ಇಂದು ರಾತ್ರಿ 9 ರಿಂದ ಸೋಮವಾರ ಬೆಳಗ್ಗೆ 5 ಗಂಟೆವರೆಗೂ ಸಂಡೆ ಲಾಕ್‍ಡೌನ್

ಈ ಸುದ್ದಿಯನ್ನು ಶೇರ್ ಮಾಡಿ

ಬೆಂಗಳೂರು, ಜು.25- ಕೊರೊನಾದ ಚೈನ್ ಲಿಂಕ್ ಬ್ರೆಕ್ ಮಾಡಲು ಇಂದು ರಾತ್ರಿ 9 ಗಂಟೆಯಿಂದ ಸೋಮವಾರ ಬೆಳಗ್ಗೆ 5 ಗಂಟೆವರೆಗೂ ಸಂಡೆ ಲಾಕ್‍ಡೌನ್ ಜಾರಿಯಲ್ಲಿರಲಿದೆ.

ಜುಲೈ 14ರಿಂದ 22ರವರೆಗೂ ಬೆಂಗಳೂರು ಲಾಕ್‍ಡೌನ್ ಜಾರಿ ಮಾಡಲಾಯಿತು. ಜೊತೆಯಲ್ಲಿ ರಾಜ್ಯಾದ್ಯಂತ ಸಂಡೇಲಾಕ್‍ಡೌನ್ ಜಾರಿಗೆ ಆದೇಶಿಸಲಾಗಿದೆ.

ಶನಿವಾರ ರಾತ್ರಿ 9 ಗಂಟೆಯಿಂದಲೇ ಲಾಕ್‍ಡೌನ್ ಜಾರಿಗೆ ಬರಲಿದೆ. ರಾಜ್ಯಾದ್ಯಂತ ಸೋಮವಾರ ಬೆಳಗ್ಗೆ 5 ಗಂಟೆವರೆಗೂ ಬೇಕಾಬಿಟ್ಟಿ ಓಡಾಡುವುದಕ್ಕೆ ಬ್ರೆಕ್ ಬೀಳಲಿದೆ. ಔಷಧಿ ಅಂಗಡಿ, ಆಸ್ಪತ್ರೆ, ದವಸಧಾನ್ಯ, ತರಕಾರಿ ಸೇರಿದಂತೆ ತುರ್ತು ಅಗತ್ಯದ ಅಂಗಡಿಗಳನ್ನು ಹೊರತು ಪಡಿಸಿ ಉಳಿದೆಲ್ಲಾ ವಹಿವಾಟುಗಳು ಬಂದ್ ಆಗಲಿವೆ.

ನಿಷೇಧಾಜ್ಞೆ ಜಾರಿಗೆ ಬರಲಿದ್ದು, ಬೇಕಾಬಿಟ್ಟಿ ರಸ್ತೆಗೆ ಇಳಿದವರ ವಿರುದ್ಧ ಪೊಲೀಸರು ಕ್ರಮ ಕೈಗೊಳ್ಳಲಿದ್ದಾರೆ. ಬೆಂಗಳೂರಿನಲ್ಲಿ ಪೊಲೀಸರ ಜೊತೆ ಬಿಬಿಎಂಪಿಯ ಮಾರ್ಷೆಲ್‍ಗಳು ಬೇಕಾಬಿಟ್ಟಿ ಓಡಾಡುವವರ ವಿರುದ್ಧ ಕ್ರಮ ಜರುಗಿಸಲಿದ್ದಾರೆ.

ರಾಜ್ಯಾದ್ಯಂತ ಎಲ್ಲಾ ಜಿಲ್ಲಾ ಕೇಂದ್ರಗಳಲ್ಲಿ, ಸೋಂಕಿತ ಪ್ರದೇಶಗಳಲ್ಲಿ ಹೋಟೇಲ್, ರೆಸ್ಟೋರೆಂಟ್ ಸೇರಿದಂತೆ ಎಲ್ಲಾ ವಹಿವಾಟುಗಳು ಬಂದ್ ಆಗಲಿವೆ. ಸಾರಿಗೆ ಬಸ್‍ಗಳು ಸ್ಥಗಿತಗೊಳ್ಳಲಿವೆ. ಖಾಸಗಿ ವಾಹನಗಳ ಸಂಚಾರವೂ ವಿರಳವಾಗಿರಲಿದೆ.

