ಪ್ರತಾಪ ಸಿಂಹಗೆ ‘ಪೇಟೆ ರೌಡಿ’ ಬಿರುದು ಕೊಟ್ಟ ಸುಮಲತಾ ಅಂಬರೀಶ್..!
ಬೆಂಗಳೂರು, ನ.17- ಪ್ರತಾಪ ಸಿಂಹ ಅವರು ಸಂಸದರ ರೀತಿಯಲ್ಲಿ ಮಾತನಾಡಿದರೆ ಪ್ರತಿಕ್ರಿಯೆ ನೀಡಬಹದು. ಪೇಟೆ ರೌಡಿಯ ಭಾಷೆ ಬಳಸಿದರೆ ಅದು ಪ್ರತಿಕ್ರಿಯೆಗೆ ಅರ್ಹವಾದ ಹೇಳಿಕೆಯಲ್ಲ ಎಂದು ಮಂಡ್ಯ ಲೋಕಸಭೆ ಸದಸ್ಯೆ ಸುಮಲತಾ ಅಂಬರೀಶ್ ಕಿಡಿಕಾರಿದಾರೆ. ಸುಮಲತಾ ಅವರು ಮಂಡ್ಯದಲ್ಲಿ ಕೆಲಸ ಮಾಡುತ್ತಿಲ್ಲ.
ಏನೇ ಕೆಲಸ ಇದ್ದರೂ ನನಗೆ ಹೇಳಿ. ನಾನೇ ಮಾಡಿಕೊಡುತ್ತೇನೆ ಎಂದು ಮೈಸೂರಿನ ಸಂಸದ ಪ್ರತಾಪ್ಸಿಂಹ ಅವರು ಹೇಳಿರುವ ಮಾತುಗಳ ವಿಡಿಯೋ ಭಾರೀ ವೈರಲ್ ಆಗಿತ್ತು. ಆ ಬಗ್ಗೆ ಪ್ರತಿಕ್ರಿಯೆ ನೀಡಿರುವ ಸುಮಲತಾ ಅವರು ಪಕ್ಕದ ಕ್ಷೇತ್ರದ ಸಂಸದರಿಗೆ ನನ್ನ ಕ್ಷೇತ್ರದ ಬಗ್ಗೆ ಮಾತನಾಡುವ ಹಕ್ಕಿಲ್ಲ.
ಮೈಸೂರು ಜಿಲ್ಲೆಯ ಕೆ.ಆರ್.ಪೇಟೆ ನನ್ನ ವ್ಯಾಪ್ತಿಗೆ ಬರುತ್ತದೆ. ಮೈಸೂರು ಲೋಕಸಭಾ ಕ್ಷೇತ್ರಕ್ಕೆ ನಾನೂ ಸೇರುತ್ತೇನೆ. ಕೊಡಗು ಜಿಲ್ಲೆಯಲ್ಲಿ ಭಾರೀ ಮಳೆಯಿಂದ ರಸ್ತೆಗಳು ಕೊಚ್ಚಿಕೊಂಡು ಹೋಗಿವೆ. ಜನ ಜೀವನ ಅಸ್ತವ್ಯಸ್ತವಾಗಿದೆ. ಈವರೆಗೂ ಅಲ್ಲಿ ನೆರವು ಸಿಕ್ಕಿಲ್ಲ. ಅಲ್ಲಿನ ಜನ ನನ್ನ ಬಳಿ ಬಂದು ಸಾಕಷ್ಟು ದೂರುಗಳನ್ನು ಹೇಳಿಕೊಳ್ಳುತ್ತಾರೆ.
ರಾಜಕಾರಣಿಗಳು, ಜನಪ್ರತಿನಿಧಿಗಳು ಸಿಕ್ಕಾಗ ಜನರು ಕಷ್ಟಗಳನ್ನು ಹೇಳಿಕೊಳ್ಳುತ್ತಾರೆ. ಹಾಗೆಂದ ಮಾತ್ರಕ್ಕೆ ಬೇಜವಾಬ್ದಾರಿಯುತವಾಗಿ ಮತ್ತೊಂದು ಕ್ಷೇತ್ರದ ಜನಪ್ರತಿನಿಧಿಯ ಬಗ್ಗೆ ಮಾತನಾಡುವುದು ಒಳ್ಳೆಯದಲ್ಲ ಎಂದರು.
ಪ್ರತಾಪ್ಸಿಂಹ ಅವರ ಹೇಳಿಕೆ ಪ್ರತಿಕ್ರಿಯೆಗೆ ಅರ್ಹವಾದದ್ದಲ್ಲ. ತಮ್ಮ ಪತಿ ಅಂಬರೀಶ್ ಬದುಕಿದ್ದಾಗ ಯಾರೂ ಮಾತನಾಡುವ ಧೈರ್ಯ ಮಾಡುತ್ತಿರಲಿಲ್ಲ. ಈಗ ಎಲ್ಲರೂ ಮಾತನಾಡುತ್ತಾರೆ. ಪ್ರತಾಪ್ಸಿಂಹ ಅಥವಾ ಪಕ್ಕದ ಕ್ಷೇತ್ರದ ಜನಪ್ರತಿನಿಧಿಗಳಿಗೆ ನಾನು ಉತ್ತರದಾಯಿ ಅಲ್ಲ. ನಾನು ನನ್ನ ಕ್ಷೇತ್ರದ ಜನತೆಗೆ ಉತ್ತರದಾಯಿ. ಅವರು ನನ್ನ ಕೆಲಸದ ಬಗ್ಗೆ ಯಾವ ರೀತಿ ಪ್ರತಿಕ್ರಿಯಿಸುತ್ತಾರೆ ಎಂಬುದಷ್ಟೇ ಮುಖ್ಯ ಎಂದು ಹೇಳಿದ್ದಾರೆ.