ಕಾಶ್ಮೀರ ಸಹಜ ಸ್ಥಿತಿಗೆ ತರಲು ಕೇಂದ್ರಕ್ಕೆ ಸುಪ್ರೀಂ ಸೂಚನೆ

ಈ ಸುದ್ದಿಯನ್ನು ಶೇರ್ ಮಾಡಿ

ನವದೆಹಲಿ, ಸೆ.16- ಆರ್ಟಿಕಲ್ 370 ರದ್ಧತಿ ನಂತರ ಜನಜೀವನ ಅಸ್ತವ್ಯಸ್ತಗೊಂಡಿರುವ ಜಮ್ಮು ಮತ್ತು ಕಾಶ್ಮೀರ ಸಹಜ ಸ್ಥಿತಿಗೆ ಮರಳುವಂತಾಗಲೂ ಅಗತ್ಯವಾದ ಎಲ್ಲ ಕ್ರಮಗಳನ್ನು ಕೈಗೊಳ್ಳಬೇಕೆಂದು ಸುಪ್ರೀಂ ಕೋರ್ಟ್, ಕೇಂದ್ರ ಸರ್ಕಾರ ಮತ್ತು ರಾಜ್ಯದ ಆಡಳಿತಕ್ಕೆ ಇಂದು ಸ್ಪಷ್ಟ ಸೂಚನೆ ನೀಡಿದೆ. ಈ ಕುರಿತು ಸಲ್ಲಿಸಲಾಗಿರುವ ಅರ್ಜಿ ವಿಚಾರಣೆ ನಡೆಸಿದೆ ಮುಖ್ಯ ನ್ಯಾಯಮೂರ್ತಿ ರಂಜನ್ ಗೊಗೊಯ್ ಹಾಗೂ ನ್ಯಾಯಮೂರ್ತಿಗಳಾದ ಎಸ್.ಎ.ಬೋಬ್ಡೆ ಮತ್ತು ಎಸ್.ಎ.ನಜೀರ್ ಅವರನ್ನೊಳಗೊಂಡ ಪೀಠವು ಈ ನಿರ್ದೇಶನ ನೀಡಿತ್ತು.

ಜಮ್ಮು ಮತ್ತು ಕಾಶ್ಮೀರದಲ್ಲಿ ರಾಷ್ಟ್ರೀಯ ಹಿತಾಸಕ್ತಿಯನ್ನು ಗಮನದಲ್ಲಿಟ್ಟುಕೊಂಡು ಹಂತ ಹಂತವಾಗಿ ಸಹಜ ಸ್ಥಿತಿಗೆ ತರಲು ಅಗತ್ಯವಾದ ಎಲ್ಲ ಕ್ರಮಗಳನ್ನು ಕೈಗೊಳ್ಳಬೇಕು ಎಂದು ಕೇಂದ್ರ ಮತ್ತು ರಾಜ್ಯಕ್ಕೆ ಪೀಠವು ಸೂಚಿಸಿತು.  ಜಮ್ಮು-ಕಾಶ್ಮೀರದಲ್ಲಿ ಅಂಗಡಿ ಮತ್ತು ಮುಂಗಟ್ಟುಗಳು ಬಂದ್ ಸ್ಥಿತಿಯಲ್ಲಿ ಮುಂದುವರೆದಿರುವ ಬಗ್ಗೆ ವರದಿಗಳಿವೆ. ಈ ಬಗ್ಗೆ ಆ ರಾಜ್ಯದ ಹೈಕೋರ್ಟ್ ಸೂಕ್ತ ನಿರ್ಣಯದ ಆದೇಶ ಹೊರಡಿಸಬೇಕೆಂದು ಸಹ ಪೀಠವು ತಿಳಿಸಿತು.

ಕೇಂದ್ರ ಸರ್ಕಾರದ ಪರವಾಗಿ ಹಾಜರಿದ್ದ ಅಟಾರ್ನಿ ಜನರಲ್ ಕೆ.ಕೆ.ವೇಣುಗೋಪಾಲ್ ಕಣಿವೆ ಪ್ರಾಂತ್ಯ ಸಹಜ ಸ್ಥಿತಿಗೆ ಮರಳಲು ಕೇಂದ್ರ ಸರ್ಕಾರ ಈಗಾಗಲೇ ಅಗತ್ಯವಾದ ಕ್ರಮಗಳನ್ನು ಕೈಗೊಂಡಿದೆ. ಆರ್ಟಿಕಲ್ 370 ಜಾರಿಗೆ ಬಂದ ಆ. 5ರಿಂದ ಈವರೆಗೆ ಅಲ್ಲಿ ಒಂದೇ ಒಂದು ಗುಂಡು ಹಾರಿಲ್ಲ. ಇದು ಅಲ್ಲಿ ಕೇಂದ್ರ ಸರ್ಕಾರ ಕೈಗೊಂಡ ಕ್ರಮಕ್ಕೆ ಸಾಕ್ಷಿಯಾಗಿದೆ ಎಂದು ಸ್ಪಷ್ಟನೆ ನೀಡಿದರು.

ಅಲ್ಲಿ ವಾರ್ತಾ ಪತ್ರಿಕೆಗಳು ಈಗಾಗಲೇ ನಿರ್ವಹಿಸುತ್ತಿವೆ. ದೂರದರ್ಶನ ಸೇರಿದಂತೆ ಕೆಲ ಚಾನಲ್‍ಗಳ ಪ್ರಸಾರ ಆರಂಭವಾಗಿದೆ. ಮಾಧ್ಯಮಗಳ ಮೇಲೆ ಯಾವುದೇ ನಿರ್ಬಂಧ ವಿಧಿಸಿಲ್ಲ ಎಂದು ವೇಣುಗೋಪಾಲ್ ಸಮಜಾಯಿಶಿ ನೀಡಿದರು. ಅಟಾರ್ನಿ ಜನರಲ್ ಅವರ ಹೇಳಿಕೆಯನ್ನು ಪುರಸ್ಕರಿಸಿದ ಪೀಠವು ಈ ಎಲ್ಲ ವಿವರಗಳನ್ನು ಒಳಗೊಂಡ ಪ್ರಮಾಣಪತ್ರವನ್ನು ಕೋರ್ಟ್‍ಗೆ ಸಲ್ಲಿಸುವಂತೆ ಸೂಚನೆ ನೀಡಿದರು.

ಇದೇ ವೇಳೆ ಮಾಜಿ ಮುಖ್ಯಮಂತ್ರಿ ಫಾರೂಖ್ ಅಬ್ದುಲ್ ಸೇರಿದಂತೆ ಕೆಲ ನಾಯಕರು ಗೃಹಬಂಧನದಲ್ಲಿರುವ ಕುರಿತು ಸಲ್ಲಿಸಲಾದ ಅರ್ಜಿಗಳ ವಿಚಾರಣೆ ನಡೆಸಿದ ಸುಪ್ರೀಂ ಕೋರ್ಟ್ ಮುಖಂಡರ ಸಧ್ಯದ ಸ್ಥಿತಿ ಕುರಿತು ವಿವರ ಒದಗಿಸುವಂತೆ ಜಮ್ಮು ಮತ್ತು ಕಾಶ್ಮೀರ ಆಡಳಿತಕ್ಕೆ ಸೂಚನೆ ನೀಡಿತ್ತು.

Facebook Comments