ಸಂಡೆ ಲಾಕ್‍ಡೌನ್‍ಗೆ ರಾಜ್ಯದಾದ್ಯಂತ ಉತ್ತಮ ಪ್ರತಿಕ್ರಿಯೆ, ಎಲ್ಲೆಲ್ಲಿ ಏನೇನಾಯ್ತು ಇಲ್ಲಿದೆ ಡೀಟೇಲ್ಸ್

ಈ ಸುದ್ದಿಯನ್ನು ಶೇರ್ ಮಾಡಿ

ಬೆಂಗಳೂರು ರಾಜ್ಯದಲ್ಲಿ ಮಾರಕ ಕೊರೊನಾ ಸೋಂಕು ಹರಡದಂತೆ ತಡೆಯುವ ನಿಟ್ಟಿನಲ್ಲಿ ಶನಿವಾರ ಸಂಜೆಯಿಂದ ಜಾರಿಯಾದ 36 ಗಂಟೆಗಳ ಸಂಪೂರ್ಣ ಲಾಕ್ ಡೌನ್ ಗೆ ರಾಜ್ಯಾದ್ಯಂತ ಉತ್ತಮ ಬೆಂಬಲ ವ್ಯಕ್ತವಾಗಿದ್ದು ಜನಜೀವನ ಮಂಕಾಗಿದೆ.

ಕರೊನಾ ಹಾಟ್​ಸ್ಪಾಟ್​ ಬೆಂಗಳೂರು ಸೇರಿದಂತೆ ಎಲ್ಲಾ ಜಿಲ್ಲೆಗಳಲ್ಲಿ ಅಗತ್ಯ ಸೇವೆಗಳನ್ನು ಹೊರತುಪಡಿಸಿ ಬಹುತೇಕ ಆರ್ಥಿಕ ಚಟುವಟಿಕೆ ಸ್ಥಗಿತಗೊಂಡಿದ್ದು, ನಿಯಮ ಉಲ್ಲಂಘಿಸುವವರ ಕಣ್ಗಾವಲಿಗೆ ಪೊಲೀಸ್​ ಸರ್ಪಗಾವಲು ಏರ್ಪಡಿಸಲಾಗಿದೆ.

ತರಕಾರಿ, ಮೀನು, ಮಾಂಸ ಮಾರಾಟಕ್ಕೂ ಬ್ರೇಕ್​ ಮಂಗಳೂರಿನಲ್ಲಿ ಹಾಲು, ಪೇಪರ್, ಮೆಡಿಕಲ್ ಮತ್ತು ವೈದ್ಯಕೀಯ ಸೇವೆ ಮಾತ್ರ ಲಭ್ಯವಾಗಿದ್ದು, ತರಕಾರಿ, ಮೀನು, ಮಾಂಸ ಮಾರಾಟಕ್ಕೂ ಬ್ರೇಕ್ ಹಾಕಲಾಗಿದೆ.

ಶನಿವಾರ ರಾತ್ರಿ 8ಗಂಟೆಯಿಂದಲೇ ಪ್ರಾರಂಭವಾಗಿರುವ ಲಾಕ್’ಡೌನ್ ಸತತ 33 ಗಂಟೆಗಳ ಕಾಲ ಇಡೀ ರಾಜ್ಯದಲ್ಲಿ ಜಾರಿಯಲ್ಲಿರಲಿದ್ದು, ವ್ಯಾಪಾರ-ವಹಿವಾಟು ಸ್ತಬ್ಧವಾಗಲಿದೆ. ಅಗತ್ಯ ವಸ್ತುಗಳ ಪೂರೈಕೆ ಹೊರತುಪಡಿಸಿ ಇನ್ನುಳಿದ ಯಾವುದೇ ಚಟುವಟಿಕೆಗಳು ಸೋಮವಾರ ಬೆಳಿಗ್ಗೆ 5ರವರೆಗೂ ನಡೆಯುವುದಿಲ್ಲ.

