ಸ್ಯಾಂಡಲ್ವುಡ್ ನಲ್ಲಿ ಮತ್ತೊಮ್ಮೆ ಸೊಂಟ ಬಳುಕಿಸಲಿದ್ದಾಳೆ ಶೇಷಮ್ಮ..!

ಈ ಸುದ್ದಿಯನ್ನು ಶೇರ್ ಮಾಡಿ

ಶೇಷಮ್ಮ ಶೇಷಮ್ಮ ……….ಬಾಗಿಲು ತೆರಿಯಮ್ಮ ……… ಎನ್ನುತ್ತಾ ಎಕ್ಸ್‍ಕ್ಯೂಸ್ ಮಿ ಪ್ರೇಮ್ ನಟಿಸಿದ್ದ ಡಿಕೆ ಚಿತ್ರದ ಮೂಲಕ ಕನ್ನಡ ಚಿತ್ರರಂಗಕ್ಕೆ ಬಂದು ತನ್ನ ಮಾದಕ ನೋಟ ಹಾಗೂ ಮೈಮಾಟದಿಂದ ಯುವ ಪಡೆಯ ಮನಸ್ಸನ್ನು ಗೆದ್ದಿದ್ದ ಸನ್ನಿಲಿಯೋನ್ ಚಂದನವನಕ್ಕೆ ಮರು ಪ್ರವೇಶಿಸಿದ್ದಾರೆ. ಡಿಕೆ ಸಿನಿಮಾದಲ್ಲಿ ನಟಿಸುವಾಗಲೇ ನನಗೆ ಕನ್ನಡ ಚಿತ್ರರಂಗವೆಂದರೆ ತುಂಬಾ ಪ್ರೀತಿ, ಇಲ್ಲಿನ ವಾತಾವರಣವು ತುಂಬಾ ಹಿಡಿಸಿದೆ, ಕನ್ನಡ ಚಿತ್ರರಂಗದಲ್ಲಿ ನಟಿಸುವ ಅವಕಾಶ ಮತ್ತೆ ಸಿಕ್ಕರೆ ಬಂದು ನಟಿಸುತ್ತೇನೆ ಎಂಬ ತಮ್ಮ ಮನದ ಅನಿಸಿಕೆಯನ್ನು ಹಂಚಿಕೊಂಡಿದ್ದ ಸನ್ನಿಲಿಯೋನ್ ಈಗ ಚಾಂಪಿಯನ್ ಚಿತ್ರದಲ್ಲಿ ಮತ್ತೆ ತಮ್ಮ ಸೊಂಟ ಕುಣಿಸಿದ್ದಾರೆ.

ಕೊರೊನಾ ಸಂಕಷ್ಟದ ಸಮಯದಲ್ಲಿ ಲಾಸ್‍ಏಂಜಿಲೀಸ್‍ಗೆ ಹೋಗಿ ನೆಲೆಸಿದ್ದ ಸನ್ನಿಲಿಯೋನ್ ಅವರು ಈಗ ಮತ್ತೆ ಭಾರತಕ್ಕೆ ಬಂದಿದ್ದು ಚಿತ್ರೀಕರಣದಲ್ಲಿ ಬ್ಯುಜಿಯಾಗಿದ್ದಾರೆ. ಶಾಹುರಾಜ್‍ಶಿಂಧೆ ನಿರ್ದೇಶಿಸಿರುವ ಚಾಂಪಿಯನ್ ಚಿತ್ರವು ಹೆಸರೇ ಸೂಚಿಸುವಂತೆ ಕ್ರೀಡಾ ಆಧಾರಿತ ಚಿತ್ರವಾಗಿದ್ದು ಕನ್ನಡ ಹಾಗೂ ಮರಾಠಿ ಭಾಷೆಗಳಲ್ಲಿ ಏಕಕಾಲಕ್ಕೆ ಸಿದ್ಧವಾಗುತ್ತಿದೆ. ಚಿತ್ರದಲ್ಲಿ ಬಹುತೇಕ ಯುವಪಡೆಯೇ ನಟಿಸುತ್ತಿದ್ದು, ಧೈರ್ಯಂ, ಬಜಾರ್ ಮುಂತಾದ ಚಿತ್ರಗಳಲ್ಲಿ ನಟಿಸಿರುವ ಅದಿತಿಪ್ರಭುದೇವ ಅವರು ಈ ಚಿತ್ರದ ನಟಿಯಾಗಿದ್ದರೆ, ಈಗ ಸದ್ದಿಲ್ಲದೆ ಸನ್ನಿಲಿಯೋನ್‍ನ ಎಂಟ್ರಿ ಆಗಿದೆ.

