ಸಂಡೆ ಲಾಕ್‌ಡೌನ್ : ಬೆಂಗಳೂರು ಸೇರಿ ಕರ್ನಾಟಕ ಸ್ಥಬ್ದ, ಎಲ್ಲೆಲ್ಲಿ ಏನೇನಾಯ್ತು..? ಇಲ್ಲಿದೆ ಮಾಹಿತಿ

ಈ ಸುದ್ದಿಯನ್ನು ಶೇರ್ ಮಾಡಿ

ಬೆಂಗಳೂರು :  ಅಂಕೆ ಮೀರಿ ಶರವೇಗದಲ್ಲಿ ಹಬ್ಬುತ್ತಿರುವ ಕೊರೋನಾ ನಿಯಂತ್ರಿಸಲು ರಾಜ್ಯ ಸರ್ಕಾರ ಜಾರಿ ಮಾಡಿರುವ ಎರಡನೇ ಭಾನುವಾರದ ಲಾಕ್ ಡೌನ್ ಗೂ ಈ ವಾರವೂ  ಬಹುತೇಕ ಯಶಸ್ವಿಯಾಗಿದೆ. ಕೆಲವು ಕಡೆ ಸಣ್ಣ ಪುಟ್ಟ ಗೊಂದಲ, ಹೊರತುಪಡಿಸಿದರೆ, ಈ ಭಾರಿ ಸಾರ್ವಜನಿಕರೇ ಸ್ವಯಂಪ್ರೇರಿತರಾಗಿ ತಮ್ಮ ಪ್ರಯಾಣಕ್ಕೆ ನಿರ್ಬಂಧ ಹಾಕಿಕೊಂಡಿದ್ದು ವಿಶೇಷವಾಗಿತ್ತು.

ಲಾಕ್ ಡೌನ್ ಶನಿವಾರ ರಾತ್ರಿ 8 ಗಂಟೆಯಿಂದಲೇ ಜಾರಿಯಾಗಿದ್ದು, ಭಾನುವಾರ ರಾಜ್ಯದಾದ್ಯಂತ ಬಹುತೇಕ ಎಲ್ಲಾ ವಹಿವಾಟುಗಳು ಸಂಪೂರ್ಣ ಸ್ಥಗಿತಗೊಂಡಿವೆ.  ಕೆಲವು ಕಡೆ ಎಂದಿನಂತೆ ಸಾರ್ವಜನಿಕರು ಬೆಳಗಿನ ವಾಯು ವಿಹಾರಕ್ಕೆ ಆಗಮಿಸಿದ್ದು, ಮಾಂಸದ ಅಂಗಡಿಗಳ ಮುಂದೆ ಜನಸ್ತೋಮ, ರಸ್ತೆಯಲ್ಲಿ ತಿರುಗಾಡುತ್ತಿದ್ದವರಿಗೆ ಪೊಲೀಸರ ಬೆತ್ತದ ರುಚಿ, ಲಾಕ್ ಡೌನ್ ನಡುವೆಯೂ ಅಲ್ಲಲ್ಲಿ ಅಂಗಡಿಗಳನ್ನು ತೆರೆದಿದ್ದು, ಹೊರತುಪಡಿಸಿದರೆ ಉಳಿದಂತೆ ಬಹುತೇಕ ಕಡೆ ಎಲ್ಲಾ ವಹಿವಾಟು ಸಂಪೂರ್ಣವಾಗಿ ಸ್ತಬ್ದಗೊಂಡಿತ್ತು.

ಸಾರ್ವಜನಿಕರಿಗೆ ತೊಂದರೆಯಾಗದಂತೆ  ಹೋಟೆಲ್‌ಗಳಲ್ಲಿ ಪಾರ್ಸಲ್‌ ವ್ಯವಸ್ಥೆ ಮಾತ್ರ  ಕಲ್ಪಿಸಲಾಗಿತ್ತು.   ಬೆಂಗಳೂರು, ಮೈಸೂರು, ಕೋಲಾರ, ಚಿಕ್ಕಬಳ್ಳಾಪುರ, ಬೆಂಗಳೂರು ಗ್ರಾಮಾಂತರ, ರಾಮನಗರ, ಹಾಸನ, ದಕ್ಷಿಣ ಕನ್ನಡ, ಉಡುಪಿ,
ಶಿವಮೊಗ್ಗ, ದಾವಣಗೆರೆ, ಬಳ್ಳಾರಿ, ಧಾರವಾಡ, ,ತುಮಕೂರು, ಬೀದರ್, ಕಲಬುರಗಿ, ಸೇರಿದಂತೆ ಎಲ್ಲಾ ಜಿಲ್ಲೆಗಳಲ್ಲೂ ಗ್ರಾಮಮಟ್ಟದಿಂದ ಹಿಡಿದು, ಜಿಲ್ಲಾ ಕೇಂದ್ರಗಳವರೆಗೂ ಸಾರ್ವಜನಿಕರೇ ಸ್ವಯಂ ನಿರ್ಬಂಧ ಹಾಕಿಕೊಂಡಿದ್ದರು.

