ಸಂಡೆ ಲಾಕ್‍ಡೌನ್ : ಏನಿರುತ್ತೆ, ಏನಿರಲ್ಲ..? ಇಲ್ಲಿದೆ ಕಂಪ್ಲೀಟ್ ಅಪ್ಡೇಟ್ಸ್

ಈ ಸುದ್ದಿಯನ್ನು ಶೇರ್ ಮಾಡಿ

ಬೆಂಗಳೂರು,ಜು.4-ರಾಜ್ಯದಲ್ಲಿ ಕೊರೋನಾ ಸೋಂಕು ಹಾಗೂ ಸಾವಿನ ಪ್ರಮಾಣ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದ್ದು, ಇದನ್ನು ತಡೆಗಟ್ಟುವ ನಿಟ್ಟಿನಲ್ಲಿ ಪ್ರತೀ ಭಾನುವಾರ ಕಫ್ರ್ಯೂ ಮಾದರಿಯ ಪೂರ್ಣ ಪ್ರಮಾಣದ ಲಾಕ್‍ಡೌನ್ ಜಾರಿಗೊಳಿಸುವ ಕಾರಣ ಇಂದು ಸಂಜೆಯಿಂದಲೇ ಕರ್ನಾಟಕ ಸಂಪೂರ್ಣ ಸ್ತಬ್ಧವಾಗಲಿದೆ.

ಇಂದು ಸಂಜೆಯಿಂದಲೇ ಪೊಲೀಸರು ರಾಜ್ಯದಾದ್ಯಂತ ಕಟ್ಟುನಿಟ್ಟಿನ ನಿರ್ಬಂಧ ವಿಧಿಸಲಿದ್ದಾರೆ. ಅಗತ್ಯ ವಸ್ತುಗಳು ಹಾಗೂ ಸೇವೆಗಳನ್ನು ಹೊರತುಪಡಿಸಿ, ಉಳಿದೆಲ್ಲಾ ಚಟುವಟಿಕೆಗಳಿಗೆ ನಿರ್ಬಂಧ ಹೇರಲಾಗಿದ್ದು, ಸಂಚಾರದ ಮೇಲೂ ಸಂಪೂರ್ಣ ನಿಷೇಧ ಹೇರಲಾಗಿದೆ.

ಮಾಂಸದ ಅಂಗಡಿಗಳು ಹಣ್ಣು, ತರಕಾರಿ, ದಿನಸಿ ಪದಾರ್ಥ, ಆಸ್ಪತ್ರೆ, ಔಷಧಿ ಅಂಗಡಿಗಳು , ಮಾಧ್ಯಮ, ವೈದ್ಯರು , ನರ್ಸ್ ಗಳಿಗೆ ಆಂಬುಲೆನ್ಸ್, ಗರ್ಭಿಣಿ ಸ್ತ್ರೀಯರಿಗೆ ತಪಾಸಣೆ, ತುರ್ತು ಚಿಕಿತ್ಸೆ, ರೋಗಿಗಳಿಗೆ ಆಸ್ಪತ್ರೆ ಹೋಗಲು ಅವಕಾಶ ನೀಡಲಾಗಿದೆ. ಆದರೆ, ಆಟೋ, ಕ್ಯಾಬ್, ಬೈಕ್,ಬಾರ್, ಸೆಲೂನ್, ಬ್ಯೂಟಿ ಪಾರ್ಲರ್, ಪಾರ್ಕ್,ಗಾರ್ಮೆಂಟ್ಸ್, ಫ್ಯಾಕ್ಟರಿ, ಕಾರ್ಖಾನೆಗಳು, ಮದ್ಯದಂಗಡಿ,ಕೆಎಸ್‍ಆರ್‍ಟಿಸಿ, ಬಿಎಂಟಿಸಿ ಬಸ್ ಹೋಟೆಲ್‍ಗಳು ಪಾರ್ಸಲ್ ಮಾತ್ರ ಅವಕಾಶ ಕೊಡಲಾಗಿದ್ದು, ಬೆಂಗಳೂರಿನಲ್ಲಿ ಎಲ್ಲಾ ಫ್ಲೈಓವರ್‍ಗಳು ಇಂದು ಸಂಜೆಯಿಂದ ಬಂದ್ ಆಗಲಿವೆ.