ಚಾಂಪಿಯನ್ ಚಿತ್ರದ ಚಿತ್ರೀಕರಣ ಪೂರ್ಣಗೊಂಡು ಈಗಾಗಲೇ ಬಿಡುಗಡೆಯಾಗಬೇಕಾಗಿತ್ತಾದರೂ ಕೊರೊನಾ ಹಾವಳಿಯಿಂದ ಬಿಡುಗಡೆ ತುಸು ತಡವಾಗಿದೆ. ಈ ಚಿತ್ರದಲ್ಲಿ ಧನ್‍ಪಾಲ್ ಎಂಬುವವರು ನಾಯಕನಟನಾಗಿ ನಟಿಸುತ್ತಿದ್ದಾರೆ. ಇನ್ನು ಸನ್ನಿಲಿಯೋನ್ ವಿಷಯಕ್ಕೆ ಬರುವುದಾದರೆ ಕಿಚ್ಚ ಸುದೀಪ್ ಅವರು ನಟಿಸುತ್ತಿರುವ ವಿಕ್ರಾಂತ್ ರೋಣ ಸಿನಿಮಾದಲ್ಲೇ ಸನ್ನಿ ಬಂದು ನರ್ತಿಸುತ್ತಾರೆ ಎಂದು ಹೇಳಲಾಗಿತ್ತಾದರೂ ಕೊನೆ ಘಳಿಗೆಯಲ್ಲಿ ಶ್ರೀಲಂಕಾದ ಬೆಡಗಿ ಜಾಕ್ವೆಲಿನ್ ಫರ್ನಾಂಡೀಸ್ ಅವರು ಬಂದು ಐಟಂ ಸಾಂಗ್‍ಗೆ ಸೊಂಟ ಕುಣಿಸಿದರು. ಸನ್ನಿಲಿಯೋನ್ ಅವರು ನಟಿಸಿರುವ ಬುಲೆಟ್ಸ್ ಎಂಬ ವೆಬ್‍ಸರಣಿ ಇತ್ತೀಚೆಗೆ ಬಿಡುಗಡೆಗೊಂಡಿದ್ದು ಸಾಕಷ್ಟು ಕ್ರೇಜ್ ಹುಟ್ಟಿಸಿ ಯುವ ಪಡೆಯ ಶಿಳ್ಳೆ ಗಿಟ್ಟಿಸಿದ್ದಾರೆ.

ಬಾಲಿವುಡ್‍ನಲ್ಲಿ ಸಾಕಷ್ಟು ಬ್ಯೂಜಿಯಾಗಿದ್ದರೂ ಕೂಡ ಸನ್ನಿಲಿಯೋನ್ ಕನ್ನಡದ ಮೇಲಿನ ಪ್ರೇಮವನ್ನು ಮರೆಯದೆ ಚಾಂಪಿಯನ್ ಚಿತ್ರದ ಐಟಂ ಸಾಂಗ್‍ಗೆ ಬಂದು ಸೊಂಟ ಬಳುಕಿಸಿದ್ದಾರೆ. ಅಂದಹಾಗೆ ಸನ್ನಿ ಕ್ರೇಜಿಸ್ಟಾರ್ ರವಿಚಂದ್ರನ್, ಚಂದನ್ ನಟಿಸಿದ್ದ ಲವ್‍ಯೂ ಆಲಿಯಾದಲ್ಲೂ ಬಂದು ನಟಿಸಿದ್ದರು. ಕನ್ನಡವೆಂದರೆ ಪ್ರಾಣ ಎಂದು ಹೇಳುವ ಸನ್ನಿಗೆ ಚಂದನವನದಲ್ಲಿ ಅವಕಾಶಗಳು ಒಲಿದುಬರಲಿ ಅಲ್ಲವೇ..?

Facebook Comments