ಈ ಮಾದರಿಯ ಲಾಕ್’ಡೌನ್ ಇನ್ನು ಒಂದು ತಿಂಗಳ ಕಾಲ ಮುಂದುವರೆಯಲಿದೆ. ಲಾಕ್’ಡೌನ್ ವೇಳೆ ಹಾಲು, ತರಕಾರಿ, ಹಣ್ಣು, ಔಷಧ, ಮಾಂಸದ ಅಂಗಡಿ ಸೇರಿ ಅಗತ್ಯ ಸೇವೆಗಳಿಗೆ ಮಾತ್ರ ಅವಕಾಶ ನೀಡಲಾಗಿದೆ ‌ಉಳಿದಂತೆ ಮದ್ಯದಂಗಡಿ, ಟ್ಯಾಕ್ಸಿ, ಆಟೋ, ಬಿಎಂಟಿಸಿ, ಕೆಎಸ್ಆರ್’ಟಿಸಿ ಬಸ್, ದೇವಾಲಯಗಳು ಸೇರಿ ಅನಗತ್ಯ ಸೇವೆಗಳಿಗೆ ನಿರ್ಬಂಧ ಹೇರಲಾಗಿದೆ.

ಸದಾ ವಾಹನ ಸಂದಣಿಯಿಂದ ಗಿಜಿಗುಡುವ ಬೆಂಗಳೂರು-ಮೈಸೂರು ಹೆದ್ದಾರಿಯಲ್ಲಿ ವಾಹನಗಳ ಸಂಚಾರ ಬಹಳ ವಿರಳವಾಗಿದೆ. ಇನ್ನು ಬೀದರ್, ಬಳ್ಳಾರಿ ಹಾಗೂ ರಾಮನಗರ ಸಂಪೂರ್ಣ ಸ್ತಬ್ಧವಾಗಿದ್ದು, ಬಸ್ ನಿಲ್ದಾಣಗಳು ಹಾಗೂ ರಸ್ತೆಗಳು ಬಿಕೋ ಎನ್ನುತ್ತಿವೆ.

ಪೊಲೀಸರು ಅಲ್ಲಲ್ಲಿ ಚೆಕ್ ಪೋಸ್ಟ್ ಹಾಕಿದ್ದು, ಅನಗತ್ಯವಾಗಿ ವಾಹನಗಳಲ್ಲಿ ಓಡಾಡುವವರಿಗೆ ಎಚ್ಚರಿಸುತ್ತಿದ್ದಾರೆ. ಬೆಂಗಳೂರು-ಮೈಸೂರು ಹೆದ್ದಾರಿಗಳಲ್ಲಿ ವಾಹನ ಓಡಾಟ ಅತ್ಯಂತ ವಿರಳವಾಗಿದೆ.ರಾಜಧಾನಿ ಬೆಂಗಳೂರಿನ ಮೆಜೆಸ್ಟಿಕ್, ಮಲ್ಲೇಶ್ವರಂ, ತುಮಕೂರು, ಮೈಸೂರು ರಸ್ತೆ ಸೇರಿದಂತೆ ಬೆಂಗಳೂರಿನ ಬಹುತೇಕ ರಸ್ತೆಗಳು ಖಾಲಿ ಖಾಲಿಯಾಗಿವೆ.