ಸಂಜೆಯಿಂದ 7 ರಿಂದಲೇ ಲಾಕ್‍ಡೌನ್ ಜಾರಿಗೆ ಬಂದಿದ್ದು, ನಾಳೆ ಬೆಳಗ್ಗೆ 7ರವರೆಗೆ ಅಂದರೆ 36 ತಾಸುಗಳ ಕಾಲ ಕಫ್ರ್ಯೂ ಜಾರಿಯಾಗಿದೆ. ರಾತ್ರಿ 8ರ ನಂತರ ಬೇಕಾಬಿಟ್ಟಿ ಓಡಾಡಿದವರ ವಿರುದ್ಧ ಕಠಿಣ ಕ್ರಮ ತೆಗೆದುಕೊಳ್ಳಲಾಗುವುದು ಎಂದು ಪೊಲೀಸರು ಎಚ್ಚರಿಸಿದ್ದಾರೆ.

ಅನಾವಶ್ಯಕವಾಗಿ ಸಂಚರಿಸುವ ವಾಹನಗಳ ಮಾಲೀಕರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಲಾಗುವುದು ಎಂದು ಸರ್ಕಾರ ಎಚ್ಚರಿಕೆ ನೀಡಿದೆ. ಏಕದಿನದ ಲಾಕ್‍ಡೌನ್ ಕಟ್ಟುನಿಟ್ಟಾಗಿ ಜಾರಿಗೆ ತರಲು ರಾಜ್ಯದ ಎಲ್ಲಾ ಜಿಲ್ಲಾಡಳಿತಗಳು ಮುಂದಾಗಿವೆ.

ಲಾಕ್‍ಡೌನ್ 4ನೇ ಹಂತದಲ್ಲಿ ಬಹುತೇಕ ಎಲ್ಲವನ್ನು ಸಡಿಲಿಕೆ ಮಾಡಿದ ಬಳಿಕ ಪ್ರತಿದಿನ ಸಂಜೆ 7ಗಂಟೆಯವರೆಗೆ ಜನಜೀವನ ಬಹುತೇಕ ಮೊದಲಿನ ಸ್ಥಿತಿಗೆ ತಲುಪಿದೆ. ಆದರೆ, ಇದೀಗ ಭಾನುವಾರ ಪೂರ್ಣ ಪ್ರಮಾಣದ ಲಾಕ್‍ಡೌನ್ ಅನುಷ್ಠಾನಗೊಳ್ಳಲಿದೆ.

ಅಗತ್ಯ ಸೇವೆಗಳನ್ನು ಹೊರತುಪಡಿಸಿ ಶನಿವಾರ ಸಂಜೆ 7 ಗಂಟೆಯಿಂದ ಸೋಮವಾರ ಬೆಳಿಗ್ಗೆ 7 ಗಂಟೆಯವರೆಗೆ ಕಫ್ರ್ಯೂ ಮಾದರಿ ವ್ಯವಸ್ತೆ ಜಾರಿಗೊಳಿಸಲಿದ್ದಾರೆ. ಜನರ ಸಂಚಾರಕ್ಕೆ ನಿಷೇಧವಿದ್ದು, ಅನಗತ್ಯವಾಗಿ ಓಡಾಡಿದರೆ ಮುಲಾಜಿಲ್ಲದೆ ಪ್ರಕರಣ ದಾಖಲಿಸಲು ಪೊಲೀಸರು ನಿರ್ಧರಿಸಿದ್ದಾರೆ.

ರಾಜ್ಯ ಒಳಬರುವ ಹಾಗೂ ರಾಜ್ಯದಿಂದ ಹೊರಹೋಗುವ ವಾಹನಗಳಿಗೂ ಬ್ರೇಕ್ ಹಾಕಲಾಗಿದ್ದು, ಆ ದಿನ ನಾಡಿನ ಎಲ್ಲಾ ಗಡಿಗಳನ್ನು ಕೂಡ ಬಂದ್ ಮಾಡಲಾಗುತ್ತಿದೆ. ಮುಂಜಾಗ್ರತಾ ಕ್ರಮವಾರಿ ಸೆಕ್ಷನ್ 144ರಡಿ ಅಧಿಕಾರಿಗಳು ನಿಷೇಧಾಜ್ಞೆ ಜಾರಿಗೊಳಿಸಲಿದ್ದಾರೆ.

ವಾರದ ರಜೆಯಾಗಿರುವುದರಿಂದ ಜನರು ಪ್ರಯಾಣ ಮಾಡುವುದು, ವಾಣಿಜ್ಯ ಪ್ರದೇಶ ಸೇರಿದಂತೆ ವಿವಿಧ ಕಡೆ ಸಂಚರಿಸುವುದನ್ನು ನಿಯಂತ್ರಿಸಲು ಸಂಪೂರ್ಣ ಲಾಕ್‍ಡೌನ್ ಜಾರಿಗೆ ತರಲಾಗಿದೆ. ಈ ಅವಧಿಯಲ್ಲಿ ಯಾವುದೇ ಆಟೋ, ಟ್ಯಾಕ್ಸಿ, ರೈಲ್ವೆ ಸೇವೆ, ವಾಣಿಜ್ಯ ಸೇರಿದಂತೆ ಯಾವುದೇ ಸಾರ್ವಜನಿಕ ಚಟುವಟಿಕೆಗಳಿರುವುದಿಲ್ಲ.

