ದೆಹಲಿ ಹಿಂಸಾಚಾರ : ಪೊಲೀಸರಿಗೆ ಸುಪ್ರೀಂಕೋರ್ಟ್ ವಾಗ್ದಂಡನೆ

ಈ ಸುದ್ದಿಯನ್ನು ಶೇರ್ ಮಾಡಿ

ನವದೆಹಲಿ, ಫೆ.26- ಪೌರತ್ವ ತಿದ್ದುಪಡಿ ಕಾಯ್ದೆ ವಿರೋಧ ಮತ್ತು ಪರ ನಡೆದ ಪ್ರತಿಭಟನೆ ಮತ್ತು ವ್ಯಾಪಕ ಹಿಂಸಾಚಾರದಿಂದ ಸಾವು-ನೋವು ಸಂಭವಿಸಿರುವ ಬಗ್ಗೆ ತೀವ್ರ ಕಳವಳ ವ್ಯಕ್ತಪಡಿಸಿರುವ ಸುಪ್ರೀಂಕೋರ್ಟ್ ರಕ್ತಪಾತ ನಿಯಂತ್ರಿಸಲು ಪೊಲೀಸರು ವಿಫಲರಾಗಿದ್ದಾರೆ ಎಂದು ಅಸಮಾಧಾನ ವ್ಯಕ್ತಪಡಿಸಿದೆ. ದೆಹಲಿ ಪೊಲೀಸ್ ಇಲಾಖೆಗೆ ವಾಗ್ದಂಡನೆ ವಿಧಿಸಿರುವ ಸುಪ್ರೀಂಕೋರ್ಟ್ ಇಂತಹ ಘಟನೆಗಳು ನಡೆಯುವುದು ಅತ್ಯಂತ ದುರದೃಷ್ಟಕರ ಎಂದು ವಿಷಾದಿಸಿದೆ. ಅಲ್ಲದೆ, ಈ ಹಿಂಸಾಚಾರ ಪ್ರಕರಣ ಕುರಿತು ಮತ್ತೆ ಹೊಸ ಅರ್ಜಿಗಳನ್ನು ಸ್ವೀಕರಿಸಿ ವಿಚಾರಣೆ ನಡೆಸಲು ಸುಪ್ರೀಂಕೋರ್ಟ್ ನಿರಾಕರಿಸಿದೆ.

ವ್ಯತ್ಯಾಸಗಳು ಬಂದಾಗ ಎಲ್ಲಾ ರಾಜಕೀಯ ಪಕ್ಷಗಳು ತಾಳ್ಮೆಯಿಂದ ವರ್ತಿಸಿ ಆರೋಗ್ಯಕರ ಚರ್ಚೆ ನಡೆಸಬೇಕೆ ಹೊರತು ಹಿಂಸಾಚಾರದಲ್ಲಿ ತೊಡಗುವುದು ಸರಿಯಲ್ಲ ಎಂದು ಸುಪ್ರೀಂ ಕೋರ್ಟ್ ಬುಧವಾರ ಶಾಹೀನ್ ಬಾಗ್ ಪ್ರತಿಭಟನೆ ಕುರಿತು ಉಲ್ಲೇಖಿಸಿ ಹೇಳಿದೆ. ನ್ಯಾಯಮೂರ್ತಿಗಳಾದ ಎಸ್.ಕೆ. ಕೌಲ್ ಮತ್ತು ಕೆ.ಎಂ. ಜೋಸೆಫ್ ಅವರನ್ನೊಳಗೊಂಡ ನ್ಯಾಯಪೀಠ, ಒಂದು ಕುಟುಂಬ, ದೇಶ ಎಂದು ಬಂದಾಗ ಇಲ್ಲಿರುವ ಜನರಲ್ಲಿ ವ್ಯತ್ಯಾಸಗಳು ಬರುವುದು ಸಹಜ.

ಒಂದು ವಿಚಾರವನ್ನು ವಿರೋಧಿಸುವಾಗ ಅದು ಆರೋಗ್ಯಕರ ಚರ್ಚೆಯಾಗಬೇಕು, ಆದರೆ ಇಲ್ಲಿ ಹಿಂಸಾಚಾರ ನಡೆಯುತ್ತಿದೆ. ಅದು ಎಲ್ಲಿಂದಲೋ ಆರಂಭವಾಗಿ ಇನ್ನೆಲ್ಲಿಗೋ ಹೋಗುತ್ತದೆ. ಶಾಹೀನ್ ಬಾಗ್ ಪ್ರತಿಭಟನೆ ಒಂದು ದುರುದೃಷ್ಟಕರ, ಸಮಾಜ ಈ ರೀತಿ ಇರಬಾರದು ಎಂದು ಖೇದ ವ್ಯಕ್ತಪಡಿಸಿತು. ದೆಹಲಿ ಹಿಂಸಾಚಾರ ಸಂದರ್ಭದಲ್ಲಿ ರಾಜಕೀಯ ಪಕ್ಷಗಳು ಮತ್ತು ಸಂಬಂಧಪಟ್ಟವರು ಶಾಂತಿ, ಸಾಮರಸ್ಯ ಕಾಪಾಡುವಂತೆ ಕೋರ್ಟ್ ಕರೆ ನೀಡಿದೆ.

ಶಾಹೀನ್ ಬಾಗ್ ಕೇಸಿಗೆ ಸಂಬಂಧಿಸಿದಂತೆ ಇತರ ಮಧ್ಯಂತರ ಅರ್ಜಿಗಳನ್ನು ಆಲಿಸಲು ನಿರಾಕರಿಸಿದ ಸುಪ್ರೀಂ ಕೋರ್ಟ್, ವಿಚಾರಣೆಗೆ ಬಾಕಿ ಉಳಿದಿರುವ ಕೇಸುಗಳ ವಿಚಾರಣೆಯನ್ನು ವಿಸ್ತರಿಸುವ ಬಗ್ಗೆ ನಮಗೆ ಒಲವು ಇಲ್ಲ. ಸದ್ಯ ಪರಿಸ್ಥಿತಿ ಸರಿಯಿಲ್ಲದಿರುವುದರಿಂದ ಪ್ರಚೋದನಕಾರಿ ವರದಿಯ ವಿಚಾರಣೆಯನ್ನು ಮುಂದಿನ ಸಲ ಮಾಡಲಾಗುವುದು ಎಂದು ಹೇಳಿ ವಿಚಾರಣೆಯನ್ನು ಮಾ.20ಕ್ಕೆ ಮುಂದೂಡಿತು.

Facebook Comments