ಅಗತ್ಯವಸ್ತು ಹೊರತುಪಡಿಸಿ ಉಳಿದ ಅಂಗಡಿ ಮುಂಗಟ್ಟುಗಳು ಸಂಪೂರ್ಣ ಮುಚ್ಚಲಾಗಿದೆ. ನಗರದಲ್ಲಿ ದಿನವೊಂದಕ್ಕೆ ಸಾವಿರಕ್ಕಿಂತಲೂ ಹೆಚ್ಚು ಪ್ರಕರಣಗಳು ಕಾಣಿಸಿಕೊಳ್ಳುತ್ತಿರುವ ಹಿನ್ನೆಲೆಯಲ್ಲಿ ಬೆಂಗಳೂರಿನಲ್ಲಿ ಬಿಗಿ ಪೊಲೀಸ್​ ಬಂದೋಬಸ್ತ್​ ಮಾಡಲಾಗಿದೆ. ನಗರದ ಪ್ರಮುಖ ರಸ್ತೆಗಳಲ್ಲಿ ಬ್ಯಾರಿಕೇಡ್​ಗಳನ್ನು ಎಳೆದು, ಅನಗತ್ಯವಾಗಿ ಓಡಾಡುವವರ ಮೇಲೆ ಪೊಲೀಸರು ಹದ್ದಿನ ಕಣ್ಣಿಟ್ಟಿದ್ದಾರೆ. ಸದ್ಯ ನಗರದಲ್ಲಿ ಜನರ ಓಡಾಟ ತಗ್ಗಿದೆ.

ಬಳ್ಳಾರಿ ರಸ್ತೆ ಮತ್ತು ಮೇಕ್ರಿ ಸರ್ಕಲ್ ಸುತ್ತಮುತ್ತ ರಸ್ತೆಗಳು ಖಾಲಿ ಖಾಲಿಯಾಗಿವೆ. ಪ್ರಮುಖ ಪ್ಲೈಓವರ್‌ಗೆ ಬ್ಯಾರಿಕೇಡ್ ಹಾಕಿ ಪೊಲೀಸರು ಮುಚ್ಚಿದ್ದಾರೆ. ಹೀಗಾಗಿ ರಸ್ತೆಗಳು ಖಾಲಿ ಖಾಲಿ ಇರುವುದರಿಂದ ಹೆಬ್ಬಾಳದ ರಸ್ತೆ ಬದಿಯಲ್ಲಿ ಜನರು
ಬೆಳಗಿನ ವಾಯುವಿಹಾರ ಮಾಡಿದರು.

ಇನ್ನೂ ಲಾಕ್‍ಡೌನ್ ಹಿನ್ನೆಲೆಯಲ್ಲಿ ಮೆಜೆಸ್ಟಿಕ್ ಸಂಪೂರ್ಣ ನಿಶಬ್ಧವಾಗಿದೆ. ಕೆಎಸ್‌ಆರ್‌ಟಿಸಿ ಮತ್ತು ಬಿಎಂಟಿಸಿ ಬಸ್ ನಿಲ್ದಾಣಗಳು ಖಾಲಿಯಾಗಿವೆ. ಮೆಜೆಸ್ಟಿಕ್‍ನಲ್ಲಿ ಆಟೋಗಳ ಸಂಚಾರ ಹೊರತು ಪಡಿಸಿದರೆ ಬೇರೆ ವಾಹನಗಳ ಓಡಾಟ ಸಂಪೂರ್ಣ ಬಂದ್ ಆಗಿದೆ. ಮಲ್ಲೇಶ್ವರಂನಲ್ಲಿ ಹಾಲು ಮಾರಾಟಕ್ಕೆ ಮಾತ್ರ ಅವಕಾಶ ಮಾಡಿಕೊಡಲಾಗಿದೆ.

ಹೀಗಾಗಿ ಮಲ್ಲೇಶ್ವರಂ ಮುಖ್ಯ ರಸ್ತೆಗಳು ಖಾಲಿ ಖಾಲಿಯಾಗಿವೆ. ಆದರೆ ದ್ವಿಚಕ್ರ ವಾಹನದಲ್ಲಿ ಜನರು ಓಡಾಡುತ್ತಿದ್ದಾರೆ. ಸಂಡೇ ಕರ್ಫ್ಯೂ ಹಿನ್ನೆಲೆಯಲ್ಲಿ ಮುಜರಾಯಿ ಇಲಾಖೆ ಆದೇಶ ಹೊರಡಿಸಿದ್ದು, ನಗರದ ದೇವಾಲಯಗಳು ಕೂಡ ಬಂದ್ ಆಗಿದ್ದವು. ಮಲ್ಲೇಶ್ವರಂನ ಸಾಯಿ ಬಾಬಾ ದೇವಾಲಯ ಬಂದ್ ಆಗಿತ್ತು. ಆದರೆ ಗುರು ಪೂರ್ಣಮಿ ಹಿನ್ನೆಲೆಯಲ್ಲಿ ಸಾಯಿ ಬಾಬಾ ದರ್ಶನಕ್ಕೆ ಬಂದ ಭಕ್ತಾಧಿಗಳು ರಸ್ತೆಯಲ್ಲೇ ನಮಸ್ಕಾರ ಮಾಡಿ ವಾಪಸ್ ಹೋಗುತ್ತಿದ್ದ ದೃಶ್ಯ ಕಂಡು ಬಂತು.