ಬೆಂಗಳೂರಿನ ಎಪಿಎಂಸಿ ಮಾರುಕಟ್ಟೆಯಲ್ಲಿ ಎಂದಿನಂತೆ ವ್ಯಾಪಾರ ವಹಿವಾಟು ನಡೆದರೆ, ಮಲ್ಲೇಶ್ವರಂ ಮತ್ತಿತರ ಕಡೆ ರಸ್ತೆಯಲ್ಲಿ ತಿರುಗಾಡುತ್ತಿದ್ದ ರೋಡ್ ರೋಮಿಯೊಗಳಿಗೆ ಪೊಲೀಸರು ಅನಿವಾರ್ಯವಾಗಿ ಲಾಠಿಯ ರುಚಿ ತೋರಿಸಿದರು.
ಲಾಕ್ ಡೌನ್ ಜಾರಿಯಲ್ಲಿದ್ದರೂ ಅಗತ್ಯ ಸೇವೆಗಳಾದ ಹಾಲು, ಹಣ್ಣು,ತರಕಾರಿ, ಮಾಂಸ , ಅಸ್ಪತ್ರೆ, ಅಂಬುಲೆನ್ಸ್, ಔಷಧಿ ಅಂಗಡಿ, ದಿನಪತ್ರಿಕೆ, ಮಾಧ್ಯಮ, ಗ್ಯಾಸ್ ಸೇರಿದಂತೆ ಮತ್ತಿತರ ಸೇವೆಗಳು ಎಂದಿನಂತೆ ಕಾರ್ಯ ನಿರ್ವಾಹಿಸಿದವು.

ಇನ್ನು ಅಲ್ಲಲ್ಲಿ ವಾಹನಗಳ ಸಂಚಾರವಿಲ್ಲದೆ, ಪರಾಡುತ್ತಿದ್ದ ರೋಗಿಗಳಿಗೆ ಪೊಲೀಸರೇ ವಾಹನದ ವ್ಯವಸ್ಥೆ ಮಾಡುವ ಮೂಲಕ ಮಾನವೀಯತೆಯನ್ನು ತೋರಿದರು. ನಿನ್ನೆ ರಾತ್ರಿ 8 ಗಂಟೆಯಿಂದಲೇ ಕರ್ಫ್ಯೂ ಜಾರಿಯಾಗಿದ್ದು, ನಾಳೆ ಬೆಳಗಿನ ಜಾವ 5 ಗಂಟೆವರೆಗೂ ಯಾರು ಮನೆಬಿಟ್ಟು ಹೊರಬರಲಿಲ್ಲ. ರಾಜಧಾನಿ ಬೆಂಗಳೂರಿನಲ್ಲಿ ಜನ ಸ್ವಯಂ ನಿಯಂತ್ರಣ ಹೇರಿಕೊಂಡಿದ್ದರು.

ಲಾಕ್‍ಡೌನ್ ಹಿನ್ನೆಲೆಯಲ್ಲಿ ನಗರದ ಬಹುತೇಕ ರಸ್ತೆಗಳು ಖಾಲಿ ಖಾಲಿಯಾಗಿದ್ದವು. ಅಲ್ಲೊಂದು ಇಲ್ಲೊಂದು ದ್ವಿಚಕ್ರ ಹೊರತು ಪಡಿಸಿದರೆ ವಾಹನಗಳ ಓಡಾಟವೂ ಇಲ್ಲ. ಅತ್ಯವಶ್ಯಕ ವಸ್ತುಗಳಾದ ಹಾಲು, ದಿನಸಿ, ದಿನಪತ್ರಿಕೆ ವಿತರಣೆ ಹೊರತು ಪಡಿಸಿ ಎಲ್ಲವೂ ಲಾಕ್‍ಡೌನ್ ಆಗಿದೆ.  ನಗರದ ಬಹುತೇಕ ರಸ್ತೆಗಳು ಸಂಪೂರ್ಣ ಖಾಲಿ ಖಾಲಿಯಾಗಿದ್ದವು.ಕೇವಲ ಅತ್ಯವಶ್ಯಕ ವಾಹನಗಳಷ್ಟೆ ರಸ್ತೆಯಲ್ಲಿ ಸಂಚಾರ ನಡೆಸಿದವು.