ಖಾಸಗಿ ವಾಹನಗಳ ಸಂಚಾರವನ್ನು ಕೂಡ ಸಂಪೂರ್ಣವಾಗಿ ನಿಷೇಧಿಸಲಾಗಿದೆ. ಆದರೆ, ಈ ಮೊದಲೇ ನಿಗದಿಯಾಗಿರುವ ವಿವಾಹ ಸಮಾರಂಭಗಳನ್ನು ಷರತ್ತಿನ ಮೇರೆಗೆ ನಡೆಸಲು ಅವಕಾಶ ನೀಡಲಾಗಿದೆ. ಇನ್ನು ಶ್ರಮಿಕ್ ವಿಶೇಷ ರೈಲು ಸಂಚಾರ, ವಂದೇ ಭಾರತ್ ಮಿಷನ್‍ನಡಿ ವಿದೇಶದಿಂದ ವಿಮಾನಗಳ ಆಗಮನ ಇರಲಿದೆ. ಈ ಹಿಂದೆ ಇದ್ದಂತೆ ಅನೇಕ ಕಡೆ ವಾಹನಗಳ ಸಂಚಾರ ನಿರ್ಬಂಧ, ಏಕಮುಖ ರಸ್ತೆ ಸಂಚಾರ ವ್ಯವಸ್ಥೆಯನ್ನು ಮಾಡಲಾಗಿದೆ.

#ಏನಿದೆ?
ಮಾಂಸದ ಅಂಗಡಿಗಳು, ಹಣ್ಣು, ತರಕಾರಿ, ದಿನಸಿ ಪದಾರ್ಥ ಖರೀದಿಗೆ ಅವಕಾಶ, ಆಸ್ಪತ್ರೆ, ಔಷಧಿ ಅಂಗಡಿಗಳು , ಮಾಧ್ಯಮಗಳಿಗೆ ಅವಕಾಶ, ಎಂದಿನಂತೆ ಡಾಕ್ಟರ್ಸ್, ನರ್ಸ್ ಗಳಿಗೆ ಆಂಬುಲೆನ್ಸ್, ಓಡಾಟ, ಅನಾರೋಗ್ಯ ಸಮಸ್ಯೆವುಳ್ಳರಿಗೆ ಆಸ್ಪತ್ರೆಗೆ ಹೋಗಲು ಅವಕಾಶ, ಗರ್ಭಿಣಿ ಸ್ತ್ರೀಯರಿಗೆ ತಪಾಸಣೆಗೆ ಅನುಮತಿ, ತುರ್ತು ಚಿಕಿತ್ಸೆ, ರೋಗಿಗಳಿಗೆ ಆಸ್ಪತ್ರೆ ಹೋಗಲು ಅವಕಾಶ

#ಏನಿಲ್ಲ?
ಆಟೋ, ಕ್ಯಾಬ್, ಬೈಕ್, ಬಾರ್, ಸೆಲೂನ್, ಬ್ಯೂಟಿ ಪಾರ್ಲರ್, ಪಾರ್ಕ್ ಬಂದ್, ಗಾರ್ಮೆಂಟ್ಸ್, ಫ್ಯಾಕ್ಟರಿ, ಕಾರ್ಖಾನೆಗಳು, ಕಂಪನಿಗಳು ಸ್ತಬ್ಧ, ಎಲ್ಲಾ ಪಾರ್ಕ್ ಗಳು ಬಂದ್, ಮದ್ಯದಂಗಡಿ ಸಂಪೂರ್ಣ ಬಂದ್, ಕೆಎಸ್‍ಆರ್‍ಟಿಸಿ, ಬಿಎಂಟಿಸಿ ಬಸ್ ಓಡಲ್ಲ (ಭಾನುವಾರ ಬೆಳಗ್ಗೆಯಿಂದ ಸೋಮವಾರ ಬೆಳಗ್ಗೆಯವರೆಗೂ ಇರುವುದಿಲ್ಲ),  ಹೋಟೆಲ್‍ಗಳು ಪಾರ್ಸಲ್ ಮಾತ್ರ ,  ಬೆಂಗಳೂರಿನಲ್ಲಿ ಎಲ್ಲಾ ಫ್ಲೈಓವರ್‍ಗಳು ಇಂದು ಸಂಜೆಯಿಂದ ಬಂದ್

Facebook Comments