ಸದಾ ವಾಹನ ಸಂಚಾರದಿಂದ ಟ್ರಾಫಿಕ್ ಜಾಮ್ ಆಗುತ್ತಿದ್ದ ತುಮಕೂರು ರಸ್ತೆ ಭಾನುವಾರ ಲಾಕ್‍ಡೌನ್ ಹಿನ್ನೆಲೆಯಲ್ಲಿ ಖಾಲಿ ಖಾಲಿಯಾಗಿದೆ. ಬೆರೆಳೆಣಿಕೆಯಷ್ಟು ವಾಹನಗಳು ಸಂಚಾರ ಬಿಟ್ಟರೆ ಬಹುತೇಕ ರಸ್ತೆ ಖಾಲಿ ಇದೆ. ಗೊರಗೊಂಟೆಪಾಳ್ಯದ ಫ್ಲೈ ಓವರ್ ಬಂದ್ ಮಾಡಲಾಗಿತ್ತು.

ಆದರೆ,ರಾಜ್ಯದ ಹಲವು ಕಡೆ ಆದೇಶದ ಉಲ್ಲಂಘನೆಯಾಗಿದೆ. ಲಾಲ್ ಬಾಗ್ ಬಂದ್ ಮಾಡಿದ್ದರೂ ರಸ್ತೆ ಬಳಿ ಜನರು ವಾಯು ವಿಹಾರ ಮಾಡುತ್ತಿದ್ದರು.ಮನೆಯಿಂದ ಹೊರಗೆ ಬರದಂತೆ ಕಟ್ಟುನಿಟ್ಟಾಗಿ ಸೂಚನೆ ನೀಡಿದ್ದರೂ
ಸಾರ್ವಜನಿಕರು ಹೊರಗೆ ಬಂದಿದ್ದರು.

ಕಲಬುರಗಿಯಲ್ಲಿ ಲಾಕ್​ಡೌನ್​ ಇದ್ದರೂ ಆಟೋ ಸಂಚಾರ ಎಂದಿನಂತಿತ್ತು.ಲಾಕ್ ಡೌನ್ ಉಲ್ಲಂಘಿಸಿ ಆಟೋಗಳು ಓಡಾಡುತ್ತಿವೆ. ಜೊತೆಗೆ ಕೊರೊನಾ ಅಟ್ಟಹಾಸ ಹೆಚ್ಚಿದ್ದರು ಇಲ್ಲಿನ ಜನ ರಸ್ತೆಗಿಳಿದಿದ್ದರು.

ಕೊಪ್ಪಳದಲ್ಲಿ ಭಾನುವಾರ ಲಾಕ್​ಡೌನ್ ಉಲ್ಲಂಘಿಸಿ ಕೆಲ ಯುವಕರು ಗವಿಮಠದ ಮೈದಾನದಲ್ಲಿ ಕ್ರಿಕೆಟ್ ಆಡಿದರೆ, ಜತೆಗೆ ಗುಂಪು ಗುಂಪಾಗಿ ಜನರು  ವಾಯುವಿಹಾರ ಮಾಡಿದರು. ಇನ್ನು ಕೆಲವರು ಮೈದಾನದಲ್ಲೇ ವ್ಯಾಯಾಮ ಮಾಡಿದ ದೃಶ್ಯ ಕಂಡು ಬಂತು.