ನಗರದ ಪ್ರಮುಖ ರಸ್ತೆಗಳು ಬ್ಯಾರಿಕೇಡ್ ಹಾಕಿ ಪೊಲೀಸರು ಬಂದ್ ಮಾಡಿದ್ದರು. ಇನ್ನೂ ಕೆಲವು ರಸ್ತೆಗಳಲ್ಲಿ ದ್ವಿಮುಖ ಸಂಚಾರಕ್ಕೆ ವ್ಯವಸ್ಥೆ ಮಾಡಲಾಗಿದೆ. ಅಲ್ಲದೇ ಪ್ರಮುಖ ವೃತ್ತಗಳಲ್ಲಿ ಪೊಲೀಸರನ್ನು ನಿಯೋಜನೆ ಮಾಡಲಾಗಿದ್ದು, ನಗರದ ಎಲ್ಲಾ ಏರಿಯಾಗಳಲ್ಲಿ ಹೊಯ್ಸಳದಿಂದ ಗಸ್ತು ಮಾಡಲಾಗುತ್ತು.

ಕೃಷ್ಣರಾಜೇಂದ್ರ ಮಾರ್ಕೆಟ್, ಮೆಜೆಸ್ಟಿಕ್​​ ಸೇರಿದಂತೆ ನಗರದ ಹಲವು ಪ್ರದೇಶಗಳು ಸಂಪೂರ್ಣ ಸ್ತಬ್ಧವಾಗಿದ್ದವು.
ಮೆಜೆಸ್ಟಿಕ್ ಬಸ್ ನಿಲ್ದಾಣ, ಮಲ್ಲೇಶ್ವರಂ ಮುಖ್ಯ ರಸ್ತೆಗಳು ಖಾಲಿ ಖಾಲಿಯಾಗಿವೆ. ಇತ್ತ ತುಮಕೂರು ರಸ್ತೆ ಕೂಡ ಖಾಲಿ ಖಾಲಿಯಾಗಿದ್ದು, ಬೆರೆಳೆಣಿಕೆಯಷ್ಟು ವಾಹನಗಳು ಮಾತ್ರ ಸಂಚಾರ ಮಾಡುತ್ತಿವೆ. ಗೊರಗೊಂಟೆಪಾಳ್ಯದ ಫ್ಲೈ ಓವರ್ ಬಂದ್ ಆಗಿದ್ದು, ಅಲ್ಲಿಯೂ ಜನರ ಓಡಾಟವು ಇಲ್ಲದಂತಾಗಿತ್ತು.

ಅಗತ್ಯ ವಸ್ತುಗಳು ಹೊರತುಪಡಿಸಿ ಉಳಿದ ಅಂಗಡಿ ಮುಂಗಟ್ಟುಗಳು ಬಂದ್ ಆಗಿವೆ.ಇನ್ನು ವಿಮಾನ ನಿಲ್ದಾಣಕ್ಕೆ ತೆರಳುವವರಿಗೆ ಕ್ಯಾಬ್ ಮತ್ತು ಸ್ವಂತ ವಾಹನಗಳಲ್ಲಿ ಹೋಗಲು ಅವಕಾಶ ಮಾಡಿಕೊಡಲಾಗಿತ್ತು.ಸಾರ್ವಜನಿಕ ಸಂಚಾರ ವ್ಯವಸ್ಥೆಯ ಬಸ್‌, ಆಟೋ, ಟ್ಯಾಕ್ಸಿ ಸೇವೆಯೂ ಇಂದು ಬಂದ್ ಆಗಿತ್ತು. ವಾರಾಂತ್ಯದ ಮೋಜು ಮಸ್ತಿಯ ಪ್ರವಾಸಿ ತಾಣಗಳು ಬಂದ್‌ ಮಾಡಲಾಗಿದೆ.

ದೇಗುಲಗಳು, ಮಸೀದಿ, ಚಚ್9 ಸೇರಿದಂತೆ ಎಲ್ಲಾ ಧಾರ್ಮಿಕ ಕೇಂದ್ರಗಳಿಗೆ ಬೀಗ ಹಾಕಲಾಗಿತ್ತು. ಸೋಮವಾರ ಬೆಳಿಗ್ಗೆ 5 ಗಂಟೆಗಳ ವರೆಗೆ ಸತತ 33 ಗಂಟಗಳ ಕಾಲ ಈ ಕಠಿಣ ಲಾಕ್’ಡೌನ್ ಜಾರಿಯಲ್ಲಿರಲಿದೆ. ಎರಡನೇ ಹಂತದ ಅನ್’ಲಾಕ್ ಅವಧಿಯಲ್ಲಿನ ಪ್ರತಿ ಭಾನುವಾರ ಲಾಕ್’ಡೌನ್ ಮಾಡುವುದಾಗಿ ಸಿಎಂ ಯಡಿಯೂರಪ್ಪ ಘೋಷಣೆ ಮಾಡಿದ್ದರು.
ಇದರಂತೆ ಭಾನುವಾರ ಚಂದ್ರಗ್ರಹಣವೂ ಸೇರಿ ಲಾಕ್ಡೌನ್ ಸಂಪೂರ್ಣ ಯಶಸ್ವಿಯಾಗಿತ್ತು.

