದ್ಧತೆ, ಸುಮಲತಾನಾ..? ಸಿಎಂ ಪುತ್ರನಾ..?

ಈ ಸುದ್ದಿಯನ್ನು ಶೇರ್ ಮಾಡಿ

ಮಂಡ್ಯ,ಮೇ 21- ಲೋಕಸಭೆ ಕ್ಷೇತ್ರದ ಚುನಾವಣಾ ಫಲಿತಾಂಶಕ್ಕೆ ಜಿಲ್ಲಾಡಳಿತ ಸಕಲಸಿದ್ಧತೆ ಕೈಗೊಂಡಿರುವುದಾಗಿ ಜಿಲ್ಲಾಧಿಕಾರಿ ಡಾ.ಪಿ.ಜಿ.ಜಾಫರ್ ತಿಳಿಸಿದರು.  ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಇದೇ 23ರಂದು ಚುನಾವಣಾ ಮತ ಎಣಿಕೆ ಕಾರ್ಯವು ಸರ್ಕಾರಿ ಮಹಾವಿದ್ಯಾಲಯದಲ್ಲಿ 14 ಕೊಠಡಿಗಳಲ್ಲಿ 108 ಟೇಬಲ್‍ಗಳಲ್ಲಿ ನಡೆಯಲಿದೆ.

ಅಂದು ಬೆಳಗ್ಗೆ 7.30ಕ್ಕೆ ಅಭ್ಯರ್ಥಿಗಳು ಚುನಾವಣಾ ಏಜೆಂಟರು, ಚುನಾವಣಾಧಿಕಾರಿ, ಸಹಾಯಕ ಚುನಾವಣಾಧಿಕಾರಿ ಸಮ್ಮುಖದಲ್ಲಿ ವಿಡಿಯೋ ಚಿತ್ರೀಕರಣದೊಂದಿಗೆ ಸ್ಟ್ರಾಂಗ್ ರೂಂ ತೆರೆಯಲಾಗುವುದು ಹಾಗೂ ಎಲ್ಲಾ ಮತ ಎಣಿಕೆ ಕೊಠಡಿಗಳಿಗೆ ತಲಾ ಎರಡರಂತೆ ಒಟ್ಟು 28 ಸಿಸಿ ಟಿವಿ ಕ್ಯಾಮೆರಾಗಳನ್ನು ಮತ್ತು ಅಂಚೆ ಮತಪತ್ರಗಳ ಎಣಿಕೆ ಹಾಗೂ ಇಟಿಪಿಬಿಎಸ್ ಮತಗಳ ಎಣಿಕೆ ನಡೆಯುವ ಸ್ಥಳದಲ್ಲೂ ಸಿಸಿಟಿವಿ ಅಳವಡಿಸಲಾಗಿದೆ ಎಂದು ವಿವರಿಸಿದರು.

ಕ್ಷೇತ್ರದ 2046 ಮತಗಟ್ಟೆಗಳ ಮತ ಎಣಿಕೆಗೆ ಒಟ್ಟು 117 ಎಣಿಕೆ ಮೇಲ್ವಿಚಾರಕರು, 116 ಎಣಿಕೆ ಸಹಾಯಕರು ಹಾಗೂ 134 ಎಣಿಕೆ ಮೈಕ್ರೋ ಅಬ್ಸರ್‍ವರ್‍ಗಳನ್ನು ನೇಮಿಸಲಾಗಿದೆ. ಮತ ಎಣಿಕೆ ಏಜೆಂಟರಾಗಲಿ, ಸಿಬ್ಬಂದಿ, ಚುನಾವಣಾ ಕೆಲಸನಿರತ ಅಧಿಕಾರಿಗಳು ಮೊಬೈಲ್ ಫೆÇೀನ್ ಅಥವಾ ಕ್ಯಾಮೆರಾಗಳನ್ನು ಕೇಂದ್ರಕ್ಕೆ ತೆಗೆದುಕೊಂಡು ಹೋಗುವಂತಿಲ್ಲ ಎಂದು ತಿಳಿಸಿದರು.