ವಿಜಯಪುರದಲ್ಲಿ ಅನಗತ್ಯವಾಗಿ ಬೈಕ್​ ಸವಾರಿ ಮಾಡುತ್ತಿದ್ದವರಿಗೆ ಪೊಲೀಸರು ಲಾಠಿ ರುಚಿ ತೋರಿಸಿದ್ದಾರೆ. ಸಕ್ಕರೆ ನಾಡು ಮಂಡ್ಯ ಸಹ ಕರೊನಾಗೆ ನಲುಗಿದ್ದರು ಸಹ ಜನ ಮಾತ್ರ ವಾಕಿಂಗ್ ಮಾಡುವುದನ್ನು ನಿಲ್ಲಿಸುತ್ತಿಲ್ಲ. ಎಂದಿನಂತೆಯೇ ವಾಕಿಂಗ್​ ಮೂಡ್​ನಲ್ಲಿ ಜನರಿದ್ದಾರೆ.

ನಗರದ ಕಾವೇರಿ ವನದ ರಸ್ತೆ, ಸರ್ಕಾರಿ ಮಹಾವಿದ್ಯಾಲಯದ ಗ್ರೌಂಡ್ ಸೇರಿದಂತೆ ಪಾರ್ಕ್​ಗಳಲ್ಲಿ ಜನರ ಓಡಾಟ ಎಂದಿನಂತಿದ್ದು, ಪೊಲೀಸರು ಎಚ್ಚರಿಕೆ ಜತೆಗೆ ಜನರು ಮನೆಗೆ ಕಳುಹಿಸುತ್ತಿದ್ದಾರೆ. ಗದಗದಲ್ಲೂ ಇದೇ ರೀತಿಯ ಪರಿಸ್ಥಿತಿ ಕಂಡು ಬಂದಿದೆ. ಎಂದಿನಂತೆ ಸಾರ್ವಜನಿಕರು ಮುನ್ಸಿಪಲ್ ಕಾಲೇಜು ಮೈದಾನದಲ್ಲಿ ಯೋಗ, ವಾಯುವಿಹಾರ, ವಾಕಿಂಗ್ ಮಾಡಲು ಬಂದಿದ್ದರು. ದೈಹಿಕ ಅಂತರ ಮರೆತು ಗುಂಪು ಗುಂಪಾಗಿ ಓಡಾಡುತ್ತಿದ್ದರು.

ಇನ್ನು ಗದಗದಲ್ಲಿ ಸಂಡೇ ಲಾಕ್​ಡೌನ್​​ ರೂಲ್ಸ್ ಬ್ರೇಕ್​ ಹಾಕುತ್ತಿರುವ ಜನರಿಗೆ ಪಾಠ ಕಲಿಸಲು ಬೆಳ್ಳಂಬೆಳಗ್ಗೆ ಪೊಲೀಸರು ಅಖಾಡಕ್ಕಿಳಿದಿದ್ದಾರೆ. ನಿಯಮ ಉಲ್ಲಂಘಿಸೋರಿಗೆ ಎಚ್ಚರಿಕೆ ನೀಡಿ ಕಳಿಸುತ್ತಿದ್ದಾರೆ. ಬೇಕಾಬಿಟ್ಟಿ ಓಡಾಡುತ್ತಿರುವ ಜನರಿಗೆ ಖಾಕಿ ಕ್ಲಾಸ್​ ತೆಗೆದುಕೊಳ್ಳುತ್ತಿದ್ದಾರೆ. ಆಯಕಟ್ಟಿನ ಸ್ಥಳಗಳಲ್ಲಿ ಪೊಲೀಸರ ಹದ್ದಿನ ಕಣ್ಣಿಟ್ಟಿದ್ದಾರು.

