ಅಭಿಷೇಕ್ ಅಭಿನಯದ ಮೊದಲ ಚಿತ್ರ ‘ಅಮರ್’ ಸಕ್ಸಸ್‌ಗೆ ವಿಶ್ ಮಾಡಿದ ಸೂಪರ್ ಸ್ಟಾರ್..!

ಈ ಸುದ್ದಿಯನ್ನು ಶೇರ್ ಮಾಡಿ

ರೆಬೆಲ್ ಸ್ಟಾರ್ ಅಂಬರೀಷ್ ಮತ್ತು ಸೂಪರ್ ಸ್ಟಾರ್ ರಜನಿಕಾಂತ್ ಸ್ನೇಹ ನಿಮ್ಮೆಲ್ಲರಿಗೂ ಗೊತ್ತೇ ಇದೆ. ಸ್ನೇಹಿತನ ಬೆನ್ನಿಗೆ ನಿಂತಿದ್ದ ರಜನಿ ಈಗ ತನ್ನ ಸ್ನೇಹದ ಋಣ ತೀರಿಸಿದ್ದಾರೆ. ಹೌದು, ಭಾರತದ ಸೂಪರ್ ಸ್ಟಾರ್ ರಜನಿಕಾಂತ್ ಅವರು ಅಭಿಷೇಕ್ ಅಂಬರೀಷ್ ಮೊದಲ ಬಾರಿಗೆ ನಾಯಕನಟನಾಗಿ  ಅಭಿನಯಿಸುತ್ತಿರುವ  ‘ಅಮರ್’ ಚಿತ್ರಕ್ಕೆ ವೀಡೀಯೋ ಮೂಲಕ ವಿಶ್ ಮಾಡಿದ್ದಾರೆ.

ಅಭಿಷೇಕ್ ಅಂಬರೀಷ್ ನಾಯಕತ್ವದ ಮೊಟ್ಟಮೊದಲ ಸಿನಿಮಾ ಅಮರ್ ನಾಡಿದ್ದು, ಅಂದರೆ ಮೇ 31, 2019ರಂದು ವಿಶ್ವದಾದ್ಯಂತ ಬಿಡುಗಡೆಯಾಗಲಿದೆ. ಈ ನಡುವೆ ರಜನಿಕಾಂತ್ ಅವರು ತಾವು ಕಳುಹಿಸಿರುವ ವೀಡಿಯೋದಲ್ಲಿ “ನನ್ನ ಗೆಳೆಯ ಅಂಬರೀಷ್ ಹಾಗೂ ಸಹೋದರಿ ಸುಮಲತಾ ಅವರ ಪುತ್ರ ಅಭಿಷೇಕ್ ಅಂಬರೀಷ್ ಅವರ ನಾಯಕತ್ವದ ‘ಅಮರ್’ ಚಿತ್ರವು ದೊಡ್ಡ ಮಟ್ಟದಲ್ಲಿ ಸಕ್ಸಸ್ ಕಾಣಲಿ.

ಅಂಬರೀಷ್ ಹೇಗೆ ಕನ್ನಡ ಜನರ ಹೃದಯದಲ್ಲಿ ವಿಜೃಂಭಿಸಿದ್ದಾನೋ ಹಾಗೇ ಅಭಿಷೇಕ್ ಕೂಡ ಸಿನಿಮಾರಂಗದಲ್ಲಿ ಯಶಸ್ಸು ಕಾಣಲಿ ಮತ್ತು ಕರ್ನಾಟಕದ ಜನರ ಮನಮಸ್ಸಿನಲ್ಲಿ ವಿಜೃಂಭಿಸಲಿ ಎಂದು ನಾನು ಆ ದೇವರಲ್ಲಿ ಪ್ರಾರ್ಥಿಸುತ್ತೇನೆ..ನಮಸ್ಕಾರ” ಎಂದು ರಜನಿಕಾಂತ್ ಹೇಳಿದ್ದಾರೆ.

ಇನ್ನು ಅಭಿಷೇಕ್ ಅಂಬರೀಷ್ ಅವರ ಅಮರ್ ಚಿತ್ರಕ್ಕೆ ಈಗಾಗಲೇ ಸಾಕಷ್ಟು ನಿರೀಕ್ಷೆ ಮೂಡಿದೆ.  ನಾಗಶೇಖರ್ ನಿರ್ದೇಶನದ ಅಮರ್ ಚಿತ್ರದಲ್ಲಿ ತಾನ್ಯಾ ಹೋಪ್ ನಾಯಕಿಯಾಗಿ ನಟಿಸಿದ್ದಾರೆ. ಅರ್ಜನ್ ಜನ್ಯಾ ಸಂಗೀತ ನೀಡಿರುವ ಈ ಚಿತ್ರದ ಹಾಡುಗಳು ಈಗಾಗಲೇ ಸೂಪರ್ ಹಿಟ್ ಎನಿಸಿವೆ. ಬಿಡುಗಡೆ ಕಂಡಿರುವ ಟೀಸರ್ ಮತ್ತು ಟ್ರೇಲರ್‌ಗಳು ಸಹ ಜನಮೆಚ್ಚುಗೆ ಗಳಿಸಿವೆ.

ನಿನ್ನೆಯಷ್ಟೇ ಮಂಡ್ಯದಲ್ಲಿ ನಡೆದ, ಸುಮಲತಾ ಅಂಬರೀಷ್ ಅವರ ‘ಸ್ವಾಭಿಮಾನ ಸಮಾವೇಶದಲ್ಲಿ ಸ್ವತಃ ನಾಯಕ ನಟ ಅಭಿಷೇಕ್ ಅಂಬರೀಷ್ ಅವರು ಸಿನಿಮಾ ಪ್ರೇಕ್ಷಕರಲ್ಲಿ ತಮ್ಮ ಚಿತ್ರವನ್ನು ನೋಡಿ ಹರಿಸಿ ಹಾರೈಸುವಂತೆ ವಿನಂತಿ ಮಾಡಿಕೊಂಡಿದ್ದಾರೆ. ಇದೀಗ, ಭಾರತದ ಸೂಪರ್ ಸ್ಟಾರ್ ಹಾಗೂ ಅಂಬರೀಷ್ ಗೆಳೆಯ ರಜನಿಕಾಂತ್ ಅವರು ಈ ಚಿತ್ರಕ್ಕೆ ವಿಶ್ ಮಾಡಿದ್ದಾರೆ.

Facebook Comments

( ಎಚ್ಚರಿಕೆ..! : ಈ ಸಂಜೆ ಸುದ್ದಿಗಳನ್ನು ನಕಲು ಮಾಡುವವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಲಾಗುತ್ತಿದೆ ) > #ವಾಟ್ಸಾಪ್‌ನಲ್ಲಿ ಸುದ್ದಿಗಳನ್ನು ಪಡೆಯಲು 7795582478 ಸಂಖ್ಯೆಯನ್ನು ನಿಮ್ಮ ಮೊಬೈಲ್ ನಲ್ಲಿ SAVE ಮಾಡಿಕೊಂಡು HI EESANJE ಎಂದು ಸಂದೇಶ ಕಳಿಸಿ

Sri Raghav

Admin