ಮತ ಎಣಿಕೆಯನ್ನು ಶಾಂತಿಯುತವಾಗಿ ನಡೆಸುವ ಸಲುವಾಗಿ ಮೇ 22ರಂದು ರಾತ್ರಿ 12 ಗಂಟೆಯಿಂದ ಮೇ 23ರಂದು ರಾತ್ರಿ 12ರವರೆಗೆ ಜಿಲ್ಲೆಯಾದ್ಯಂತ ಮದ್ಯದ ಅಂಗಡಿ, ಬಾರ್ ಅಂಡ್ ರೆಸ್ಟೋರೆಂಟ್, ಕ್ಲಬ್‍ಗಳಲ್ಲಿ ಮದ್ಯ ಮಾರಾಟ, ಹಂಚಿಕೆ, ಸಾಗಾಣಿಕೆ ಹಾಗೂ ಶೇಖರಣೆಗಳನ್ನು ನಿಷೇಧಿಸಿ ಪಾನ ವಿರೋಧ ದಿನವೆಂದು ಘೋಷಿಸಿ ಆದೇಶ ಹೊರಡಿಸಿದ್ದಾರೆ.

ಗೌಪ್ಯತೆ ಉಲ್ಲಂಘನೆಯ ಮತ ರದ್ದು:
ಮಂಡ್ಯ ಲೋಕಸಭಾ ಚುನಾವಣೆಯಲ್ಲಿ ಇಟಿಪಿಬಿಎಸ್ ಮೂಲಕ ಮತ ಚಲಾವಣೆ ಮಾಡಿದ ಯೋಧರೊಬ್ಬರು, ಸಾಮಾಜಿಕ ಜಾಲತಾಣದಲ್ಲಿ ತಮ್ಮ ಮತ ಚಲಾವಣೆಯನ್ನು ಬಹಿರಂಗಪಡಿಸಿದ್ದರು.

ಮತದಾನದ ಗೌಪ್ಯತೆ ಕಾಪಾಡುವಲ್ಲಿ ವಿಫಲರಾಗಿರುವುದರಿಂದ ಆ ಮತವನ್ನು ಮತ ಎಣಿಕೆ ದಿನದಂದು ರದ್ದುಪಡಿಸಿರುವುದಾಗಿ ಜಾಫರ್ ತಿಳಿಸಿದರು.

ಕೋಲಾರ ವರದಿ:
ಮೇ 23ರಂದು ನಡೆಯಲಿರುವ ಲೋಕಸಭೆ ಚುನಾವಣೆಗೆ ಮತ ಎಣಿಕೆಗಾಗಿ ಜಿಲ್ಲಾಡಳಿತ ಸಕಲ ಸಿದ್ಧತೆ ಮಾಡಿಕೊಂಡಿದೆ. ಕ್ಷೇತ್ರಾದ್ಯಂತ 2100 ಮತಗಟ್ಟೆಗಳಲ್ಲಿ ಮತದಾನ ನಡೆದಿದ್ದು, 23ರಂದು ಬೆಳಗ್ಗೆ 8 ಗಂಟೆಗೆ ಮತ ಎಣಿಕೆ ಪ್ರಾರಂಭವಾಗಲಿದೆ.

ಅಂದು ಬೆಳಗ್ಗೆ 7.30ಕ್ಕೆ ವೀಕ್ಷಕರ ಮುಂದೆ ಭದ್ರತಾ ಕೊಠಡಿ ತೆರೆದು ಫೋಸ್ಟಲ್ ಬ್ಯಾಲೆಟ್ ಪ್ರಾರಂಭಿಸಿ ನಂತರ ಮತ ಎಣಿಕೆ ನಡೆಯಲಿದೆ ಎಂದು ಪತ್ರಿಕಾಗೋಷ್ಟಿಯಲ್ಲಿ ಇಂದು ಜಿಲ್ಲಾಧಿಕಾರಿ ಮಂಜುನಾಥ್ ತಿಳಿಸಿದರು.

Facebook Comments