ಶಿವಮೊಗ್ಗದಲ್ಲಿ ಲಾಕ್​ಡೌನ್ ನಿಯಮ ಉಲ್ಲಂಘನೆಯಾಗಿದೆ. ನಗರದ ಲಕ್ಷ್ಮೀ ಚಿತ್ರಮಂದಿರ ಬಳಿ ತರಕಾರಿ, ಹಾಲು, ಹೂ ಹಣ್ಣು, ದಿನಸಿ ಖರೀದಿಯಲ್ಲಿ ಜನ ನಿರತರಾಗಿದ್ದರು. ಮಹಾಮಾರಿ ಹರಡದಂತೆ ತಡೆಯಲು ವಿಧಿಸಿರುವ ಲಾಕ್​ಡೌನ್​ಗೆ ಮೈಸೂರಿನಲ್ಲಿ ಜನ ಹೆಚ್ಚು ತಲೆಕೆಡಿಸಿಕೊಂಡಂತೆ ಕಂಡುಬರಲಿಲ್ಲ.

ಏಕೆಂದರೆ, ಬೆಳಗ್ಗೆ ವಾಯುವಿಹಾರ, ಕ್ರಿಕೆಟ್  ಆಟದಲ್ಲಿ ಬಹುತೇಕರು ತೊಡಗಿದ್ದರು.  ಗೇಟಿಗೆ ಬೀಗ ಹಾಕಿದರು ಒಳಗೆ ಹೋಗಿ ವ್ಯಾಯಾಮ ಮಾಡಿದರು. ಓವಲ್ ಮೈದಾನಕ್ಕೆ ಬೀಗ ಹಾಕಿದ್ದರೂ ಗುಂಪು ಗುಂಪಾಗಿ ಕ್ರಿಕೆಟ್, ವ್ಯಾಯಾಮದಲ್ಲಿ ಜನ ತೊಡಗಿಕೊಂಡಿರುವ ದೃಶ್ಯ ಕಂಡು ಬಂದಿದೆ.

ಮಂಡ್ಯದ ಕಾವೇರಿ ವನದ ರಸ್ತೆ, ಸರ್ಕಾರಿ ಮಹಾವಿದ್ಯಾಲಯದ ಮೈದಾನ ಸೇರಿದಂತೆ ಪಾರ್ಕ್ ಗಳಿಗೆ ಜನ ವಾಯುವಿ ಹಾರ ನೆಪ ಮಾಡಿ ರಸ್ತೆಗಿಳಿದಿದ್ದಾರೆ.  ಇನ್ನು ಮಂಡ್ಯ ಮಾರುಕಟ್ಟೆಯಲ್ಲಿ ಜನ ತರಕಾರಿ ಖರೀದಿಗೆ ಮುಗಿಬಿದ್ದಿದ್ದರು. ಇನ್ನುಳಿದ ಚಾಮರಾಜನಗರ, ಮೈಸೂರು, ಹಾಸನ, ಕಲಬುರಗಿ, ಕೊಪ್ಪಳ, ಬೆಳಗಾವಿ, ರಾಮನಗರ, ಹಾವೇರಿ, ರಾಯಚೂರು, ಕೋಲಾರ ಸೇರಿದಂತೆ ಅನೇಕ ಜಿಲ್ಲೆಗಳಲ್ಲಿ ಲಾಕ್​ಡೌನ್​ಗೆ ಅಭೂತಪೂರ್ವ ಬೆಂಬಲ ವ್ಯಕ್ತವಾಗಿದೆ.

ಸಂಚಾರ ವಿರಳವಾಗಿದ್ದು, ಸಾರ್ವಜನಿಕರು ಓಡಾಟವು ಸಹ ಸ್ತಬ್ಧವಾಗಿದೆ. ಜನರು ಅಗತ್ಯ ವಸ್ತುಗಳನ್ನು ಕೊಳ್ಳಲು ಮಾತ್ರ ಅವಕಾಶ ನೀಡಲಾಗಿದ್ದು, ಅನಗತ್ಯವಾಗಿ ಮನೆಯಿಂದ ಹೊರಗಡೆ ಬಂದವರ ಪೊಲೀಸರು ನಿಗಾ ಇಟ್ಟಿದ್ದಾರೆ. ಇನ್ನು ಕೆಲವೆಡೆ ರೈತರಿಗೆ ತೊಂದರೆಯಾಗಬಾರದು ಎಂಬ ಕಾರಣಕ್ಕೆ ಎಪಿಎಂಸಿ ಮಾರುಕಟ್ಟೆಗಳನ್ನು ತೆರೆದಿದ್ದಾರೆ.

