ಪಕ್ಷೇತರ ಶಾಸಕರಿಬ್ಬರ ಅರ್ಜಿ ವಿಚಾರಣೆ ಮುಂದೂಡಿದ ಸುಪ್ರೀಂ

ಈ ಸುದ್ದಿಯನ್ನು ಶೇರ್ ಮಾಡಿ

ನವದೆಹಲಿ, ಜು.24- ವಿಶ್ವಾಸ ಮತ ಪ್ರಕ್ರಿಯೆಯನ್ನು ತ್ವರಿತವಾಗಿ ಮುಗಿಸಲು ವಿಧಾನಸಭಾಧ್ಯಕ್ಷ ರಮೇಶ್‍ಕುಮಾರ್ ಅವರಿಗೆ ಸೂಚನೆ ನೀಡುವಂತೆ ಕೋರಿ ಕರ್ನಾಟಕದ ಪಕ್ಷೇತರ ಶಾಸಕರಿಬ್ಬರು ಸಲ್ಲಿಸಿದ್ದ ಮನವಿ ಅರ್ಜಿಯನ್ನು ಸುಪ್ರೀಂಕೋರ್ಟ್ ಮುಂದೂಡಿದೆ.

ಎಚ್.ಡಿ.ಕುಮಾರಸ್ವಾಮಿ ನೇತೃತ್ವದ ಜೆಡಿಎಸ್-ಕಾಂಗ್ರೆಸ್ ಸಮ್ಮಿಶ್ರ ಸರ್ಕಾರ ನಿನ್ನೆ ರಾತ್ರಿ ಪತನಗೊಂಡ ಬೆಳವಣಿಗೆ ನಂತರ ತಮ್ಮ ಅರ್ಜಿಯನ್ನು ಹಿಂದಕ್ಕೆ ಪಡೆಯಲು ಬಯಸುವುದಾಗಿ ಆರ್.ಶಂಕರ್ ಮತ್ತು ಎಚ್.ನಾಗೇಶ್ ಸುಪ್ರೀಂಕೋರ್ಟ್‍ಗೆ ಇಂದು ಮನವಿ ಸಲ್ಲಿಸಿದರು.

ಮುಖ್ಯ ನ್ಯಾಯಮೂರ್ತಿ ರಂಜನ್ ಗೊಗೊಯ್ ಹಾಗೂ ನ್ಯಾಯಮೂರ್ತಿಗಳಾದ ದೀಪಕ್ ಗುಪ್ತಾ ಮತ್ತು ಅನಿರುದ್ಧಾ ಬೋಸ್ ಅವರನ್ನು ಒಳಗೊಂಡ ಪೀಠ ಈ ಅರ್ಜಿಯ ವಿಚಾರಣೆ ಕೈಗೆತ್ತಿಕೊಂಡ ಸಂದರ್ಭದಲ್ಲಿ ವಾದಿ ಮತ್ತು ಪ್ರತಿವಾದಿಗಳ ಪರ ವಕೀಲರಾದ ಮುಕುಲ್ ರಮಟಗಿ ಮತ್ತು ಮನು ಸಿಂಘ್ವಿ ಹಾಜರಿರಲಿಲ್ಲ.
ಈ ಬಗ್ಗೆ ಪೀಠವು ಮುಕುಲ್ ರೋಹಟಗಿ ಮತ್ತು ಮನು ಸಿಂಘ್ವಿ ಎಲ್ಲಿ ಎಂದು ಪ್ರಶ್ನಿಸಿತು. ಇದೇ ಸಂದರ್ಭದಲ್ಲಿ ಪಕ್ಷೇತರ ಶಾಸಕರ ಪರ ವಕೀಲ ರೋಹಟಗಿ ಕೋರ್ಟ್ ಕಲಾಪಕ್ಕೆ ಹಾಜರಾದರು.

ಆದರೆ ಸ್ಪೀಕರ್ ಪರ ಹಿರಿಯ ವಕೀಲ ಸಿಂಘ್ವಿ ಗೈರು ಹಾಜರಾದರು. ಈ ಪ್ರಕರಣಕ್ಕೆ ಸಂಬಂಧಿಸಿದ ವಕೀಲರು ಗೈರು ಹಾಜರಾಗಿದ್ದಾರೆ. ಹೀಗಾಗಿ ಅವರ ಉಪಸ್ಥಿತಿ ನಂತರ ಈ ಪ್ರಕರಣದ ಆದೇಶ ಹೊರಡಿಸಲಾಗುವುದು ಎಂದು ತಿಳಿಸಿ ನ್ಯಾಯಪೀಠ ವಿಚಾರಣೆಯನ್ನು ಮಧ್ಯಾಹ್ನಕ್ಕೆ ಮುಂದೂಡಿತು.

Facebook Comments