ಇದೇ ಮಾದರಿಯ ಭಾನುವಾರದ ಲಾಕ್’ಡೌನ್ ತಿಂಗಳಾಂತ್ಯದವರೆಗೆ ಮುಂದುವರೆಯಲಿದೆ ಎಂದು ತಿಳಿದುಬಂದಿದೆ. ಕೋವಿಡ್-19 ಸೋಂಕು ಹರಡುವಿಕೆ ತಡೆಗಟ್ಟಲು ರಾಜ್ಯ ಸರ್ಕಾರ ಹೇರಿರುವ ಭಾನುವಾರದ ಲಾಕ್ ಡೌನ್ ಕಾರಣದಿಂದ ಇಂದು ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಬಿಗಿ ಕರ್ಫ್ಯೂ ಜಾರಿ ಮಾಡಲಾಗಿತ್ತು.

ಅಗತ್ಯ ಸೇವೆ ಹೊರತು ಪಡಿಸಿ ಎಲ್ಲಾ ರೀತಿಯ ಸೇವೆಗಳು ಇಂದು ಬಂದ್ ಆಗಿರುತ್ತದೆ. ಹಾಲು, ಪೇಪರ್, ಮೆಡಿಕಲ್ ಮತ್ತು ವೈದ್ಯಕೀಯ ಸೇವೆ ಮಾತ್ರ ಲಭ್ಯವಿದ್ದು, ಜನರು ಅನಗತ್ಯವಾಗಿ ಮನೆಯಿಂದ ಹೊರಬಾರದು ಎಂದು ಸೂಚಿಸಲಾಗಿತ್ತು.
ಜಿಲ್ಲೆಯಲ್ಲಿ ವ್ಯಾಪಾರ ವಹಿವಾಟು ಸಂಪೂರ್ಣ ಸ್ತಬ್ಧವಾಗಿದ್ದು, ವಾಹನಗಳ ಸಂಚಾರಕ್ಕೂ ನಿರ್ಬಂಧ ಹೇರಲಾಗಿದೆ.

ಪ್ರಮುಖ ರಸ್ತೆಗಳಲ್ಲಿ ಪೊಲೀಸರು ಬ್ಯಾರಿಕೇಡ್ ಹಾಕಿದ್ದು, ಮಂಗಳೂರು ನಗರಕ್ಕೆ ವಾಹನಗಳ ಪ್ರವೇಶಕ್ಕೆ ನಿರ್ಬಂಧ ಹೇರಿದ್ದಾರೆ. ಒಂದು ವೇಳೆ ಸಾರ್ವಜನಿಕರು ವಾಹನಗಳಲ್ಲಿ ಅನಗತ್ಯವಾಇ ಓಡಾಡಿದರೆ ವಾಹನ ಜಪ್ತಿ ಮಾಡುವುದಾಗಿ ಪೊಲೀಸರು ಎಚ್ಚರಿಕೆ ನೀಡಿದ್ದರು.

ಈಗಾಗಲೇ ಬೆಂಗಳೂರಿನಲ್ಲಿ ತಜ್ಞರ ಸಲಹೆ ಮೇರೆಗೆ ಜುಲೈ 14 ರಿಂದ 22ರವರೆಗೆ ಅಂದರೆ, 1 ವಾರದ ಕಾಲ ಸಂಪೂರ್ಣ ಲಾಕ್‌ಡೌನ್ ಘೋಷಿಸಲಾಗಿದೆ.ಈ ಹಿನ್ನೆಲೆ ಬೆಂಗಳೂರು ನಗರ, ಗ್ರಾಮಾಂತರ ಜಿಲ್ಲೆಗಳು ಲಾಕ್​ಡೌನ್​ ಆಗಲಿವೆ. ಒಂದು ವಾರ ಬಿಎಂಟಿಸಿ, ಕೆಎಸ್‌ಆರ್‌ಟಿಸಿ ಬಸ್‌ಗಳು, ಆಟೋ-ಟ್ಯಾಕ್ಸಿಗಳು, ಖಾಸಗಿ ಬಸ್​ಗಳು, ಮಾಲ್​ಗಳು, ಎಲ್ಲವೂ ಬಂದ್ ಆಗಲಿದೆ. ಮದ್ಯ ಮಾರಾಟಕ್ಕೂ ಅವಕಾಶವಿಲ್ಲ.

