ಭಾನುವಾರದ ಲಾಕ್‍ಡೌನ್‍ಗೆ ಉತ್ತಮ ಪ್ರತಿಕ್ರಿಯೆ

ಈ ಸುದ್ದಿಯನ್ನು ಶೇರ್ ಮಾಡಿ

ಮಳವಳ್ಳಿ, ಮೇ 25-ನಿನ್ನೆ ಆದೇಶಿಸಿದ್ದ ಸಂಪೂರ್ಣ ಲಾಕ್‍ಡೌನ್‍ಗೆ ತಾಲ್ಲೂಕಿನಲ್ಲಿ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಯಿತು.  ವ್ಯಾಪಾರಸ್ಥರು, ನಾಗರಿಕರು ತಮ್ಮ ಅಂಗಡಿ, ವ್ಯಾಪಾರ, ವಹಿವಾಟು, ಸಂಚಾರ ನಿಲ್ಲಿಸಿ ಲಾಕ್‍ಡೌನ್‍ಗೆ ಸ್ಪಂದಿಸಿದರು.  ಕೊರೊನಾ ಸೋಂಕು ಹರಡುವುದನ್ನು ತಡೆಗಟ್ಟುವ ಸಲುವಾಗಿ ಸರ್ಕಾರದ ಆದೇಶದ ಅನ್ವಯ ತಾಲ್ಲೂಕು ಆಡಳಿತ ಹಾಗೂ ಪೊಲೀಸ್ ಇಲಾಖೆ ತಾಲ್ಲೂಕಿನಾದ್ಯಂತ ಸಂಪೂರ್ಣ ನಿಷೇಧಾಜ್ಞಾ ಜಾರಿ ಮಾಡಿತ್ತು.

ಈ ಹಿನ್ನೆಲೆಯಲ್ಲಿ ತಾಲ್ಲೂಕಿನಲ್ಲಿ ಬಹುತೇಕ ರಸ್ತೆಗಳು ಬಿಕೋ ಎನ್ನುತ್ತಿದ್ದವು. ಜನಸಂಚಾರ ಸಂಪೂರ್ಣ ಸ್ತಬ್ಧವಾಗಿತ್ತು. ಅಗತ್ಯ ಸೇವೆಗಳಾದ ಆಸ್ಪತ್ರೆ, ಹಾಲು, ಹಣ್ಣು, ತರಕಾರಿ, ಮೆಡಿಕಲ್ ಹೊರತು ಪಡಿಸಿ ಎಲ್ಲಾ ರೀತಿಯ ಅಂಗಡಿ, ಮಳಿಗೆಗಳು ಮುಚ್ಚಿದ್ದವು.  ಚಿತ್ರಮಂದಿರ, ಮದ್ಯದಂಗಡಿ, ಕ್ಷೌರಿಕ ಅಂಗಡಿ, ಪ್ಲಾಸ್ಟಿಕ್, ಬಟ್ಟೆ, ಕಬ್ಬಿಣ, ಕಿರಾಣಿ, ಜ್ಯೂಸ್, ಬೇಕರಿ ಮಳಿಗೆಗಳು ಸಂಪೂರ್ಣ ಬಂದ್ ಆಗಿದ್ದವು.

ಸಾರಿಗೆ ಬಸ್‍ಗಳ ಸೇವೆ ಸ್ಥಗಿತಗೊಳಿಸಲಾಗಿತ್ತು. ಪಟ್ಟಣದ ಹೊರವಲಯದಲ್ಲಿ ಕೆಲವು ಹೋಟೆಲ್, ತೆರೆದ ಮಾಲೀಕರು ಪಾರ್ಸಲ್ ಕೊಟ್ಟರು. ಹಾಲು, ತರಕಾರಿ, ಔಷಧ ಅಂಗಡಿ, ಆಸ್ಪತ್ರೆಗಳನ್ನು ತೆರೆಯಲಾಗಿತ್ತು.  ತುರ್ತು ಕಾರಣ ಮತ್ತು ವೈದ್ಯಕೀಯ ಕಾರಣಗಳಿಗೆ ಮಾತ್ರ ಸಂಚರಿಸಲು ಅವಕಾಶ ಕಲ್ಪಿಸಲಾಗಿತ್ತು. ಅದರಂತೆ ಜನರು ಕೂಡ ಅನಗತ್ಯವಾಗಿ ಓಡಾಡದೆ ಮನೆಯಲ್ಲೇ ಉಳಿದರು.

ಕಳೆದ 2 ತಿಂಗಳು ಮನೆಯಲ್ಲಿದ್ದು ತೊಂದರೆ ಅನುಭವಿಸಿದ್ದ ಎಲ್ಲಾ ವರ್ಗದ ಜನರು ಲಾಕ್‍ಡೌನ್ ಸಡಿಲಿಕೆ ಕೊಟ್ಟ ನಂತರ ಯಾವುದೇ ಸೋಂಕು, ಅನಾರೋಗ್ಯವನ್ನು ಲೆಕ್ಕಿಸದೇ ರಸ್ತೆಗಿಳಿದಿದ್ದರು.  ಕಳೆದ 2 ವಾರಗಳಿಂದ ಎಂದಿನಂತೆ ತಮ್ಮ ಕೆಲಸ ಕಾರ್ಯಗಳಲ್ಲಿ ತೊಡಗಿದ್ದರು. ಹಾಗಾಗಿ ನಿನ್ನೆ ಲಾಕ್‍ಡೌನ್‍ಗೆ ಜನರು ಸ್ಪಂದಿಸುತ್ತಾರೋ ಇಲ್ಲವೋ ಎನ್ನುವ ಅನುಮಾನ ವ್ಯಕ್ತವಾಗಿತ್ತು. ಆದರೆ, ಭಾನುವಾರದ ಲಾಕ್‍ಡೌನ್‍ಗೆ ಜಿಲ್ಲೆಯಲ್ಲಿ ನಿರೀಕ್ಷೆಗೂ ಮೀರಿ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಯಿತು.

Facebook Comments