ಕಳೆದ ಒಂದು ತಿಂಗಳಿನಿಂದಲೂ ಸಂಡೆಲಾಕ್‍ಡೌನ್ ಕಟ್ಟುನಿಟ್ಟಾಗಿ ಜಾರಿಗೆ ತರಲಾಗುತ್ತಿದೆ. ವಾರದ ಕೊನೆ ದಿನಗಳ ಮೋಜು ಮಸ್ತಿಯಲ್ಲಿ ಮುಳುಗುವವರಿಗೆ, ರಜೆ ಕಾಲದಲ್ಲಿ ಪ್ರವಾಸ ಹೋಗುವವರಿಗೆ ಬ್ರೆಕ್ ಬೀಳಲಿದೆ.

ಕೊರೊನಾ ಸೋಂಕು ರಾಜ್ಯದಲ್ಲಿ ದಿನೇ ದಿನೇ ಹೆಚ್ಚಾಗುತ್ತಲೇ ಇದೆ. ಕಳೆದ ವಾರ ದಿನಕ್ಕೆ ನಾಲ್ಕು ಸಾವಿರ ಸರಾಸರಿಯಲ್ಲಿದ್ದ ಸೋಂಕು ಕಳೆದೆರಡು ದಿನಗಳಿಂದ ಐದು ಸಾವಿರದ ಗಡಿ ದಾಟಿದೆ. ಸಾವಿನ ಸಂಖ್ಯೆ ಕೂಡ ಹೆಚ್ಚಾಗುತ್ತಲೆ ಇದೆ.

ಬೆಂಗಳೂರಿನಲ್ಲಿ ಲಾಕ್‍ಡೌನ್ ಮುಂದುವರೆಸುವುದರಿಂದ ಆರ್ಥಿಕ ಚಟುವಟಿಕೆಗಳ ಮೇಲೆ ಪರಿಣಾಮ ಬೀರಿದ್ದು, ಭಾರೀ ನಷ್ಟ ಸಂಭವಿಸಿತ್ತು. ಹಾಗಾಗಿ ಲಾಕ್‍ಡೌನ್ ಮುಂದುವರೆಸಲು ಸರ್ಕಾರ ನಿರಾಕರಿಸಿತ್ತು.

ಕೊರೊನಾದ ಸರಣಿಯನ್ನು 36 ಗಂಟೆಗಳ ಸಂಡೇಲಾಕ್‍ಡೌನ್‍ನಿಂದ ಸ್ವಲ್ಪ ಮಟ್ಟಿಗೆ ಕಡಿತ ಮಾಡಲು ಸಾಧ್ಯವಾಗುತ್ತದೆ ಎಂಬ ಹಿನ್ನೆಲೆಯಲ್ಲಿ ಇಂದು ಸಂಜೆಯಿಂದ ಲಾಕ್‍ಡೌನ್ ಜಾರಿಗೊಳಿಸಲಾಗುತ್ತಿದೆ.

ಈ ವೇಳೆ ಅನಗತ್ಯವಾಗಿ ಓಡಾಡುವವರ ವಿರುದ್ಧ ಪೊಲೀಸರು ಪ್ರಕೃತಿ ವಿಕೋಪ ನಿರ್ವಹಣಾ ಕಾಯ್ದೆಯಡಿ ಕ್ರಮ ಕೈಗೊಳ್ಳಲಿದ್ದಾರೆ. ಹಾಗಾಗಿ ಜನರು ಮನೆಯಲ್ಲೇ ಇದ್ದು ಸೋಂಕು ಪ್ರಸರಣವನ್ನು ನಿಯಂತ್ರಿಸಲು ಸಹಕರಿಸಬೇಕು ಎಂದು ಸರ್ಕಾರ ಮನವಿ ಮಾಡಿದೆ.

Facebook Comments

Sri Raghav

Admin