# ವರುಣನ ಸಿಂಚನ :  
ಲಾಕ್‍ಡೌನ್ ಹಿನ್ನೆಲೆಯಲ್ಲಿ ಹಲವೆಡೆ ಸಂಚಾರ ಸಂಪೂರ್ಣ ಸ್ತಬ್ಧವಾಗಿದೆ. ಈ ಮಧ್ಯೆ ಹಾಸನ ಮತ್ತು ಶಿವಮೊಗ್ಗದಲ್ಲಿ ಬೆಳ್ಳಂಬೆಳಗ್ಗೆ ಜಿಟಿಜಿಟಿ ಮಳೆ ಸುರಿಯಿತು. ಹಾಸನ ನಗರ ಸೇರಿದಂತೆ ಹಲವೆಡೆ ಬೆಳಗ್ಗೆಯಿಂದಲೇ ಸೋನೆ ಮಳೆ ಆಗಮಿಸಿದ್ದರಿಂದ ಜನರಿಗೆ ಕಿರಿ ಕಿರಿ ಉಂಟಾಯಿತು.

ಇದರಿಂದ ಮನೆಯಿಂದ ಜನರು ಹೊರಬರುತ್ತಿಲ್ಲ. ಇನ್ನೂ ಅಗತ್ಯ ವಸ್ತುಕೊಳ್ಳಲು ಮನೆಯಿಂದ ಹೊರಬಂದವರು ಮಳೆಯಿಂದಾಗಿ ಅಂಗಡಿಗಳ ಬಳಿಯೇ ವಾಸ್ತವ್ಯ ಮಾಡಿದರು. ಕೆಲವರು ಮಳೆಯಿಂದಾಗಿ ನೀರು ಬೀಳದ ಜಾಗದಲ್ಲಿ ಆಶ್ರಯ ಪಡೆದರು. ಇಂದು ಕರ್ಫ್ಯೂ ಜಾರಿಯಾಗಿರುವುದರಿಂದ ಬಹುತೇಕ ಹಾಸನದ ರಸ್ತೆಗಳು ಖಾಲಿ, ಖಾಲಿಯಾಗಿವೆ. ಆದರೂ ರಸ್ತೆಯಲ್ಲಿ ಅಲ್ಲೊಂದು ಇಲ್ಲೊಂದು ಕಾರು, ಆಟೋ, ಲಾರಿ ಓಡಾಡುತ್ತಿದೆ.

ಇನ್ನೂ ಶಿವಮೊಗ್ಗದಲ್ಲಿ ಮುಂಜಾನೆಯೇ ಜಿಟಿಜಿಟಿ ಮಳೆ ಆರಂಭವಾಗಿದೆ. ಸಂಡೇ ಲಾಕ್‍ಡೌನ್ ಹಾಗೂ ಜಿಟಿಜಿಟಿ ಮಳೆ ಕಾರಣ ಮಲೆನಾಡಿನ ಜನರು ಮನೆಯಿಂದ ಹೊರಗೆ ಬರುತ್ತಿಲ್ಲ. ಈ ಮೂಲಕ ಸಂಡೇ ಲಾಕ್‍ಡೌನ್‍ಗೆ ಶಿವಮೊಗ್ಗದಲ್ಲಿ ಉತ್ತಮ ಪ್ರತಿಕ್ರಿಯೆ ಸಿಗುತ್ತಿದೆ.

Facebook Comments

Sri Raghav

Admin