ಸರ್ಕಾರಿ ಸಾರಿಗೆ ಸೇವೆಗಳಾದ ಕೆಎಸ್ಆರ್ ಟಿಸಿ ಮತ್ತು ಬಿಎಂಟಿಸಿ ಬಸ್ ಸೇವೆಗಳು ಸಂಪೂರ್ಣ ಸ್ಥಗಿತವಾಗಲಿದೆ. ಆದರೆ ಕೆಲ ತುರ್ತು ಸೇವೆಗಳಿಗೆ ಕೆಲ ಬಿಎಂಟಿಸಿ ಬಸ್ ಗಳನ್ನು ನಿಯೋಜಿಸಲಾಗಿದ್ದು, ಈ ಬಸ್ ಗಳು ಮಾತ್ರ ಲಾಕ್ ಡೌನ್ ಸಂದರ್ಭದಲ್ಲಿ ಚಲಿಸಲಿದೆ. ಕ್ಯಾಬ್ ಸೇವೆ, ಆಟೋ ಸೇವೆ ಕೂಡ ಸ್ಥಗಿತವಾಗಲಿದೆ. ಅಲ್ಲದೆ ಅಗತ್ಯವಲ್ಲದ ದಿನಬಳಕೆಯಲ್ಲದ ವಸ್ತುಗಳ ಅಂಗಡಿಗಳು ಬಂದ್ ಆಗಲಿವೆ.

ಹೊಟೆಲ್ ಸೇವೆ ಬಂದ್ ಆಗಲಿದ್ದು, ಸೋಮವಾರ ಬಿಡುಗಡೆಯಾಗುವ ಮಾರ್ಗಸೂಚಿಯಲ್ಲಿ ಹೊಟೆಲ್ ನಲ್ಲಿ ಪಾರ್ಸೆಲ್ ಗೆ ಅವಕಾಶ ನೀಡುವ ಸಾಧ್ಯತೆ ಇದೆ. ಮಾಲ್ ಗಳು-ರೆಸ್ಟೋರೆಂಟ್ ಗಳು ಸಂಪೂರ್ಣ ಬಂದ್ ಆಗಲಿದೆ. ಇನ್ನು ಮಂಗಳವಾರ ರಾತ್ರಿಯಿಂದಲೇ ಮದ್ಯದಂಗಡಿಗಳು ಬಂದ್ ಆಗಲಿವೆ. ಸೋಮವಾರದಿಂದ ಮಂಗಳವಾರ ಸಂಜೆವರೆಗೂ ಬಾರ್ ಗಳು ತೆರೆಲಿವೆ. ಈ ಸಂದರ್ಭದಲ್ಲಿ ಮದ್ಯಪ್ರಿಯರು ಮದ್ಯ ಖರೀದಿ ಮಾಡಬಹುದು.

ಆಸ್ಪತ್ರೆಗಳು, ಮೆಡಿಕಲ್ ಸ್ಟೋರ್ ಗಳು, ದಿನಸಿ ಅಂಗಡಿಗಳು, ಹಣ್ಣು ತರಕಾರಿ ಅಂಗಡಿಗಳು ತೆರೆದಿರುತ್ತವೆ. ಇದರ ಜೊತೆ ಈಗಾಗಲೇ ನಿಗದಿಯಾಗಿರುವ ವೈದ್ಯಕೀಯ ಪದವಿ ಮತ್ತು ಸ್ನಾತಕೋತ್ತರ ಪರೀಕ್ಷೆಗಳು ನಡೆಯಲಿವೆ. ಇನ್ನು ಈ ಬಾರಿ ಲಾಕ್ಡೌನ್ ಕಟ್ಟುನಿಟ್ಟಿನಿಂದ ಕೂಡಿರಲಿದೆ ಎಂದು ಹೇಳಲಾಗುತ್ತಿದ್ದು, ದಿನಬಳಕೆ ವಸ್ತುಗಳ ಖರೀದಿಗೆ ತೆರಳುವಾಗ ಸಾಮಾಜಿಕ ಅಂತರ ಪಾಲನೆ, ಮಾಸ್ಕ್ ಧರಿಸುವುದು ಕಡ್ಡಾಯವಾಗಿರಲಿದೆ.

Facebook Comments

Sri Raghav

Admin