ಮಂಡ್ಯದಲ್ಲಿ ಮರ್ಡರ್ ಮಾಡಿ ಹಾಸನದಲ್ಲಿ ಸಿಕ್ಕಿ ಬಿದ್ದ ಸುಫಾರಿ ಕಿಲ್ಲರ್‌

ಈ ಸುದ್ದಿಯನ್ನು ಶೇರ್ ಮಾಡಿ

ಹಾಸನ, ಜ.21- ರಾಜಸ್ತಾನ ಮೂಲದ ಇಬ್ಬರು ಸುಫಾರಿ ಕಿಲ್ಲರ್‍ಗಳನ್ನು ಚನ್ನರಾಯಪಟ್ಟಣ ಠಾಣೆ ಪೊಲೀಸರು ಬಂಧಿಸಿದ್ದಾರೆ. ಮನೀಷ್ ಹಾಗೂ ಕಿಷನ್ ಬಂಧನದಿಂದ ಮಂಡ್ಯದಲ್ಲಿ ನಡೆದಿದ್ದ ಮಾರ್ವಾಡಿಯ ಕೊಲೆಗೆ ಸಾಮ್ಯತೆ ಇದೆಯೇ ಎಂಬ ಬಗ್ಗೆ ಅನುಮಾನ ವ್ಯಕ್ತವಾಗಿದ್ದು ಈ ನಿಟ್ಟಿನಲ್ಲಿ ಆರೋಪಿಗಳಿಬ್ಬರನ್ನು ತೀವ್ರ ವಿಚಾರಣೆಗೊಳಪಡಿಸಿದ್ದಾರೆ.

ಇವರ ಬಂಧನದಿಂದ ಮಂಡ್ಯದಲ್ಲಿ ನಡೆದಿರುವ ವ್ಯಕ್ತಿಯ ಕೊಲೆ ಪ್ರಕರಣಕ್ಕೆ ಹೊಸ ಟ್ವಿಸ್ಟ್ ಸಿಕ್ಕಿದ್ದು, ಈ ಪ್ರಕರಣದಲ್ಲಿ ಪತ್ನಿ ಪ್ರಿಯಕರನೊಂದಿಗೆ ಸೇರಿ ಪತಿಯನ್ನು ಸುಫಾರಿ ಕೊಟ್ಟು ಕೊಲೆ ಮಾಡಿಸಿರುವ ಮಾಹಿತಿ ಲಭ್ಯವಾಗಿದೆ. ಮಂಡ್ಯದಲ್ಲಿ ವ್ಯಕ್ತಿಯೊಬ್ಬರನ್ನು ಕೊಲೆ ಮಾಡಿದ ನಂತರ ಆರೋಪಿಗಳು ಮಂಗಳೂರು ಬಸ್ ಹತ್ತಿದ್ದಾರೆ. ಸುಫಾರಿಕೋರರಿಗೆ ಹಣ, ಒಡವೆ ಕೊಡುವುದಾಗಿ ಹೇಳಿ ಕುಣಿಗಲ್‍ಗೆ ಬರುವಂತೆ ಮೃತನ ಪತ್ನಿ ಕರೆಸಿದ್ದಾಳೆ.

ಆರೋಪಿಗಳು ಬ್ಯಾಗ್ ಅನ್ನು ಮರೆತು ಕುಣಿಗಲ್‍ನಲ್ಲಿ ಇಳಿದಿದ್ದಾರೆ. ಇತ್ತ ಬಸ್ ಚಾಲಕ ಬ್ಯಾಗ್ ಗಮನಿಸಿ ಚನ್ನರಾಯಪಟ್ಟಣ ಡಿಫೋಗೆ ಈ ಬ್ಯಾಗನ್ನು ಕೊಟ್ಟು ಹೋಗಿದ್ದಾರೆ. ಆರೋಪಿಗಳಿಗೆ ತದನಂತರ ಬಸ್‍ನಲ್ಲೇ ಬ್ಯಾಗ್ ಬಿಟ್ಟಿರುವುದು ನೆನಪಾಗಿ ಬ್ಯಾಗ್ ಹುಡುಕಿಕೊಂಡು ಚನ್ನರಾಯಪಟ್ಟಣ ಬಸ್ ಡಿಫೋ ಬಳಿ ಬಂದಿದ್ದಾರೆ. ಅಷ್ಟರೊಳಗೆ ಡಿಫೋದವರು ಬ್ಯಾಗನ್ನು ಪರಿಶೀಲಿಸಿದಾಗ ಒಂದು ಡ್ಯಾಗ್ರನ್ ಹಾಗೂ ಪಿಸ್ತೂಲ್ ಪತ್ತೆಯಾಗಿದೆ.ತಕ್ಷಣ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ.

ಇದೇ ವೇಳೆಗೆ ಇಂದು ಬೆಳಗ್ಗೆ ಚನ್ನರಾಯಪಟ್ಟಣ ಬಸ್ ಡಿಫೋ ಬಳಿ ಬ್ಯಾಗ್ ವಿಚಾರಿಸಲು ಹೋದಾಗ ಪೊಲೀಸರು ಇವರನ್ನು ಬಂಧಿಸಿದ್ದಾರೆ. ಇದೀಗ ಇವರಿಬ್ಬರು ಯಾವ ವ್ಯಕ್ತಿಯನ್ನು ಮಂಡ್ಯದಲ್ಲಿ ಕೊಲೆ ಮಾಡಿದ್ದಾರೆಂಬ ಬಗ್ಗೆ ಪೊಲೀಸರು ತನಿಖೆ ಚುರುಕುಗೊಳಿಸಿದ್ದಾರೆ.

Facebook Comments