ಕೇಜ್ರಿವಾಲ್ ವಿರುದ್ಧ ಬಿಜೆಪಿಯ ಸುನಿಲ್ ಯಾದವ್ ಕಣಕ್ಕೆ

ಈ ಸುದ್ದಿಯನ್ನು ಶೇರ್ ಮಾಡಿ

ನವದೆಹಲಿ, ಜ.21- ಭಾರೀ ಕುತೂಹಲ ಕೆರಳಿಸಿರುವ ದೆಹಲಿ ವಿಧಾನಸಭಾ ಚುನಾವಣಾ ಕಾವು ಏರುತ್ತಿದ್ದು , ಪುನರಾಯ್ಕೆ ಬಯಸಿರುವ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ನೇತೃತ್ವದ ಆಮ್ ಆದ್ಮಿ ಪಕ್ಷದ ಪ್ರಾಬಲ್ಯವನ್ನು ಮಣಿಸಲು ಬಿಜೆಪಿ ಪ್ರಬಲ ಕಾರ್ಯತಂತ್ರ ರೂಪಿಸಿದೆ. ದೆಹಲಿ ವಿಧಾನಸಭಾ ಚುನಾವಣೆಗೆ ಬಿಜೆಪಿ 10 ಅಭ್ಯರ್ಥಿಗಳ ಅಂತಿಮ ಪಟ್ಟಿಯನ್ನು ಜ.20 ರಂದು ಮಧ್ಯರಾತ್ರಿ ಬಿಡುಗಡೆ ಮಾಡಿದೆ.

ಕೇಜ್ರಿವಾಲ್ ಪ್ರತಿನಿಧಿಸುವ ನವದೆಹಲಿ ವಿಧಾನಸಭಾ ಕ್ಷೇತ್ರದಿಂದ ಸುನಿಲ್ ಯಾದವ್ ಅವರನ್ನು ಬಿಜೆಪಿ ಅಭ್ಯರ್ಥಿಯನ್ನಾಗಿ ಕಣಕ್ಕಿಳಿಸಿದೆ. ಖ್ಯಾತ ವಕೀಲರಾಗಿರುವ ಸುನಿಲ್ ಯಾದವ್ ಬಿಜೆಪಿ ಯುವ ಮೋರ್ಚಾದ ಅಧ್ಯಕ್ಷರಾಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಯುವ ಅಭ್ಯರ್ಥಿಯನ್ನು ಕಣಕ್ಕಿಳಿಸುವುದರಿಂದ ಕೇಜ್ರಿವಾಲ್ ಅನ್ನು ಮಣಿಸುವುದು ಸುಲಭ ಸಾಧ್ಯ ಎಂಬುದು ಬಿಜೆಪಿಯ ಲೆಕ್ಕಾಚಾರ.

ಮೊದಲ ಪಟ್ಟಿಯಲ್ಲೇ ಟಿಕೆಟ್ ಪಡೆದಿದ್ದ ತಾಜಿಂದರ್ ಸಿಂಗ್ ಬಗ್ಗ ಅವರನ್ನು ಅಂತಿಮ ಪಟ್ಟಿಯಲ್ಲಿ ಹರಿನಗರ್ ವಿಧಾನಸಭಾ ಕ್ಷೇತ್ರದ ಅಭ್ಯರ್ಥಿಯನ್ನಾಗಿ ಘೋಷಿಸಲಾಗಿದೆ.
ಬಿಜೆಪಿ ಮೂಲಗಳ ಪ್ರಕಾರ ಬಗ್ಗ ತಿಲಕ್ ನಗರದಿಂದ ಸ್ಪರ್ಧಿಸುವ ಇಚ್ಛೆ ಹೊಂದಿದ್ದರು. ಆದರೆ ಈ ಕ್ಷೇತ್ರದಿಂದ ಬೇರೊಬ್ಬರಿಗೆ ಟಿಕೆಟ್ ನೀಡಲು ಹೈಕಮಾಂಡ್ ನಿರ್ಧರಿಸಿತು.
ಫೆ.8ಕ್ಕೆ ದೆಹಲಿಯಲ್ಲಿ ಮತದಾನ ನಡೆಯಲಿದ್ದು , ಫೆ.11ಕ್ಕೆ ಫಲಿತಾಂಶ ಪ್ರಕಟವಾಗಲಿದೆ.

Facebook Comments